ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಗೆ ಶಂಕುಹುಳುವಿನ ಕಾಟ

Last Updated 26 ಜೂನ್ 2021, 8:16 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಕೆಲ ಹೊಲಗಳಲ್ಲಿ ಶಂಕುಹುಳು ಕಂಡು ಬಂದು ರೈತರಲ್ಲಿ ಆತಂಕ ಆವರಿಸಿದೆ.

ಚಲಿಸುವಾಗ ಲೋಳೆ ಪದಾರ್ಥವನ್ನು ಬಿಡುವ ಬಸವನ ಹುಳು ಎಂದು ಕರೆಯಲ್ಪಡುವ ಶಂಕು ಹುಳು ತಾಲ್ಲೂಕಿನ ಕೌಠಾ ಗ್ರಾಮದ ಚೆನ್ನಬಸಪ್ಪ ಬಿರಾದಾರ ಎಂಬುವವರ ಹೊಲದಲ್ಲಿ ವ್ಯಾಪಕವಾಗಿ ಕಂಡು ಬಂದಿವೆ. ಇವರ ಹೊಲದಲ್ಲಿನ 15 ದಿನಗಳ ಸೋಯಾ, ಉದ್ದು, ಹೆಸರು ಬೆಳೆಗೆ ಶಂಕುಹುಳು ಕಂಟಕವಾಗಿ ಪರಿಣಮಿಸಿದೆ.

‘ರಾತ್ರಿ ಹೊತ್ತು ಗುಂಪು ಗುಂಪಾಗಿ ಬರುವ ಈ ಹುಳು ಈಗಾಗಲೇ ಶೇ. 50ರಷ್ಟು ಬೆಳೆ ಹಾನಿ ಮಾಡಿವೆ. ಈ ಹುಳು ಬೆಳಿಗ್ಗೆ ಹೊತ್ತು ಸಿಗುವುದಿಲ್ಲ. ಕತ್ತಲೆಯಾಗದಂತೆ ಹೊರಗೆ ಬಂದು ಬೆಳೆಗಳಿಗೆ ಹಾನಿ ಮಾಡುತ್ತಿವೆ. ನಾವು ನಸುಕಿನಲ್ಲಿ ಹೋದಾಗ ನಮಗೆ ಇವು ಸಿಕ್ಕಿವೆ’ ಎಂದು ರೈತ ಚೆನ್ನಬಸಪ್ಪ ಬಿರಾದಾರ ತಿಳಿಸಿದ್ದಾರೆ.

‘ಮೊದಲೇ ಸೋಯಾ ಬೀಜದ ಕೊರತೆ ಇದೆ. ನಾವು ದುಬಾರಿ ಹಣ ಕೊಟ್ಟು ಸೋಯಾ ತಂದು ಬಿತ್ತನೆ ಮಾಡಿದ್ದೇವೆ. ಮೊಳಕೆ ಪ್ರಮಾಣವು ಚೆನ್ನಾಗಿದೆ. ಆದರೆ ಶಂಕು ಹುಳುವಿನ ಕಾಟ ನಮ್ಮ ನಿದ್ದೆಗೆಡಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಈವರೆಗೆ ನಮ್ಮ ತಾಲ್ಲೂಕಿನಲ್ಲಿ ಶಂಕುಹುಳುವಿನ ಸುಳಿವು ಇರಲಿಲ್ಲ. ಕೌಠಾ ರೈತರ ಹೊಲದಲ್ಲಿ ಕಂಡು ಬಂದಿರುವುದು ನಮಗೂ ಗೊತ್ತಾಗಿದೆ. ಕೃಷಿ ವಿಜ್ಞಾನಿಗಳ ಜತೆ ಚರ್ಚಿಸಿ ಅಗತ್ಯ ಪರಿಹಾರ ಕ್ರಮ ಸೂಚಿಸಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್ ತಿಳಿಸಿದ್ದಾರೆ.

‘ಶಂಕುಹುಳು ಕಂಡು ಬಂದಲ್ಲಿ ರೈತರು ಎಚ್ಚರಿಕೆ ವಹಿಸಬೇಕು. ಬೆಳೆಗಳ ಸಮೀಪ ಕಸದ ರಾಶಿ, ಕೈಚೀಲ, ಮರದ ಗರಿಗಳು ಇರದಂತೆ ನೋಡಿಕೊಳ್ಳಬೇಕು. ಬೆಳಿಗ್ಗೆ ಹೊತ್ತು ಅವು ಗೋಚರಿಸುವುದರಿಂದ ಅವುಗಳು ಹಿಡಿದು ಉಪ್ಪು ಹಾಕಿ ನಾಶಪಡಿಸಬೇಕು. ಮೆಟಾಲ್ಡಿಹೈಡ್ ನಾಶಕ ಬಳಸಬಹುದಾಗಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT