ಗುರುವಾರ , ಆಗಸ್ಟ್ 13, 2020
23 °C

ಮಿತ ನೀರಿನಲ್ಲಿ ಮಿಶ್ರ ತರಕಾರಿ !

ಚಳ್ಳಕೆರೆ ವೀರೇಶ್ Updated:

ಅಕ್ಷರ ಗಾತ್ರ : | |

Prajavani

ಅಲ್ಲಿ ವರ್ಷದ ಮುಕ್ಕಾಲು ಸಮಯವೂ ಬಿಸಿಲಿನದ್ದೇ ಕಾರುಬಾರು. ಜಲಮೂಲಗಳ ಆಶ್ರಯವಿಲ್ಲದ ತಾಣ. ಸದಾ ಒಣಗಿರುವ ನೆಲ. ಇಂಥ ‘ಒಣ’ ಹವೆ ಎದುರಿಸಿಕೊಂಡು ಮೂರು ಎಕರೆಯಲ್ಲಿ ಕೃಷಿ ಮಾಡಲು ಇರುವುದು ಒಂದು ಬೋರು. ಅದರಲ್ಲಿ ಒಂದು ಇಂಚು ನೀರು ಇದೆ. ಅಷ್ಟು ನೀರನ್ನೇ ಮಿತವಾಗಿ ಬಳಸಿಕೊಂಡು ವರ್ಷಪೂರ್ತಿ ಹಣ ಕೊಡುವಂತಹ ಬಹು ವಿಧಧ ತರಕಾರಿ ಬೆಳೆಯುತ್ತಿದ್ದಾರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಚೆನ್ನಮ್ಮನಾಗತಿಹಳ್ಳಿಯ ಕೃಷಿಕ ಪರಮೇಶ್.

ಮೂರು ಎಕರೆ ಜಮೀನು ಪರಮೇಶ್ ಅವರದ್ದು. ಬಿಎ ಓದಿದ್ದ ಅವರು ಆರಂಭದಲ್ಲಿ ಕೃಷಿಯಲ್ಲಿ ಆಸಕ್ತಿ ಇಲ್ಲದೇ, ಉದ್ಯೋಗದ ಹುಡುಕಾಟದಲ್ಲಿದ್ದರು. ಇತ್ತ ಊರಲ್ಲಿ ತಂದೆ ಪ್ರತಿ ಬಾರಿ ಮೆಕ್ಕೆಜೋಳ, ಈರುಳ್ಳಿ ಬೆಳೆದು ಕೈ ಸುಟ್ಟುಕೊಂಡಿದ್ದನ್ನು ಗಮನಿಸಿದ್ದರು. ಯಾವ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಹೊಸ ಬೆಳೆಗಳನ್ನು ಬೆಳೆಯೋಣ ಎಂದರೆ ನೀರಿನ ಕೊರತೆ. ಇವೆಲ್ಲವನ್ನೂ ಗಮನಿಸಿದ ಪರಮೇಶ್, ಉದ್ಯೋಗ ಅರಸುವುದನ್ನು ಬಿಟ್ಟು, ಅಪ್ಪನ ಕೃಷಿ ಕೆಲಸಕ್ಕೆ ಹೆಗಲು ಕೊಡಲು ಸಿದ್ಧರಾದರು.

