ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಮಯ ಅಲಂಕಾರಿಕ, ಹಣ್ಣುಗಳ ಸಸಿ ಲಭ್ಯ

ತೋಟಗಾರಿಕೆ ಇಲಾಖೆಯ 10 ದಿನಗಳ ‘ಸಸ್ಯ ಸಂತೆ’ ಆರಂಭ
Last Updated 5 ಜುಲೈ 2018, 11:02 IST
ಅಕ್ಷರ ಗಾತ್ರ

ಕಲಬುರ್ಗಿ: ತೋಟಗಾರಿಕೆ ಇಲಾಖೆಯು ವಿವಿಧ ರೀತಿಯ ಕಸಿ ಮತ್ತು ಸಸಿಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳ ಪ್ರದರ್ಶನ ಮತ್ತು ಮಾರಾಟದ ಉದ್ದೇಶದಿಂದ ಇಲಾಖೆಯು ಕಚೇರಿ ಆವರಣದಲ್ಲಿ ‘ಸಸ್ಯ ಸಂತೆ’ ಆಯೋಜಿಸಿದೆ.

ಜುಲೈ 14ರವರೆಗೆ ನಡೆಯಲಿರುವ ಈ ಸಂತೆಯಲ್ಲಿ ರೈತರು ಮತ್ತು ಸಾರ್ವಜನಿಕರು ಸಸಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು. ಅವುಗಳನ್ನು ಬೆಳೆಸಲು ಇಲಾಖೆಯ ತಜ್ಞರಿಂದ ಮಾರ್ಗದರ್ಶನ ಪಡೆಯಬಹುದು. ಬಹುತೇಕ ಸಸಿಗಳು ₹ 10 ರಿಂದ ₹ 50ರ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಅಲಂಕಾರಿಕ ಸಸಿಗಳಿಗೆ ₹ 20 ರಿಂದ ₹ 200 ದರ ನಿಗದಿಪಡಿಸಲಾಗಿದೆ. ಒಟ್ಟಾರೆ 2,94,762 ಸಸಿಗಳು ಮಾರಾಟಕ್ಕೆ ಲಭ್ಯ ಇವೆ.

ನಗರದ ಐವಾನ್–ಇ–ಶಾಹಿ ನರ್ಸರಿ ಆವರಣ, ಮಾಲಗತ್ತಿ, ಬಡೆಪುರ ಮತ್ತು ಕೆಸರಟಗಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಸಿಗಳನ್ನು ಖರೀದಿಸಬಹುದು. ಆಳಂದ ತಾಲ್ಲೂಕಿನ ಹಳ್ಳಿಸಲಗರ, ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ, ಚಿತ್ತಾಪುರ ಮತ್ತು ಸೇಡಂ ತೋಟಗಾರಿಕೆ ಕ್ಷೇತ್ರಗಳಲ್ಲೂ ಸಸಿಗಳು ಖರೀದಿಗೆ ಲಭ್ಯ ಇವೆ.

‘ಜಿಲ್ಲೆಯಲ್ಲಿ 9 ಲಕ್ಷ ಕೃಷಿ ಜಮೀನಿದ್ದು, ಅದರಲ್ಲಿ 25 ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. 10 ಸಾವಿರ ಹೆಕ್ಟೇರ್‌ನಲ್ಲಿ ಹಣ್ಣುಹಂಪಲು, 11 ಸಾವಿರ ಹೆಕ್ಟೇರ್‌ನಲ್ಲಿ ತರಕಾರಿ ಬೆಳೆ ಮತ್ತು 4 ಸಾವಿರ ಹೆಕ್ಟೇರ್‌ನಲ್ಲಿ ಇತರೆ ಸಸಿಗಳನ್ನು ಬೆಳೆಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಮ್ಮದ್‌ ಅಲಿ ಸುದ್ದಿಗಾರರಿಗೆ ತಿಳಿಸಿದರು.

’ಎರಡನೇ ಬಾರಿ ‘ಸಸ್ಯ ಸಂತೆ’ ಆಯೋಜಿಸಲಾಗಿದ್ದು, ಕಳೆದ ಸಲದಂತೆ ಈ ಸಲವೂ ರೈತರು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ. ಸಸಿಗಳನ್ನು ಬೆಳೆಸಲು ಇಚ್ಛಿಸುವವರಿಗೆ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳು ಮತ್ತು ಸದ್ಬಳಕೆ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುವುದು’ ಎಂದು ಅವರು ವಿವರಿಸಿದರು.

‘ಸಸಿಗಳಿಗೆ ಯಾವುದೇ ಸ್ವರೂಪದ ತೊಂದರೆಯಾದಲ್ಲಿ ಅಥವಾ ಸಮಸ್ಯೆ ಎದುರಾದಲ್ಲಿ, ಇಲಾಖೆಯ ಹಾರ್ಟ್‌ ಕ್ಲಿನಿಕ್‌ನ ತಜ್ಞರಿಂದ ಅಗತ್ಯ ನೆರವು ಮತ್ತು ಮಾರ್ಗದರ್ಶನ ಪಡೆಯಬಹುದು. ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ’ ಎಂದು ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಎಸ್.ಬಿ.ದಿಡ್ಡಿಮನಿ ತಿಳಿಸಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಅವರು ‘ಸಸ್ಯ ಸಂತೆ’ಯನ್ನು ಉದ್ಘಾಟಿಸಿದರು. ಕಡಿಮೆ ದರದಲ್ಲಿ ಸಸಿಗಳು ಲಭ್ಯವಿದ್ದು, ಅವುಗಳನ್ನು ಬೆಳೆಸಲು ರೈತರು ಮತ್ತು ಸಾರ್ವಜನಿಕರು ಮುಂದಾಗಬೇಕು. ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT