ಅಧಿವೇಶನ ಮುಗಿಯುವುದರೊಳಗೆ ತೀರ್ಮಾನ: ಸಚಿವ ಶಿವಶಂಕರರೆಡ್ಡಿ

7
ಖಾಸಗಿ ಕೃಷಿ ಕಾಲೇಜಿಗೆ ಮಾನ್ಯತೆ ವಿಚಾರ

ಅಧಿವೇಶನ ಮುಗಿಯುವುದರೊಳಗೆ ತೀರ್ಮಾನ: ಸಚಿವ ಶಿವಶಂಕರರೆಡ್ಡಿ

Published:
Updated:
ರಾಜ್ಯದಲ್ಲಿ ಖಾಸಗಿ ಕೃಷಿ ವಿಶ್ವವಿದ್ಯಾಲಯ ತೆರೆಯಲು ಮಾನ್ಯತೆ ನೀಡುವುದನ್ನು ವಿರೋಧಿಸಿ ಹಿರಿಯೂರು ತಾಲ್ಲೂಕಿನ ಬಬ್ಬೂರು ಸಮೀಪದ ತೋಟಗಾರಿಕಾ ಮಹಾವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಿರಿಯೂರು: ‘ಕೃಷಿ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡುವ ವಿಚಾರದ ಬಗ್ಗೆ ಬಜೆಟ್‌ ಅಧಿವೇಶನ ಮುಗಿಯುವುದರೊಳಗೆ ತೀರ್ಮಾನ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ, ಶೈಕ್ಷಣಿಕ ಚಟುವಟಿಕೆಯತ್ತ ಗಮನ ನೀಡಬೇಕು’ ಎಂದು ಕೃಷಿ ಸಚಿವ ಎನ್‌. ಎಚ್‌ .ಶಿವಶಂಕರರೆಡ್ಡಿ ಮನವಿ ಮಾಡಿದರು.

ರಾಜ್ಯದಲ್ಲಿ ಖಾಸಗಿ ಕೃಷಿ ವಿಶ್ವವಿದ್ಯಾಲಯ ತೆರೆಯುವುದನ್ನು ವಿರೋಧಿಸಿ ಬಬ್ಬೂರು ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ಸಚಿವರು ಅಹವಾಲು ಆಲಿಸಿದರು.

‘ಜುಲೈ 13ರವರೆಗೆ ನಮಗೆ ಕಾಲಾವಕಾಶ ಕೊಡಿ. ಮುಖ್ಯಮಂತ್ರಿಯೂ ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದಿಂದ ಬೇರೆ ಬೇರೆ ಕೋರ್ಸ್‌ಗಳಿಗೆ ಅನುಮತಿ ಕೊಡುವ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡುವ ವಿಚಾರಕ್ಕೆ ತಿದ್ದುಪಡಿ ತರಬೇಕಿದೆ. ಇದಕ್ಕೆ ವಿರೋಧ ಪಕ್ಷದವರ ಸಹಮತವೂ ಇದೆ. ಜುಲೈ 2ರಂದು ಸಭೆ ಕರೆದು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಖಾಸಗಿಯವರಿಗೆ ಮಾನ್ಯತೆ ನೀಡಿದರೆ ದುಡ್ಡಿದ್ದವರಿಗೆ ಮನ್ನಣೆ ಹಾಕುತ್ತಾರೆ. ಬಡವರು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಪದವಿಗಳು ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಖಾಸಗಿಯವರಿಗೆ ಪರೀಕ್ಷೆ ನಡೆಸಲು ಅವಕಾಶ ಕೊಟ್ಟರೆ ನಮಗಿಂತ ಹೆಚ್ಚು ಅಂಕ ಗಳಿಸುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಬೇಕಾಗುತ್ತದೆ’ ಎಂದು ವಿದ್ಯಾರ್ಥಿ ಮುಖಂಡರಾದ ಪವನ್ ಕುಮಾರ್, ರಾಕೇಶ್, ವೀರಣ್ಣ, ಮೋಹನ್ ಸಚಿವರಿಗೆ ಮನವಿ ಮಾಡಿದರು.

ಸಂಸದ ಬಿ.ಎನ್. ಚಂದ್ರಪ್ಪ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಟಿ.ರಘುಮೂರ್ತಿ, ತೋಟಗಾರಿಕೆ ಕಾಲೇಜಿನ ಮುಖ್ಯಸ್ಥ ಡಾ. ಬಸವರಾಜಪ್ಪ ಇದ್ದರು.

‘ಜುಲೈ ಒಳಗೆ ಬೆಳೆ ಪರಿಹಾರ’

ಹೊಸದುರ್ಗ: ‘ಜುಲೈ ಒಳಗೆ 2017–18ನೇ ಸಾಲಿನ ಬೆಳೆ ವಿಮೆಯ ಪರಿಹಾರ ಹಣವನ್ನು ರೈತರ ಬ್ಯಾಕ್‌ ಖಾತೆಗೆ ಪಾವತಿಸಲು ವಿಮಾ ಕಂಪನಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ತಿಳಿಸಿದರು.  ಹೊಸದುರ್ಗದಲ್ಲಿ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಅಧಿಕಾರಿಗಳು ಬೆಳೆ ಪರಿಹಾರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು.

‘ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಅಧಿಕಾರ ನಮಗಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರಕ್ಕಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !