‘ಈ ಸಲ ಒಣಗಿನ (ಉಣ್ಣೆ) ಕಾಟ ತುಂಬಾ ಸಾರ್... ಜಾನುವಾರು ಮೈ ಪೂರಾ ಅವೇ ಕಾಣ್ತವೆ. ಇಷ್ಟು ವಿಪರೀತಕ್ಕೆ ಹೋಗಿದ್ದು ಈ ವರ್ಷನೇ ಸರಿ...’ ಉಣ್ಣೆ ನಿವಾರಕ ಔಷಧಕ್ಕಾಗಿ ಆಸ್ಪತ್ರೆಗೆ ಬರುವ ಪ್ರತಿ ರೈತರ ಬಾಯಲ್ಲೂ ಈಗ ಇದೇ ಮಾತು. ಹೌದು, ಈ ವರ್ಷ ಮಳೆಯ ಕೊರತೆಯ ಕಾರಣ ಈಗಾಗಲೇ ಧಗೆ ವಿಪರೀತ ಹೆಚ್ಚಿದೆ.

ಮೇವಿಲ್ಲದೆ ಜಾನುವಾರುಗಳು ಬಳಲುತ್ತಿವೆ. ಕರಗಿದ ಚರ್ಮದ ಅಡಿಯ ಕೊಬ್ಬಿನ ಪದರ, ಚರ್ಮದ ಬಿರುಕುಗಳಿಂದಾಗಿ ರಕ್ತನಾಳಗಳು ಸುಲಭವಾಗಿ ಸಿಗುವುದರಿಂದ ರಕ್ತ ಹೀರುವುದು ತುಂಬಾ ಸಲೀಸು. ಹಾಗಾಗಿ ಸೋತು ಸೊರಗಿರುವ ದನಕರುಗಳ ಮೇಲೆ ಉಣ್ಣೆಗಳ ದಾಳಿ ಹೆಚ್ಚು. ಉಣ್ಣೆಗಳ ಸಂತಾನೋತ್ಪತ್ತಿ ಹೆಚ್ಚಿರುವುದರಿಂದ ಅವುಗಳಿಂದ ಹರಡುವ ಕಾಯಿಲೆಗಳೂ ಏರುತ್ತಿವೆ. ಜಾನುವಾರುಗಳಲ್ಲಿ ಅನಾಪ್ಲಾಸ್ಮಾ, ಕಂದು ಮೂತ್ರ ರೋಗ (ಬೆಬೀಸಿಯ), ಥೈಲೀರಿಯಾದಂತಹ ಮಾನವನ ಮಲೇರಿಯಕ್ಕೆ ಹೋಲಿಸಬಲ್ಲ ರೋಗ ಪ್ರಕರಣಗಳ ಸಂಖ್ಯೆ ಒಂದೇ ಸಮನೇ ಹೆಚ್ಚುತ್ತಿದೆ.

ಅನಾಪ್ಲಾಸ್ಮೋಸಿಸ್ ಎಂಬ ರಕ್ತದ ಕಾಯಿಲೆ ರಿಕೆಟ್ಸಿಯಾ ಗುಂಪಿಗೆ ಸೇರಿದ ಅನಾಪ್ಲಾಸ್ಮಾ ಎಂಬ ರೋಗಾಣುಗಳಿಂದ ಬರುತ್ತದೆ. ದನ, ಎಮ್ಮೆ, ಕುರಿ, ಮೇಕೆಗಳಲ್ಲದೆ ಜಿಂಕೆಯಂಥ ವನ್ಯಮೃಗಗಳನ್ನೂ ಈ ರೋಗ ಬಾಧಿಸುತ್ತದೆ. ಹೊರ ಪರೋಪಜೀವಿಗಳಾದ ಉಣ್ಣೆಗಳು ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ರೋಗಪೀಡಿತ ಪ್ರಾಣಿಯ ರಕ್ತ ಹೀರುವ ಉಣ್ಣೆಗಳ ದೇಹ ಸೇರುವ ರೋಗಾಣುಗಳು ನಂತರದಲ್ಲಿ ಅಂತಹ ಉಣ್ಣೆಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದಾಗ ಅವುಗಳ ರಕ್ತ ಸೇರುತ್ತವೆ.

ಅಪರೂಪವಾಗಿ ಕಚ್ಚುವ ನೊಣ, ಸೊಳ್ಳೆ, ಮಲಿನಗೊಂಡ ಸೂಜಿ/ಉಪಕರಣಗಳಿಂದಲೂ ರೋಗ ಹರಡಬಹುದು. ಸಾಮಾನ್ಯವಾಗಿ ಜಾನುವಾರುಗಳ ದೇಹ ಸೇರಿದ ರೋಗಾಣುಗಳು ಎರಡು ಮೂರು ವಾರಗಳಲ್ಲಿ ರೋಗವನ್ನು ಹುಟ್ಟುಹಾಕುತ್ತವೆ. ಕೆಲವೊಮ್ಮೆ ಒಂದೆರಡು ತಿಂಗಳುಗಳ ನಂತರವೂ ರೋಗಲಕ್ಷಣಗಳು ಕಾಣಿಸಬಹುದು.

ಅದರಲ್ಲೂ ಜಾನುವಾರುಗಳ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದಾಗ, ಗರ್ಭವಿರುವಾಗ ಇಲ್ಲ ಕರು ಹಾಕಿದ ಒತ್ತಡವಿರುವಾಗ ಅಥವಾ ವಾತಾವರಣದಲ್ಲಿ ಹಠಾತ್ ಬದಲಾವಣೆಯಾದಾಗ ರೋಗ ಬೇಗನೆ ಕಾಣಿಸಿಕೊಳ್ಳುವುದುಂಟು. ಕೆಲವು ಜಾನುವಾರುಗಳು ಯಾವುದೇ ರೋಗ ಲಕ್ಷಣಗಳನ್ನು ತೋರಿಸದೆ ರೋಗಾಣುಗಳ ವಾಹಕಳಾಗುವ (ಕ್ಯಾರಿಯರ್ಸಸ್) ಸಂಭವ ಉಂಟು.

ರೋಗ ಲಕ್ಷಣಗಳು: ಏಕಾಏಕಿ ಏರುವ ಜ್ವರ (106–107ಡಿಗ್ರಿ ಎಫ್), ಸರಿಯಾಗಿ ಉಸಿರಾಡಲಾಗದೆ ತೇಕುವುದು, ಹೃದಯ ಜೋರಾಗಿ ಹೊಡೆದುಕೊಳ್ಳುವುದು, ಹಸಿವು ಮಂದವಾಗುವುದು, ಪೂರ್ತಿಯಾಗಿ ಮೇವು ಬಿಡುವುದು, ಹಾಲಿನ ಇಳುವರಿಯಲ್ಲಿ ಹಠಾತ್ ಕುಸಿತ, ಮೊದಲು ವಿಪರೀತ ಭೇದಿಯಾಗಿ ನಂತರದಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಒಮ್ಮೆಲೆ ತೂಕ ಕಳೆದುಕೊಳ್ಳುವ ಎಮ್ಮೆ, ದನಗಳು ನಿಶ್ಶಕ್ತಿಯಿಂದ ಬಳಲುತ್ತವೆ. ಒಂದೆರಡು ದಿನಗಳ ಕಾಲ ಇದೇ ಲಕ್ಷಣಗಳು ಮುಂದುವರೆಯಬಹುದು.

ರೋಗಾಣುಗಳು ಕೆಂಪು ರಕ್ತ ಕಣಗಳ ಒಳಗೆ ಬೆಳವಣಿಗೆ ಹೊಂದಿ ಅವುಗಳನ್ನು ನಾಶ ಮಾಡುವುದರಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಮೊದಲ ಹಂತದಲ್ಲಿ ಕಣ್ಣಿನ ಲೋಳ್ಪೊರೆ ಹಳದಿಯಾಗಿ ನಂತರ ಬಿಳುಚಿಕೊಳ್ಳುತ್ತದೆ. ಗಬ್ಬದ ಹಸುಗಳು ಕಂದು ಹಾಕುತ್ತವೆ. ಸೂಕ್ತ ಚಿಕಿತ್ಸೆ ದೊರಕದಿದ್ದರೆ ಏಳರಿಂದ ಹತ್ತು ದಿನಗಳೊಳಗೆ ಮರಣ ಹೊಂದುತ್ತವೆ.

ಒಮ್ಮೊಮ್ಮೆ ಚಿಕಿತ್ಸೆಯಿಲ್ಲದೆಯೂ ರೋಗಿಗಳು ಚೇತರಿಸಿಕೊಳ್ಳಬಹುದು. ಕರುಗಳಲ್ಲಿ ಈ ಕಾಯಿಲೆ ಕಾಣಿಸುವುದು ತೀರಾ ಅಪರೂಪ. ಎಳೆಯ ಜಾನುವಾರಿಗಳಿಗಿಂತಲೂ ವಯಸ್ಕ ಜಾನುವಾರುಗಳಲ್ಲಿ ಸೋಂಕಿನ ತೀವ್ರತೆ ಜಾಸ್ತಿ. ಹಾಗಾಗಿ ವಯಸ್ಸಾದ ರಾಸುಗಳಲ್ಲಿ ಮರಣ ಪ್ರಮಾಣ ಹೆಚ್ಚು. ಚಿಕಿತ್ಸೆಯಿಂದ ಚೇತರಿಸಿಕೊಂಡ ಬಹುತೇಕ ಹಸು, ಎಮ್ಮೆಗಳು ತಮ್ಮ ಜೀವನಪರ್ಯಂತ ರೋಗಾಣುಗಳ ವಾಹಕಗಳಾಗುವ ಅಪಾಯವಿದೆ.

ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಯ ಮೂಲಕ ಈ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಬಹುದು. ಆದರೆ ಎಲ್ಲೆಡೆ ಪ್ರಾಣಿ ರೋಗಪತ್ತೆ ಪ್ರಯೋಗಾಲಯಗಳು ಇಲ್ಲದಿರುವುದರಿಂದ ರಕ್ತ ಮಾದರಿ ಕಳುಹಿಸಿ ಫಲಿತಾಂಶ ಪಡೆಯುವುದು ವಿಳಂಬವಾಗುವ ಸಂಭವವುಂಟು. ಹಾಗಾಗಿ ರೋಗ ಲಕ್ಷಣಗಳ ಮೇಲೆ ಕಾಯಿಲೆ ನಿರ್ಧರಿಸುವುದು ಕೆಲವೊಮ್ಮೆ ಅನಿವಾರ್ಯ.

ರೋಗಿಯ ರಕ್ತ ಗಮನಿಸಿದರೆ ದಪ್ಪಗೆ ಅಂಟಂಟಾಗಿರಬೇಕಾದ ರಕ್ತ ತುಂಬಾ ತೆಳುವಾಗಿ ಕೆಂಪು ನೀರಿನಂತೆ ಕಾಣಿಸುವುದು. ಹಾಗಾಗಿ ಬರಿಗಣ್ಣಿನಿಂದ ರಕ್ತವನ್ನು ಗಮನಿಸುವುದು ಈ ಕಾಯಿಲೆಯನ್ನು ಊಹಿಸಲು ಸಹಕಾರಿ. ರಕ್ತಕ್ಕೆ ಸಂಬಂಧಿಸಿದ ಇತರೆ ಕಾಯಿಲೆಗಳಾದ ಬೆಬೀಸಿಯ, ಥೈಲೀರಿಯ, ಟ್ರಿಪನೋಸೋಮ ಸಮಸ್ಯೆಗಳಲ್ಲಿ ಒಮ್ಮೊಮ್ಮೆ ಲಕ್ಷಣಗಳಲ್ಲಿ ಸಾಮ್ಯತೆಯಿರುವುದರಿಂದ ಎಲ್ಲಾ ಚಿಹ್ನೆಗಳನ್ನು ವಿಮರ್ಶಿಸಿ ರೋಗ ನಿರ್ಧಾರಕ್ಕೆ ಬರಬೇಕಾಗುತ್ತದೆ. ಒಮ್ಮೊಮ್ಮೆ ಎರಡೆರಡು ಕಾಯಿಲೆಗಳು ಒಟ್ಟೊಟ್ಟಿಗೆ ಬಾಧಿಸಿ ರೋಗಪತ್ತೆ ಮತ್ತು ಚಿಕಿತ್ಸೆಗೆ ಸವಾಲಾಗುವುದೂ ಉಂಟು.

ಚಿಕಿತ್ಸೆ ಮತ್ತು ನಿಯಂತ್ರಣ: ಈ ರೋಗಕ್ಕೆ ಟೆಟ್ರಾಸೈಕ್ಲಿನ್ ಇಂಜೆಕ್ಷನ್ (ಆಕ್ಸಿಟೆಟ್ರಾಸೈಕ್ಲಿನ್/ಕ್ಲೋರ್ಟೆಟ್ರಾಸೈಕ್ಲಿನ್) ಪರಿಣಾಮಕಾರಿ ಮದ್ದು. ಮೂರರಿಂದ ಐದು ದಿನಗಳ ಚಿಕಿತ್ಸೆ ಬೇಕಾಗುತ್ತದೆ. ಇಮಿಡೋಕಾರ್ಬ್ ಔಷಧವೂ ಉತ್ತಮ ಫಲಿತಾಂಶ ನೀಡುತ್ತದೆ. ಪೂರಕ ಚಿಕಿತ್ಸೆಯಾಗಿ ಕಬ್ಬಿಣ, ವಿಟಮಿನ್, ಲವಣ ಮಿಶ್ರಣ ಕೊಡಬೇಕು.

ಈ ಕಾಯಿಲೆಗೆ ಪರಿಣಾಮಕಾರಿ ಲಸಿಕೆಯ ಲಭ್ಯತೆ ಇಲ್ಲದಿರುವುದರಿಂದ ಉಣ್ಣೆಗಳ ನಿಯಂತ್ರಣವೊಂದೇ ರೋಗ ತಡೆಗಟ್ಟುವ ಮಾರ್ಗ. ಹಾಗಾಗಿ ದನ ಕರುಗಳಿಗೆ ನಿತ್ಯ ಚೆನ್ನಾಗಿ ಉಜ್ಜಿ ಮೈ ತೊಳೆಸುವುದರಿಂದ ಉಣ್ಣೆ ಹತ್ತದಂತೆ ಮಾಡಬಹುದು. ಕೊಟ್ಟಿಗೆಯ ಸಂಧಿಗೊಂದಿಗಳಲ್ಲಿ ಉಣ್ಣೆಗಳು ಮೊಟ್ಟೆ ಇಡುವುದರಿಂದ ಕೊಟ್ಟಿಗೆಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ. ಸೂಕ್ತ ಕೀಟನಾಶಕಗಳನ್ನು ಬಳಸಿ ಉಣ್ಣೆಗಳ ನಿರ್ಮೂಲನೆ ಮಾಡುವುದು ಅತಿ ಮುಖ್ಯ.

ಹವಾಮಾನದಲ್ಲಿ ಹಠಾತ್ ಬದಲಾವಣೆಯಾದಾಗ ಅದರಲ್ಲೂ ಚಳಿಗಾಲ, ಬಿರು ಬೇಸಿಗೆಯ ಅವಧಿಯಲ್ಲಿ ಒಮ್ಮೆಲೆ ಮೋಡ ಕವಿದಾಗ ಇಲ್ಲಾ ಮಳೆ ಸುರಿದಾಗ ವಾತಾವರಣದ ಉಷ್ಣಾಂಶದಲ್ಲಿ ಏರಿಳಿತವಾಗಿ ಜಾನುವಾರುಗಳ ರೋಗ ನಿರೋಧಕ ಶಕ್ತಿಗೆ ಸವಾಲಾಗುತ್ತದೆ. ಇಂತಹ ಒತ್ತಡಕಾರಕ ಸ್ಥಿತಿಯಲ್ಲಿ ರೋಗಾಣುಗಳು ವೃದ್ಧಿ ಹೊಂದಿ ಕಾಯಿಲೆ ಹುಟ್ಟುಹಾಕುತ್ತವೆ. ಇಂತಹ ಸಮಯದಲ್ಲಿ ಜಾನುವಾರುಗಳ ಆರೋಗ್ಯದಲ್ಲಿ ಸ್ವಲ್ಪ ಏರಿಳಿತವಾದರೂ ವಿಳಂಬ ಮಾಡದೆ ವೈದ್ಯರಿಗೆ ತೋರಿಸಬೇಕು. ಸೆಗಣಿ, ಗಂಜಲವನ್ನು ಯಾವಾಗಲೂ ಗಮನಿಸುವ ಅಭ್ಯಾಸ ರೂಢಿಸಿಕೊಂಡಾಗ ಅನಾರೋಗ್ಯದ ಲಕ್ಷಣಗಳನ್ನು ಬೇಗನೆ ಗುರುತಿಸಲು ಸಹಕಾರಿಯಾಗುತ್ತದೆ.

ಒಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುವುದರ ಜೊತೆಗೆ ಜಾನುವಾರುಗಳಿಗೆ ಉಣ್ಣೆ, ಹೇನು, ಚಿಗಟ ಮುಂತಾದ ಹೊರ ಪರೋಪ ಜೀವಿಗಳಿಂದ ರಕ್ಷಣೆ ಕೊಡುವುದರಿಂದ ಇಂತಹ ಹಲವಾರು ಕಾಯಿಲೆಗಳನ್ನು ಬಾರದಂತೆ ತಡೆಗಟ್ಟಬಹುದು.

ಲೇಖಕರು ಪಶುವೈದ್ಯಾಧಿಕಾರಿ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.