ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ಕಸಕ್ಕೆ ‘ಗೊಬ್ಬರ’ದಲ್ಲಿ ಮುಕ್ತಿ

Last Updated 22 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆಯ ಹೊರವಲಯದಲ್ಲಿ ಆವರಗೊಳ್ಳ ಎಂಬ ಗ್ರಾಮವಿದೆ. ಆ ಗ್ರಾಮದ ಹೊರವಲಯದಲ್ಲಿ ರಸ್ತೆಯಿಂದ ತುಸು ದೂರದಲ್ಲಿ ನೀಲಿ ಬಣ್ಣದ ಸೂರಿನ ಬೃಹದಾಕಾರದ ಮೂರ್ನಾಲ್ಕು ಶೆಡ್‌ಗಳು ಕಾಣಿಸುತ್ತವೆ.

ಸ್ವಲ್ಪ ಸಮೀಪ ಹೋದರೆ ದುರ್ಗಂಧದ ಘಾಟು ಮೂಗಿಗೆ ಬಡಿಯಬಹುದು. ಸ್ವಲ್ಪ ಸಾವರಿಸಿಕೊಂಡು, ನೀಲಿ ಬಣ್ಣದ ಸೂರಿನ ಶೆಡ್‌ ಒಳಗೆ ಹೊಕ್ಕರೆ, ಮೂರ್ನಾಲ್ಕು ಮಂದಿ, ಚೌಕಾಕಾರದ ತೊಟ್ಟಿಯೊಳಗಿರುವ ಕಸ–ಕಡ್ಡಿಯನ್ನು ಬೇರ್ಪಡಿಸುತ್ತಿರುತ್ತಾರೆ. ಇನ್ನೊಂದಷ್ಟು ಮಂದಿ ಅಂಥದ್ದೇ ತೊಟ್ಟಿಯಿಂದ ಪುಡಿಯನ್ನು ತೆಗೆದು, ಚೀಲಕ್ಕೆ ತುಂಬುತ್ತಿರುತ್ತಾರೆ.

ಇದು ರಾಜ್ಯದಲ್ಲೇ ಅತಿ ದೊಡ್ಡದಾದ ಸರ್ಕಾರದಿಂದ ನಿರ್ಮಾಣವಾಗಿರುವ ಎರೆಗೊಬ್ಬರ ಉತ್ಪಾದನಾ ಘಟಕ. ದಾವಣಗೆರೆ ಮಹಾನಗರ ಪಾಲಿಕೆ, ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಸಂಗ್ರಹಿಸಿ ಈ ಘಟಕಕ್ಕೆ ತಂದು, ಎರೆಗೊಬ್ಬರವನ್ನಾಗಿಸಿ, ರೈತರಿಗೆ ಮಾರಾಟ ಮಾಡುತ್ತದೆ. ಇದರಿಂದ ನಗರದಲ್ಲಿರುವ ಕಸದ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಿದೆ.

ದಾವಣಗೆರೆಯಲ್ಲಿ ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಮಂಜುನಾಥ ಬಳ್ಳಾರಿ ಅವರು, ಈ ಘಟಕ ನಿರ್ಮಾಣಕ್ಕೆ ಮೂಲ ಕಾರಣಕರ್ತರು. ದಾವಣಗೆರೆಯಲ್ಲಿರುವ ದೇವನಗರಿ ಗ್ರೀನ್‌ ಪ್ಲಾನೆಟ್ ಇನ್‌ಫ್ರಾ ಸಂಸ್ಥೆ ನಡೆಸುತ್ತಿರುವ ಬಿ.ಟಿ.ಧನ್ಯಕುಮಾರ್, ಕೂಡ ಅವರ ಸಾಹಸಕ್ಕೆ ಕೈ ಜೋಡಿಸಿದ್ದಾರೆ. ಆವರಗೊಳ್ಳದಲ್ಲಿರುವ ಘನತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದ ಸಮೀಪದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಈ ಎರೆಹುಳು ಗೊಬ್ಬರ ಘಟಕ ಕೆಲಸ ಮಾಡುತ್ತಿದೆ. ನವೆಂಬರ್ 2018ರಲ್ಲಿ ಈ ಘಟಕ ಕಾರ್ಯಾರಂಭ ಮಾಡಿದೆ.

ನಗರದಲ್ಲಿ ಕಸ ಸಂಗ್ರಹ

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 180 ಟನ್‌ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಆಹಾರ, ಎಲೆ, ತರಕಾರಿ, ಹಣ್ಣು, ಹಣ್ಣಿನ ಸಿಪ್ಪೆ, ಹೂವುಗಳಿರುವ ಹಸಿ ಕಸ 30 ಟನ್‌ನಷ್ಟು ಇದೆ. ಸಂಗ್ರಹಿಸಿದ ಕಸದಿಂದ ಪೇಪರ್‌, ಪ್ಲಾಸ್ಟಿಕ್‌, ಗಾಜು, ಲೋಹ ಮತ್ತಿತರ ಒಣಕಸವನ್ನು ಬೇರ್ಪಡಿಸುತ್ತಾರೆ. ಇದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹ ಅಲ್ಲದೇ ಹೋಟೆಲ್‌, ಅಂಗಡಿಗಳ ವಾಣಿಜ್ಯ ಕಸ ಎಂದು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.

ಗೊಬ್ಬರವಾಗುವ ಪ್ರಕ್ರಿಯೆ

ಶುದ್ಧ ಹಸಿ ಕಸವನ್ನು ತಂದು ಇಲ್ಲಿ ರಾಶಿ ಹಾಕಲಾಗುತ್ತದೆ. ನಂತರ ಅದಕ್ಕೆ ಜೀವಾಣುಗಳನ್ನು (ಮೈಕ್ರೋಬ್ಸ್‌) ಸೇರಿಸಲಾಗುತ್ತದೆ. ಕಸ ಅರ್ಧ ಕಳಿತಾಗ (ಕೊಳೆಯುವುದಲ್ಲ) ಅದನ್ನು 15 ಅಡಿ ಉದ್ದ 4 ಅಡಿ ಅಗಲ, ಮೂರು ಅಡಿ ಆಳ ಇರುವ ಪಿಟ್‌ಗೆ ತುಂಬಿಸುತ್ತಾರೆ. ತುಂಬಿಸುವಾಗ ಪ್ರತಿ ಅರ್ಧ ಅಡಿ ತುಂಬಿಸಿದ ಅದರ ಮೇಲೆ ಸೆಗಣಿಯನ್ನು ಪದರದ ರೀತಿ ಹರಡುತ್ತಾರೆ. ಮತ್ತೆ ಅದರ ಮೇಲೆ ಕಸ. ಹೀಗೆ ಕಸ ಮತ್ತು ಸೆಗಣಿಯನ್ನು 10 ಪದರಗಳಾಗುವವರೆಗೂ ಹಾಕುತ್ತಾರೆ. ಹೀಗೆ ಪಿಟ್‌ ಮೇಲೆ ಹಾಕಿರುವ ಕಸದ ರಾಶಿ ದಿನಗಳು ಕಳೆದಂತೆ ಕುಗ್ಗುತ್ತಾ ಹೋಗುತ್ತದೆ. ಸುಮಾರು ಎರಡು ತಿಂಗಳು ಕಳೆದ ಮೇಲೆ ಕರಗಿದ ಕಸದ ರಾಶಿಗೆ ಎರೆಹುಳುಗಳನ್ನು ಬಿಡುತ್ತಾರೆ. ಮೂರು ತಿಂಗಳ ನಂತರ ಈ ಕಸದ ರಾಶಿ ಎರೆಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

ಪ್ರತಿ ಒಂದು ಟನ್‌ ಗೊಬ್ಬರ ತಯಾರಾಗಲು ಒಂದು ಕೆ.ಜಿ. ಎರೆಹುಳು ಬೇಕು. ಒಂದು ಕೆ.ಜಿ.ಯಲ್ಲಿ ಒಂದು ಸಾವಿರ ಹುಳುಗಳಿರುತ್ತವೆ. ಎರೆಹುಳುವಿಗೆ ಕೆ.ಜಿ.ಗೆ ಮಾರುಕಟ್ಟೆಯಲ್ಲಿ ₹ 300 ದರವಿದೆ. ಇಲ್ಲಿ ಎರೆಹುಳುವನ್ನು ಹೊರಗಿನಿಂದ ತರುವುದಿಲ್ಲ. ಈ ಘಟಕದಲ್ಲಿಯೇ ಉತ್ಪತ್ತಿ ಮಾಡಲಾಗುತ್ತದೆ ಎನ್ನುತ್ತಾರೆ ತಾಂತ್ರಿಕ ಅಧಿಕಾರಿಗಳು.

ಎರೆಹುಳುಗೆ ರಕ್ಷಣೆ

ಎರೆಹುಳು ಗೊಬ್ಬರ ತಯಾರಿಸುವಾಗ ಬಿಸಿಲು ಬಿದ್ದರೆ ಹುಳು ಸತ್ತು ಹೋಗುತ್ತದೆ. ಮಳೆ ಬಿದ್ದರೆ ಕೊಚ್ಚಿಕೊಂಡು ಹೋಗುತ್ತದೆ. ಭೂಮಿಯಲ್ಲಿ ಸಹಜವಾಗಿ ಇರುವ ಎರೆಹುಳು ಭೂಮಿಯ ಆಳಕ್ಕೆ ಇಳಿದು ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳುತ್ತವೆ. ಆದರೆ ಸಿಮೆಂಟ್‌ಪಿಟ್‌ನಲ್ಲಿ ಗೊಬ್ಬರ ತಯಾರಿಸುವಾಗ ಇದೆಲ್ಲ ಎಚ್ಚರ ಇರಬೇಕಾಗುತ್ತದೆ. ಹಾಗಾಗಿಯೇ ಎರೆಹುಳು ಗೊಬ್ಬರ ತಯಾರಿಗೆ ಪರಿಶ್ರಮದ ಜತೆಗೆ ಅಪಾರ ತಾಳ್ಮೆ ಇರಬೇಕಾಗುತ್ತದೆ. ವೇಗದ ಬದುಕಿಗೆ ಹೊಂದಿಕೊಂಡಿರುವ ರೈತರು ಅದರಲ್ಲೂ ಕೃಷಿ ಜತೆ ಬೇರೆ ಕೆಲಸ ಮಾಡಿಕೊಂಡಿರುವವರಿಗೆ ಈ ತಾಳ್ಮೆ ಇರುವುದಿಲ್ಲ ಎಂದು ಡಾ. ಎಚ್‌.ಎಂ. ಪ್ರದೀಪ್‌ ಎರೆಹುಳು ಗೊಬ್ಬರವಾಗಿಸುವ ಪ್ರಕ್ರಿಯೆಯನ್ನು ವಿವರಿಸುತ್ತಾರೆ.

‘ಹುಳುಗಳನ್ನು ಇರುವೆ ತಿಂದು ಹಾಕುತ್ತವೆ. ಅದಕ್ಕಾಗಿ ಸುತ್ತಲೂ ನೀರು ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಇರುವೆಯನ್ನು ಪೂರ್ಣ ಇಲ್ಲದಂತೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಪ್ರಕೃತಿ ವಿರೋಧಿಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಮಾತ್ರ ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಘಟಕದ ನಿರ್ವಹಣೆಯ ಹೊಣೆ ಹೊತ್ತ ದೇವನಗರಿ ಗ್ರೀನ್‌ ಪ್ಲಾನೆಟ್‌ ಇನ್‌ಫ್ರಾ ಸಂಸ್ಥೆಯ ನಿರ್ದೇಶಕ ಬಿ.ಟಿ. ಧನ್ಯಕುಮಾರ್‌.

ಒಂದೂವರೆ ಟನ್ ಗೊಬ್ಬರ

ಘಟಕದಲ್ಲಿ ಒಬ್ಬ ತಾಂತ್ರಿಕ ಸಲಹೆಗಾರ, ಒಬ್ಬರು ಸೂಪರ್‌ವೈಸರ್‌, ಒಂಭತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಟ್ಟು 72 ಪಿಟ್‌ಗಳಿದ್ದು, ಪ್ರತಿ ಪಿಟ್‌ನಿಂದ ಒಂದೂವರೆ ಟನ್‌ ಗೊಬ್ಬರ ತಯಾರಾಗುತ್ತದೆ.

ಸುವರ್ಣ ಆಗ್ರೊ ಟೆಕ್ನಾಲಜೀಸ್‌ನ ಡಾ.ಎಚ್‌.ಎಂ. ಪ್ರದೀಪ್‌ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಈಗ ಗೊಬ್ಬರ ತಯಾರಿಕೆ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್‌–ಮೇ ತಿಂಗಳಲ್ಲಿ ಗೊಬ್ಬರ ಸಿಗಲಿದೆ. ಪ್ರಸ್ತುತ ಎರೆಹುಳು ಗೊಬ್ಬರಕ್ಕೆ ಬೇಡಿಕೆ ಇದೆ. ಇನ್ನೇನು ಮಳೆಗಾಲ ಆರಂಭವಾಗಿ, ಕೃಷಿ ಚಟುವಟಿಕೆಗಳು ಶುರುವಾದರೆ, ರೈತರೇ ಘಟಕಕ್ಕೆ ಬಂದು ಗೊಬ್ಬರ ಒಯ್ಯುತ್ತಾರೆ ಎಂಬುದು ಘಟಕ ನಡೆಸುತ್ತಿರುವವರ ವಿಶ್ವಾಸದ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT