ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೋಸ್ಟ್ ಪರಿಹಾರ

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

ಮಲೆನಾಡಿನ ಜಿಲ್ಲೆಯ ಬಹುತೇಕ ರೈತರಿಗೆ ಮುಂಗಾರು ಆರಂಭವೇ ಜೀವನಧಾರ. ಅದು ಬದುಕು ಕಟ್ಟಿಕೊಳ್ಳುವ ಸಮಯ. ಈ ಸಲ ಮುಂಗಾರು ಕೃಷಿಕರ ವಲಯದಲ್ಲಿ ಉತ್ತಮ ನಿರೀಕ್ಷೆಯನ್ನು ಬಿತ್ತಿದೆ.
 
ಆದರೂ ರಾಸಾಯನಿಕ ಗೊಬ್ಬರದ ದರ ಹೆಚ್ಚಳ, ಗೊಬ್ಬರದ ಅಭಾವ, ಕಳಪೆ ಗುಣಮಟ್ಟ ಇದು ರೈತರ ನಿರೀಕ್ಷೆಯನ್ನು ಹುಸಿ ಮಾಡಿವೆ.  ರಸಗೊಬ್ಬರದ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ಇಂದು ರಸಗೊಬ್ಬರ ಕಂಪೆನಿಗಳಲ್ಲಿ ಹೆಚ್ಚು ಲಾಭ ಸಿಗುತ್ತಿಲ್ಲ; ಹೀಗಾಗಿ ಅವುಗಳ ಸ್ಥಾಪನೆಗೆ ಯಾರೂ ಮುಂದೆ ಬರುತ್ತಿಲ್ಲ.

ಅಂತರ‌್ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಸಗೊಬ್ಬರ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ ತಡೆದುಕೊಳ್ಳದ ದಕ್ಷಿಣ ಭಾರತದ ಎಷ್ಟೋ ಕಂಪನಿಗಳು ಬಾಗಿಲು ಮುಚ್ಚಿವೆ. ಮತ್ತೆ ಕೆಲವು ಬಾಗಿಲು ಮುಚ್ಚುವ ಹಂತದಲ್ಲಿವೆ. ತಮಿಳುನಾಡಿನಲ್ಲಿ ಅತ್ಯಧಿಕ ರಸಗೊಬ್ಬರ ಉತ್ಪಾದಿಸುವ ಸ್ಪಿಕ್ ಕಂಪೆನಿ ಕೂಡ ಬಂದ್ ಆಗಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ರಸಗೊಬ್ಬರ ಕಂಪೆನಿಗಳಿಗೆ ಹಂತಹಂತವಾಗಿ ಸಬ್ಸಿಡಿ ಕೊಡುವುದನ್ನು ಕಡಿತ ಮಾಡುತ್ತದೆ. ವರ್ಷದಿಂದ ವರ್ಷಕ್ಕೆ ರಸಗೊಬ್ಬರ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ರೈತರು ಮುಂದೆ ಆತಂಕದ ದಿನಗಳನ್ನು ಎದುರು ನೋಡಬೇಕಾಗಿದೆ.

ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡು ಮುಂದೆ ಬರುವ ಈ ಸಮಸ್ಯೆಗಳಿಂದ ಹೊರಬರಬೇಕಾದರೆ ರೈತರು ಪ್ರಜ್ಞಾವಂತಿಕೆ ಮೆರೆದು ಸಾವಯವ ಕೃಷಿಯತ್ತ ಒಲವು ತೋರುವುದೊಂದೇ ದಾರಿ.

ಇದಕ್ಕೆ ರೈತರು ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮೊದಲಿಗೆ ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ, ತಮ್ಮ ಜಮೀನಿನಲ್ಲೆೀ ಸಿಗುವ ಸಾಕಷ್ಟು ಸಾವಯವ ಪದಾರ್ಥಗಳಾದ ಸಸ್ಯ ಹಾಗೂ ಬೆಳೆಗಳ ತ್ಯಾಜ್ಯ ವಸ್ತುಗಳು, ಪ್ರಾಣಿ ಮೂಲದ ವಸ್ತುಗಳನ್ನು ಜೋಪಾನ ಮಾಡಿ ಸದ್ಭಳಕೆ ಮಾಡಬೇಕು.
 
ಸಾವಯವ ಕೃಷಿಯಲ್ಲಿ ಬಳಸುವ ಕಾಂಪೋಸ್ಟನ್ನು ತಯಾರಿಸಲು ತೋಟ, ಹೊಲಗದ್ದೆಗಳಲ್ಲಿ ಲಭ್ಯವಿರುವ ಸಾವಯವ ವಸ್ತುಗಳ ಸಂಗ್ರಹಣೆ ಅತಿ ಮುಖ್ಯ.  ಹಾಗೆಯೇ ಇದನ್ನೆಲ್ಲಾ ಬಳಸಿಕೊಂಡು ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಸಲು ಮುಂದಾಗಬೇಕು.

ಈಗ ಬಹುತೇಕ ರೈತರು ತೋಟಗಳಲ್ಲಿ ಜಾನುವಾರುಗಳಿಂದ ದೊರೆಯುವ ಸಗಣಿ, ಗಂಜಲ ಇತ್ಯಾದಿ ಎಲ್ಲವನ್ನು ಒಂದು ಗುಂಡಿಯಲ್ಲಿ ಶೇಖರಿಸಿಡುತ್ತಾರೆ. ಇದು ಬಿಸಿಲಿನಲ್ಲಿ ಒಣಗಿ, ಮಳೆ ಬಂದಾಗ ನೀರಿನೊಂದಿಗೆ ಸೇರುವುದರಿಂದ ಸಾರ ನಷ್ಟವಾಗುತ್ತದೆ. 

ಇನ್ನು ತೋಟಗಳಲ್ಲಿ ಎಲ್ಲೆಲ್ಲೊ ಕೃಷಿ ತಾಜ್ಯ ವಸ್ತುಗಳು ಹಾಗೂ ಕಾಫಿ ತೋಟಗಳಲ್ಲಿ ಮರಕಸಿಯಿಂದ ಟನ್‌ಗಟ್ಟಲೆ ಹಸಿರೆಲೆ ದೊರೆಯುತ್ತದೆ. ದನ್ನು ವ್ಯರ್ಥ ಮಾಡುತ್ತಾರೆ. ಕಾಫಿ ಸಿಪ್ಪೆಯನ್ನು ರಸ್ತೆ ಬದಿಯಲ್ಲಿ ಬಿಸಾಡುತ್ತಾರೆ. ಈ ಎಲ್ಲಾ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡದೆ ಕಸವೆಂದು ಪರಿಗಣಿಸುತ್ತಾರೆ.

ಆ ಮನೋಭಾವ ಬಿಡಬೇಕು. ಕಸದಿಂದ ರಸವನ್ನು ಕಾಣಬೇಕು. ಇದೆಲ್ಲವನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಕಾಂಪೋಸ್ಟ್ ಮಾಡಿದಾಗ ಅತ್ಯುತ್ತಮ ಸಾವಯವ ಗೊಬ್ಬರವಾಗುತ್ತದೆ.

ಸಾಮಾನ್ಯವಾಗಿ ರೈತರು ಇದಕ್ಕೆ ಅನುಸರಿಸುವ ಪದ್ಧತಿಯೆಂದರೆ ಮನಸ್ಸಿಗೆ ಬಂದಂತೆ ಗುಂಡಿಗಳನ್ನು ತೋಡಿ ಅದರೊಳಗೆ ಕೊಟ್ಟಿಗೆ ಗೊಬ್ಬರದಿಂದ ಹಿಡಿದು ಪರಿಸರದಲ್ಲಿ ದೊರೆಯುವ ಕಳೆ, ಕಸ, ಕಡ್ಡಿ, ಬೂದಿ, ಪ್ರಾಣಿಮೂಲ ಸಾವಯವ ಪದಾರ್ಥಗಳು, ಕಾಫಿ ಸಿಪ್ಪೆ ಇವನ್ನೆಲ್ಲಾ ತುಂಬಿಡುವುದು. ಇದರಲ್ಲಿ ಯಾವುದೇ ತೇವಾಂಶ ಇರುವುದಿಲ್ಲ.  ಆದುದರಿಂದ ಇವೆಲ್ಲಾ ಹೆಚ್ಚಿನ ಶಾಖಕ್ಕೆ ತುತ್ತಾಗಿ ಅಲ್ಲಿರುವ ಜೀವಾಣುಗಳೆಲ್ಲಾ ಸತ್ತು ಗಸೆಯಾಗುತ್ತದೆ, ಅರ್ಧಂಬರ್ಧ ಕೊಳೆಯುತ್ತದೆ.

ಇಂತಹ ಗೊಬ್ಬರವನ್ನು ಬೆಳೆಗೆ ಉಪಯೋಗಿಸಿದರೆ ಬಹಳ ಹಾನಿಕಾರ. ಅಂದರೆ ಸಾರಜನಕದ ಕೊರತೆ, ಭಾರಿ ಲೋಹಗಳ ನಂಜಾಗುವಿಕೆ ಇತ್ಯಾದಿ. ಇದರಿಂದ ಇಳುವರಿ ಕಡಿಮೆಯಾಗುತ್ತದೆ.

ಆದುದರಿಂದ ರೈತರು ತಮ್ಮ ಹೊಲಗದ್ದೆಗಳಲ್ಲಿ ಕೃಷಿ ತಜ್ಞ, ವಿಜ್ಞಾನಿಗಳ ಸಲಹೆ ಪಡೆದು ವೈಜ್ಞಾನಿಕವಾಗಿ ಕಾಂಪೊಸ್ಟ್ ತಯಾರಿಸಿಕೊಳ್ಳಬೇಕು.  ಹಾಗೆಯೇ ಕಸವನ್ನು ಅಸಡ್ಡೆ ಮಾಡುವ ಅಭ್ಯಾಸ ಹೋಗಬೇಕು.  ಭೂಮಿಯೇ ತಮ್ಮ ಸರ್ವಸ್ವ, ತಾವು ಕೂಡಿಟ್ಟ ಗೊಬ್ಬರವೇ ಹಣವೆಂಬ ಭಾವನೆ ಮೂಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT