ಭಾನುವಾರ, ಸೆಪ್ಟೆಂಬರ್ 22, 2019
22 °C

ಮತ್ತೆ ‘ತೇರೇ ನಾಮ್‌’

Published:
Updated:
Prajavani

ಹುಡುಗರಲ್ಲಿ ಉದ್ದುದ್ದ ಕೂದಲಿನ ಕ್ರೇಜ್ ಹುಟ್ಟುಹಾಕಿದ ’ತೇರೇ ನಾಮ್‌’ ಚಿತ್ರ ನೆನಪಿದೆಯೇ? ನೆತ್ತಿಯುದ್ದಕ್ಕೂ ಬೈತಲೆ ತೆಗೆದು ಎರಡೂ ಕಡೆ ನೀಟಾಗಿ ಬಾಚಿದ, ಕಿವಿಯಿಂದ ಎರಡಿಂಚು ಕೆಳಗೆ ಜೋತಾಡುವ ಕೇಶಶೈಲಿ ಅದು. ಸಲ್ಮಾನ್‌ ಖಾನ್‌ ತನ್ನೊಳಗಿನ ನಟನನ್ನು ಬಗೆದು ಹೊರಹಾಕಿದ ಹಾಗೆ ನಟಿಸಿದ್ದ ಚಿತ್ರ... 

ಹಳೆಯ ಚಿತ್ರಗಳ ಹೊಸ ಆವೃತ್ತಿಯ ಶಕೆಯಲ್ಲಿ ‘ತೇರೆ ನಾಮ್‌’ ಕೂಡಾ ಎರಡನೇ ಆವೃತ್ತಿಯನ್ನು ಕಾಣಲಿದೆ. ಸಲ್ಮಾನ್‌ ಅವರೇ ಸೀಕ್ವೆಲ್‌ನಲ್ಲಿಯೂ ನಟಿಸಲಿದ್ದಾರೆ ಎಂದೂ, ಮೊದಲ ಆವೃತ್ತಿಯನ್ನು ನಿರ್ದೇಶಿಸಿದ್ದ ಸತೀಶ್‌ ಕೌಶಿಕ್‌ ಸ್ಪಷ್ಟಪಡಿಸಿದ್ದಾರೆ. 2003ರಲ್ಲಿ ತೆರೆಕಂಡ ಸೂಪರ್‌ ಹಿಟ್‌ ಚಿತ್ರ ’ತೇರೆ ನಾಮ್‌’ ತಮಿಳಿನ ‘ಸೇತು’ವಿನ ರಿಮೇಕ್‌ ಆಗಿತ್ತು.

 ಪ್ರೀತಿ ಕೈಕೊಟ್ಟಾಗ ಮಾನಸಿಕ ಅಸ್ವಸ್ಥನಾಗುವ ಪಾಗಲ್‌ ಪ್ರೇಮಿಯಾಗಿ ಸಲ್ಮಾನ್‌ ನಟಿಸಿದ ರೀತಿ ಅಭೂತಪೂರ್ವವಾಗಿತ್ತು. ಅವರ ಜೀವಮಾನದ ಅತ್ಯುತ್ತಮ ನಟನೆಗೆ ಸಾಕ್ಷಿಯಾಗಿ ’ತೇರೆ ನಾಮ್‌‘ ಪ್ರಸ್ತಾಪವಾಗುತ್ತದೆ. ಹಾಗಾಗಿ 16 ವರ್ಷಗಳ ಬಳಿಕವೂ ಅದರ ನೆನಪು ಹಸಿರಾಗಿದೆ. ಎರಡನೇ ಆವೃತ್ತಿಯ ಕತೆಗೆ ಹೊಸ ತಿರುವು ನೀಡಿದ್ದಾರೆ, ಚಿತ್ರಕತೆಯನ್ನೂ ಬರೆದಿರುವ ಸತೀಶ್‌.  ಉತ್ತರ ಭಾರತದ ಭೂಗತ ಪಾತಕಿಗಳ ಕತೆಯನ್ನು ಅವರು ಹೆಣೆದಿದ್ದಾರೆ.

’ತೇರೆ ನಾಮ್‌‘ನ ಚಿತ್ರಕತೆ ಬಾಲಾ ಮತ್ತು ಜೈನೇಂದ್ರ ಅವರದ್ದಾಗಿತ್ತು. ಸಲ್ಮಾನ್‌ ಖಾನ್‌ಗೆ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸಿದ್ದರು. 

ಸಲ್ಮಾನ್‌ ಖಾನ್‌ ಮತ್ತು ಸತೀಶ್‌ ಕೌಶಿಕ್‌ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಆತ್ಮೀಯ ಸ್ನೇಹಿತರಾಗಿದ್ದಾರೆ. ಹಾಗಾಗಿ ಸಲ್ಲೂ ಭಾಯ್‌ ತಮ್ಮ ಹಳೆಯ ಚಿತ್ರದ ಸೀಕ್ವೆಲ್‌ಗೆ ಕಾಲ್‌ಶೀಟ್‌ ನೀಡಲು ಒಪ್ಪುವುದು ಖಚಿತ ಎಂಬುದು ಅವರ ಆಪ್ತರ ಅಂದಾಜು. ಸಲ್ಲೂ ಭಾಯ್‌ ಚಿತ್ರಕ್ಕೆ ಸಹಿ ಹಾಕಿದಾಗಲೇ ಇದು ಖಚಿತವಾಗಬೇಕಿದೆ.

Post Comments (+)