ಉತ್ಸಾಹದಿಂದಲೇ ಜಮೀನಿಗಿಳಿದ ಪರಮೇಶ್, ಮೊದಲು ಮೂರು ಎಕರೆಯಲ್ಲಿ ಈರುಳ್ಳಿ, ಟೊಮೆಟೊ ಬೆಳೆದರು. ಫಸಲು ಚೆನ್ನಾಗಿ ಬಂತು. ಆದರೆ, ಮಾರುಕಟ್ಟೆ ಕೈ ಕೊಟ್ಟಿತು. ‘ಯಾಕೋ ಟೈಮ್ ಸರಿ ಇಲ್ಲ. ಮುಂದೆ ಏನ್ಮಾಡೋದು’ ಎಂದು ಚಿಂತಿಸುತ್ತಿದ್ದಾಗ, ಗೆಳೆಯ ತಿಪ್ಪೇಸ್ವಾಮಿ ಒಂದು ಐಡಿಯಾ ಕೊಟ್ಟರು. ‘ಒಂದು ಬೆಳೆ ಬೆಳೆದರೆ ನಷ್ಟ. ಮಿಶ್ರ ಬೆಳೆ ಹಾಕು. ಒಂದಲ್ಲ ಒಂದು ಕೈ ಹಿಡಿಯುತ್ತದೆ. ಒಂದು ಬೆಳೆ ಕೈಗೆ ಬಂದ ಮೇಲೆ, ಇನ್ನೊಂದು ಬೆಳೆ ಕೈಗೆ ಬರುವ ಹಾಗೆ ನಾಟಿ ಮಾಡು’ ಎಂದು ಹೇಳಿದರು.

ಗೆಳೆಯನ ಸಲಹೆ ಸರಿ ಎನಿಸಿತು. ಈ ವರ್ಷದ ಮಾರ್ಚ್‌ನಿಂದಲೇ ಮಿಶ್ರ ಬೆಳೆ ತರಕಾರಿ ಆರಂಭಿಸಿದರು. ಮೊದಲು ಎಕರೆ ಜಮೀನಿಗೆ 4 ಲೋಡ್ ಕೊಟ್ಟಿಗೆ ಗೊಬ್ಬರ ಹರಗಿಸಿದರು. ನಾಟಿ ಮಾಡುವ 15 ದಿನಕ್ಕೂ ಮುನ್ನವೇ ಗೊಬ್ಬರ ಚೆಲ್ಲಿಸಿ, ಪ್ರತಿ ದಿನ ಹದವಾಗಿ ನೀರು ಹಾಯಿಸಿದರು. ಈ ನಡುವೆ ಎರಡು ಬಾರಿ ಕುಂಟೆ ಹೊಡೆದರು. ಹೊಂಗೆ ಸೊಪ್ಪು, ಆಲದ ಎಲೆ ಮಿಶ್ರಮಾಡಿ ಬೀಜ ನಾಟಿ ಮಾಡಲು ಸಾಲು ಬದುಗಳನ್ನು ಮಾಡಿದರು.

ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಗಿಡದಿಂದ ಗಿಡಕ್ಕೆ, ಬಳ್ಳಿಯಿಂದ ಬಳ್ಳಿಗೆ ಎರಡು ಅಡಿಗಳಷ್ಟು ಜಾಗ ಬಿಟ್ಟು ಬದುಗಳನ್ನು ಮಾಡಿದರು. ಅವುಗಳ ಮೇಲೆ ಡ್ರಿಪ್ ಪೈಪುಗಳನ್ನು ಜೋಡಿಸಿ, 2 ಅಡಿಗಳ ಅಂತರದಲ್ಲಿ ನೀರು ಹನಿಸಿ, ಬೀಜಗಳನ್ನು ನಾಟಿ ಮಾಡಿದರು. ಈ ಎಲ್ಲ ಪ್ರಕ್ರಿಯೆಗಳು ಮಾರ್ಚ್ ಮೊದಲ ವಾರದಲ್ಲಿ ನಡೆಯಿತು. ಮೂರು ಎಕೆರೆಯಲ್ಲಿ ಒಂದೊಂದು ಎಕರೆಗೆ ಬೆಂಡೆ, ಇನ್ನುಳಿದ ಎರಡು ಎಕರೆಗೆ ಹಾಗಲ, ಹೀರೆ, ಬೆಂಡೆ ಎಲ್ಲ ಮಿಶ್ರ ಮಾಡಿ ಹಾಕಿದರು.

ನಾಟಿ ಮಾಡಿದ ಒಂದು ವಾರದಲ್ಲೇ ರೋಗ, ಕೀಟಬಾಧೆ ಕಾಣಿಸಿಕೊಂಡಿತು. ತಜ್ಞರ ಸಲಹೆ ಪಡೆದು, ಸಕಾಲದಲ್ಲಿ ಔಷಧ ಸಿಂಪಡಿಸಿದರು. ನಂತರ ಬಳ್ಳಿಗಳಲ್ಲಿ ಹೂವು ಬಿಡಲಾ ರಂಭಿಸಿದಾಗ ಮೂರು ಬಾರಿ ಔಷಧಗಳನ್ನು ಸಿಂಪಡಿಸಿದರು. ಆರಂಭದಲ್ಲಿ ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದು ಬಿಟ್ಟರೆ, ಮೇಲು ಗೊಬ್ಬರ ಕೊಡಲಿಲ್ಲ. ಮೂರು ತಿಂಗಳ ನಂತರ, ಪ್ರತಿ ದಿನ ತರಕಾರಿ ಕೊಯ್ಲಿಗೆ ಬರಲಾರಂಭಿಸಿತು. ಪ್ರತಿ ದಿನವೂ ಮೂರು ಎಕರೆ ಜಮೀನಿನಿಂದ ಹಣ ಬರಲು ಆರಂಭವಾಯಿತು.

ಆರಂಭದಲ್ಲಿ ಸಂಕಷ್ಟ
ಬಿಸಿಲಿನ ತಾಪ ಹೆಚ್ಚಾದ ಕಾರಣ ಹಾಗಲ ಮತ್ತು ಹೀರೆ ಬಳ್ಳಿಗಳು ಸರಿಯಾಗಿ ಬೆಳೆಯಲಿಲ್ಲ. ಆ ಹಂತದಲ್ಲಿ ಹಾಕಿದ ಬಂಡವಾಳವಷ್ಟೇ ಕೈ ಸೇರಿತು. ಆದರೆ, ಬೆಂಡೆಯಲ್ಲಿ ಉತ್ತಮ ಫಸಲು ಸಿಕ್ಕಿತು. ‘ಒಂದು ಎಕರೆಗೆ 4 ಕೆ.ಜಿ ಬೀಜ ಹಾಕಿದ್ದೆ. ಈಗ ಪ್ರತಿ ದಿನ 2 ಟನ್ ನಷ್ಟು ಕಾಯಿ ಸಿಗುತ್ತಿದೆ. ಒಂದು ಗಿಡ ಸುಮಾರು 5 ರಿಂದ 10 ಕೆ.ಜಿಯಷ್ಟು ಫಸಲು ಕೊಡುತ್ತಿದೆ’ ಎಂದು ಫಸಲು ಮತ್ತು ಮಾರುಕಟ್ಟೆಯ ಏರಿಳಿತಗಳನ್ನು ಪರಮೇಶ್ ವಿವರಿಸುತ್ತಾರೆ.

ಹಾಗಲ ಮತ್ತು ಹೀರೆಕಾಯಿಗಳನ್ನು ಸ್ಥಳೀಯ ಚಳ್ಳಕೆರೆ, ಚಿತ್ರದುರ್ಗ ಮಾರುಕಟ್ಟೆಗೆ ಕಳುಹಿಸುತ್ತಾರೆ. ಅಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಬೆಂಡೆಗೆ ಉತ್ತಮ ಬೇಡಿಕೆ ಇದ್ದು, ಅದನ್ನು ಚಿತ್ರದುರ್ಗ, ಹಿರಿಯೂರು ಮಾರುಕಟ್ಟೆ ಜತೆಗೆ, ತುಮಕೂರು, ಬೆಂಗಳೂರಿನವರೆಗೂ ಕಳುಹಿಸುತ್ತಾರೆ. ಪ್ರತಿ ದಿನ ಒಂದರಿಂದ ಒಂದೂವರೆ ಟನ್‌ನಷ್ಟು ಬೆಂಡೆ ಮಾರಾಟವಾಗುತ್ತದೆ. ಕೆ.ಜಿಗೆ ₹ 20 ರಿಂದ ₹ 25ರವರೆಗೂ ಸಿಗುತ್ತದೆಯಂತೆ.

ಒಟ್ಟಾರೆ, ಮಿತ ನೀರಿನಲ್ಲಿ ಮಿಶ್ರ ತರಕಾರಿ ಕೃಷಿ ಆರಂಭಿಸಿದ ಮೊದಲ ವರ್ಷದಲ್ಲೇ ಬೆಂಡೆ ತರಕಾರಿಯಿಂದ ಗೆಲುವಿನ ಹೆಜ್ಜೆ ಇಟ್ಟಿದ್ದಾರೆ. ಪರಮೇಶ್ ಸಂಪರ್ಕ ಸಂಖ್ಯೆ: 997213144

ಖರ್ಚು - ವೆಚ್ಚ
‘ಔಷಧಿ, ಗೊಬ್ಬರ, ಕೀಟನಾಶಕ, ಕೂಲಿ ಸೇರಿದಂತೆ ಎಕರೆಗೆ ₹ 70 ಸಾವಿರದಿಂದ ₹1 ಲಕ್ಷ ಹಣ ಖರ್ಚು ಮಾಡಿರಬಹುದು. ಒಂದು ಎಕರೆಯ ಬೆಂಡೆಯಲ್ಲೇ ಮೊದಲ ಹಂತದಲ್ಲಿ ₹ 1.50 ಲಕ್ಷದವರೆಗೂ ಆದಾಯ ಪಡೆದಿದ್ದೇನೆ’ ಎಂದು ಲೆಕ್ಕಾಚಾರ ನೀಡುತ್ತಾರೆ ಪರಮೇಶ್.

ಐದಾರು ವರ್ಷಗಳಿಂದ ಹೀಗೆ ಮೆಕ್ಕೆಜೋಳ, ಈರುಳ್ಳಿಯಂತಹ ಕೃಷಿ ಮಾಡುತ್ತಿದ್ದರೂ ಯಶಸ್ಸು ಕೊಟ್ಟಿರಲಿಲ್ಲ. ಹಾಗಾಗಿ, ಮಿಶ್ರ ಬೆಳೆ ತರಕಾರಿ ಕೈ ಹಿಡಿಯಿತು. ಮುಂದೆ ತರಕಾರಿ ಬೆಳೆಯುವವರು ಬೇರೆ ಬೇರೆ ತರಕಾರಿಗಳನ್ನು ಬೆಳೆಯಬೇಕು. ಅದು ಒಂದಾದ ಮೇಲೆ ಒಂದು ಬೆಳೆ ಕೈಗೆ ಬರುವಂತಿರಬೇಕು’ ಎಂಬುದು ಅವರ ಅಭಿಪ್ರಾಯ.

ಈಗ ತರಕಾರಿ ತಾಕಿನ ಸುತ್ತಾ ರಕ್ತ ಚಂದನ, ಬೀಟೆ, ಹೊನ್ನೆಯಂತಹ ಕಾಡು ಮರಗಳನ್ನು ನಾಟಿ ಮಾಡಿದ್ದರೆ. ತರಕಾರಿ ಅಲ್ಪ ಕಾಲದ ಆದಾಯಕ್ಕಾದರೆ, ಮರಗಳು ದೀರ್ಘಕಾಲದಲ್ಲಿ ಹಣ ಕೊಡುತ್ತವೆ ಎಂಬುದು ಅವರ ನಂಬಿಕೆ. ಮುಂದೆ ಜಮೀನಿನ ಸುತ್ತ ಮತ್ತಷ್ಟು ವೈವಿಧ್ಯಮಯ ಬೆಳೆಗಳನ್ನು ಬೆಳೆಸುವ ಚಿಂತನೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.