ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯಲ್ಲಿ ‘ಕಪ್ಪು ಬಂಗಾರ’!

ಅಕ್ಷರ ಗಾತ್ರ

‘ಅಡಿಕೆ ಜತೆಗೆ ಬಾಳೆ ಬೆಳೆದರೆ ಖರ್ಚು ಹೆಚ್ಚು. ನೀರು ಹೆಚ್ಚು ಬೇಕು. ಅದಕ್ಕೆ ಅಡಿಕೆ ಮರಕ್ಕೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದೇನೆ. ಹೆಚ್ಚು ಖರ್ಚಿಲ್ಲ, ಶ್ರಮವೂ ಕಡಿಮೆ. ಡ್ರಿಪ್‌ನಲ್ಲಿ ನೀರು ಕೊಡ್ತೀನಿ...’

ಭರಮಸಾಗರ ಸಮೀಪದ ಹೆಗ್ಗೆರೆಯ ರೈತ ನಾರಪ್ಪ ಅಡಿಕೆ ಮರ ಅಪ್ಪಿಕೊಂಡಿದ್ದ ಕಾಳುಮೆಣಿಸಿನ ಬಳ್ಳಿ ಸರಿಪಡಿಸುತ್ತಾ ಬಯಲು ಸೀಮೆಯಲ್ಲಿ ಕಾಳುಮೆಣಸು ಬೆಳೆದ ಕಥೆ ಹೇಳಲಾರಂಭಿಸಿದರು. ಅವರ ಮಾತು ಮುಂದುವರಿಯುತ್ತಿರುವಾಗ, ಹಿಂಬದಿಯಲ್ಲಿ ಕಾರ್ಮಿಕರು ಅಡಿಕೆ ಮರಕ್ಕೆ ಏಣಿ ಹಾಕಿಕೊಂಡು ಹಬ್ಬಿದ್ದ ಕಾಳುಮೆಣಸಿನ ಬಳ್ಳಿಯಿಂದ ಕಾಳುಗಳ ಗೊಂಚಲು ಕೊಯ್ಯುತ್ತಿದ್ದರು.

ನಾರಪ್ಪ ಅವರದ್ದು ಎರಡೂ ಮುಕ್ಕಾಲು ಎಕರೆಯ ಅಡಿಕೆ ತೋಟವಿದೆ. ಅಡಿಕೆ ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಮೂರು ವರ್ಷಗಳ ಹಿಂದೆ ಈ ಕೃಷಿ ಶುರುಮಾಡಿದ್ದಾರೆ. ಈ ವರ್ಷದ ಕೊಯ್ಲು ಮುಗಿಸಿ 6 ಕ್ವಿಂಟಲ್‌ ಕಾಳು ಇಳುವರಿ ಪಡೆದು ಮಾರಾಟ ಮಾಡಿದ್ದಾರೆ.

ಹೇಗೆ ಬಂತು ಕಾಳುಮೆಣಸು ?

ನಾರಪ್ಪ ಅವರೊಂದಿಗೆ ತೋಟ ಸುತ್ತಾಡುತ್ತಾ ‘ಮಲೆನಾಡಿನ ಬೆಳೆಯನ್ನು ಬಯಲು ಸೀಮೆಯಲ್ಲಿ ಬೆಳೆಸಲು ಹೇಗೆ ಧೈರ್ಯ ಮಾಡಿದ್ದೀರಿ’ ಅಂತ ಕೇಳಿದರೆ, ಅದಕ್ಕೊಂದು ಸಣ್ಣ ಕಥೆಯನ್ನೇ ಹೇಳುತ್ತಾರೆ. ಒಮ್ಮೆ ಶಿರಸಿ ಕಡೆಗೆ ಪ್ರವಾಸಕ್ಕಾಗಿ ಹೋದಾಗ, ಕಾಳುಮೆಣಸಿನ ಕೃಷಿಕರನ್ನು ಮಾತನಾಡಿಸಿದ್ದಾರೆ. ಅವರು ಕಾಳುಮೆಣಸು ಕೃಷಿ ಬಗ್ಗೆ ಮಾಹಿತಿ ನೀಡಿ, ಕಡಿಮೆ ನೀರಲ್ಲೂ ಇದರ ಕೃಷಿ ಮಾಡಬಹುದು ಎಂದು ತಿಳಿಸಿದ್ದಾರೆ. ಮಲೆನಾಡಿನಲ್ಲಿ ಮೆಣಸಿನ ಬೆಳೆಗೆ ನೀರು ಹೆಚ್ಚಾಗಿದ್ದಕ್ಕೆ ತೋಟದಲ್ಲಿ ಬಸಿಗಾಲುವೆ ಮಾಡಿ ನೀರು ಹೊರ ಹಾಕುವುದನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಪರಿಚಯಿಸಿದ್ದಾರೆ. ಇದರಿಂದ ಉತ್ತೇಜನಗೊಂಡ ನಾರಪ್ಪ, 2013ರಲ್ಲಿ ಚನ್ನಗಿರಿಯಿಂದ 1700 ಕಾಳುಮೆಣಸು ಸಸಿಗಳನ್ನು ತಂದು ತೋಟದಲ್ಲಿ ನಾಟಿ ಮಾಡಿದ್ದಾರೆ. ಸದ್ಯಕ್ಕೆ 1200 ಸಸಿಗಳು ಉಳಿದು, ಕಾಳುಬಿಡುತ್ತಿವೆ.

‘2016ರಲ್ಲಿ 20 ಕೆ.ಜಿ ಕಾಳು ಸಿಕ್ಕಿತು. ಇದೇ ಮೊದಲ ಫಸಲು. ಅಲ್ಲಿಂದ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಕಳೆದ ವರ್ಷ 88ಕೆಜಿ ಸಿಕ್ಕಿದೆ. 2018ರಲ್ಲಿ ಈಗ ಸುಮಾರು 6 ರಿಂದ 7 ಕ್ವಿಂಟಲ್ ನಷ್ಟು ಕಾಳು ಕೊಯ್ಲಾಗಿದ್ದು, ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ ಮಾಡುತ್ತಿದ್ದೇನೆ’ ಎಂದು ಮೂರು ವರ್ಷಗಳ ಕಾಳು ಮೆಣಸಿನ ಕೃಷಿಯನ್ನು ನಾರಪ್ಪ ವಿವರಿಸಿದರು.‘ಮಾರುಕಟ್ಟೆಯಲ್ಲಿ ಕಾಳುಮೆಣಸಿನ ದರ ಏರಿಳಿತವಾಗುತ್ತದೆ. ಮುಂದೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹನಿ ‘ನೀರಾವರಿ’

ಅಡಿಕೆ ಕೃಷಿಗಾಗಿ ಕೊಳವೆಬಾವಿ ಕೊರೆಸಿದ್ದಾರೆ. ಪ್ರತಿ ಅಡಿಕೆ ಮರಕ್ಕೂ ಡ್ರಿಪ್ ಮೂಲಕ ನೀರು ಕೊಡುತ್ತಿದ್ದಾರೆ. ಮರಕ್ಕೆ ಮೆಣಸಿನ ಬಳ್ಳಿ ಹಬ್ಬಿಸಿರುವುದರಿಂದ, ಡ್ರಿಪ್ ಜತೆಗೆ ಇನ್ನೊಂದು ಹೆಚ್ಚುವರಿ ಟ್ಯೂಬ್ ಜೋಡಿಸಿದ್ದಾರೆ. ನಾಲ್ಕರಿಂದ ಐದು ದಿನಕ್ಕೊಮ್ಮೆ ನೀರು ಕೊಡುತ್ತಾರೆ.

ಬಳ್ಳಿ ನಾಟಿ ಮಾಡಿದಾಗ ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದಾರೆ. ಅಡಿಕೆಗೆ ಗೊಬ್ಬರ ಹಾಕುವಾಗ, ಬಳ್ಳಿ ಬುಡಕ್ಕೂ ಹಾಕುತ್ತಾರೆ. ಮರಕ್ಕೆ ಮುಚ್ಚಿಗೆ ಮಾಡುವುದರಿಂದ, ನೀರು ಆವಿಯಾಗುವುದಿಲ್ಲ. ‘ಕೊಟ್ಟಿಗೆ ಗೊಬ್ಬರ ಹೊರತುಪಡಿಸಿ ಬೇರೆ ಏನೂ ಕೊಡುವುದಿಲ್ಲ. ರಾಸಾಯನಿಕಗೊಬ್ಬರ ಹಾಕಿದರೆ ಬಳ್ಳಿಗೆ ರೋಗ ಬರುತ್ತದೆಯಂತೆ’ ಎಂದು ವಿವರಿಸಿದರು ನಾರಪ್ಪ.

ಇಷ್ಟು ವರ್ಷಗಳಲ್ಲಿ ಬಳ್ಳಿಗಳಿಗೆ ರೋಗ, ಕೀಟಬಾಧೆ ಕಾಣಿಸಿಕೊಂಡಿಲ್ಲ. ತಜ್ಞರು ಸಲಹೆಯಂತೆ ಹೂವು ಅರಳಲು ಔಷಧಗಳನ್ನು ಸಿಂಪಡಿಸುತ್ತಾರೆ. ತೋಟದಲ್ಲಿ ನೆರಳು – ಬಿಸಿಲು ಎಲ್ಲವೂ ಸರಿಯಾದ ಪ್ರಮಾಣದಲ್ಲಿರುವುದರಿಂದ ಬಳ್ಳಿ ಬೆಳವಣಿಗೆಗೆ ಪೂರಕ ವಾತಾವರಣ ಸಿಕ್ಕಂತಾಗಿದೆ.

ಕಾರ್ಮಿಕರ ಸಮಸ್ಯೆಯಾಗಿಲ್ಲ

ಸದ್ಯ ಕೃಷಿಯಲ್ಲಿ ಕಾರ್ಮಿಕರ ಕೊರತೆಯೇ ದೊಡ್ಡ ಸಮಸ್ಯೆ. ಆದರೆ, ನಾರಪ್ಪ ಅವರ ಕಾಳುಮೆಣಸಿನ ಕೃಷಿಗೆ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಭಾದಿಸಿಲ್ಲ. ಕಾಳುಮೆಣಸಿಗೆ ಕೊಯ್ಲು ಸಂದರ್ಭದಲ್ಲಿ ಮಾತ್ರ ಕಾರ್ಮಿಕರು ಬೇಕಾಗುತ್ತದೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಕೊಯ್ಲಿಗೆ ಬರುವುದರಿಂದ ಕಾರ್ಮಿಕರ ಸಮಸ್ಯೆ ಅಷ್ಟಾಗಿಲ್ಲ. ಅಡಿಕೆ ಮರಕ್ಕೆ ಏಣಿ ಹಾಕಿಕೊಂಡು ಮೆಣಸು ಕಾಳಿನ ಗೊಂಚಲು ಕೊಯ್ಲು ಮಾಡಬೇಕು. ಹೀಗಾಗಿ ಕಾರ್ಮಿಕರು ದಿನಗೂಲಿ ಕೇಳುತ್ತಾರೆ. ಕೊಯ್ಲು ನಂತರ ಹಸಿ ಕಾಳನ್ನು ಬೇರ್ಪಡಿಸಿ ಐದು ದಿನಗಳ ಕಾಲ ಮನೆ ಮೇಲೆ ಒಣಗಿಸಿ, ವಾರದೊಳಗೆ ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ದ ಮಾಡಿಕೊಳ್ಳುತ್ತಾರೆ.

ಕಾಳು ಮೆಣಸಿಗೆ ಮಾರುಕಟ್ಟೆಯ ಸಮಸ್ಯೆಯ ಉದ್ಭವಿಸಿಲ್ಲವಂತೆ. ಸ್ಥಳೀಯ ಕಿರಾಣಿ ಅಂಗಡಿ ಮಾಲೀಕರು ಮನೆಗೆ ಬಂದು ಮೆಣಸು ಖರೀದಿಸುತ್ತಿದ್ದಾರೆ. ಜತೆಗೆ, ಶಿರಸಿ, ಸಕಲೇಶಪುರ, ಹಾವೇರಿಯಲ್ಲಿ ಮಾರುಕಟ್ಟೆ ಇದೆ. ಎಲ್ಲಿ ಹೆಚ್ಚು ಬೆಲೆ ಸಿಗುತ್ತದೆಯೋ ಅಲ್ಲಿಗೆ ಕೊಂಡೊಯ್ಯುತ್ತೇವೆ ಎನ್ನುತ್ತಾರೆ ನಾರಪ್ಪ.

‘ಕಡಿಮೆ ನೀರಿನಲ್ಲೂ ಬೆಳೆಯಬಹುದು’

‘ಕಾಳು ಮೆಣಸು ಮಲೆನಾಡಿನ ಬೆಳೆ. ನೀರು ಹೆಚ್ಚು ಬೇಕಾಗಾದಿಲ್ಲವೇ?’ ಎಂದು ಪ್ರಶ್ನಿಸಿದರೆ, ‘ಅದೇ ತಪ್ಪು ಗ್ರಹಿಕೆ’ ಎನ್ನುತ್ತಾರೆ ನಾರಪ್ಪ. ನೀರು ಹೆಚ್ಚಾದರೆ ಬಳ್ಳಿ ಕೊಳೆಯುತ್ತದೆ. ಹಾಗೆಂದು ನೀರಿಲ್ಲದೇ ಬಳ್ಳಿ ಬೆಳೆಯಲು ಸಾಧ್ಯವಿಲ್ಲ. ಅಗತ್ಯ ಪ್ರಮಾಣದಲ್ಲಿ ಬಳ್ಳಿಗಳಿಗೆ ನೀರು ಪೂರೈಸಬೇಕು’ ಎಂಬುದು ಅವರ ವಿವರಣೆ.

ನಾರಪ್ಪ ಅವರ ಮಾತಿಗೆ ಸಹಮತ ವ್ಯಕ್ತಪಡಿಸುವ ಚಿತ್ರದುರ್ಗ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ್, ‘ಮಲೆನಾಡಿನಲ್ಲಿ ಮಳೆ ಹೆಚ್ಚು. ಶೀತದ ವಾತಾವರಣದಲ್ಲಿ ಬಳ್ಳಿಗೆ ರೋಗಗಳೂ ಹೆಚ್ಚು. ಬಯಲು ಸೀಮೆಯಲ್ಲಿ ಆ ಸಮಸ್ಯೆ ಇಲ್ಲ. ಹಾಗಾಗಿ ಅರೆಮಲೆನಾಡಿನ ವಾತಾವರಣವಿರುವ ಭರಮಸಾಗರದಂತಹ ಪ್ರದೇಶಗಳಲ್ಲಿ ಮೆಣಸಿನ ಬಳ್ಳಿ ಬೆಳೆಯಬಹುದು. ನಮ್ಮ ಇಲಾಖೆ ಕೂಡ ಕಾಳು ಮೆಣಸು ಬೆಳೆಯುವ ರೈತರಿಗೆ, ಸಹಾಯಧನದ ಜತೆಗೆ, ಸಸಿಗಳನ್ನು ಪೂರೈಸುತ್ತಿದೆ’ ಎಂದು ಸ್ಪಷ್ಟಪಡಿಸುತ್ತಾರೆ.

ಕಾಳುಮೆಣಸಿನ ಕೃಷಿಯ ಹೆಚ್ಚಿನ ಮಾಹಿತಿಗಾಗಿ ರೈತ ನಾರಪ್ಪ ಅವರ ಸಂಪರ್ಕ ಸಂಖ್ಯೆ: 9986328511

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT