ಇಂಡಿ: ₹ 86.28 ಕೋಟಿ ಮೊತ್ತದ ಬೆಳೆ ಹಾನಿ

7

ಇಂಡಿ: ₹ 86.28 ಕೋಟಿ ಮೊತ್ತದ ಬೆಳೆ ಹಾನಿ

Published:
Updated:
Prajavani

ಇಂಡಿ: ತಾಲ್ಲೂಕಿನಾದ್ಯಂತ 2018-2019ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ 1,30,713 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು ₹ 86.28 ಕೋಟಿ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ 68,740 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, ಸಜ್ಜೆ, ನವಣೆ, ತೊಗರಿ, ಹೆಸರು, ಹುರಳಿ, ಉದ್ದು, ಮಡಿಕೆ, ಅಲಸಂದಿ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಸೋಯಾ ಅವರೆ, ಹತ್ತಿ, ಕಬ್ಬು ಬಿತ್ತನೆ ಮಾಡಬೇಕಿತ್ತು.

ಆದರೆ, ಮಳೆಯ ಅಭಾವದಿಂದಾಗಿ ಕೇವಲ 52,731 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಈ ಪೈಕಿ 49,114 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಹಾನಿಯಾಗಿವೆ. ಇದರ ಅಂದಾಜು ನಷ್ಟ ₹ 33.39 ಕೋಟಿ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದರು.

ಇದೇ ರೀತಿ ಹಿಂಗಾರು ಹಂಗಾಮಿನಲ್ಲಿ 1,43,282 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಬೀಳದ ಕಾರಣ 1,02,089 ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿ ಜೋಳ, ಮುಸುಕಿನ ಜೋಳ, ಗೋಧಿ, ಕಡಲೆ, ಹುರುಳಿ, ಅಲಸಂದಿ, ಸೂರ್ಯಕಾಂತಿ, ಕುಸುಬೆ, ಅಗಸಿ, ಹತ್ತಿ, ಕಬ್ಬು ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು.

ಇದರಲ್ಲಿ 81,599 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆಗಳು ಹಾನಿಯಾಗಿದ್ದು, ಅಂದಾಜು ₹ 52.89 ಕೋಟಿ ನಷ್ಟವಾಗಿದೆ. ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು. 

1972 ರಲ್ಲಿ ಇದ್ದ ಭೀಕರ ಬರಗಾಲಕ್ಕಿಂತಲೂ ಪ್ರಸಕ್ತ ವರ್ಷದ ಬರ ಭೀಕರವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಕೊಳವೆ ಬಾವಿಗಳು ಬತ್ತಿ ಹೋಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !