ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿ ನಡೆ ಸ್ವಾವಲಂಬನೆ ಕಡೆ

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ನಮ್ ಸುತ್ತ ಸಿಗೋ ಪ್ರಾಕೃತಿಕ ಸಂಪತ್ತನ್ನು ಧಾರಾಳ್‌ವಾಗಿ ಬಳಸ್ತಿರೋ ನಾವೇ ಈಗ ಅತೀ ಶ್ರೀಮಂತರು' ಅನ್ನೋದು ಯಶೋಧಾ-ಚಂದ್ರಪ್ರಕಾಶ್ ದಂಪತಿಯ ಒಕ್ಕೊರಲಿನ ನುಡಿ.  ಮಾರುಕಟ್ಟೆಯ ಮಸ್ತುಗಳ ಮೋಡಿಗೆ ಮರುಳಾಗದೆ ಕಳೆದ ಮೂರು ವರ್ಷಗಳಿಂದ ನಿತ್ಯ ಬಳಕೆಯ ಬಹುತೇಕ ವಸ್ತುಗಳನ್ನು ತಾವೇ ತಯಾರಿಸಿ ಬಳಸುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಸ್ವಾವಲಂಬನೆಯತ್ತ ದೃಢವಾದ ಹೆಜ್ಜೆಗಳನ್ನಿಡುತ್ತಿದ್ದಾರೆ.

ಮನೆಗೆ ಬರುವ ಪರಿಚಯಸ್ಥರಿಗೆ ಕಾಫಿ, ಚಹ ಸೇವನೆಯ ಅಭ್ಯಾಸವಿಲ್ಲದಿದ್ದರೂ ಯಶೋಧಾರಿಂದ ಬಲವಂತದ ಚಹದ ಆತಿಥ್ಯ. ಒಲ್ಲದ ಮನಸ್ಸಿನಿಂದ ಕುಡಿದವರು ಮೊದಲ ಗುಟುಕಿಗೆ ಉದ್ಗರಿಸುವುದು `ವಾಹ್'.  ಕಾರಣ ಇವರದು ಅಸ್ಸಾಂನ ಎಲೆಗಳ ಚಹವಲ್ಲ. ಬದಲಿಗೆ ಸ್ಥಳೀಯವಾಗಿ ದೊರೆಯುವ ಆರೋಗ್ಯ ವೃದ್ಧಿಸುವ ಮಸಾಲಾ ಟೀ, ಹರ್ಬಲ್ ಟೀ ಇತ್ಯಾದಿಯದು.  ದಿನನಿತ್ಯದ ಅಡುಗೆಯ ತರಕಾರಿಗೆ ಯಶೋಧಾ ಹೋಗುವುದು ಹಿತ್ತಲಿಗೆ ಇಲ್ಲವೆ ತೋಟಕ್ಕೆ. ಇದಾಗದಿದ್ದರೂ ಚಿಂತೆಯಿಲ್ಲ.  

ದಿಕ್ಕು ತೋರಿದ ಬಾನುಲಿ
ತುಮಕೂರು ಜಿಲ್ಲೆ ತಿಪಟೂರು ಬಳಿಯ `ಬಿಳಿಗೆರೆ ಪಾಳ್ಯ'ದ ಈ ದಂಪತಿ ಮೊದಲು ಮಾಡುತ್ತಿದ್ದುದು ಎಲ್ಲರಂತೆ ರಾಸಾಯನಿಕ ಕೃಷಿ. ವರ್ಷದಿಂದ ವರ್ಷಕ್ಕೆ ಏರುತ್ತಿದ್ದ ಕೃಷಿ ವೆಚ್ಚದಿಂದ ಕಂಗಾಲಾಗಿದ್ದ ಇವರಿಗೆ ಆಪದ್ಬಾಂಧವನಂತೆ ಬಂದಿದ್ದೇ ರೇಡಿಯೊ. ರೇಡಿಯೊದ ಪ್ರಭಾವ ಎಷ್ಟು ಗಾಢವಾಗಿದೆಯೆಂದರೆ ತೋಟದಲ್ಲೂ ಹಾಗೂ ಮನೆಯ ಪ್ರತಿ ಮೂಲೆಯಲ್ಲೂ ರೇಡಿಯೊ ಕೇಳುವಂತೆ ಆ್ಯಂಟೆನಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮೈಸೂರು ಆಕಾಶವಾಣಿಯ ಕೇಶವಮೂರ್ತಿ, ಹಾಸನದ ವಿಜಯ್ ಅಂಗಡಿ, ತಿಪಟೂರಿನ ಬೈಫ್ ಹಾಗೂ ನಂಜುಡಪ್ಪ ಹೀಗೆ ಎಲ್ಲರಿಂದಲೂ ಪ್ರೇರಣೆ. ಪ್ರೇರಣೆಯಿಂದ ಪ್ರಾರಂಭವಾದದ್ದೇ ತಿರುಗಾಟ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹೋಗಿ ತರಬೇತಿ ಪಡೆದರು ಚಂದ್ರಪ್ರಕಾಶ್. ಹೀಗೆ ಮಾಹಿತಿ ತಿಳಿಯುವ ಸದವಕಾಶದಿಂದ ಇವರಿಗೆ ಕಂಡದ್ದು ಕೃಷಿಯಲ್ಲಿ ತಾನು ಕ್ರಮಿಸಬೇಕಾದ ಹಾದಿಯ ಸ್ಪಷ್ಟ ಚಿತ್ರಣ. ಪರಿಣಾಮ 2008ರಿಂದ ಸಂಪೂರ್ಣ ಸಾವಯವದತ್ತ ಹೊರಳಿದರು.

ಚಂದ್ರಪ್ರಕಾಶ್ ಹೋದಲ್ಲೆಲ್ಲಾ ಮಾಹಿತಿಯ ಭಂಡಾರವನ್ನೇ ಹೆಕ್ಕಿ ತರುತ್ತಿದ್ದರು. ಅದನ್ನು ಕಾರ್ಯರೂಪಕ್ಕಿಳಿಸುತ್ತಿದ್ದವರು ಯಶೋಧಾ. ಆಗ ಮೂಡಿದ್ದೇ ಸ್ವಾವಲಂಬನೆಯ ಪುಟ್ಟ ಪುಟ್ಟ ಹೆಜ್ಜೆಗಳು.  ಮನೆಯೇ ಪ್ರಯೋಗ ಶಾಲೆಯಾಯಿತು. ಹಲ್ಲುಪುಡಿ, ಶ್ಯಾಂಪೂ, ಸ್ನಾನದ ಸಾಬೂನು, ಕುಡಿಯಲು ಬಗೆ ಬಗೆಯ ಪೇಯಗಳು, ಸ್ನಾನದ ಚೂರ್ಣ, ಮಗುವಿಗೆ ಆರೋಗ್ಯವರ್ಧಕ ಲೇಹ್ಯ, ಚ್ಯವನ್‌ಪ್ರಾಶ್, ಗುಲ್ಕಂದ್ ಹೀಗೆ ಹದಿಮೂರು ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರಲ್ಲೂ ಸ್ಥಳೀಯವಾಗಿ ದೊರೆಯುವ ವಸ್ತುಗಳಿಗೆ ಆದ್ಯತೆ. `ಚೂರ್ಣಗಳಿಗೆ ಬಳಸುವ ಕೆಲವು ಶುದ್ಧ ಪುಡಿಗಳು ಇಲ್ಲಿ ಸಿಗಲ್ಲ. ಅವನ್ನೆಲ್ಲಾ ಹಾಸನದ ಬಳಿಯ ನನ್ನ ತಾಯಿಯ ಮನೆಯಿಂದ ತರಿಸಿಕೊಳ್ತಿವಿ. ಬದಲಿಗೆ ಅವ್ರಿಗೂ ಚೂರ್ಣ ತಯಾರಿಸಿ ಕೊಡ್ತೀವಿ' ಅಂದರು ಯಶೋಧಾ. ಹೀಗೆ ಯಾರಿಂದಲಾದರೂ ಕಚ್ಚಾ ಸಾಮಗ್ರಿಗಳನ್ನು ಪಡಿದಿದ್ದರೆ, ಅದಕ್ಕೆ ಬದಲಾಗಿ ತಯಾರಾದ ಉತ್ಪನ್ನವನ್ನು ಸ್ವಲ್ಪ ನೀಡುವುದು ಈ ದಂಪತಿಯ ವಾಡಿಕೆ.    
   
ಎಲೆ-ಹೂವಿಗೂ ತರಕಾರಿ ಸ್ಥಾನ
ಇವರು ತರಕಾರಿಯನ್ನು ದುಡ್ಡಿಗೆ ಕೊಳ್ಳಲ್ಲ. ತೋಟದಲ್ಲಿ ಮನೆಯ ಸುತ್ತ ದೊರೆಯುವ ಎಲೆ, ಹೂವುಗಳೇ ಇವರ ಬಹುಪಾಲು ತರಕಾರಿಗಳಾಗಿವೆ. ದಿನಕ್ಕೊಂದು ಹೊಸರುಚಿಯ ವೈವಿಧ್ಯತೆ.  ಇವರ ಪಾಕ ವಿಧಾನವನ್ನು ಕೇಳಿದವರಲ್ಲಿ ವ್ಯಂಗ್ಯವಾಡಿದ್ದೇ ಹೆಚ್ಚು ಮಂದಿ. `ನಮ್ಮಂಥವ್ರ ಚ್ಯವನ್‌ಪ್ರಾಶ್ ದುಡ್ಡಿಗ್ ತಗಂಡ್ ತಿನ್ನಕ್ಕಾಗುತ್ತಾ? ಕೈಗೆಟುಕದ್ ವಸ್ತುಗಳ್ನ ಕಡ್‌ಮೆ ಮಾಡಿ ಸುತ್‌ಮುತ್ತ ಸಿಗೋದ್ನ ಹೆಚ್ಗೆ ಬಳಸ್ತೀನಿ. ಇನ್ನು ನಾವು ತಯಾರಿಸೋ ಗುಲ್ಕಂದ್‌ಗೆ ಗುಲಾಬಿ ಎಸಳೇ ಆಗಬೇಕೆಂದಿಲ್ಲ. ಪೂಜೆಗೆ ಬಳಸುವ ದಾಸವಾಳವೇ ಸಾಕು. ನನ್ ಶ್ರೀಮತಿಗೆ ಇದ್ರಲ್ಲೆಲ್ಲಾ ಹೆಚ್ ಆಸಕ್ತಿ. ಮನಸ್ಸಿಗೆ ಯಾವ್‌ದಾದ್ರೂ ವಿಚಾರ ಹೊಳುದ್ರೆ ಮಾಡೋತನಕ ಸಮಾಧಾನ ಇಲ್ಲ ಇವಳ್ಗೆ. ಯಾವಾಗ್ಲೂ ನನ್‌ಗಿಂತ ಎರಡ್ ಹೆಜ್ಜೆ ಮುಂದು” ಅನ್ನೋದು ಮಡದಿಯ ಬಗ್ಗೆ ಚಂದ್ರಪ್ರಕಾಶ್‌ರ ಮೆಚ್ಚುಗೆಯ ಮಾತುಗಳು. ಈ ರೀತಿಯ ಆಸಕ್ತಿ ಯಶೋಧಾರಿಗೆ ಅವರ ತಾಯಿಯಿಂದ ಬಂದ ಬಳುವಳಿ.

ಇವರಿಗೆ ಆರು ಎಕರೆ ಕೃಷಿ ಭೂಮಿಯಿದೆ. ಇದರಲ್ಲಿ ಅಡಿಕೆ, ತೆಂಗು, ಜೊತೆಗೆ ಒಂದು ಎಕರೆಯಲ್ಲಿ ಮನೆಬಳಕೆಗಾಗುವಷ್ಟು ಬತ್ತ, ಆಹಾರಧಾನ್ಯ ಬೆಳೆಯುತ್ತಾರೆ. ಎಲ್ಲವೂ ವಿಷಮುಕ್ತ. ನೀರಿಗಾಗಿ ಕೊಳವೆಬಾವಿಯ ಅವಲಂಬನೆ. ಇವರ ಏಳು ತಿಂಗಳ ಮಗಳಿಗೆ ತಿನಿಸುವ ಲೇಹ್ಯದ ಪ್ರಭಾವದಿಂದ ಒಮ್ಮೆಯೂ ಅನಾರೋಗ್ಯ ಕಾಡಿಲ್ಲವಂತೆ. ಸಂಪರ್ಕಕ್ಕೆ- 8453842653.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT