ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಗೆ ಜಗ್ಗದ ಜಟ್ಟಿ: ನೆಟ್ಟಿ ಬೆಳ್ಳಕ್ಕಿ!

ಹತ್ತರಿಂದ ಹನ್ನೆರಡು ದಿನಗಳವರೆಗೂ ಪೈರಿನ ಮೇಲೆ ನೀರು ನಿಂತಿದ್ದರೂ ಪೈರುಗಳಿಗೆ ಏನೂ ಆಗಿರಲಿಲ್ಲ.
Last Updated 10 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಈ ವರ್ಷವೂ ಎದೆಯುದ್ದ ನೆರೆ ಹೋಯ್ತು. ಆದರೆ, ಬತ್ತದ ಪೈರು ಹಾಳಾಗಲಿಲ್ಲ. ಈಗ ಗದ್ದೆಯಲ್ಲಿ ನೀರು ಇಳಿದಿದೆ. ನೆಲ ಒಣಗುತ್ತಿದೆ. ಪೈರು ಚೆನ್ನಾಗಿದೆ. ಈ ಬಾರಿಯೂ ಫಸಲಿಗೆ ಮೋಸವಿಲ್ಲ ಬಿಡಿ...’

-ನೆರೆ ಹರಿದರೂ ಜಗ್ಗದ ‘ನೆಟ್ಟಿ ಬೆಳ್ಳಕ್ಕಿ’ ಭತ್ತದ ತಳಿಯ ಶಕ್ತಿ ಬಗ್ಗೆ ದಬ್ಬೆಗದ್ದೆ ಕೃಷಿಕ ಜಯರಾಜಯ್ಯ ವಿಶ್ವಾಸದಿಂದ ಮಾತನಾಡಿದರು. ಜುಲೈ ತಿಂಗಳಲ್ಲಿ ನಾಟಿ ಮಾಡಿದ್ದ ಈ ತಳಿಯ ಭತ್ತದ ಪೈರಿನ ಮೇಲೆ ಆಗಸ್ಟ್ ತಿಂಗಳಲ್ಲಿ ಹೇಮಾವತಿ ನದಿ ನೀರಿನ ನೆರೆ ಹರಿಯಿತು. ಸುಮಾರು ಹತ್ತರಿಂದ ಹನ್ನೆರಡು ದಿನಗಳವರೆಗೂ ಪೈರಿನ ಮೇಲೆ ನೀರು ನಿಂತಿತು. ಆದರೂ ಪೈರುಗಳಿಗೆ ಏನೂ ಆಗಿರಲಿಲ್ಲ. ವಾರದಿಂದ ನೀರು ಕಡಿಮೆಯಾದ ಮೇಲೆ ಯಥಾಪ್ರಕಾರ ತೆನೆ ಹೊಡೆಯುವುದಕ್ಕಾಗಿ ಎದ್ದು ನಿಂತಿದ್ದವು !

‘ನೆಟ್ಟಿ ಬೆಳ್ಳಕ್ಕಿ’- ನೆರೆ ಎದುರಿಸಿ ಬೆಳೆಯುವ ದೇಸಿ ಭತ್ತದ ತಳಿ. ಇದು ಈ ಭಾಗದ ಮೂಲದ್ದು. ದಶಕಗಳ ಹಿಂದೆ ಸಕಲೇಶಪುರ ತಾಲ್ಲೂಕು ಹಾನುಬಾಳು ಆಸುಪಾಸಿನ ಹೇಮಾವತಿ ನದಿ ಪಾತ್ರದ ಗದ್ದೆಗಳಲ್ಲೆಲ್ಲ (ಹೊಳೆ ಹರಿಯುವ ಜಾಗದಲ್ಲೂ) ಈ ತಳಿ ಬೆಳೆಯುತ್ತಿದ್ದರು.ಇಳುವರಿಯ ಕೊರತೆ, ಜತೆಗೆ ಹೈಬ್ರಿಡ್ ತಳಿಗಳ ಅಬ್ಬರದಿಂದಾಗಿ ಅನೇಕ ರೈತರು ನಂಬರ್ ಬತ್ತದ (ಹೈಬ್ರಿಡ್) ಕಡೆಗೆ ವರ್ಗವಾದರು. ಈ ತಳಿ ಬೆಳೆಯುವವರ ಸಂಖ್ಯೆ ಕಡಿಮೆಯಾಯಿತು.ಮೂರ್ನಾಲ್ಕು ವರ್ಷಗಳಿಂದ ದಬ್ಬೆಗದ್ದೆ, ಮಾವಿನಹಳ್ಳಿ, ಕೆನ್ಲಿ ಸುತ್ತಮುತ್ತಲ ಗ್ರಾಮದಲ್ಲಿ ಬೆಳೆಯುತ್ತಿದ್ದಾರೆ.

ಜಯರಾಜಯ್ಯ, ದಿಲೀಪ್, ಕಾಂತರಾಜು, ಲೋಕೇಶ್, ವಿಶ್ವನಾಥರಂಥ ರೈತರು ಆ ತಳಿ ಸಂರಕ್ಷಣೆಯನ್ನು ವಿಸ್ತರಿಸಿದ್ದಾರೆ.ಮೊದಲು ಮನೆ ಬಳಕೆಗಾಗಿ ಅರ್ಧ ಎಕರೆ ಬೆಳೆಸುತ್ತಿದ್ದವರು, ಈ ವರ್ಷ ತಲಾ ಒಂದು ಎಕರೆಯಂತೆ ಹತ್ತು ಮಂದಿ 10 ಎಕರೆಯಲ್ಲಿ ಈ ತಳಿ ಬೆಳೆಯುತ್ತಿದ್ದಾರೆ.

ಜುಲೈ–ಆಗಸ್ಟ್‌ನಲ್ಲಿ ಬಿತ್ತನೆ

ಮಳೆಯ ಬಿರುಸು ಹಾಗೂ ಪ್ರವಾಹದ ಪ್ರಮಾಣ ಅಂದಾಜಿಸಿ ಜುಲೈ–ಆಗಸ್ಟ್ ಮೊದಲವಾರದಲ್ಲಿ ನೆಟ್ಟಿ ಬೆಳ್ಳಕ್ಕಿ ತಳಿ ನಾಟಿ ಮಾಡುತ್ತಾರೆ. ನಾಟಿಯಾಗಿ ತಿಂಗಳು ಕಳೆಯುವುದರೊಳಗೆ ನೆರೆ ಬಂದುಬಿಡುತ್ತದೆ. ಸಾಮಾನ್ಯವಾಗಿ ಹನ್ನೆರಡು ದಿನಗಳವರೆಗೂ ಅಂದರೆ, ಪೈರು ಗಟ್ಟಿಯಾಗಿ ಬೇರು ಬಿಡುವವರೆಗೂ ಪ್ರವಾಹದ ಬಿರುಸು ತಡೆಯುತ್ತದೆ. ಬೇರು ಬಿಟ್ಟುಗಟ್ಟಿಯಾದ ಮೇಲೆ ನೀರು ನಿಂತುಬಿಟ್ಟರೆ ಪೈರು ಕೊಳೆಯುತ್ತದೆ.

ಬೆಳ್ಳಕ್ಕಿಯ ನೆರೆ ಸಹಿಷ್ಣು ಗುಣವನ್ನು ಕಾಂತರಾಜ್ ಹೀಗೆ ವರ್ಣಿಸುತ್ತಾರೆ; ‘ಈ ಬಾರಿ ಬೆಳ್ಳಕ್ಕಿ ಜತೆ ಬೇರೆ ಬೇರೆ ತಳಿಗಳನ್ನು ನಾಟಿ ಮಾಡಿದ್ದೆವು. ನೆರೆ ಬಂದು ನಾಲ್ಕೈದು ದಿನ ಪೈರು ಮೇಲೆ ನೀರು ನಿಂತಿತು. ನೆರೆ ಇಳಿದ ಮೇಲೆ ನೋಡಿದರೆ, ನೆಟ್ಟಿಬೆಳ್ಳಕ್ಕಿ ತಳಿ ಮಾತ್ರ ಉಳಿದಿತ್ತು. ಬೇರೆ ತಳಿಯ ಪೈರುಗಳು ಕರಗಿ ಹೋಗಿದ್ದವು’.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹೀಗೆ ನೆರೆ ಬಂದಾಗ, ಜಯರಾಜಯ್ಯ ಅರ್ಧ ಎಕೆರೆಗೆ ಬೆಳ್ಳಕ್ಕಿ ತಳಿ ನಾಟಿ ಮಾಡಿದ್ದರು. ನೆರೆಯ ನಡುವೆಯೂ ಸುಮಾರು 15 ಕ್ವಿಂಟಲ್‌ ಇಳುವರಿ ಬಂದಿತ್ತಂತೆ.‌ ಅಂದ ಹಾಗೆ, ಈ ತಳಿಯ ವಿಶೇಷವೆಂದರೆ, ಬೇರೆ ಭತ್ತದ ತಳಿಗಳು ಚಳಿಗಾಲದಲ್ಲಿ ಹೊಡೆ ಒಡೆಯುವುದಿಲ್ಲ. ಆದರೆ, ಈ ತಳಿ ನೆರೆಯನ್ನೂ ತಡೆಯುತ್ತದೆ. ಚಳಿಗಾಲದಲ್ಲೂ ಹೊಡೆ ಒಡೆಯುತ್ತದೆ.

ರೋಗ, ಕೀಟಬಾಧೆ ಇಲ್ಲ

ಇದು ಆರು ತಿಂಗಳ ಅವಧಿಯ ತಳಿ. ಎಕರೆಗೆ 12 ರಿಂದ 16 ಕ್ವಿಂಟಲ್ ಇಳುವರಿ ಬರುತ್ತದೆ. ಖರ್ಚು ಕಡಿಮೆ. ಆರೈಕೆ ಕಡಿಮೆ. ನಾಟಿ ಮಾಡಿ, ಕಳೆ ನಿರ್ವಹಣೆ ಮಾಡಿದರೆ ಸಾಕು. ಮಳೆಗಾಲದ ಬೆಳೆಯಾದ್ದರಿಂದ ಹೊಳೆ ನೀರಿನೊಂದಿಗೆ ಬೆಳೆಯುತ್ತದೆ. ನೀರು ಹಾಯಿಸುವ ಪ್ರಶ್ನೆಯೇ ಇಲ್ಲ. ಬಿತ್ತನೆ ವೇಳೆ ಕೊಟ್ಟಿಗೆ ಗೊಬ್ಬರ ಕೊಟ್ಟರೆ ಸಾಕು. ಮೇಲುಗೊಬ್ಬರ ಕೊಡುವ ಅಗತ್ಯವಿಲ್ಲ. ಇದೇ ಕಾರಣಕ್ಕೆ ಈ ತಳಿ ಮಲೆನಾಡಿನ ರೈತರ ಮೆಚ್ಚಿನ ತಳಿಯಾಗಿತ್ತು.

ಹಿಂದೆ ಪೈರು ನಾಟಿಗೆ ಮುನ್ನ ಗದ್ದೆಯಲ್ಲಿ ದ್ವಿದಳಧಾನ್ಯಗಳನ್ನು ಬೆಳೆಸಿ, ಭೂಮಿಗೆ ಹರಗಿಸಿ, ಪೈರು ನಾಟಿ ಮಾಡುತ್ತಿದ್ದರು. ಕ್ರಮೇಣ ಈ ಪದ್ಧತಿ ನಾಪತ್ತೆಯಾಯಿತು. ಈಗ ಪೈರು ನಾಟಿಗೂ ಮುನ್ನ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಭೂಮಿ ಸಂಸ್ಥೆಯವರು ಡಯಂಚಾ, ಸೆಣಬು ಬೀಜಗಳನ್ನು ಪೂರೈಸಿದ್ದರಿಂದ, ಭತ್ತದ ಸಸಿ ನಾಟಿಗೆ ಮುನ್ನ, ಅವುಗಳನ್ನೇ ಬಿತ್ತನೆ ಮಾಡಿ, ಭೂಮಿಗೆ ಹರಗಿಸಿ, ನಂತರ ಪೈರು ನಾಟಿ ಮಾಡುತ್ತಿದ್ದಾರೆ.
‘ಈ ತಳಿಗೆ ಮೇಲುಗೊಬ್ಬರ ಕೊಡುವಂತಿಲ್ಲ. ರಸ ಗೊಬ್ಬರಕ್ಕೆ ಒಗ್ಗುವುದಿಲ್ಲ. ಒಂದು ಪಕ್ಷ ಗೊಬ್ಬರ ಕೊಟ್ಟರೆ ಬೆಳೆ ಬಿದ್ದು ಹೋಗುತ್ತದೆ. ಇದೇ ಕಾರಣಕ್ಕೆ ಆಳುಗಳನ್ನಿಟ್ಟು ಗದ್ದೆ ಮಾಡುವವರು ಈ ತಳಿ ಬೆಳೆಯುವುದಿಲ್ಲ. ಕಾರ್ಮಿಕರು ಅಳತೆ ಮೀರಿ ಗೊಬ್ಬರ ಹಾಕಿದರೆ ಭತ್ತದ, ಹಣ, ವರ್ಷದ ಕೆಲಸ ಎಲ್ಲ ಹಾಳಾಗುತ್ತದೆ’ – ತಳಿ ಬೆಳವಣಿಗೆಯಾಗದಿದ್ದಕ್ಕೆ ಕಾಂತರಾಜ್ ಹೀಗೆ ಕಾರಣ ಕೊಡುತ್ತಾರೆ. ‘ನಮ್ಮ ಹಿರಿಯರ ಕಾಲದಿಂದಲೂ ಇದನ್ನು ಬೆಳೆಯುತ್ತಿದ್ದೇವೆ. ಇಲ್ಲಿವರೆಗೂ ಕೀಟ, ರೋಗಗಳ ಕಾಟ ಕಂಡಿಲ್ಲ. ಹಾಗಾಗಿ ಔಷಧ ಸಿಂಪಡಣೆ ಮಾತೇ ಇಲ್ಲ. ಈ ಕಾರಣಕ್ಕಾಗಿಯೇ ‘ನೆಟ್ಟಿಬೆಳ್ಳಕ್ಕಿ’ಯನ್ನು ಇಷ್ಟಪಟ್ಟು ಬೆಳೆಯುತ್ತಿದ್ದೇವೆ’ ಎನ್ನುವುದು ಕಾಂತರಾಜ್, ಜಯರಾಜಯ್ಯ ಅವರ ಅಭಿಪ್ರಾಯ.

ಕೆಂಪು ಅಕ್ಕಿ, ಕುಚ್ಚಲಕ್ಕಿ ಬೇಡಿಕೆ

ಬೇರೆ ಭತ್ತಕ್ಕಿಂತ ಇದಕ್ಕೆ ಬೆಲೆ ಹೆಚ್ಚು. ಕಳೆದ ವರ್ಷ ಕ್ವಿಂಟಲ್ ಭತ್ತಕ್ಕೆ ₹2300 ಇತ್ತು. ಸಾಮಾನ್ಯ ಭತ್ತಕ್ಕಿಂತ ₹300 ರಷ್ಟು ಬೆಲೆ ಹೆಚ್ಚಾಗಿರುತ್ತದೆ. ಮಲೆನಾಡಿನಲ್ಲಿ ಈ ತಳಿಯ ಅಕ್ಕಿ ಬಳಕೆ ಕಡಿಮೆ. ಆದರೆ, ಕರಾವಳಿ, ಮಂಗಳೂರಿನಲ್ಲಿ ಇದಕ್ಕೆ ಬೇಡಿಕೆ ಇದೆ. ‘ಮೊದಲು ಇದನ್ನು ಬಡವರ ಅಕ್ಕಿ ಅಂತ ನಿರ್ಲಕ್ಷ್ಯಿಸಿದ್ದೆ. ಒಮ್ಮೆ ಮಂಗಳೂರಿನ ಹೋಟೆಲ್‌ಗೆ ಹೋದಾಗ, ಇದೇ ಅಕ್ಕಿಯ ಖಾದ್ಯವೊಂದನ್ನು ಕೊಟ್ಟರು. ಬಹಳ ರುಚಿಯಾಗಿತ್ತು. ಆಗ ಗೊತ್ತಾಗಿದ್ದು, ನೆಟ್ಟಿ ಬೆಳ್ಳಕ್ಕಿ ಅಕ್ಕಿಯ ರುಚಿ ಮತ್ತು ಬೇಡಿಕೆ. ಆಗಿನಿಂದಲೇ ನಾನು ಕಡ್ಡಾಯವಾಗಿ 2-3 ಎಕರೆಯಲ್ಲಿ ಈ ತಳಿ ಬೆಳೆಯಲು ಆರಂಭಿಸಿದೆ’ ಎನ್ನುತ್ತಾ ಬೆಳ್ಳಕ್ಕಿಯ ಮಾರುಕಟ್ಟೆಯನ್ನು ಜಯರಾಮ್ ವಿವರಿಸಿದರು.
ನೆಟ್ಟಿ ಬೆಳ್ಳಕ್ಕಿಯ ಅಕ್ಕಿ ಪಾಯಸ, ಕಜ್ಜಾಯಕ್ಕೆ ಸೂಕ್ತ ತಳಿ. ತಮ್ಮ ಮನೆಗೆ ಬಂದ ನೆಂಟರಿಷ್ಟರಿಗೆ ಈ ಅಕ್ಕಿಯ ಖಾದ್ಯಗಳ ರುಚಿ ತೋರಿಸಿದಾಗ, ‘ನಮಗೂ ಸ್ವಲ್ಪ ಕೊಡಿ’ ಎಂದು ಕೇಳುತ್ತಾರೆ ಎಂದು ಜಯರಾಜಯ್ಯ ಅವರ ಸೊಸೆ ಸುಧಾ ಹೇಳುತ್ತಾರೆ. ಈ ತಳಿ ಬೆಳೆಯುತ್ತಿರುವ ರೈತರು ಅಕ್ಕಿಯನ್ನು ‘ಅವನಿ ಆರ್ಗಾನಿಕ್ಸ್ ಮತ್ತು ಸಾವಯವ ಒಕ್ಕೂಟ’ದವರು ಹಾಸನದಲ್ಲಿ ನಡೆಸುವ ‘ವಾರದ ಸಂತೆ’ಯಲ್ಲಿ ಮಾರಾಟ ಮಾಡುತ್ತಾರೆ.
‘ಅಕ್ಕಿಗೆ ತುಂಬಾ ಬೇಡಿಕೆ ಇದೆ. ಈ ಬಾರಿ ನಮ್ಮ ಸಂಘದ ಸದಸ್ಯರು ಬೆಳ್ಳಕ್ಕಿ ಜತೆಗೆ, ಏಳೆಂಟು ದೇಸಿ ತಳಿಗಳನ್ನು ಬಿತ್ತನೆ ಮಾಡಿದ್ದೇವೆ. ಜನ ಹೆಚ್ಚು ಹೆಚ್ಚು ಬೇಡಿಕೆ ಇಟ್ಟರೆ, ನಾಟಿ ತಳಿ ಬೆಳೆಯುವವರು ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂಬ ಆಶಾಭಾವ ಕಾಂತರಾಜ್ ಅವರದ್ದು.

ದಶಕದ ಪ್ರಯತ್ನದ ಫಲ

ಹಾಸನ ಜಿಲ್ಲೆಯ ಈ ಭಾಗದಲ್ಲಿ ‘ನೆಟ್ಟಿ ಬೆಳ್ಳಕ್ಕಿ’ ಮಾತ್ರವಲ್ಲ, ಹೊಳೆಸಾಲು ಚಿಪ್ಪಿಗ, ಕ್ಯಾಸಕ್ಕಿ, ರಾಜಭೋಗ, ಘಂಸಾಲೆಯಂತಹ ದೇಸಿ ತಳಿಗಳನ್ನು ರೈತರು ಸಂರಕ್ಷಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಮುದಾಯ ಬೀಜ ಬ್ಯಾಂಕ್ ಆರಂಭಿಸಿದ ಇಲ್ಲಿನ ರೈತರು, ಆಗಿನಿಂದಲೇ ತಳಿ ಸಂರಕ್ಷಣೆ ಆರಂಭಿಸಿದರು. ‘ಇದೆಲ್ಲ ದಶಕದ ಪ್ರಯತ್ನದ ಫಲ’ ಎನ್ನುತ್ತಾರೆ ಸಂಸ್ಥೆಯ ಯೋಜನಾ ನಿರ್ದೇಶಕ ಜಯಪ್ರಸಾದ್ ಬಳ್ಳೇಕೆರೆ. ‘ಅಂದು ಬೊಗಸೆ ಬೀಜದಿಂದ ಆರಂಭವಾದ ಈ ಪ್ರಕ್ರಿಯೆ ಈಗ ಕ್ವಿಂಟಾಲ್ ಲೆಕ್ಕದಲ್ಲಿ ಮಾರಾಟ ಮಾಡುವ ಹಂತ ತಲುಪಿದೆ’ಎಂದು ಅವರು ಉಲ್ಲೇಖಿಸುತ್ತಾರೆ.

ಹತ್ತರಿಂದ ಹನ್ನೆರಡು ರೈತರು ‘ನೆಟ್ಟಿ ಬೆಳ್ಳಕ್ಕಿ’ ಬೆಳೆಯುತ್ತಿದ್ದಾರೆ. ಕಾಡುಗದ್ದೆಯ ಚಿದಂಬರ ಪರಿಮಳಯುಕ್ತ ಬತ್ತ ‘ಘಂಸಾಲೆ’ ಬೆಳೆಯುತ್ತಿದ್ದಾರೆ. ಇದು ಬಾಸುಮತಿ ಅಕ್ಕಿಗೆ ಪರ್ಯಾಯವಾದದು. ಪ್ರಗತಿಪರ ಕೃಷಿಕ ವೈ.ಸಿ.ರುದ್ರಪ್ಪ ‘ಹೊಳೆಸಾಲು ಚಿಪ್ಪಿಗ’ ಸಂರಕ್ಷಿಸಿದ್ದಾರೆ. ಇದು ಮಹಾರಾಷ್ಟ್ರದ ಸಾಂಗ್ಲಿ ಭಾಗದಲ್ಲಿ ಪುರಿ (ಮಂಡಕ್ಕಿ) ತಯಾರಿಕೆಗೆ ಬಳಕೆಯಾಗುತ್ತಿದೆ. ‘ಇವುಗಳ ಜತೆಗೆ ರತ್ನಚೂಡಿ, ಬರ್ಮಾ ಬ್ಲಾಕ್, ರಾಜಮುಡಿ, ನವರಾ ತಳಿಗಳನ್ನು ಬೆಳೆಸಲು ಉತ್ತೇಜಿಸುತ್ತಿದ್ದೇವೆ. ಕೃಷಿ ಇಲಾಖೆ ನೆರವಿನೊಂದಿಗೆ ಆರಂಭವಾಗಿರುವ ಸಾವಯವ ಒಕ್ಕೂಟದಿಂದ 28ಕ್ಕೂ ಹೆಚ್ಚು ರೈತರಿಂದ ಸ್ಥಳೀಯ ಭತ್ತದ ತಳಿಗಳನ್ನು ಬೆಳೆಸುತ್ತಾ, ಅವರಿಂದ ಖರೀದಿ ಮಾಡುತ್ತಿದ್ದೇವೆ. ರೈತರಿಗೆ ಮಾರುಕಟ್ಟೆ ಒದಗಿಸುತ್ತಿರುವುದರಿಂದ, ಈ ತಳಿಗಳು ವಿಸ್ತರಣೆಯಾಗುತ್ತವೆ ಎಂಬ ವಿಶ್ವಾಸವಿದೆ’ ಎನ್ನುವುದು ಜಯಪ್ರಸಾದ್ ಅಭಿಪ್ರಾಯ.

‘ಅಂಡಾ–ಉಂಡಾ’ ಕತೆ...

ಭತ್ತವನ್ನು ಸಾಲುಗಳಲ್ಲಿ ನಾಟಿ ಮಾಡುವುದರಿಂದ ‘ನೆಟ್ಟಿ’ ಎಂಬ ಹೆಸರು ಬಂದಿದೆ. ಬೆಳ್ತಿಗೆ ಅಕ್ಕಿ ಎಂಬುವುದು ‘ಬೆಳ್ಳಕ್ಕಿ’ಯಾಗಿರಬಹುದು ಎಂದು ರೈತರ ವಿವರಣೆ. ‘ಸಾಲು ನೆಟ್ಟಿ’ ವಿಧಾನದಲ್ಲಿ ಬೆಳೆಯುವುದರಿಂದ ಕಳೆ ತೆಗೆಯಲು ಅನುಕೂಲ, ಇಳುವರಿಯೂ ಹೆಚ್ಚುತ್ತದೆ ಎಂಬುದು ಅವರ ಅಭಿಪ್ರಾಯ. ಈ ತಳಿಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಅಕ್ಕಿ ಮಿಶ್ರವಾಗಿ ಬೆಳೆಯುವ ಕಾರಣಕ್ಕೆ ‘ಅಂಡಾ – ಉಂಡಾ’ ಎಂದು ಹೆಸರಿಟ್ಟಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT