ಭಾನುವಾರ, ಸೆಪ್ಟೆಂಬರ್ 19, 2021
26 °C
ಶಿಕ್ಷಕ ಮಲ್ಲಿಕಾರ್ಜುನ ಪಾಸೋಡಿ ಮಾದರಿ ಕಾರ್ಯ

ತಾರಸಿಯಲ್ಲೊಂದು ಅಂದದ ಕೈತೋಟ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಮಲ್ಲಿಕಾರ್ಜುನ ಪಾಸೋಡಿ ತಮ್ಮ ಮನೆಯ ತಾರಸಿಯಲ್ಲಿ ವಿವಿಧ ಹೂ, ತರಕಾರಿ ಹಾಗೂ ಹಣ್ಣು ಬೆಳೆದಿದ್ದಾರೆ.

ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಗಣಿತ ಶಿಕ್ಷಕರಾಗಿರುವ ಇವರು ಕೃಷಿ ಕುಟುಂಬದಿಂದ ಬಂದವರು. ನಗರಕ್ಕೆ ಬಂದರೂ ಮಣ್ಣಿನ ನಂಟು ತಪ್ಪಬಾರದು ಎಂಬ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಮನೆಯ ತಾರಸಿಯಲ್ಲಿ ಚಿಕ್ಕ ಕೈತೋಟ ಮಾಡಿದ್ದಾರೆ. ಕುಟುಂಬದ ಸದಸ್ಯರು ಅವರ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಪ್ಲಾಸ್ಟಿಕ್‌ ಹೊದಿಕೆ ಮೇಲೆ ಮಣ್ಣು ಹಾಕಿ ತರಹೇವಾರಿ ತರಕಾರಿ ಬೆಳೆಸುತ್ತಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರ ಬಳಸುತ್ತಿರುವುದು ವಿಶೇಷ. ಸಸಿಗಳಿಗೆ ರೋಗ ಬಾರದಂತೆ ಬೇವಿನ ರಸ ಸಿಂಪಡಿಸುತ್ತಾರೆ.

ಅಲ್ಲಿನ ಗಿಡ – ಬಳ್ಳಿ ತುಂಬ ತೂಗಾಡುವ ಹೂವು, ಕಾಯಿ, ಹಣ್ಣುಗಳ ಗೊಂಚಲು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಅಲ್ಲದೆ ಸುಡು ಬೇಸಿಗೆಯಲ್ಲೂ ಮನೆಯ ವಾತಾವರಣವನ್ನು ತಂಪಾಗಿ ಇರಿಸಲು ಕೈತೋಟ ನೆರವಾಗಿದೆ.

ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ, ದಾಳಿಂಬೆ, ಚಿಕ್ಕು, ಕಲ್ಲಂಗಡಿ, ಮೆಂತೆ, ಕೊತ್ತಂಬರಿ, ಪಾಲಕ್‌ ಸೇರಿದಂತೆ ಹಸಿರು ಸೊಪ್ಪುಗಳನ್ನು ಬೆಳೆಸಿದ್ದಾರೆ.

ಚೆಂಡು, ಕಮಲ, ಗುಲಾಬಿ, ಡೇರೆ ಹೂ, ಕನಕಾಂಬರ ಸೇರಿದಂತೆ ಹಲವು ಹೂಗಳು ತಾರಸಿ ತೋಟದ ಅಂದವನ್ನು ಹೆಚ್ಚಿಸಿವೆ. ವೀಳ್ಯದೆಲೆ, ಲೋಳೆಸರ, ತುಳಸಿ, ಲೆಮನ್ ಗ್ರಾಸ್ ಸೇರಿದಂತೆ ಹಲವು ಔಷಧೀಯ ಗುಣವುಳ್ಳ ಸಸ್ಯಗಳ ಆಗರವೇ ಇಲ್ಲಿದೆ.

‘ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೈತೋಟದ ನಿರ್ವಹಣೆಗೆ ಹೆಚ್ಚಿನ ಸಮಯ ಸಿಕ್ಕಿತ್ತು. ಇಲ್ಲಿ ಬೆಳೆದ ಔಷಧೀಯ ಸಸ್ಯಗಳಿಂದ ಮಾಡಿದ ಕಷಾಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಅಜೀರ್ಣದ ಸಮಸ್ಯೆ ನಿವಾರಣೆಗೂ ಇಲ್ಲಿನ ಸಸ್ಯಗಳು ನೆರವಾಗಿವೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪಾಸೋಡಿ.

‘ತಾರಸಿ ತೋಟ ಮಾಡುವುದರಿಂದ ಒಂದು ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಮನೆಯಲ್ಲೇ ಬೆಳೆದುಕೊಳ್ಳಬಹುದು. ಸಾವಯವ ಗೊಬ್ಬರ ಹಾಕಿ ಬೆಳೆಸುತ್ತಿರುವುದರಿಂದ ತಾಜಾ ತರಕಾರಿ, ಹಣ್ಣು ನಮಗೆ ಸಿಗುತ್ತಿವೆ. ಇವು ಆರೋಗ್ಯಕ್ಕೆ ಒಳ್ಳೆಯದು’ ಎನ್ನುತ್ತಾರೆ ಅಕ್ಷತಾ ಪಾಸೋಡಿ.

ಸಂಪರ್ಕಕ್ಕೆ ಮೊ:94490 75554.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು