ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಕೊಡುವ ಬಣ್ಣದ ಹೂವುಗಳು

Last Updated 15 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ಒಂದು ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಆದರೆ, ಎರಡನೇ ಬೆಳೆಯ ಹೂವಿನ ಕೃಷಿ. ಶೇಂಗಾದಲ್ಲಿ ಸೋತವರಲ್ಲಿ ಕೆಲವರು, ಪುಷ್ಪಕೃಷಿಯನ್ನು ಅಳವಡಿಸಿಕೊಂಡು ತಕ್ಕಮಟ್ಟಿಗೆ ಆದಾಯಪಡೆಯುತ್ತಾ ಜಮೀನನ್ನು ಉಳಿಸಿಕೊಂಡಿದ್ದಾರೆ.

ಚನ್ನಮ್ಮನಾಗತಿಹಳ್ಳಿಯ ವೀರಭದ್ರಪ್ಪ – ಶಿವಮ್ಮ ರೈತ ದಂಪತಿ ಕೂಡ ಮಿಶ್ರಬೆಳೆ ಪದ್ಧಿಯೊಂದಿಗೆ ಪುಷ್ಪಕೃಷಿ ಮಾಡುತ್ತಾ ಜಮೀನು ಉಳಿಸಿಕೊಂಡವರು. ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳಿದ್ದರೂ ಈ ದಂಪತಿಗೆ ಪ್ರಮುಖ ಆದಾಯ ನೀಡುವದು ಬಣ್ಣ ಬಣ್ಣದ ಹೂವುಗಳು.

ಮಿಶ್ರ ಬೆಳೆ ಪದ್ಧತಿ
ತಂದೆಯಿಂದ ಬಳುವಳಿಯಾಗಿ ಬಂದ ಐದು ಎಕರೆ ಜಮೀನಿನಲ್ಲಿ ತಮ್ಮನಿಗೂ ಪಾಲು ಇತ್ತು. ಆದರೆ, ಸಹೋದರ ಕೃಷಿ ಕಡೆಗೆ ಹೆಚ್ಚು ಒಲವು ತೋರದಿದ್ದರಿಂದ, ವೀರಭದ್ರಪ್ಪ ಅವರೇ ಆ ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪತ್ನಿ ಶಿವಮ್ಮ, ಪತಿ ಕೃಷಿ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಐದು ಎಕರೆಯಲ್ಲಿ ಈರುಳ್ಳಿ, ಸೇವಂತಿ, ಸುಗಂಧರಾಜು, ಕಲರ್ ಸೇವಂತಿ, ಮಾರಿಗೋಲ್ಡ್ ಸೇವಂತಿ, ಶೇಂಗಾ, ಹುಣಸೆ, ನುಗ್ಗೆ.. ಹೀಗೆ ವೈವಿಧ್ಯಮಯ ಬೆಳೆಗಳಿವೆ. ಹೂವು ಪ್ರಮುಖ ಆದಾಯದ ಹಾಗೂ ನಿತ್ಯ ಹಣ ತಂದುಕೊಂಡುವ ಬೆಳೆಯಾಗಿದೆ. ಉಳಿದಂತೆ ತರಕಾರಿ ಬೆಳೆಗಳು ವರ್ಷ ಪೂರ್ತಿ ಒಂದಲ್ಲ ಒಂದು ರೀತಿ ಆದಾಯ ಕೊಡುತ್ತವೆ.

ಹಾಲಿ ಇವರ ತೋಟದಲ್ಲಿ ಕಲರ್ ಸೇವಂತಿ, ಸುಗಂಧರಾಜ್ ಹೆಚ್ಚು ಹಣ ಕೊಡುವ ಬೆಳೆಗಳು.

ಸುಮಾರು ಹತ್ತು ವರ್ಷಗಳ ಹಿಂದೆ ಹೂವಿನ ಕೃಷಿ ಶುರು ಮಾಡಿದ್ದಾರೆ. ಆರಂಭದಲ್ಲಿ ಗೆಳೆಯ ಭದ್ರಪ್ಪನವರ ತೋಟದಿಂದ ಈ ಹೂವಿನ ಬೀಜ ತಂದು, ತಾವೇ ಬೀಜೋಪಾಚಾರ ಮಾಡಿ, ಬಿತ್ತನೆ ಮಾಡಿದ್ದಾರೆ. ಪ್ರತಿ ವರ್ಷ ತಾವೇ ಹೂವಿನ ಬೀಜಗಳನ್ನು ತಯಾರಿಸಿಕೊಳ್ಳುತ್ತಾರೆ. ಅದಕ್ಕಾಗಿ ಎರಡು ಗಿಡಗಳನ್ನೇ ಮೀಸಲಿಡುತ್ತಾರೆ.

ಈ ವರ್ಷ ಬೀಜೋಪಾಚಾರ ಮಾಡಿ ಒಂದು ಎಕರೆಗೆ ಕಲರ್ ಸೇವಂತಿಗೆ ಬಿತ್ತಿದ್ದರು. ಬಿತ್ತನೆಗೆ ಮುನ್ನ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಒಂದೆರಡು ಬಾರಿ ಮಡಿಕೆ ಹೊಡೆಸಿದ್ದರು. ನಂತರ ಸಾಲಿಂದ ಸಾಲಿಗೆ ಒಂದು ಅಡಿ, ಗಿಡದಿಂದ ಗಿಡಕ್ಕೆ ಅರ್ಧ ಅಡಿ ಜಾಗ ಬಿಟ್ಟು ಹೂವಿನ ಬೀಜ ನಾಟಿ ಮಾಡಿಸಿದ್ದರು.

‘ನಾಟಿ ಮಾಡಿದ ಮರುದಿಂದಲೇ ನೀರು ಕಟ್ಟಬೇಕು. ತೇವಾಂಶ ಇರುವಂತೆ ನೋಡಿಕೊಂಡರೆ ಗಿಡಗಳು ಉತ್ಕೃಷ್ಟವಾಗಿ ಬರುತ್ತವೆ. ಇಷ್ಟು ಆರೈಕೆ ಮಾಡಿದರೆ, ಬಿತ್ತನೆಯಾದ 8 ರಿಂದ 10 ತಿಂಗಳಿಗೆ ಹೂವು ಬಿಡಲಾರಂಭಿಸುತ್ತವೆ. ಉತ್ತಮ ಔಷದೋಪಚಾರ ಮಾಡಿದರೆ ಇಳುವರಿಯೂ ಚೆನ್ನಾಗಿಯೇ ಬರುತ್ತದೆ’ ಎನ್ನುವುದು ಶಿವಮ್ಮ ಅವರ ಮಾತು.

ನೀರಿನ ವ್ಯವಸ್ಥೆ ಹೇಗೆ
ಐದು ಎಕರೆ ಕೃಷಿ ಚಟುವಟಿಕೆಗಳಿಗಾಗಿ ಕೊಳವೆ ಬಾವಿ ಕೊರೆಸಿದ್ದಾರೆ. ಅದರಲ್ಲಿ 2 ಇಂಚು ನೀರು ಸಿಕ್ಕಿದೆ. ಇದೇ ನೀರಿನಲ್ಲಿ ಒಂದು ಎಕರೆ ಈರುಳ್ಳಿ, ಒಂದು ಎಕರೆ ಶೇಂಗಾ, ಒಂದೂವರೆ ಎಕರೆ ಕಲರ್ ಸೇವಂತಿ, ಒಂದು ಎಕರೆ ಸುಗಂಧರಾಜು, ಅರ್ಧ ಎಕರೆ ಮಾರಿಗೋಲ್ಡ್ ಸೇವಂತಿ ಹೂವುಗಳನ್ನು ಬೆಳೆಯುತ್ತಿದ್ದಾರೆ.

ಹೂವಿನ ಬೀಜ ಚೆಲ್ಲಿದ ಮೂರ್ನಾಲ್ಕು ದಿನಗಳ ಕಾಲ ಡ್ರಿಪ್ ಮೂಲಕ ನೀರು ಹಾಯಿಸುತ್ತಾರೆ. ನಾಲ್ಕು ದಿನಗಳ ನಂತರ ಬದು ನಿರ್ಮಿಸಿ 15 ದಿನಗಳ ಕಾಲ ಬೆಳಿಗ್ಗೆ, ಸಂಜೆ ನೀರು ಕಟ್ಟುತ್ತಾರೆ. ಗಿಡ ಹೂವು ಬಿಡಲು ಪ್ರಾರಂಭಿಸುವವರೆಗೂ ಹಾಗೂ ಹೂವು ಅರಳುವ ಹಂತದಲ್ಲಿ ತಜ್ಞರ ನಿರ್ದೇಶನದಂತೆ ಒಂದು ಅಥವಾ ಎರಡು ಬಾರಿ ಔಷಧಿ ಸಿಂಪಡಣೆ ಮಾಡುತ್ತಾರೆ. ‘ಪ್ರತಿ ನಿತ್ಯ ಗಿಡದಲ್ಲಿ ಬಿಟ್ಟ ಹೂವುಗಳನ್ನು ಕೊಯ್ಲು ಮಾಡಬೇಕು. ಇಲ್ಲದಿದ್ದರೆ, ಗಿಡಕ್ಕೆ ರೋಗ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂಬುದು ವೀರಭದ್ರಪ್ಪನವರ ಎಚ್ಚರದ ಮಾತು.

ಮಾರುಕಟ್ಟೆ ವ್ಯವಸ್ಥೆ
ಅಂದ ಹಾಗೆ ಈ ರೈತ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಎಲ್ಲರೂ ಸೇರಿ 5 ಎಕರೆ ಜಮೀನಿನಲ್ಲಿರುವ ಬೆಳೆಯ ನಿರ್ವಹಣೆಗೆ ಮಾಡಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಬೀಜ, ಕುಟುಂಬಸ್ಥರೇ ಕೂಲಿಕಾರರಿರುವುದರಿಂದ ಹೂವಿನ ಕೃಷಿಗೆ ಒಳಸುರಿ ಮೇಲೆ ತಗಲುವ ವೆಚ್ಚ ಕಡಿಮೆ. ಔಷಧಿಗೆ ₹ 15 ಸಾವಿರ, ವಿದ್ಯುತ್ ಬಿಲ್ ಪಾವತಿ ಸೇರಿ ಒಂದು ತಿಂಗಳಿಗೆ ₹20 ಸಾವಿರದಿಂದ ₹25 ಸಾವಿರವರೆಗೆ ಖರ್ಚು ಬರಬಹುದು.

‘ಪ್ರತಿನಿತ್ಯ 50 ರಿಂದ 60 ಕೆಜಿಯಷ್ಟು ಕಲರ್ ಸೇವಂತಿ ಹೂವನ್ನು ಮಾರುಕಟ್ಟೆಗೆ ಹಾಕುತ್ತೇವೆ. ಕೆ.ಜಿ ಹೂವಿಗೆ ₹ 20 ರಿಂದ ₹ 25 ರೂವರೆಗೂ ಬೆಲೆ ಸಿಗುತ್ತಿದೆ. ಪ್ರತಿ ನಿತ್ಯ ₹1500ವರೆಗೂ ಆದಾಯ ಪಡೆಯುತ್ತಿದ್ದೇವೆ’ ಎಂದು ಮಾರುಕಟ್ಟೆ ವಹಿವಾಟಿನ ಬಗ್ಗೆ ವೀರಭದ್ರಪ್ಪ ಮತ್ತು ಶಿವಮ್ಮ ಮಾಹಿತಿ ಹಂಚಿಕೊಳ್ಳುತ್ತಾರೆ.

ದೀಪಾವಳಿ, ದಸರಾ ಹಬ್ಬಗಳಲ್ಲಿ ಹೊಲದಲ್ಲಿ ಹೂವಿನ ಇಳುವರಿ ಚೆನ್ನಾಗಿರುತ್ತದೆ. ಹಾಗೆಯೇ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುತ್ತದೆ. ‘ಈ ಬಾರಿ ಮಾರುಕಟ್ಟೆಯಲ್ಲಿ ಸುಗಂಧರಾಜ ಹೂವಿನ ಬೆಲೆ ಕೆ.ಜಿಗೆ ₹30 ರಿಂದ ₹40ರವರೆಗೂ ಸಿಕ್ಕಿದೆ’ ಎಂದು ವಿವರಣೆ ನೀಡುತ್ತಾರೆ ರೈತ ದಂಪತಿ.

ಬರಗಾಲದ ದಿನಗಳಲ್ಲಿ, ಹಾಕಿದ ಬೆಳೆಯೂ ಕೈ ಸೇರದೇ ಪರಿತಪಿಸುತ್ತಿದ್ದ ವೀರಭದ್ರಪ್ಪ–ಶಿವಮ್ಮ. ಆದರೂ ಸಾವಿರಾರು ರೂಪಾಯಿ ಖರ್ಚು ಮಾಡಿ ಕಲ್ಲು ಮಣ್ಣಿನ ಭೂಮಿ ಹಸನು ಮಾಡಿದ್ದರು. ‘ಮಳೆಯ ಕೊರತೆಯಿಂದ ಶೇಂಗಾ ಕೈಕೊಟ್ಟು, ಬಿತ್ತಿದ ಬೆಳೆ ಮಣ್ಣುಪಾಲಾಗಿ, ಕೃಷಿ ಸಹವಾಸವೇ ಬೇಡ ಎನ್ನುತ್ತಿದ್ದ ಸಮಯದಲ್ಲಿ ಈ ಪುಷ್ಪಕೃಷಿ, ಮಿಶ್ರಬೆಳೆ ಪದ್ಧತಿ ಕೈ ಹಿಡಿಯಿತು’ ಎಂದು ಈಗಲೂ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಪುಷ್ಪ ಕೃಷಿ ಕುರಿತ ಹೆಚ್ಚಿನ ಮಾಹಿತಿಗಾಗಿ 9900297360ಗೆ ಸಂಪರ್ಕಿಸಬಹುದು.

ಹೊಲದಲ್ಲಿ ಹೂವಿನ ಆರೈಕೆಯಲ್ಲಿ ತೊಡಗಿರುವ ಶಿವಮ್ಮ
ಹೊಲದಲ್ಲಿ ಹೂವಿನ ಆರೈಕೆಯಲ್ಲಿ ತೊಡಗಿರುವ ಶಿವಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT