ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ: ಬೆಳೆಗಾರ ಕಂಗಾಲು

ಮುಂಗಾರು ಹಂಗಾಮಿನಲ್ಲಿ 3,600 ಹೆಕ್ಟೇರ್‌ ಈರುಳ್ಳಿ ಬೆಳೆಗೆ ರೋಗಬಾಧೆ
Last Updated 20 ಆಗಸ್ಟ್ 2021, 3:00 IST
ಅಕ್ಷರ ಗಾತ್ರ

ಚಳ್ಳಕೆರೆ: ನನ್ನಿವಾಳ, ರಾಮಜೋಗಿಹಳ್ಳಿ, ಮದುರೆ, ಗಂಜಿಗುಂಟೆ, ಗೋಪನಹಳ್ಳಿ, ಕರಿಕೆರೆ, ಬೊಮ್ಮಸಮುದ್ರ, ಭರಮಸಾಗರ, ನೇರಲಗುಂಟೆ, ಜಾಜೂರು, ರೆಡ್ಡಿಹಳ್ಳಿ, ಬಾಲೇನಹಳ್ಳಿ, ದೊಡ್ಡಉಳ್ಳಾರ್ತಿ, ಬತ್ತಯ್ಯನಹಟ್ಟಿ, ಬೆಳಗೆರೆ, ವಿಡಪನಕುಂಟೆ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆ ಹಾಗೂ ಬುಡಕೊಳೆ ರೋಗ ಕಾಣಿಸಿಕೊಂಡು ಬೆಳೆಗಾರರು
ಕಂಗಲಾಗಿದ್ದಾರೆ.

ಹೀಗಾಗಿ ರೋಗದ ತೀವ್ರತೆಯನ್ನು ಎದುರಿಸಲಾಗದೆ ತಾಲ್ಲೂಕಿನ ಬತ್ತಯ್ಯನಹಟ್ಟಿ ಗ್ರಾಮದ ಬೋರಯ್ಯ 5 ಎಕರೆ, ಬೆಳೆಗರೆ ಪೂಜಾರಿ ರಾಮಣ್ಣ 5 ಎಕರೆ, ವಿಡಪನಕುಂಟೆ ಗ್ರಾಮದ ನಿಂಗಣ್ಣ 4 ಎಕರೆ ಸೇರಿದಂತೆ ಒಟ್ಟು 14 ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿಯನ್ನು ರೋಗ ಕಾಣಿಸಿಕೊಂಡ ಆರಂಭದಲ್ಲೇ ಟ್ರ್ಯಾಕ್ಟರ್ ಮೂಲಕ ಸಂಪೂರ್ಣವಾಗಿ ನಾಶಪಡಿಸಿ ಕಲ್ಲಂಗಡಿ, ಮೆಣಸಿನಕಾಯಿ, ಬೂದಗುಂಬಳ ಮುಂತಾದ ಪರ್ಯಾಯ ಬೆಳೆ ಬೆಳೆಯಲು ಚಿಂತನೆ ನಡೆಸಿದ್ದಾರೆ.

ಬೇಸಾಯ, ಬೀಜ, ಎರಡು ಲೋಡ್ ಕೋಳಿ ಗೊಬ್ಬರ ಹಾಗೂ ಕೂಲಿ ಸೇರಿದಂತೆ ನಾಲ್ಕು ಎಕರೆ ಪ್ರದೇಶದ ಈರುಳ್ಳಿ ಬಿತ್ತನೆಗೆ ಕನಿಷ್ಠ ₹ 2 ಲಕ್ಷ ವೆಚ್ಚವಾಗಿತ್ತು. ಬಿತ್ತನೆ ಮಾಡಿದ ಎರಡೇ ತಿಂಗಳಲ್ಲಿ ಬೆಳೆ ತುಂಬಾ ಉತ್ಕೃಷ್ಟವಾಗಿ ಬೆಳೆದಿತ್ತು. ಹೀಗಾಗಿ ಬೆಳೆಯಿಂದ ಉತ್ತಮ ಆದಾಯದ ನಿರೀಕ್ಷೆಯೂ ಇತ್ತು. ನೋಡ ನೋಡುತ್ತಲೇ ಈ ರೋಗ ಕಾಣಿಸಿಕೊಂಡು ಬಾಡುತ್ತ ಬೆಳೆ ಸಂಪೂರ್ಣ ವಿಫಲವಾಯಿತು. ಬೆಳೆಗೆ ಹಾಕಿದ ಬಿಡಿಗಾಸೂ ಸಿಗದ ಪರಿಸ್ಥಿತಿ ಒದಗಿದೆ. ರೋಗಪೀಡಿತ ಬೆಳೆಯನ್ನು ಕಣ್ಣಾರೆ ನೋಡಲಾರದೇ ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನಾಶಪಡಿಸಿದೆ. ಈಗ ಮುಂದಿನ ಹಾದಿಯೇ ತೋರುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರ ನಿಂಗಣ್ಣ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.

ತಹಶೀಲ್ದಾರ್ ಎನ್. ರಘುಮೂರ್ತಿ ರೈತರ ಜಮೀನಿಗೆ ಭೇಟಿ ನೀಡಿ ರೋಗಬಾಧೆಗೆ ಸಿಲುಕಿದ ಈರುಳ್ಳಿ ಬೆಳೆ ಪರಿಶೀಲನೆ
ನಡೆಸಿದರು.

ತೇವಾಂಶದ ಹೆಚ್ಚಳದಿಂದಾಗಿ ರೋಗ

ಎರೆ ಭೂಮಿ- ಕೆಂಪು ಮಿಶ್ರಿತ ಕಪ್ಪು ನೆಲದಲ್ಲಿ ಬಿತ್ತನೆ ಮಾಡಿದ ಈರುಳ್ಳಿಗೆ ಬುಡಕೊಳೆ ರೋಗ ಕಾಣಿಸಿಕೊಂಡಿದೆ. ಮಳೆ ಬಂದು 4-5 ದಿನ ನಿರಂತರವಾಗಿ ವಾತಾವರಣದಲ್ಲಿ ತೇವಾಂಶದ ಹೆಚ್ಚಳದ ಕಾರಣ ಎರೆಭೂಮಿ ಹಾಗೂ ಕೆಂಪು ಮಿಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಿದ ಬೆಳೆಗೆ ನೇರಳೆ ಮಚ್ಚೆ ರೋಗ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ತಗ್ಗು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಬಾರದು. ಮಳೆಗಾಲದಲ್ಲಿ ಏರು ಮಡಿ ಪದ್ಧತಿ ಅನುಸರಣೆ ಮಾಡುವ ಮೂಲಕ ಈರುಳ್ಳಿ ಬೆಳೆಯಬೇಕು.

––––

ಮಳೆ ಬಿದ್ದ ಮರುದಿನವೇ ಈರುಳ್ಳಿ ಬೆಳೆಗೆ ಯಾವುದಾದರೂ ಶಿಲೀಂಧ್ರ ಕೀಟನಾಶಕ ಸಿಂಪರಣೆ ಮಾಡಿದಲ್ಲಿ ಬೆಳೆಗೆ ಅಷ್ಟಾಗಿ ರೋಗ ಹರಡುವುದಿಲ್ಲ. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ 8,600 ಹೆಕ್ಟೇರ್‌ ಪ್ರದೇಶದಲ್ಲಿ 3,600 ಹೆಕ್ಟೆರ್‌ನಷ್ಟು ಬೆಳೆ ರೋಗಬಾಧೆಗೆ ಸಿಲುಕಿದೆ. ಬೆಳೆ ನಷ್ಟದ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ.

–ಡಾ.ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT