ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ನೈಸರ್ಗಿಕ ಕೃಷಿಯಲ್ಲಿ ಸಮಗ್ರ ಬೆಳೆ

ಐಟಿ ಬಿಟ್ಟು ಮೇಟಿ ಹಿಡಿದ ರೈತ ನರಸನಗೌಡ ವೀರಾಪುರ
Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಧಾರವಾಡ: ಆರೋಗ್ಯಕ್ಕೆ ಪೂರಕ ಆಹಾರಗಳನ್ನು ಬೆಳೆಯುವುದು, ಬೆಳೆದ ರೈತರಿಗೆ ಉತ್ತಮ ದರ ನಿಗದಿ, ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ತರಕಾರಿ ಪೂರೈಕೆ ಹಾಗೂ ಪರಿಸರ ಸ್ನೇಹಿ ಕೃಷಿ... ಈ ತತ್ವದಡಿ ಕೃಷಿ ಹಾಗೂ ಕೃಷಿ ಉದ್ಯಮ ಆರಂಭಿಸಿ ಯಶಸ್ಸು ಕಂಡಿರುವವರು ನರಸನಗೌಡ ವೀರಾಪುರ.

ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾಹರ್ತೆ ಹೊಂದಿರುವ ಇವರು ಸುಮಾರು 20 ವರ್ಷಗಳ ಕಾಲ ವಿವಿಧ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. ಕುಟುಂಬದ ಕೃಷಿ ಹಿನ್ನೆಲೆಯ ಜತೆಗೆ, ವಿದೇಶಗಳಲ್ಲಿ ನೈಸರ್ಗಿಕ ಕೃಷಿಯಲ್ಲಿ ಬೆಳೆದ ಆಹಾರಗಳ ಬಳಕೆಯನ್ನು ಆಧರಿಸಿ ಕೃಷಿ ಆರಂಭಿಸಿದ್ದಾರೆ.

ತಾಲ್ಲೂಕಿನ ಕ್ಯಾರಕೊಪ್ಪ ಬಳಿಯ 3 ಎಕರೆ ಹಾಗೂ ನಗರದ ಹೃದಯ ಭಾಗವಾದ ಹೊಸ ಬಸ್ ನಿಲ್ದಾಣ ಎದುರಿನ 5.5ಎಕರೆ ಖಾಲಿ ಜಾಗವನ್ನೇ ಕೃಷಿ ಭೂಮಿಯಾಗಿ ಪರಿವರ್ತಿಸಿ ಅಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ತಮ್ಮಂತೆ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡ 20ಕ್ಕೂ ಹೆಚ್ಚು ಕೃಷಿಕರು ಇವರೊಂದಿಗೆ ಕೈಜೋಡಿಸಿದ್ದಾರೆ. ಅದರ ಪರಿಣಾಮವೇ ವಿಕೆೆಎಫ್‌ ಅಗ್ರಿ ಫಾರ್ಮ್ಸ್‌ ಎಂಬ ಸಂಸ್ಥೆ ಸ್ಥಾಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ವಿಷಮುಕ್ತ ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ ನರಸನಗೌಡ ಅವರು.

‘ಕೃಷಿಯನ್ನು ಬಾಲ್ಯದಿಂದಲೇ ನೋಡಿಕೊಂಡು ಬೆಳೆದವನು ನಾನು. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೂ, ಮನೆ ಮೇಲೆ ಸುಮಾರು 60 ಚೀಲಗಳಲ್ಲಿ ಮನೆಗೆ ಬೇಕಾದ ತರಕಾರಿ, ಸೊಪ್ಪುಗಳನ್ನು ಬೆಳೆದಿದ್ದೆ. ನನ್ನಂತೆ ಬಹಳಷ್ಟು ಜನ ವಿಷಮುಕ್ತ ಆಹಾರಗಳನ್ನು ಬಯಸುತ್ತಾರೆ. ಅವರಿಗಾಗಿ ಏಕೆ ಇಂಥದ್ದೊಂದು ಪ್ರಯತ್ನ ನಡೆಸಬಾರದು ಎಂಬ ಯೋಚನೆಯೊಂದಿಗೆ ಧಾರವಾಡದಲ್ಲಿ ನೈಸರ್ಗಿಕ ಕೃಷಿ ಆರಂಭಿಸಿದೆ’ ಎಂದು ನಸರಸಗೌಡ ಅವರು ತಮ್ಮ ಅನುಭವ ಹಂಚಿಕೊಂಡರು.

‘ನಿಸರ್ಗದತ್ತವಾಗಿ ಬಹುಕೋಟಿ ಸೂಕ್ಷ್ಮಾಣು ಜೀವಿಗಳು ಗಿಡಗಳ ಬೆಳವಣಿಗೆಗೆ ನೆರವಾಗುತ್ತವೆ. ಅವುಗಳಿಗೆ ಪೂರಕವಾಗಿ ಜೀವಾಮೃತ, ಗೋಕಾಮೃತ, ಎರೆಹುಳು ಗೊಬ್ಬರಗಳನ್ನು ನೀಡಿ ತರಕಾರಿ, ಹಣ್ಣು, ಸೊಪ್ಪು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಷ್ಟು ಮಾತ್ರವಲ್ಲ ಮೀನು ಬಿಟ್ಟಿರುವ ಹೊಂಡದ ನೀರನ್ನು ಬೆಳೆಗಳಿಗೆ ಹಾಯಿಸುವ ಆಕ್ವಾಫೋನಿಕ್ ಕೃಷಿಯನ್ನೂ ಅಳವಡಿಸಿ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ’ ಎಂದು ಅವರು ಹೇಳಿದರು.

‘ಜತೆಗೆ ಕೃಷಿಗೆ ಪೂರಕವಾಗಿ ಗೋವುಗಳ ಸಾಕಾಣಿಕೆ, ಕೋಳಿ ಸಾಕಾಣಿಕೆಯನ್ನೂ ಮಾಡಲಾಗುತ್ತಿದೆ. ನಮ್ಮೊಂದಿಗೆ ಕೈಜೋಡಿಸಿರುವ ರೈತರು ವಾರಕ್ಕೆ ಒಮ್ಮೆ ತರಕಾರಿಗಳನ್ನು ತಂದು ಕೊಡುತ್ತಾರೆ. ಹೊಸ ಬಸ್‌ ನಿಲ್ದಾಣದ ಎದುರು ಹೋಗುವ ರಸ್ತೆಯಲ್ಲಿ (ಚಿಕ್ಕಮಲ್ಲಿಗವಾಡ ರಸ್ತೆಯಲ್ಲಿರುವ ಎಸ್‌ಪಿ ಬಂಗ್ಲೆ ಪಕ್ಕದಲ್ಲಿ) ವಿಕೆ ಅಗ್ರಿ ಫಾರ್ಮ್ಸ್‌ನ ಮಳಿಗೆ ಇದೆ. ಇಲ್ಲಿ ನೈಸರ್ಗಿಕ ಕೃಷಿಯಲ್ಲಿ ಬೆಳೆದ ಉತ್ಪನ್ನಗಳು ಲಭ್ಯ’ ಎಂದು ತಿಳಿಸಿದರು.

‘ಸೌರ ಶಕ್ತಿ ಬಳಸಿ ಶೀಥಲೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಸೌರ ಶಕ್ತಿ ಮೂಲಕವೇ ಪಂಪ್‌ಸೆಟ್‌ ಬಳಕೆಯಾಗುತ್ತಿದೆ. ಹೀಗೆ ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ತಂತ್ರಜ್ಞಾನ ಬಳಕೆ ಮೂಲಕ ಆಧುನಿಕ ಸ್ಪರ್ಶ ನೀಡಲಾಗಿದೆ. ಜತೆಗೆ ಸದ್ಯ ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿರುವುದು ಮಾರುಕಟ್ಟೆ ದರಕ್ಕಿಂತ ಶೇ 15ಕ್ಕಿಂತ ಕಡಿಮೆ ಬೆಲೆ. ಆದರೆ ಶೇ 60ರಷ್ಟು ದರವನ್ನು ನೀಡುವಂತ ವ್ಯವಸ್ಥೆ ಮಾಡಲಾಗಿದೆ’ ಎಂದು ನರಸನಗೌಡ ತಮ್ಮ ಕಾರ್ಯಯೋಜನೆಯನ್ನು ಹಂಚಿಕೊಂಡರು.

‘ಸದ್ಯ ವಾಟ್ಸ್ಆ್ಯಪ್ ಮೂಲಕ ಸುಮಾರು 600 ಗ್ರಾಹಕರನ್ನು ತಲುಪಲಾಗುತ್ತಿದೆ. ಹುಬ್ಬಳ್ಳಿಯಲ್ಲೇ 200ಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ. ಬಹಳಷ್ಟು ಗ್ರಾಹಕರು ಹಿರಿಯರು. ಅವರಿಗೆ ಮನೆಗೇ ತರಕಾರಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT