ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಕೊರತೆ: ಅಡಿಕೆ ಫಲಗುತ್ತಿಗೆ

Last Updated 29 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೃಷಿ ಕಾರ್ಮಿಕರ ಕೊರತೆಯಂತೂ ಈಗ ಹೇಳತೀರದು. ಇದರ ಪರಿಣಾಮ ಅಡಿಕೆ ತೋಟದಲ್ಲಿ ಎಲ್ಲೆಲ್ಲೂ ಫಲಗುತ್ತಿಗೆ. ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬದಲಾವಣೆ ಮಾಡಿ ಫಲಗುತ್ತಿಗೆ ವ್ಯವಹಾರವು ಅಡಿಕೆ ತೋಟದೊಳಗೆ ನುಸುಳಿಬಿಟ್ಟಿದೆ. ಇದರಿಂದ ಗುತ್ತಿಗೆದಾರರಿಗೇನೋ ಸಂಭ್ರಮ, ಆದರೆ ಕೃಷಿಕರಿಗೆ ಸಂಕಟ, ನಷ್ಟ.

ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪೇಟೆ - ಪಟ್ಟಣ ಸೇರುತ್ತಿದ್ದಾರೆ. ಹೊಲ- ಗದ್ದೆ ನೋಡಿಕೊಳ್ಳಲು ಅವರೊಲ್ಲರು. ಕೃಷಿಯಲ್ಲಿ ಅವರಿಗಿಲ್ಲ ಆಸಕ್ತಿ. ಏನಿದ್ದರೂ ಪಟ್ಟಣಗಳ ಉದ್ಯೋಗದತ್ತಲೇ ಅವರ ಚಿತ್ತ. ಇತ್ತ ಮಕ್ಕಳೂ ಇಲ್ಲ, ಅತ್ತ ಕಾರ್ಮಿಕರೂ ಇಲ್ಲ. ಈ ಕಾರಣದಿಂದಲೇ ಅನಿವಾರ್ಯವಾಗಿ ರೈತರು ಫಲಗುತ್ತಿಗೆಗೆ ಶರಣಾಗಿದ್ದಾರೆ. ಇನ್ನು ಕೆಲವು ಯುವಕರು ತಮ್ಮ ಭಾಗದ ಪಾಲು ಪಡೆದು ದೂರದ ನಗರಗಳಲ್ಲಿ ನೌಕರಿ ಮಾಡುತ್ತ ಹಳ್ಳಿಯಲ್ಲಿರುವ ಅಡಿಕೆ ತೋಟವನ್ನು ಫಲಗುತ್ತಿಗೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ತೋಟ ಮಾತ್ರ ಗುತ್ತಿಗೆದಾರರ ಪಾಲು.

ನಷ್ಟ- ಸಂಕಷ್ಟ: ಮೂರು - ನಾಲ್ಕು ಕೊನೆಗೌಡರು ಅಡಿಕೆ ಮರವನ್ನೇರಿ ಒಂದೆರೆಡು ದಿನದಲ್ಲಿಯೇ ಅಡಿಕೆಕೊಯ್ದು ಮುಗಿಸುತ್ತಾರೆ. ತೂಕದ ಆಧಾರದ ಮೇಲೆ ದರದ ನಿರ್ಧಾರ. ಗುತ್ತಿಗೆದಾರರು ಅಡಿಕೆ ಕೊನೆಗಳನ್ನು ಲಾರಿಯ ಮೇಲೆ ಹೊತ್ತಿಕೊಂಡು ಹೋದ ತಕ್ಷಣ ರೈತರಿಗೆ ನಿಟ್ಟುಸಿರು. ಹೀಗೆ ತಿಂಗಳು ಗಟ್ಟಲೆ ಅಡಿಕೆ ಕೊಯ್ಯುವುದು, ಸುಲಿಯುವುದು, ಬೇಯಿಸುವುದು, ಒಣಗಿಸುವುದು, ಬಣ್ಣಹಾಕುವುದು ಮುಂತಾದ ಕೃಷಿಯ ಸಂಭ್ರಮವೆಲ್ಲಾ ಒಂದೆರಡು ದಿನದಲ್ಲಿಯೇ ಫಲಗುತ್ತಿಗೆ ನುಂಗಿಬಿಡುತ್ತಿದೆ.

ಅವಸರದಲ್ಲಿ ಕೆಲಸ ಮುಗಿಸುವ ಉದ್ದೇಶ. ಇದರಿಂದ ಕೊನೆಗೌಡ ಕಾಳಜಿಯಿಂದ ಕೊನೆ ಕೊಯ್ಯುವುದಿಲ್ಲ. ಮರಕ್ಕೆ ಹೊಡೆತ ಬೀಳುವ ಸಾಧ್ಯತೆ. ಸಸಿಯೂ ಮುರಿದುಬೀಳುತ್ತದೆ. ಇದರಿಂದಾಗಿ ರೈತನಿಗೆ ಅಚ್ಚುಕಟ್ಟಾಗಿ ಕೆಲಸ ಮಾಡಲು ಆಗುವುದಿಲ್ಲ. ರೈತನಿಗೆ ಆ ಕ್ಷಣದಲ್ಲಿ ಒಂದಿಷ್ಟು ಹಣ ದೊರೆತರೂ ತನ್ನ ತೋಟದ ಅಡಿಕೆಗೆ ಸೂಕ್ತವಾದ ಬೆಲೆ ಸಿಕ್ಕಿಲ್ಲವೇನೋ ಎಂಬ ಕೊರಗು. ರೈತನು ಸೊಸೈಟಿಯ ಮೂಲಕ ವ್ಯವಹಾರ ಮಾಡುವ ಪದ್ಧತಿಯಲ್ಲಿ ಬದಲಾವಣೆಯಾಗಿ ಆರ್ಥಿಕ ಹೊಡೆತ ಬೇರೆ. ಈ ರೀತಿ ಕಾರ್ಮಿಕರ ಕೊರತೆಯಿಂದ ರೈತರು ಅನಿವಾರ್ಯವಾಗಿ ಫಲಗುತ್ತಿಗೆ ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿರುವುದು ವಿಷಾದನೀಯ.
-ಗುರುನಾಥ ಹುಕ್ಲಕೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT