ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೆಚ್ಚದ ತೊಂಡೆ ಬೆಳೆ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸುಂದರ ಕಡಲ ತೀರ, ಪ್ರಸಿದ್ಧ ದೇಗುಲಗಳ ಬೀಡಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮರಳು ಮಣ್ಣಿಗೆ ಪ್ರಸಿದ್ಧಿ. ಹಾಗಾಗಿ ಇಲ್ಲಿಯ ಹಾಲಕ್ಕಿ ಕುಟುಂಬಗಳು ವರ್ಷಪೂರ್ತಿ ಒಂದಿಲ್ಲೊಂದು ತರಕಾರಿ ಬೆಳೆಯನ್ನು ಬೆಳೆಯುವಲ್ಲಿ ನಿರತ. ಪಾರಂಪರಿಕ ಪದ್ಧತಿಯಲ್ಲಿನ ಉತ್ತಮ ಅಂಶಗಳನ್ನು ಆಧುನಿಕ ಪದ್ಧತಿಯೊಂದಿಗೆ ಒರೆಹಚ್ಚಿ ಕೃಷಿ ಚಟುವಟಿಕೆ ಕೈಗೊಳ್ಳುವಲ್ಲಿ ಈ ಹಾಲಕ್ಕಿ ಜನರದ್ದು ಎತ್ತಿದ ಕೈ.
ಇವರ ಪೈಕಿ ತೊಂಡೆ ಬೆಳೆಯಲ್ಲಿ ಭಾರಿ ಯಶ ಕಂಡಿದ್ದಾರೆ ಬಾವಿಕೊಡ್ಲು ಗ್ರಾಮದ ದುಬ್ಬನಸಸಿಯ ಮಾದೇವ ಗಣಪತಿ ಗೌಡರು.

ಬೂದುಗುಂಬಳ, ಸಿಹಿ ಈರುಳ್ಳಿ, ಕೆಂಪು ಹರಿವೆ, ಮೂಲಂಗಿ ಕೃಷಿಯನ್ನೂ ಕೈಗೊಂಡಿರುವ ಇವರಿಗೆ ಹೆಚ್ಚಿನ ಆದಾಯ ತಂದುಕೊಟ್ಟಿರುವುದು ತೊಂಡೆ ಬೆಳೆ.

ಉಳಿದ ತರಕಾರಿ ಗಿಡಗಳಿಗಿಂತ ತೊಂಡೆ ಕೃಷಿಯೇ ಸುಲಭ ಎನ್ನುವ ಅವರು ಸ್ವಲ್ಪ ಶ್ರಮ ವಹಿಸಿದರೆ ಅಧಿಕ ಇಳುವರಿಯನ್ನು ಹಲವು ತಿಂಗಳುಗಳವರೆಗೆ ಪಡೆಯಲು ಸಾಧ್ಯ ಎನ್ನುತ್ತಾರೆ ಗೌಡರು. ಇದಕ್ಕೆ ಸಾಕ್ಷಿಯಾಗಿ ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ತೊಂಡೆ ಗಿಡಗಳನ್ನು ನಾಟಿ ಮಾಡುವ ಅವರು ಜೂನ್ ತಿಂಗಳಿನ ತನಕ ಬೆಳೆ ಪಡೆಯುತ್ತಿದ್ದಾರೆ. ಗಿಡನೆಟ್ಟು ಎರಡು ತಿಂಗಳುಗಳಿಗೆ ಫಸಲು ಆರಂಭವಾಗುತ್ತದೆ ಎನ್ನುತ್ತಾರವರು.

ಕೃಷಿ ಹೇಗೆ?
೨ ರಿಂದ ೨.೫ ಅಡಿ ಉದ್ದದ ಒಂದು ವರ್ಷ ಹಳೆಯದಾದ ತೊಂಡೆಬಳ್ಳಿಯನ್ನು ಕತ್ತರಿಸಿ ಕೈತೋಟ ಅಥವಾ ಎತ್ತರದ ಜಾಗದಲ್ಲಿ ನೆಡುತ್ತಾರೆ. ಈ ಕ್ರಿಯೆ ಮಳೆಗಾಲದಲ್ಲಿ  ನಡೆಯುತ್ತದೆ. ಈ ತಾಯಿ ಗಿಡದಿಂದ ಬೆಳೆಯುವ ಬಲಿಷ್ಠವಾದ ಅಡ್ಡ ಹೆಣೆಗಳನ್ನು ೧.೫ ಅಡಿ ಉದ್ದದಂತೆ ಕತ್ತರಿಸಿ ಗದ್ದೆಯಲ್ಲಿ ನೆಡುತ್ತಾರೆ. ಉಸುಕಿನ ಗದ್ದೆ ಇವರದ್ದಾಗಿದ್ದು, ಸುಮಾರು ೩ ಅಡಿ ಅಗಲ ಹಾಗೂ ಮೂವತ್ತು ಅಡಿ ಉದ್ದದ ಮಡಿಗಳನ್ನು ಮಾಡಿದ್ದಾರೆ. ಮಡಿಗಳಲ್ಲಿ ಗಿಡಗಳು ಸುಮಾರು ೧ ಅಡಿ ಅಂತರದಲ್ಲಿ ಬೆಳೆದಿವೆ.

೪೦ ಕೆ.ಜಿ. ತೂಕದ ಕೋಳಿ ಹಿಕ್ಕೆಯ ೨೦ ಚೀಲ ಗೊಬ್ಬರ ಖರೀದಿಸಿ ಪ್ರತಿ ಮಡಿಗಳಲ್ಲಿ ಸರಿಯಾಗಿ ಬೆರೆಸಿ ಗಿಡಗಳನ್ನು ನೆಡುತ್ತಾರೆ. ಮೂವತ್ತು ದಿನಗಳ ನಂತರ ಪುನಃ ಗಿಡದ ಬುಡಕ್ಕೆ ಗೊಬ್ಬರ ಹಾಕುತ್ತಾರೆ.

ಚಪ್ಪರ ಹೀಗೆ...
ಗೊಬ್ಬರದ ಗಿಡ, ಸಣ್ಣೆಲೆ ಗಿಡ, ನುಕ್ಕಿ, ಬಿದಿರಿನ ಹೆಣೆ, ಬಾಳೆಪಟ್ಟೆ ಬಳ್ಳಿ ಮುಂತಾದ ಸ್ಥಳೀಯವಾಗಿ ಲಭ್ಯವಿರುವ ಗಿಡವನ್ನು ಬಳಸಿ ಸುಮಾರು ೪ ಅಡಿ ಎತ್ತರದ ಚಪ್ಪರವನ್ನು ಹಾಕಿದ್ದಾರೆ. ಚಪ್ಪರ ಅತ್ಯಂತ ಗಟ್ಟಿಯಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಣೆದದ್ದಾಗಿದೆ. ಚಪ್ಪರದಲ್ಲಿ ತೊಂಡೆ ಬಳ್ಳಿ ಹರಡಿ ಬೆಳೆದಿದ್ದು, ಬೆಳೆದ ಕಾಯಿಯನ್ನು ಕೊಯ್ಯಲು ಅನುಕೂಲವಾಗುವಂತೆ ಎರಡು ಸಾಲು ಚಪ್ಪರದ ನಡುವೆ ಸಾಕಷ್ಟು ಅಂತರವಿಡಲಾಗಿದೆ.

ಪ್ರತಿ ಭಾನುವಾರ ಬಳ್ಳಿಯಿಂದ ಕಾಯಿಗಳನ್ನು ತೆಗೆಯಲಾಗುತ್ತದೆ. ಪ್ರತಿ ವಾರವೂ ಸುಮಾರು ೩-೪ ಕ್ವಿಂಟಲ್ ತೊಂಡೆಕಾಯಿ ದೊರೆಯುತ್ತಿದ್ದು, ಕೆ.ಜಿ. ತೊಂಡೆಕಾಯಿಗೆ ರೂ.೪-೫ನಂತೆ ಮಧ್ಯವರ್ತಿಗಳು ಖರೀದಿಸುತ್ತಾರೆ. ಇದರಿಂದ ವಾರಕ್ಕೆ ೨ ಸಾವಿರ ರೂಪಾಯಿವರೆಗೂ ಆದಾಯ ಸಿಗುತ್ತದೆ. ಏಪ್ರಿಲ್–ಮೇ ತಿಂಗಳಿನಲ್ಲಿ ಮದುವೆ ಮುಂತಾದ ಕಾರ್ಯಕ್ರಮಗಳು ಜಾಸ್ತಿ ಇರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.

ಇವರ ಜೊತೆ ಮಡದಿ ಮತ್ತು ಮಕ್ಕಳೆಲ್ಲ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಇವರ ಹೆಣ್ಣು ಮಕ್ಕಳೆಲ್ಲರೂ ಶಿಕ್ಷಣ ಪಡೆಯುತ್ತಿರುವುದರ ಜೊತೆಗೆ ಬಿಡುವಿನ ವೇಳೆ ಮತ್ತು ರಜಾದಿನಗಳಲ್ಲಿ ಗಿಡಗಳಿಗೆ ನೀರುಣಿಸುವುದು, ಕಾಯಿ ಕೀಳುವುದು ಮತ್ತಿತರ ಕಾರ್ಯಗಳನ್ನು ಮಾಡುತ್ತಾರೆ. ಅವರ ಸಂಪರ್ಕಕ್ಕೆ ೮೭೯೨೧ ೭೨೯೬೧.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT