ಭದ್ರಾ ಜಲಾಶಯ: ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ನಾಟಿ ಭರಾಟೆ

7
ಭದ್ರಾ ಜಲಾಶಯದ ಪ್ರದೇಶದಲ್ಲಿ 75 ಸಾವಿರ ಹೆಕ್ಟೇರ್, ತುಂಗಾ 60,800 ಹೆಕ್ಟೇರ್‌

ಭದ್ರಾ ಜಲಾಶಯ: ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ನಾಟಿ ಭರಾಟೆ

Published:
Updated:
Deccan Herald

ಶಿವಮೊಗ್ಗ: ಭದ್ರಾ, ತುಂಗಾ ಸೇರಿದಂತೆ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾದ ಪರಿಣಾಮ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ.

ಮುಂಗಾರು ರಾಜ್ಯ ಪ್ರವೇಶಿಸುವ ಮುನ್ನವೇ ಆರಂಭವಾದ ಮಳೆ ಆರಂಭವಾಗಿತ್ತು. ನಂತರ ಎಲ್ಲೆಡೆ ಭಾರಿ ಮಳೆ ಸರಿದು ಜುಲೈ ಮುಗಿಯುವ ಮೊದಲೇ ಮಲೆನಾಡಿನ ಬಹುತೇಕ ಜಲಾಶಯಗಳು ಗರಿಷ್ಠಮಟ್ಟ ತಲುಪಿವೆ. ಮಳೆಯಾಶ್ರಿತ ಭೂಮಿಯೂ ಸೇರಿದಂತೆ ಎಲ್ಲೆಡೆ ಕೃಷಿ ಚಟುವಟಿಕೆ ಗರಿಗೆದರಿವೆ. ತುಂಗಾ, ಭದ್ರಾ, ಅಂಬಲಿಗೊಳ್ಳ, ಅಂಜನಾಪುರ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಭತ್ತದ ಸಸಿಮಡಿ ಮಾಡುವ, ನಾಟಿ ಹಚ್ಚುವ ಕಾರ್ಯ ಎಲ್ಲೆಡೆ ಕಾಣುತ್ತಿದೆ.

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಸುಮಾರು 1.80 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ಭದ್ರಾ ಜಲಾಶಯ ನೀರುಣಿಸುತ್ತದೆ. ಮೂರು ಜಿಲ್ಲೆಗಳ 75 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ. ಶಿವಮೊಗ್ಗ 10 ಸಾವಿರ, ದಾವಣಗೆರೆ 60 ಸಾವಿರ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 5 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ.

ಅಚ್ಚುಕಟ್ಟು ವ್ಯಾಪ್ತಿಯ ಅತಿದೊಡ್ಡ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆ ಕಟ್ಟೆಗಳು, ಪಿಕ್‌ಅಪ್‌ಗಳು ಜಲಾಶಯದ ನಾಲೆಯ ನೀರನ್ನೇ ಅವಲಂಬಿಸಿವೆ. ಸೂಳೆಕೆರೆ ನೀರು ಬಳಸಿಕೊಂಡು ಪ್ರತಿ ವರ್ಷ 2,800 ಹೆಕ್ಟೇರ್ ಭತ್ತ ಬೆಳೆಯಲಾಗುತ್ತದೆ.

ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಶಿವಮೊಗ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ 60,800 ಹೆಕ್ಟೇರ್‌ ಅಚ್ಚುಕಟ್ಟು ಬರುತ್ತದೆ.

ಕಳೆದ ಮೂರು ವರ್ಷ ಬರಗಾಲದ ಪರಿಣಾಮ ಜಲಾಶಯಗಳು ಭರ್ತಿಯಾಗಿರಲಿಲ್ಲ. ಹಾಗಾಗಿ, ಭದ್ರಾ ಅಚ್ಚುಕಟ್ಟು ರೈತರು ಎರಡು ಬೆಳೆ ತ್ಯಾಗ ಮಾಡಿದ್ದರು. ಪ್ರತಿ ಬೆಳೆಗೆ 5 ಲಕ್ಷ ಟನ್‌ನಂತೆ ಒಟ್ಟು 10 ಲಕ್ಷ ಟನ್‌ ಭತ್ತದ ಬೆಳೆ ಖೋತಾ ಆಗಿತ್ತು. ಶೇ 95ರಷ್ಟು ರೈತರು ಬೆಳೆ ತ್ಯಾಗ ಮಾಡಿದ್ದರು. ಈ ಬಾರಿ ಜುಲೈ ಒಳಗೆ ಜಲಾಶಯಗಳು ತುಂಬಿದ ಕಾರಣ ನಿಗದಿತ ಅವಧಿಗೂ ಮುನ್ನವೇ ನಾಟಿ ಕಾರ್ಯ ವೇಗ ಪಡೆದುಕೊಂಡಿದೆ.

‘ಮೂರು ವರ್ಷ ಭತ್ತ ನಾಟಿ ಮಾಡಬೇಕೋ, ಬೇಡವೋ ಎನ್ನುವ ಆತಂಕದಲ್ಲೇ ಸಮಯ ಕಳೆದೆವು. ಎರಡು ಬೆಳೆ ತ್ಯಾಗ ಮಾಡಿದ್ದೆವು. ಸಾಲದ ಹೊರೆ ತೀರಿಸಲು ಸಾಧ್ಯವಾಗಿರಲಿಲ್ಲ. ಈಗ ಬಾರಿಯ ಮಳೆ ಎಲ್ಲ ಆತಂಕ ದೂರ ಮಾಡಿದೆ. ಈ ತಿಂಗಳ 12ರಿಂದಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಹಾಗಾಗಿ, ಭತ್ತದ ನಾಟಿ ಭರದಿಂದ ಸಾಗಿದೆ. ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು ಅರಹತೊಳಲಿನ ರೈತ ನಾಗರಾಜಪ್ಪ.

ಅಚ್ಚುಕಟ್ಟು ಭಾಗದ ರೈತರು ಎರಡು ಬೆಳೆ ತ್ಯಾಗ ಮಾಡಿದ್ದರು. ಆದರೆ, ಕೊನೆಯ ಭಾಗದ ರೈತರು ಆರು ಬೆಳೆ ಕಳೆದುಕೊಂಡಿದ್ದಾರೆ. ಈ ಬಾರಿ ಜಲಾಶಯ ತುಂಬಿರುವ ಕಾರಣ ಈ ಮಳೆಗಾಲ ಹಾಗೂ ಬರುವ ಬೇಸಿಗೆಯ ಬೆಳೆ ಖಾತ್ರಿಯಾಗಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ನೀರು ವ್ಯರ್ಥವಾಗಿ ನದಿ ಮೂಲಕ ಸಮುದ್ರ ಸೇರುತ್ತದೆ. ಈ ನೀರನ್ನೂ ಸದ್ಬಳಕೆ ಮಾಡುವ ಕುರಿತು ಯೋಜನೆ ರೂಪಿಸಬೇಕು ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿ ಸದಸ್ಯ ತೇಜಸ್ವಿ ವಿ. ಪಟೇಲ್‌.

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !