ಗುರುವಾರ , ಏಪ್ರಿಲ್ 2, 2020
19 °C

ನೋಡಿದಿರಾ ಆ್ಯಪಲ್ ಬದನೆ?

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

Prajavani

ಬದನೆಯಲ್ಲಿ ಹಲವಾರು ಜಾತಿಗಳಿವೆ. ಕೆಲ ನಾಟಿ ಬದನೆ ತಳಿಗಳು ಸಾಮಾನ್ಯ ಬದನೆಯಷ್ಟೆ ರುಚಿ. ಅವುಗಳಲ್ಲಿ ಆ್ಯಪಲ್ ಬದನೆಯೂ ಒಂದು. ಇದು ವಿಶಿಷ್ಟ ತಳಿ. ವರ್ಷವಿಡೀ ಫಲ ಕೊಡುತ್ತದೆ.

ಆ್ಯಪಲ್ ಬದನೆ ಗಾತ್ರ ಮತ್ತು ಆಕಾರದಲ್ಲಿ ಸೇಬು ಹಣ್ಣನ್ನು ಹೋಲುತ್ತದೆ. ಹೀಗಾಗಿ ಇದಕ್ಕೆ ಈ ಹೆಸರು. ಇದರ ಬಣ್ಣ ತಿಳಿ ನೇರಳೆ. ತೀರಾ ಮೃದು. ಕತ್ತರಿಸಿ ನೋಡಿದರೆ ಒಳಗೆ ಅಚ್ಚ ಬಿಳಿ ಬಣ್ಣದ ತಿರುಳು. ಕೆಲವೇ ಕೆಲವು ಸಣ್ಣ ಸಣ್ಣ ಬೀಜಗಳು. ಬೇರೆ ತಳಿ ಬದನೆಯಲ್ಲಿ ಇರುವಷ್ಟು ಬೀಜಗಳಿರುವುದಿಲ್ಲ.

ಸಾಮಾನ್ಯವಾಗಿ ಬದನೆ ಗಿಡ ಏಳೆಂಟು ತಿಂಗಳು ಫಸಲು ನೀಡಿ ಸತ್ತು ಹೋಗುತ್ತದೆ. ಆದರೆ ಆ್ಯಪಲ್ ಬದನೆ ಎರಡರಿಂದ ಮೂರು ವರ್ಷ ನಿತ್ಯ ಕಾಯಿ ನೀಡುತ್ತದೆ. ಸಾಮಾನ್ಯ ಬದನೆಗಿಂತ ದೊಡ್ಡ ಗಾತ್ರದ ಗಿಡವಾಗುತ್ತದೆ. ಆದ್ದರಿಂದ ಕುಂಡದಲ್ಲಿ ಬೆಳೆಸುವುದು ಕಷ್ಟ.

ಗಿಡ ನೆಟ್ಟು ಮೂರು ತಿಂಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. ರೋಗ, ಕೀಟ ಭಾದೆ ಇಲ್ಲ. ಯಾವುದೇ ಪ್ರತ್ಯೇಕ ಉಪಚಾರ ಬೇಡ. ಹೂ ಗಿಡಗಳ ಸನಿಹದಲ್ಲಿ ನೆಟ್ಟರೆ ಅದಕ್ಕೆ ಹಾಕುವ ನೀರೇ ಸಾಕಾಗುತ್ತದೆ. ಸ್ವಲ್ಪ ಹಟ್ಟಿ ಗೊಬ್ಬರ ಕೊಟ್ಟರೆ ಗಿಡದ ತುಂಬ ಕಾಯಿಗಳಾಗುತ್ತವೆ. ಇದು ಹೆಚ್ಚಿನ ಪರಿಶ್ರಮ ಇಲ್ಲದೆ ಸಾವಯವ ಪದ್ಧತಿಯಲ್ಲಿ ನಿರಂತರವಾಗಿ ಫಸಲು ಕೊಡುವ ಬದನೆ. ಯಾವುದೇ ಮಣ್ಣಿನಲ್ಲೂ ಬೆಳೆಯಬಹುದು.

‘ಆ್ಯಪಲ್ ಬದನೆ ಉಪಯೋಗಿಸಿ ಮಾಡುವ ಸಾಂಬಾರಿಗೆ ಉಳಿದ ಬದನೆಯಿಂದ ಮಾಡುವ ಸಾಂಬಾರಿನಷ್ಟು ರುಚಿ ಇರುವುದಿಲ್ಲ. ಆದರೆ ಪಲ್ಯ, ಪೋಡಿ ಮತ್ತು ಮೊಸರು ಗೊಜ್ಜು ಬಲು ಸ್ವಾದಿಷ್ಟ. ಇದನ್ನು ಬೇಯಿಸಿ ಹಸಿಮೆಣಸು, ಈರುಳ್ಳಿ, ತೆಂಗಿನತುರಿ, ಹುಳಿ, ಉಪ್ಪಿನ ಜೊತೆ ರುಬ್ಬಿ ಮಾಡುವ ಚಟ್ನಿ ಬಹಳ ರುಚಿ. ತುಸು ಹೆಚ್ಚೇ ಅನ್ನ ಹೊಟ್ಟೆಗೆ ಇಳಿಯುತ್ತದೆ. ದೋಸೆ, ಇಡ್ಲಿ, ಚಪಾತಿಗೂ ಈ ಚಟ್ನಿ ಒಳ್ಳೆ ಕಾಂಬಿನೇಷನ್’ ಎನ್ನುತ್ತಾರೆ ಇದನ್ನು ಬೆಳೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಮುರುಳ್ಯದ ಸಾವಯವ ರೈತಮಹಿಳೆ ಚೀಮುಳ್ಳು ತಾರಾ ಡಿ. ಎನ್.

‘ಐದು ವರ್ಷದ ಹಿಂದೆ ಬಂಧುಗಳಾದ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಪ್ರಗತಿಪರ ಕೃಷಿಕ ನಡುಬೆಟ್ಟು ಕೃಷ್ಣಪ್ಪ ಅವರ ಮನೆಗೆ ಹೋಗಿದ್ದೆ. ಅಲ್ಲಿ ಈ ತಳಿ ಸಿಕ್ಕಿತು. ಹಿತ್ತಲಿನ ತೆಂಗಿನಮರದ ಬುಡದಲ್ಲಿ ಬೀಜ ಬಿತ್ತಿ ಬೆಳೆಸಿದೆ. ಅಂದಿನಿಂದ ಇಂದಿನವರೆಗೆ ಈ ಬದನೆ ನಮ್ಮ ಮನೆಯಲ್ಲಿ ತಪ್ಪಿದ್ದೆಂದು ಇಲ್ಲ’ ಎಂದು ಈ ಬದನೆ ಮನೆಗೆ ಬಂದ ಬಗೆಯನ್ನು ವಿವರಿಸುತ್ತಾರೆ. ಅವರು ಆ್ಯಪಲ್ ಬದನೆಯನ್ನು ಮನೆ ಬಳಕೆಗೆ ಉಪಯೋಗಿಸಿ ಮಿಕ್ಕುದನ್ನು ನೆಂಟರಿಷ್ಟರಿಗೆ ಹಂಚುತ್ತಾರೆ. ಮಾರಾಟ ಮಾಡುವುದಿಲ್ಲ.

ಆ್ಯಪಲ್ ಬದನೆಯ ಕೃಷಿ ಸುಲಭ. ಬೀಜ ಬಿತ್ತಿ ಸಸ್ಯಾಭಿವೃದ್ಧಿ ಮಾಡಬಹುದು. ಕಡಿಮೆ ಆರೈಕೆ ಮಾಡಿದರೆ ಸಾಕು. ಹೀಗಾಗಿ ರೈತರಿಗೆ ಇದು ಉತ್ತಮ ವರಮಾನ ತರುವ ಬೆಳೆ ಆಗಬಲ್ಲದು. ಅಳಿವಿನಂಚಿನಲ್ಲಿರುವ ಇಂಥ ಬದನೆ ತಳಿಗಳನ್ನು ಉಳಿಸಿ ಬೆಳೆಸಬೇಕಾಗಿದೆ.

ಚೀಮುಳ್ಳು ತಾರಾ ಅವರ ಸಂಪರ್ಕ ಸಂಖ್ಯೆ: 8105080185. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು