ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳ್ಮೆ ಇದ್ದರೆ ತಾಳೆ ಕೃಷಿ ಯಶಸ್ಸು: ನಿರಂತರ ಆದಾಯ ನಿಶ್ಚಿತ

ಕಡಿಮೆ ಖರ್ಚು, ಕಡಿಮೆ ಶ್ರಮ, ಹೆಚ್ಚು ಆದಾಯದ ವಾಣಿಜ್ಯ ಕೃಷಿ
Last Updated 17 ಡಿಸೆಂಬರ್ 2020, 3:04 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಲ್ಪ ತಾಳ್ಮೆ ಬಯಸುವ, ಒಮ್ಮೆ ಆದಾಯ ಬರಲು ತೊಡಗಿದರೆ 25–30 ವರ್ಷಗಳ ಕಾಲ ನಿರಂತರ ಆದಾಯ ಕೊಡುವ ತಾಳೆ ಕೃಷಿ ಕಡೆಗೆ ಜಿಲ್ಲೆಯಲ್ಲಿ ಗಮನ ಹರಿಸಿದವರು ವಿರಳ. ಈ ವಿರಳರಲ್ಲಿ ನಾಗರಕಟ್ಟೆಯ ಮರುಳಸಿದ್ಧಪ್ಪ, ಕೊಂಡಜ್ಜಿಯ ರಾಜು ಮುಂತಾದವರು ಸಾಧನೆ ಮಾಡಿ ತೋರಿಸಿದ್ದಾರೆ.

ನಾಗರಕಟ್ಟೆಯ ಮರುಳಸಿದ್ಧಪ್ಪ 10 ಎಕರೆ ಪ್ರದೇಶದಲ್ಲಿ 8 ವರ್ಷಗಳ ಹಿಂದೆ ತಾಳೆ ಹಾಕಿದ್ದರು. ಮೂರು ವರ್ಷದಲ್ಲಿ ಹಣ್ಣು ಬರಲು ಆರಂಭಗೊಂಡರೂ ಪೂರ್ಣಪ್ರಮಾಣದಲ್ಲಿ 5 ವರ್ಷದಿಂದ ಪ್ರಾರಂಭವಾಯಿತು. ಈಗ ಪ್ರತಿ ತಿಂಗಳು ₹ 1 ಲಕ್ಷಕ್ಕಿಂತ ಅಧಿಕ ಆದಾಯ ಪಡೆದುಕೊಂಡು ನೆಮ್ಮದಿಯಾಗಿದ್ದಾರೆ. ಅವರ ಸಾಧನೆಗೆ ರಾಜ್ಯ ಕೃಷಿ ರತ್ನ ಪ್ರಶಸ್ತಿ ಪಡೆದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪುರಸ್ಕೃತರಾಗಿದ್ದಾರೆ.

‘8 ವರ್ಷದ ಹಿಂದೆ ನಾನು ತಾಳೆ ಗಿಡ ಹಾಕಿದಾಗ ಬೇರೆಯವರೂ ಹಾಕಿದ್ದರು. ಮೂರು ವರ್ಷಕ್ಕೆ ಸ್ವಲ್ಪ ಹಣ್ಣು ಬಂತು. ಇಷ್ಟು ಕಡಿಮೆ ಬಂದರೆ ಬದುಕೋದು ಹೇಗೆ ಎಂದು ಹೆಚ್ಚಿನವರು ಕಡಿದು ಬಿಟ್ಟರು. ಮತ್ತೆರಡು ವರ್ಷದ ನಂತರ ಹಣ್ಣು ಚೆನ್ನಾಗಿ ಬಂತು.ನೀರು ಕಟ್ಟೋದು, ಗೊಬ್ಬರ ಹಾಕೋದು, ಕಾಯಿ ಕೊಯ್ಯೋದು ಮೂರೇ ಕೆಲಸ ಇದರಲ್ಲಿರುವುದು. ಭೂಮಿ ಹದ ಮಾಡುವುದು, ಉಳುಮೆ, ಮತ್ತಿತರ ಯಾವ ಕೆಲಸವೂ ಇಲ್ಲ. ಬರಗಾಲ ಬಂದರೂ ನಡೆಯುತ್ತದೆ. ನಾನು, ಪತ್ನಿ ಮಂಗಳ ಕೆಲಸ ಮಾಡುತ್ತೇವೆ. ಮಗ ಹೇಮಂತ್‌ ಕೂಡ ಓದುತ್ತಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ’ ಎಂದು ನಾಗರಕಟ್ಟೆ ಮರುಳಸಿದ್ಧಪ್ಪ ತಿಳಿಸಿದರು.

‘12ನೇ ವರ್ಷದ ಹಿಂದೆ 250 ಗಿಡ 4.5 ಎಕರೆಯಲ್ಲಿ ಹಾಕಿದೆ. ಆಗಲೇ ನೀರಿನ ಪಸೆ ನಿಲ್ಲುವಂತೆ ಮುಚ್ಚಿಗೆ ಹಾಕಿದ್ದೆ. ಅಂದರೆ ಇದರ ಗರಿಗಳನ್ನು ಇಲ್ಲೇ ನೆಲದಲ್ಲಿ ಹಾಸಿ ಬಿಟ್ಟಿದ್ದೇನೆ. ಇದರಿಂದ ಕಳೆಗಿಡಗಳೂ ಬರುವುದಿಲ್ಲ. ಮಧ್ಯೆ ಒಂದು ಸಾಲಿನಂತೆ 500 ಗಿಡ ಅಡಿಕೆ ಹಾಕಿದ್ದೇನೆ. ಅದರಲ್ಲಿ ವರ್ಷಕ್ಕೆ ಎರಡು ಕ್ವಿಂಟಾಲ್ ಒಣ ಅಡಿಕೆ ಸಿಗುತ್ತಿದೆ. ಕಳೆದ ವರ್ಷ ಮಧ್ಯದಲ್ಲಿ ಎರಡು ಸಾಲಿನಂತೆ 1200 ಕೊಕ್ಕೊ ಗಿಡಗಳನ್ನು ಹಾಕಿದ್ದೇನೆ. ಮುಂದಿನ ವರ್ಷ ಹೂ ಬಿಡಲಿದೆ. ಅವೆಲ್ಲ ಆದಾಯಗಳು ಎಲ್ಲ ಖರ್ಚುಗಳಿಗೆ ಹೋದರೂ ತಾಳೆಹಣ್ಣಿನ ಆದಾಯ ಉಳಿತಾಯವಾಗುತ್ತದೆ. ಎಕರೆಗೆ 8 ಟನ್‌ನಿಂದ 9 ಟನ್‌ ವರೆಗೆ ತಾಳೆ ಹಣ್ಣು ಬಂದರೆ ಎಕರೆಗೆ ₹ 90 ಸಾವಿರ ಉಳಿತಾಯವಾಗುತ್ತದೆ. 13 ಕ್ವಿಂಟಲ್‌ವರೆಗೆ ಬರುತ್ತದೆಯಂತೆ 10 ಟನ್‌ ದಾಟಿದರೂ ಬಹಳ ಲಾಭ. ಅಣ್ಣ ಮ‌ಲ್ಲಿಕಾರ್ಜುನ ಕೂಡ ಸಹಾಯಕ್ಕೆ ಬರುತ್ತಾರೆ. ಅವರು ನೋಡಿಕೊಳ್ಳುವ ಅಡಿಕೆ ತೋಟದಲ್ಲಿ ಕೆಲಸ ಇದ್ದಾಗ ಸಹಾಯಕ್ಕೆ ನಾನು ಹೋಗುತ್ತೇನೆ’ ಎನ್ನುತ್ತಾರೆ ಕೊಂಡಜ್ಜಿಯ ರಾಜು.

ಕಬ್ಬು, ಭತ್ತ, ಮೆಕ್ಕೆಜೋಳ ಸಹಿತ ಯಾವುದೇ ಬೆಳೆಗಳಿಗಿಂತ ಅಧಿಕ ಲಾಭ, ಕಡಿಮೆ ಚಿಂತೆ ತಾಳೆಬೆಳೆಯಲ್ಲಿದೆ. ಆದರೆ ಜನ ಅಡಿಕೆಗೆ ಜತೆ ಹೋಲಿಸಿಕೊಂಡು ತಾಳೆ ಕೃಷಿಗೆ ಮುಂದಾಗುತ್ತಿಲ್ಲ. ಅಡಿಕೆ ಕೃಷಿಗೆ ಮಾಡಬೇಕಾದ ಕೆಲಸದ ಅರ್ಧವೂ ಇಲ್ಲಿಲ್ಲ ಎಂಬುದನ್ನು ಅವರು ನೋಡುತ್ತಿಲ್ಲ ಎನ್ನುವುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನಾರ್‌ ಅವರ
ಬೇಸರ.

ಎಕರೆಗೆ 60, ಹೆಕ್ಟೇರ್‌ಗೆ 143 ಗಿಡ ಕೂರುತ್ತದೆ. ಪೂರ್ತಿ 9 ಮೀಟರ್‌ ದೂರಕ್ಕೆ ಒಂದು ಗಿಡದಂತೆ ನೆಡಲಾಗುತ್ತದೆ. ಈಗ ತಾಳೆಹಣ್ಣಿಗೆ ಕ್ವಿಂಟಲ್‌ಗೆ ₹ 11,800 ಬೆಂಬಲ ಬೆಲೆ ಇದೆ. ಅಡಿಕೆ, ಕೊಕ್ಕೊ, ಎಲಕ್ಕಿ, ಕಾಳುಮೆಣಸು ಅಂತರ್‌ಬೆಳೆಯಾಗಿ ಹಾಕಬಹುದು ಎನ್ನುತ್ತಾರೆ ಸಹಾಯಕ ತೋಟಗಾರಿಕಾ ನಿರ್ದೇಶಕರು (ತಾಳೆಬೆಳೆ) ಹರೀಶ್‌ ನಾಯ್ಕ್.

ತಾಳೆ ಕೃಷಿಗೆ ಪ್ರೋತ್ಸಾಹ

ತಾಳೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುತ್ತದೆ. ಆದರೆ ಅದು ಧನ ಸಹಾಯ ನೀಡುವುದಿಲ್ಲ. ಬದಲಾಗಿ ಸಸಿ ಉಚಿತವಾಗಿ ಒದಗಿಸುತ್ತದೆ. ತಾಳೆ ಕೃಷಿ ವಿಸ್ತರಣೆಗೆ ₹ 12 ಸಾವಿರ, ಮೊದಲ ವರ್ಷ
₹ 6000, ಎರಡನೇ ವರ್ಷ ₹ 3,500, ಮೂರನೇ ವರ್ಷ ₹ 4,500 ಮೊತ್ತದ ಗೊಬ್ಬರ ನೀಡಲಾಗುತ್ತದೆ.ಕಟ್ಟಿಂಗ್‌ ಮಶಿನ್‌ಗೆ ₹ 20 ಸಾವಿರ ಇದೆ. ಅದರಲ್ಲಿ ₹ 10 ಸಾವಿರವನ್ನು ಇಲಾಖೆ ನೀಡುತ್ತದೆ. ಬೋರ್‌ವೆಲ್‌ ತೆಗೆಯಲು ಸಹಾಯಧನ ನೀಡುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ (ತಾಳೆಬೆಳೆ) ಹರೀಶ್‌ ನಾಯ್ಕ್‌.

ರಾಜ್ಯದಲ್ಲಿರುವ ಮೂರು ಫ್ಯಾಕ್ಟರಿಗಳಲ್ಲಿ ಒಂದು ಹರಿಹರದಲ್ಲಿ

ತಾಳೆಹಣ್ಣು ಸಂಗ್ರಹಿಸಿ ಅದರಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿಗಳು ಮೂರಷ್ಟೇ ರಾಜ್ಯದಲ್ಲಿ ಇವೆ. ಅದರಲ್ಲಿ ಒಂದು ದಾವಣಗೆರೆ ಜಿಲ್ಲೆಯ ಹರಿಹರ ಕೆಐಎಡಿಬಿ ಇಂಡಸ್ಟ್ರಿಯಲ್‌ ಏರಿಯದಲ್ಲಿದೆ. ಅದರ ಹೆಸರು ಕಲ್ಪವೃಕ್ಷ ಆಯಿಲ್‌ ಪಾಮ್‌ ಲಿಮಿಟೆಡ್‌. ರೈತರು ತಾಳೆ ಹಣ್ಣು ಕಟಾವು ಮಾಡಿದ ಮೇಲೆ ಈ ಫ್ಯಾಕ್ಟರಿಯವರೇ ರೈತರ ತೋಟದ ಬಳಿ ಹೋಗಿ ತೂಕ ಮಾಡಿ ತಗೊಂಡು ಬರುತ್ತಾರೆ. ಹಾಗಾಗಿ ರೈತರಿಗೆ ಸಾಗಾಟದ, ಮಾರಾಟದ ತಲೆ ಬಿಸಿ ಇಲ್ಲ.

ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಏಪ್ರಿಲ್‌ನಿಂದ ಈವರೆಗೆ 5 ಸಾವಿರ ಟನ್‌ ಬಂದಿದೆ. ಇನ್ನೂ ಮಾರ್ಚ್‌ವರೆಗೆ ಅವಕಾಶ ಇರುವುದರಿಂದ 1.5 ಸಾವಿರ ಟನ್‌ ಬರುವ ಸಾಧ್ಯತೆ ಇದೆ. ನಮ್ಮ ಫ್ಯಾಕ್ಟರಿಯ ಸಾಮರ್ಥ್ಯ ವರ್ಷಕ್ಕೆ 20 ಸಾವಿರ ಟನ್‌ ಇದೆ ಎಂದು ಎಂದು ಕಲ್ಪವೃಕ್ಷ ಆಯಿಲ್‌ ಪಾಮ್‌ ಲಿಮಿಟೆಡ್‌ ಮ್ಯಾನೇಜರ್‌ ದಿನೇಶ್‌ ಎನ್‌.ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಪ್ಪೆಯಿಂದ ಬರುವುದು ಪಾಮ್‌ ಆಯಿಲ್‌. ಅದನ್ನು ಇಲ್ಲೇ ತೆಗೆಯಲಾಗುತ್ತದೆ. ಇದರ ಒಳಗೆ ತೆಂಗಿನ ಕಾಯಿಯಂಥ ಸಣ್ಣ ಕಾಯಿ ಇದೆ. ಅದನ್ನು ಭಾಗ ಮಾಡಿದಾಗ ಕೊಬ್ಬರಿ ಇದೆ. ಅದರಿಂದ ತೆಗೆಯುವ ಎಣ್ನೆಯನ್ನು ಪಾಲ್ಮ್‌ ಕರ್ನಲ್‌ ಆಯಿಲ್‌ ಎಂದು ಕರೆಯುತ್ತೇವೆ. ಅದು ಸೋಪ್‌ ಇಂಡಸ್ಟ್ರಿಗೆ ಹೋಗುತ್ತದೆ. ಅದು ಬಿಳಿ ಇರುವುದರಿಂದ ತೆಂಗಿನ ಎಣ್ಣೆಗೆ ಮಿಕ್ಸ್‌ ಮಾಡಲೂ ಬಳಸುತ್ತಾರೆ. ಪಾಮ್‌ ಕರ್ನಲ್‌ ಆಯಿಲ್‌ ಇಲ್ಲಿ ತೆಗೆಯುವುದಿಲ್ಲ. ಆಂಧ್ರಪ್ರದೇಶದ ಫ್ಯಾಕ್ಟರಿಗಳಿಗೆ ಹೋಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT