ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಕುಸಿತ: ಟೊಮೆಟೊ ಕಟಾವು ಮಾಡದೇ ಬಿಡುತ್ತಿರುವ ರೈತರು

ಮೊಳಕಾಲ್ಮುರು ತಾಲ್ಲೂಕು: ಹೆಚ್ಚುತ್ತಿರುವ ನಾಟಿ, ಹಣ್ಣು ಬಿಡುವ ಹೊತ್ತಿಗೆ ಕುಸಿದ ದರ
Last Updated 3 ಮಾರ್ಚ್ 2022, 4:49 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ): ಟೊಮೆಟೊ ಬೆಲೆ ತೀವ್ರವಾಗಿ ಕುಸಿತವಾಗಿದೆ. ಮಾರುಕಟ್ಟೆಗೆ ಸಾಗಾಟ ಮಾಡುವ ವೆಚ್ಚವೂ ಬರುತ್ತಿಲ್ಲ ಎಂದು ತಾಲ್ಲೂಕಿನ ಬೆಳೆಗಾರರು ಟೊಮೆಟೊವನ್ನು ಹೊಲದಲ್ಲೇ ಬಿಡುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಪ್ರತಿ 25 ಕೆ.ಜಿ. ಹಣ್ಣಿನ ಬಾಕ್ಸ್‌ಗೆ ₹ 1,000 ದಾಟಿತ್ತು. ಈಗ ಕೇಳುವವರು ಇಲ್ಲದಂತಾಗಿದೆ. ಪ್ರತಿ ಕೆ.ಜಿ.ಗೆ ₹ 2 ಸಿಕ್ಕಿದರೆ ಹೆಚ್ಚು ಎಂಬ ಪರಿಸ್ಥಿತಿ. 25 ಕೆಜಿ ಬಾಕ್ಸ್ ₹ 50 ಕ್ಕೆ ಬಿಕರಿಯಾಗುತ್ತಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೆಚ್ಚ ಇದಕ್ಕಿಂತ ಹೆಚ್ಚಾಗುತ್ತಿದೆ. ಅದಕ್ಕಾಗಿ ಹಲವು ರೈತರು ಕಟಾವಿನ ಸಹವಾಸ ಬೇಡ ಎಂದು ಸುಮ್ಮನಾಗಿದ್ದಾರೆ.

ಈಗ ಕಟಾವಿಗೆ ಬಂದಿರುವ ಬೆಳೆಯನ್ನು ಡಿಸೆಂಬರ್ ಕೊನೆಯ ಅವಧಿಯಲ್ಲಿ ನಾಟಿ ಮಾಡಲಾಗಿತ್ತು. ಆ ಸಮಯದಲ್ಲಿ ಟೊಮೆಟೊಗೆ ಉತ್ತಮ ದರ ಇದ್ದ ಕಾರಣ ಬಹಳಷ್ಟು ರೈತರು ನಾಟಿ ಮಾಡಿದ್ದರು. ವಾತಾವರಣದಲ್ಲಿ ಏರುಪೇರು ಇಲ್ಲದ ಕಾರಣ ರೋಗಬಾಧೆ ಇರಲಿಲ್ಲ. ಯಾವ ತೊಂದರೆಯೂ ಇಲ್ಲದೆ ಪೂರ್ಣ ಬೆಳೆ ಕೈಸೇರುತ್ತಿದೆ. ಈಗ ಹಣ್ಣು ಬಿಡುವ ಹೊತ್ತಿಗೆ ಬೆಲೆ ಇಲ್ಲದಂತಾಗಿದೆ.

‘ಹಣ್ಣು ಬಿಡಿಸುವ ಕೂಲಿ, ನಿರ್ವಹಣೆ ವೆಚ್ಚ ಬರುತ್ತಿಲ್ಲ. ತೋಟಗಳಲ್ಲಿ ಟೊಮೆಟೊ ಕೊಳೆಯುತ್ತಿರುವುದು ಅನೇಕ ಕಡೆ ಕಾಣಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೊಮೆಟೊ ಕೃಷಿ ಲಾಟರಿ ರೀತಿ ಆಗಿದೆ. ಈಗ ಬೇಸಿಗೆ ಆರಂಭವಾಗಿರುವುದರಿಂದ ಟೊಮೆಟೊ ಬೇಗ ಹಣ್ಣಾಗುತ್ತಿದೆ. ಇದರಿಂದಾಗಿ ಇನ್ನೂ ಬೆಲೆ ಕುಸಿತವಾಗುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ನೆರವಿಗೆ ಸರ್ಕಾರ ಬರಬೇಕು’ ಎನ್ನುತ್ತಾರೆ ಬೆಳೆಗಾರ ಅಶೋಕ ರೆಡ್ಡಿ.

ಮೂರು ತಿಂಗಳ ಹಿಂದೆ ಉತ್ತರ ಭಾರತದ ರಾಜ್ಯಗಳಲ್ಲಿ ಮಳೆ, ತೀವ್ರ ಚಳಿಯಿಂದಾಗಿ ಅಲ್ಲಿನ ಟೊಮೆಟೊ ಬೆಳೆ ಹಾಳಾಗಿತ್ತು. ಹಾಗಾಗಿ ಕರ್ನಾಟಕದಿಂದ ಟೊಮೆಟೊ ಹೋಗುತ್ತಿತ್ತು. ಈಗ ಅಲ್ಲಿ ವಾತಾವರಣ ಸರಿಯಾಗಿದೆ. ಅಲ್ಲಿಯೇ ಬೆಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಡಿಕೆ ಇಲ್ಲದೇ ಬೆಲೆ ಕುಸಿತವಾಗಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ. ಆರ್. ವಿರೂಪಾಕ್ಷಪ್ಪ ಮಾಹಿತಿ ನೀಡಿದರು.

ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶಲ್ಲಿ ಟೊಮೆಟೊ ಬೆಳೆಯಲಾಗಿದೆ. ಇನ್ನು ಮೂರು ತಿಂಗಳು ಉತ್ತಮ ಬೆಳೆ ಬರಲಿದೆ. ಅದಕ್ಕೆ ಸರಿಯಾಗಿ ದರ ಸಿಕ್ಕದರಷ್ಟೇ ರೈತರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT