ಸೋಮವಾರ, ಜೂನ್ 1, 2020
27 °C
ಧರ್ಮವರ್ಧಿನಿ ಎಂಬ ದೇಸಿ ತಳಿಯ ಗೋಕುಲ !

ಒಂದೇ ಸೂರಿನಡಿ ಹಲವು ದೇಸಿ ತಳಿ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಪೂರ್ವ ಮುಂಗಾರು ಮಳೆಗೆ ಮೈದುಂಬಿ ಹರಿಯುತ್ತಿದ್ದ ಕಾವೇರಿ ನದಿಯ ಒನಪು, ವಯ್ಯಾರ ನೋಡಲು ಶ್ರೀರಂಗಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಗೋಸಾಯಿಘಾಟ್‌ ತಾಣಕ್ಕೆ ಗೆಳೆಯ ರವೀಶನ ಜತೆ ಬೈಕ್‌ನಲ್ಲಿ ಹೊರಟಿದ್ದೆ. ಗೋಸಾಯಿಘಾಟ್‌ ಇನ್ನು 50 ಮೀಟರ್‌ ದೂರ ಇದೆ ಎನ್ನುವಾಗ ‘ಧರ್ಮವರ್ಧಿನಿ ಗೋಶಾಲೆ ಆಶ್ರಮ’ ಹೆಸರಿನ ಫಲಕ ಕಣ್ಣಿಗೆ ಬಿತ್ತು. ‘ಇದೇನು ಹೊಸ ಆಶ್ರಮ ತಲೆಯೆತ್ತಿದೆಯಲ್ಲ’ ಎಂಬ ಕುತೂಹಲದೊಂದಿಗೆ ಫಲಕ ಕಂಡಲ್ಲೇ ಬೈಕ್‌ ನಿಲ್ಲಿಸಿ ಇಬ್ಬರೂ ಒಳ ಪ್ರವೇಶಿಸಿದಾಗ ಕಂಡದ್ದು ವಿವಿಧ ಬಣ್ಣ, ಗಾತ್ರದ ದೇಸಿ ಹಸುಗಳ ಸಾಲು!

ಹಳೇ ಮೈಸೂರು ಭಾಗದಲ್ಲಿ ‘ಹಳ್ಳಿಕಾರ್‌’ ತಳಿ ಸಾಮಾನ್ಯ. ಚಿಕ್ಕಮಗಳೂರು ಕಡೂರು ಭಾಗದಲ್ಲಿ ಸುಂದರ ಹಾಗೂ ದಷ್ಟಪುಷ್ಟ ‘ಅಮೃತ ಮಹಲ್‌’ ತಳಿ ನೋಡಿದ್ದೆ. ತಲಕಾವೇರಿಗೆ ಹೋಗಿದ್ದಾಗ ಕೊಡಗು ಜಿಲ್ಲೆಯಲ್ಲಿ ‘ಮಲ್ನಾಡ್‌ ಗಿಡ್ಡ’ ತಳಿ ಗೋವುಗಳಿದ್ದವು. ಈ ‘ಧರ್ಮವರ್ಧಿನಿ ಗೋಶಾಲೆ’ಯಲ್ಲಿ ಇವೆಲ್ಲವನ್ನೂ ಒಳಗೊಂಡಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಅಪರೂಪದ ದೇಸಿ ಗೋವು ತಳಿಗಳನ್ನು ಕಂಡು ಅಚ್ಚರಿಯಾಯಿತು.

ಯಾವೆಲ್ಲ ತಳಿಗಳಿವೆ ?

ಗರಿಷ್ಠ ಎರಡೂವರೆ ಅಡಿ ಎತ್ತರ ಬೆಳೆಯುವ ಆಂಧ್ರಪ್ರದೇಶದ ಪುಂಗನೋರ್‌, 8 ಅಡಿಗಳವರೆಗೂ ಬೆಳೆಯುವ ಓಂಗೋಲ್‌, ದೇಸಿ ತಳಿಯಲ್ಲೇ ಹೆಚ್ಚು ಹಾಲು ಕೊಡುವ ಗುಜರಾತ್‌ನ ಗಿರ್‌, ಉತ್ತರಪ್ರದೇಶ ಮೂಲದ ಪೊನ್ವಾರ್‌, ಹರಿಯಾಣದ ಸೋಹಿವಾಲ್‌, ತಮಿಳುನಾಡಿನ ಅಂಬ್ಲಾಚರಿ, ಕಂಗಾಯಮ್, ಬರ್ಗೂರ, ಗುಜರಾತಿನ ಕಾಂಕ್ರೇಜ್‌ ತಳಿಯ ಹಸು ಮತ್ತು ಹೋರಿಗಳನ್ನು ಗೋಶಾಲೆಯ ಸ್ಥಾಪಕ ಹರೀಶ್‌ಶರ್ಮಾ ಪರಿಚಯಿಸಿದರು.

‘200 ವರ್ಷಗಳ ಹಿಂದೆ ಭಾರತದಲ್ಲಿ 82 ದೇಸಿ ಗೋವಿನ ತಳಿಗಳಿದ್ದವೆಂದು ದಾಖಲೆಗಳಲ್ಲಿವೆ. ಈಗ ಉಳಿದಿರುವುದು 32 ತಳಿ ಮಾತ್ರ. ಇರುವ ಎಲ್ಲ ತಳಿಯ ಗೋವುಗಳನ್ನು ಈ ಗೋಶಾಲೆಯಲ್ಲಿ ಸಾಕಬೇಕು ಎಂಬ ಹಂಬಲವಿದೆ’ ಎಂದು ಭವಿಷ್ಯದ ಕನಸನ್ನು ಹರೀಶ್‌ ಶರ್ಮಾ ಬಿಚ್ಚಿಟ್ಟರು. ಈ ಕನಸು ನನಸಾಗಿಸುವ ಪ್ರಯತ್ನದಲ್ಲಿರುವ ಶರ್ಮಾ, ಈಗಾಗಲೇ ಜಮ್ಮು–ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿರುವ ದೇಸಿ ತಳಿಯ ಗೋವುಗಳಿಗೂ ಹುಡುಕಾಟ ನಡೆಸಿದ್ದಾರೆ. ‘ಇನ್ನು ಐದು ವರ್ಷಗಳಲ್ಲಿ ಭಾರತದಲ್ಲಿರುವ ಎಲ್ಲ ದೇಸಿ ತಳಿಯ ಗೋವುಗಳು ಈ ಗೋಶಾಲೆಗೆ ಬರಲಿವೆ. ಲಭ್ಯ ಇರುವ ದೇಸಿ ತಳಿಯ ಗೋವುಗಳು ಅಳಿಯದಂತೆ ಸಂರಕ್ಷಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಅವರು ವಿವರಿಸಿದರು.


ಸಿಂಧಿ ಹೋರಿಯ ಜತೆ ಹರೀಶ್‌ಶರ್ಮಾ

ನಾಲ್ಕು ವರ್ಷಗಳ ಹಿಂದೆ...

ನಾಲ್ಕು ವರ್ಷಗಳ ಹಿಂದೆ  ಒಂದು ಹಸು ಇದ್ದ ಧರ್ಮವರ್ಧಿನಿ ಗೋಶಾಲೆಯಲ್ಲಿ ಈಗ 12 ವಿಭಿನ್ನ ತಳಿಗಳ 65 ರಾಸುಗಳಿವೆ. ಈ ಪೈಕಿ 8 ಹಸುಗಳು ಹಾಲು ಕೊಡುತ್ತಿವೆ. ಐದು ಗರ್ಭ ಧರಿಸಿವೆ. 18 ಕರುಗಳು ಹಾಗೂ 20ಕ್ಕೂ ಹೆಚ್ಚು ಹೋರಿಗಳಿವೆ. ಇಲ್ಲಿ ಕರೆಯುವ ಹಾಲನ್ನು ಮಾರಾಟ ಮಾಡುವುದಿಲ್ಲ. ಅದನ್ನು ತಮ್ಮದೇ ಧರ್ಮವರ್ಧಿನಿ ವೇದಪಾಠ ಆಶ್ರಮ ಮತ್ತು ಅನ್ನಸತ್ರ ಆಶ್ರಮಕ್ಕೆ ಬಳಸಲಾಗುತ್ತಿದೆ. ಗಂಜಾಂನ ಗೋಸಾಯಿಘಾಟ್‌ನಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅಭಿಷೇಕಕ್ಕಾಗಿ ಇದೇ ದೇಸಿ ಹಸುಗಳ ಹಾಲನ್ನು ಉಚಿತವಾಗಿ ಕೊಡುತ್ತಿದ್ದಾರೆ.

ಹೀಗೆ ಮಾಹಿತಿ ಹಂಚಿಕೆಯ ನಡುವೆ, ‘ಮಿಶ್ರ ತಳಿಯ ಹಸುಗಳಿಗೆ ಹೋಲಿಸಿದರೆ ದೇಸಿ ಹಸುಗಳ ಕಡಿಮೆ ಹಾಲು ಕೊಡುತ್ತವೆ. ನಿಮಗೆ ನಷ್ಟವಲ್ಲವೆ’ ಎಂದು ಗೆಳೆಯ ರವೀಶ ಪ್ರಶ್ನೆ ಹಾಕಿದ. ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ, ‘ಬಕೆಟ್‌ ತುಂಬ ಹಾಲು ಕೊಡುತ್ತವೆ ಎಂಬ ಕಾರಣಕ್ಕೆ ಮಿಶ್ರ ತಳಿಯ ಹಸು ಸಾಕುತ್ತಾರೆ. ಈ ತಳಿಗಳ ಹಾಲಿನಲ್ಲಿ ಹೆಚ್ಚು ಸತ್ವ ಇಲ್ಲ ಎಂದು ತಜ್ಞರೇ ಹೇಳಿದ್ದಾರೆ. ದೇಸಿ ಹಸುವಿನ ಹಾಲು ಆಹಾರವೂ ಹೌದು; ವಿವಿಧ ರೋಗಗಳಿಗೆ ಔಷಧವೂ ಹೌದು. ದೇಸಿ ಹಸುಗಳ ಸಾಕಣೆ ವೆಚ್ಚ ಹೆಚ್ಚಿರಬಹುದು. ಆದರೆ ಆ ತಳಿಗಳಿಂದ ಪರೋಕ್ಷ ಲಾಭ ಸಾಕಷ್ಟಿದೆ’ ಎಂದು ಸುದೀರ್ಘ ಉತ್ತರ ನೀಡಿದರು.


ಗರಿಷ್ಠ ಎರಡೂವರೆ ಅಡಿ ಎತ್ತರ ಮಾತ್ರ ಬೆಳೆಯುವ, ಆಂಧ್ರಪ್ರದೇಶ ಮೂಲದ ಅಪರೂಪದ ಪುಂಗನೂರು ತಳಿಯ ವಯಸ್ಕ ಹೋರಿ

ಪೋಷಣೆಗೆ ಬಿಹಾರದವರು

ಗೋಶಾಲೆಯಲ್ಲಿ ಕೈಯಿಂದಲೇ ಹಾಲು ಹಿಂಡಲಾಗುತ್ತದೆ. ಯಂತ್ರ ಬಳಸಿದರೆ ಗೋವುಗಳ ಸಹಜ ಸ್ವಭಾವಕ್ಕೆ ತೊಂದರೆಯಾಗುತ್ತದೆ. ಹಾಗಾಗಿಯೇ, ಗೋವುಗಳ ಪೋಷಣೆಗಾಗಿ ಆ ಕ್ಷೇತ್ರದಲ್ಲಿ ಕೌಶಲ್ಯವಿರುವ ಯಾದವ ಸಮುದಾಯದ ಇಬ್ಬರನ್ನು ಬಿಹಾರದಿಂದ ಕರೆತರಲಾಗಿದೆ. ಅವರಿಗೆ ಹಸುಗಳ ಆರೈಕೆಯ ಪೂರ್ಣ ಜವಾಬ್ದಾರಿ ವಹಿಸಲಾಗಿದೆ. ದಿನದ 24 ಗಂಟೆಯೂ ಗೋಶಾಲೆಯಲ್ಲಿ ಕೊಳಲ ಗಾನ, ಸಂಗೀತ ಕೇಳುತ್ತಿರುತ್ತದೆ.

ದಿನಕ್ಕೆ ಎರಡು ಬಾರಿ ಹಾಲು ಕರೆಯುತ್ತಾರೆ. ಮೊದಲು ಕರುಗಳಿಗೆ ಬಿಟ್ಟು, ಅವು ಕುಡಿದು ಉಳಿಸಿದ ಹಾಲನ್ನು ಮಾತ್ರ ಹಿಂಡುವಂತೆ ಗೋಪಾಲಕರಿಗೆ ಸೂಚನೆ ನೀಡಿದ್ದಾರೆ. ಪ್ರತಿ ಗೋವಿಗೆ ದಿನಕ್ಕೆ 35 ಕೆ.ಜಿ ಆಹಾರ ಪೂರೈಸುತ್ತಿದ್ದಾರೆ. ಬೂಸಾ, ಹಿಂಡಿ, ಜೋಳದ ಜತೆಗೆ, ಹಸಿ ಮತ್ತು ಒಣ ಮೇವು, ಒಂದು ಮುಷ್ಟಿಯಷ್ಟು ಅಡುಗೆ ಉಪ್ಪು ನೀಡುತ್ತಾರೆ.


ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಗೋಸಾಯಿಘಾಟ್‌ ಬಳಿ ಇರುವ ಹರೀಶ್‌ಶರ್ಮಾ ಅವರ ‘ಧರ್ಮ ವರ್ಧಿನಿ ಗೋಶಾಲೆ’ಯಲ್ಲಿರುವ ದೇಸಿ ತಳಿಯ ಹಸುಗಳು

ಪಶುಪತಿನಾಥ ದೇಗುಲದ ಕನಸು

ದೇಸಿ ತಳಿಯ ಎಲ್ಲ ಬಗೆಯ ಗೋವುಗಳನ್ನು ತಂದ ಬಳಿಕ ಗೋಸಾಯಿಘಾಟ್‌ನ ಕಾವೇರಿ ತೀರದಲ್ಲಿ ನೇಪಾಳದ ಪಶುಪತಿನಾಥ ದೇವಾಲಯದ ಮಾದರಿ ನಿರ್ಮಾಣದ ಉದ್ದೇಶವಿದೆ. ಒಂದು ಸಾವಿರ ದೇಸಿ ಗೋವಿನ ತಳಿಗಳನ್ನು ಸಾಕುವ ಗುರಿ ಇದೆ. ಗೋಶಾಲೆಯ ನಡುವೆ ಕಲ್ಯಾಣಿ, ಕಲ್ಯಾಣಿಯ ಮಧ್ಯೆ ಶ್ರೀಕೃಷ್ಣನ ವಿಗ್ರಹ ಸ್ಥಾಪಿಸಲಾಗುವುದು. ಅದಕ್ಕೆ ಅಗತ್ಯ ಜಮೀನು ಖರೀದಿಸುವ ಪ್ರಯತ್ನ ನಡೆದಿದೆ ಎಂದರು.

ಧರ್ಮವರ್ಧಿನಿ ಗೋಶಾಲೆಯಲ್ಲಿ ವೈವಿಧ್ಯಮಯ ಗೋವುಗಳನ್ನು ನೋಡುತ್ತ ಒಂದೂವರೆ ತಾಸು ಕಳೆದದ್ದೇ ಗೊತ್ತಾಗಲಿಲ್ಲ. ಗೋಶಾಲೆಯಲ್ಲಿ ಇದ್ದಷ್ಟೂ ಹೊತ್ತು ಸಾದುವಾಗಿದ್ದ ಒಂದೆರಡು ದೇಸಿ ಹಸುಗಳ ಮೈ ದಡವಿ, ಕರುಗಳ ಕೊರಳಿಡಿದು ನೇವರಿಸಿದೆವು. ಅಲ್ಲಿಂದ ಹೊರಡುವಾಗ ಹರೀಶ್‌ ಶರ್ಮಾ ಅವರು ಕೊಟ್ಟ ಅಪ್ಪಟ ದೇಸಿ ಹಸುವಿನ ನೊರೆ ಹಾಲಿನ ಸ್ವಾದದ ಪಸೆ ನಾಲಗೆಯ ತುದಿಯಲ್ಲಿ ಇನ್ನೂ ಇದ್ದಂತಿದೆ.


ಹರೀಶ್‌ಶರ್ಮಾ ಅವರ ಗೋ ಶಾಲೆಯಲ್ಲಿ ದೇಸಿ ತಳಿ ಹಸುಗಳ ಸಾಲು 

ದೇಸಿ ಗೋವುಗಳ ಕುರಿತ ಮಾಹಿತಿಗಾಗಿ ಗೋಶಾಲೆಯ ಸಂಪರ್ಕ ಸಂಖ್ಯೆ ಮೊ:94481 94194. email: yajurvediharisha@gmail.com

ಚಿತ್ರಗಳು : ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು