ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್‌ ಕಡಲೆ’ ತಳಿ ಅಭಿವೃದ್ಧಿ

ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ‘ಅಣ್ಣಿಗೇರಿ–1’ ಸಂಶೋಧನೆ
Last Updated 25 ಸೆಪ್ಟೆಂಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬರ ಪರಿಸ್ಥಿತಿ ಮತ್ತು ರೋಗಗಳನ್ನು ತಡೆದುಕೊಳ್ಳುವ ನೂತನ ‘ಸೂಪರ್‌ ಕಡಲೆ’ ತಳಿಗಳನ್ನುಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ರೈತರು ವ್ಯವಸಾಯದಲ್ಲಿ ಇವುಗಳನ್ನು ಬಳಸಲು ಯೋಗ್ಯವಾಗಿವೆ ಎಂದುಭಾರತೀಯ ಕೃಷಿ ಸಂಶೋಧನಾ ಮಂಡಳಿಯು (ಐಸಿಎಆರ್‌) ಶಿಫಾರಸು ಮಾಡಿದೆ.

ಈ ನೂತನ ತಳಿಗಳನ್ನು ಪುಸಾ 10216 (Pusa) ಮತ್ತು ಎಂಎಬಿಸಿ–ಡಬ್ಲ್ಯುಆರ್‌–ಎಸ್‌ಎ–1 (MABC-WR-SA-1) ಅಥವಾ ಅಣ್ಣಿಗೇರಿ–1 ಎಂದು ಹೆಸರಿಸಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯ (ಎಐಸಿಆರ್‌ಪಿ) 24ನೇ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು.

‘ಈ ಸೂಪರ್‌ ಕಡಲೆ ತಳಿಗಳು ಬೆಳೆಯ ಉತ್ಪಾದಕತೆ ಹೆಚ್ಚಿಸುತ್ತವೆ. ದೇಶದ ಸಣ್ಣ ರೈತರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ’ ಎಂದು ಐಸಿಎಆರ್‌ನ ಪ್ರಧಾನ ನಿರ್ದೇಶಕ ಡಾ.ತ್ರಿಲೋಚನ್‌ ಮಹಾಪಾತ್ರ ಹೇಳಿದ್ದಾರೆ.

ಸೂಪರ್‌ ಅಣ್ಣಿಗೇರಿ–1

ಎಂಎಬಿಸಿ–ಡಬ್ಲ್ಯುಆರ್‌–ಎಸ್‌ಎ–1 ತಳಿಗೆ ‘ಸೂಪರ್‌ ಅಣ್ಣಿಗೇರಿ–1’ ಎಂದೂ ಹೆಸರಿಡಲಾಗಿದೆ. ಈ ತಳಿಯ ಕಡಲೆ ಬೆಳೆ ಬೇಗ ಒಣಗುವುದಿಲ್ಲ ಅಥವಾ ಬಾಡುವುದಿಲ್ಲ. ಕರ್ನಾಟಕದ ನೆಲಕ್ಕೆ ಈ ತಳಿ ಸೂಕ್ತವಾದುದಾಗಿದೆ. ಬೇರೆ ತಳಿಗಳಿಗಿಂತ ಇದರಲ್ಲಿ ಶೇ 7ರಷ್ಟು ಹೆಚ್ಚು ಇಳುವರಿ ಬರುತ್ತದೆ. ಐಸಿಆರ್‌ಐಎಸ್‌ಎಟಿ ನೆರವಿನೊಂದಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ಅಭಿವೃದ್ಧಿ ಪಡಿಸಿದ್ದಾರೆ.

‘ಬೇರೆ ತಳಿ ಅಭಿವೃದ್ಧಿಗೆ 10ರಿಂದ 11 ವರ್ಷ ಬೇಕಾಗುತ್ತದೆ. ಈ ತಳಿಗಳನ್ನು ಕೇವಲ ನಾಲ್ಕು ವರ್ಷಗಳಲ್ಲಿಯೇ ಅಭಿವೃದ್ಧಿ ಪಡಿಸಲಾಗಿದೆ’ ತಜ್ಞರು ಹೇಳಿದ್ದಾರೆ.

ಪುಸಾ ಕಡಲೆ

ಪುಸಾ–10216 ತಳಿಯನ್ನು ಐಎಆರ್‌ಐನ ಡಾ. ಭಾರದ್ವಾಜ್‌ ಚೆಲ್ಲಪಿಳ್ಳ ಮತ್ತು ತಂಡವು ಅರೆ ಶುಷ್ಕ ಉಷ್ಣವಲಯ ವ್ಯಾಪ್ತಿಯ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ (ಐಸಿಆರ್‌ಐಎಸ್‌ಎಟಿ) ಡಾ. ಮಹೇಂದ್ರರ್‌ ಥುಡಿ ಹಾಗೂ ಡಾ. ಮನೀಷ್‌ ರೂರ್ಕಿವಾಲಾ ಅವರೊಂದಿಗೆ ಸೇರಿ ಅಭಿವೃದ್ಧಿ ಪಡಿಸಿದೆ.

ಬರ ಪರಿಸ್ಥಿತಿ ಇದ್ದ ಪ್ರದೇಶದಲ್ಲಿ ಈ ತಳಿಯನ್ನು ಪ್ರಯೋಗಾರ್ಥವಾಗಿ ಬಳಸಿದಾಗ ಹೆಚ್ಚು ಇಳುವರಿ (ಶೇ 11.9 ಹೆಚ್ಚು) ಬಂದಿತ್ತು ಎಂದು ಈ ತಜ್ಞರು ತಿಳಿಸಿದ್ದಾರೆ.

‘ಬರ ಪರಿಸ್ಥಿತಿಯನ್ನು ಸಹಿಸಿಕೊಳ್ಳುವಂತಹ ಮೊದಲ ವಿಧದ ತಳಿ ಇದಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ಡಾ. ಚೆಲ್ಲಪಿಲ್ಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT