ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿಯಲ್ಲೂ ಬೆಳೆಯಿರಿ ಭತ್ತ...

Last Updated 28 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಟೊಮೊಟೊ, ಬದನೆ ಸೇರಿದಂತೆ ಇತರೆ ಬೆಳೆಗಳನ್ನು ನರ್ಸರಿಗಳಲ್ಲಿ ಬೆಳೆಸುವುದು ಎಲ್ಲರಿಗೂ ಗೊತ್ತು. ಆದರೆ ಭತ್ತವನ್ನೂ ನರ್ಸರಿಯಲ್ಲಿ ಬೆಳೆಸಬಹುದು ಎಂಬುದು ಗೊತ್ತೇ?

ಇಂಥ ಒಂದು ಅಚ್ಚರಿಯ ಸಾಧನೆ ಮಾಡಿ ತೋರಿಸಿದ್ದಾರೆ ಮಂಡ್ಯ ತಾಲ್ಲೂಕಿನ ವಿ.ಸಿ.ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು. ಇದನ್ನೀಗ ರೈತರಿಗೆ ಮುಟ್ಟಿಸಲು ಮುಂದಾಗಿದ್ದಾರವರು.

ಕೂಲಿಕಾರ್ಮಿಕರ ಸಮಸ್ಯೆ, ಹೆಚ್ಚುತ್ತಿರುವ ಬೇಸಾಯದ ಖರ್ಚುಗಳಿಂದ ಸಂಕಷ್ಟಗಳಿಗೆ ಸಿಲುಕಿಕೊಂಡಿರುವ ಭತ್ತ ಬೆಳೆಯುವ ರೈತರಿಗೆ ‘ಟ್ರೇ ನರ್ಸರಿ ಪದ್ಧತಿ’ ಹೊಸ ಭರವಸೆ.

ಈ ವಿನೂತನ ಪದ್ಧತಿ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
ಒಂದು ಅಡಿ ಅಗಲ, ಎರಡು ಅಡಿ ಉದ್ದ ಹಾಗೂ ಎರಡು ಸೆಂ.ಮೀ. ಆಳವಿರುವ ಪ್ಲಾಸ್ಟಿಕ್ ಟ್ರೇ (ತಟ್ಟೆ) ತೆಗೆದುಕೊಳ್ಳಿ. ಅದರಲ್ಲಿ 1.4 ಕೆಜಿ ಗೊಬ್ಬರದ ಮಿಶ್ರಣ ತುಂಬಿ. ನಂತರ, ನೀರು ಹಾಕಿ ಸಮತಟ್ಟು ಮಾಡಿ. ಪ್ರತಿ ಟ್ರೇಯಲ್ಲಿ ಕುರು ಮೊಳಕೆ ಹೊಡೆದ 150 ಗ್ರಾಂ ಭತ್ತದ ಬಿತ್ತನೆ ಜೀಜಗಳನ್ನು ಸಮನಾಗಿ ಹರಡಿ. ಅಷ್ಟೇ ಪ್ರಮಾಣದಲ್ಲಿ ಗೊಬ್ಬರದ ಮಿಶ್ರಣವನ್ನು ಬೀಜದ ಮೇಲೆ ತೆಳುವಾಗಿ ಹರಡಿ, ಬೀಜಗಳನ್ನು ಮುಚ್ಚಿ. ಮತ್ತೆ ಮಿತವಾಗಿ ನೀರು ಹಾಕಿ, ನಂತರ ಕಬ್ಬಿನ ತರಗಿನ ಹೊದಿಕೆ ಹಾಕಿ. ಆರು ದಿನಗಳ ಬಳಿಕ ಕಬ್ಬಿನ ತರಗು ತೆಗೆಯಿರಿ. ಬೀಜ ಬಿತ್ತಿದ 15 ದಿನಗಳಲ್ಲಿ ಭತ್ತದ ಪೈರುಗಳು ನಾಟಿಗೆ ಸಿದ್ಧವಾಗುತ್ತದೆ !

ಟ್ರೇಯಲ್ಲಿ ಏನಿರಬೇಕು?
‘ಗೊಬ್ಬರದ ಮಿಶ್ರಣದಲ್ಲಿ ಎರೆಗೊಬ್ಬರ, ಫ್ರೆಶ್ ಮಡ್, ಮಣ್ಣು, ಜೊಳ್ಳು ಮಿಶ್ರಣ ಮಾಡಿ ಟ್ರೇನಲ್ಲಿ ತುಂಬಬೇಕು. ಇದರಿಂದ ಭತ್ತದ ಪೈರುಗಳ ಬೆಳವಣಿಗೆ ಸದೃಢವಾಗಿರುತ್ತದೆ. ಅಲ್ಲದೆ, ಭತ್ತದ ಪೈರುಗಳ ಕೇಕ್ ಕೂಡ ಅಷ್ಟೇ ಉತ್ಕೃಷ್ಟವಾಗಿ ಬರುತ್ತದೆ. ತೇವಾಂಶ ನೋಡಿ ಹದವಾಗಿ ನೀರು ನೀಡಬೇಕು. ಕಬ್ಬಿನ ಸೋಗು ಮುಚ್ಚುವುದರಿಂದ ತೇವಾಂಶ ಕಾಯ್ದುಕೊಳ್ಳಲು ಅನುಕೂಲವಿದೆ’ ಎನ್ನುತ್ತಾರೆ ಮಂಡ್ಯ ತಾಲ್ಲೂಕು ವಿ.ಸಿ.ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರ ಭತ್ತ ವಿಭಾಗದ (ಕೀಟಶಾಸ್ತ್ರ) ಹಿರಿಯ ವಿಜ್ಞಾನಿ ಡಾ. ಡಿ.ಕೆ.ಸಿದ್ದೇಗೌಡ.

‘ಈ ಮಾದರಿಯಲ್ಲಿ ಭತ್ತದ ಬೀಜ ಬಿತ್ತುವುದರಿಂದ ಭೂಮಿ ಸಿದ್ಧತೆ ಮಾಡಿಕೊಂಡು, ಸಸಿಮಡಿ ತಯಾರಿಸುವ ಅವಶ್ಯಕತೆಯೂ ಕಾಣಿಸುವುದಿಲ್ಲ. ಮನೆಯಂಗಳದಲ್ಲೇ ಭತ್ತದ ಪೈರುಗಳನ್ನು ಬೆಳೆಯಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ, ಬೇರುಗಂಟು, ಜಂತುಹುಳು ರೋಗದ ಬಾಧೆಗಳನ್ನು ಆರಂಭದಲ್ಲೇ ತಪ್ಪಿಸಬಹುದು’ಎನ್ನುತ್ತಾರೆ ಅವರು.

‘ಟ್ರೇ ನರ್ಸರಿ ಪದ್ಧತಿ’ಯಲ್ಲಿ ಒಂದು ಎಕರೆ ಬಿತ್ತನೆಗೆ 80 ಪ್ಲಾಸ್ಟಿಕ್ ಟ್ರೇಗಳು ಬೇಕು. ರೈತರು, ಸಾಂಪ್ರದಾಯಿಕ ಪದ್ಧತಿಯಲ್ಲಿ ಪ್ರತಿ ಎಕರೆಗೆ 20 ರಿಂದ 25 ಕೆ.ಜಿ. ಬೀಜ ಬಳಸಿದರೆ, ಈ ಪದ್ಧತಿಯಲ್ಲಿ 12 ರಿಂದ13 ಕೆ.ಜಿ. ಬೀಜ ಸಾಕು. ಶೇ 40 ರಿಂದ 45ರಷ್ಟು ಭತ್ತದ ಬೀಜವೂ ಉಳಿತಾಯವಾಗಲಿದೆ. ಉತ್ತಮ ಇಳುವರಿಯೂ ಸಿಗಲಿದೆ. ಈ ಪದ್ಧತಿ ಅನುಸರಣೆಯಿಂದ ಬೀಜ, ನೀರು, ಹಣ, ಶ್ರಮ ಉಳಿತಾಯವಾಗಲಿದೆ. ಒಟ್ಟಾರೆ, ಹಲವು ಲಾಭಗಳಿವೆ ಎನ್ನುವುದು ಸಿದ್ದೇಗೌಡರ ಅಭಿಮತ.

‘ಟ್ರೇ ನರ್ಸರಿ ಪದ್ಧತಿ’ಯಲ್ಲಿ ನಾಟಿಗೆ ಸಿದ್ಧವಾದ ಭತ್ತದ ಪೈರುಗಳನ್ನು ಯಂತ್ರದ ಮೂಲಕವೂ ನಾಟಿ ಮಾಡಬಹುದು. ಯಂತ್ರದ ಮೂಲಕ ಭತ್ತದ ನಾಟಿ ಮಾಡಲು ರೈತರು, ಪ್ರಸ್ತುತ ಚಾಪೆಮಡಿ (ಡಾಪೋಗ್) ಪದ್ಧತಿಯಲ್ಲಿ ತಯಾರಿಸಿಕೊಳ್ಳುತ್ತಾರೆ.

‘ಚಾಪೆಮಡಿ’ ಪದ್ಧತಿಯಲ್ಲಿ ಭತ್ತದ ಕೇಕ್‌ಗಳ ಅಳತೆಯು ನಾಟಿ ಮಾಡುವ ಯಂತ್ರಗಳಿಗನುಸಾರ ಇರಬೇಕು. ಚಾಪೆಗಳನ್ನು ಕತ್ತರಿಸುವಾಗ ಪ್ಲಾಸ್ಟಿಕ್ ಹಾಳೆ ಹರಿಯದಂತೆ, ರಂಧ್ರಗಳಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್ ಹಾಳೆ ಸುಕ್ಕು ಇರದಂತೆ ಹಾಗೂ ಹಾಳೆಯಲ್ಲಿ ಮಣ್ಣಿನ ಎತ್ತರ 3/4 ಇಂಚು ಮೀರದಂತೆ ಎಚ್ಚರ ವಹಿಸಬೇಕಿದೆ. ಹೆಚ್ಚಿನ ಶ್ರಮವೂ ಇದೆ. ಈ ಎಲ್ಲ ಸಮಸ್ಯೆಗಳಿಗೆ ಸುಧಾರಿತ ‘ಟ್ರೇ ನರ್ಸರಿ ಪದ್ಧತಿ’ಯಲ್ಲಿ ಪರಿಹಾರ ಲಭಿಸಿದೆ. ‘ಸರ್ಕಾರವೀಗ, ಭತ್ತದ ನಾಟಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೆ. ಈ ಹಣದಲ್ಲೇ ಟ್ರೇ ಕೊಡಿಸಲು ಮುಂದಾದರೇ, ಈ ಪದ್ಧತಿಗೆ ಹೆಚ್ಚಿನ ಉತ್ತೇಜನ ಸಿಗಲಿದ್ದು, ರೈತರು ಅಳವಡಿಸಿ­­ಕೊಳ್ಳಲು ಮುಂದಾಗಬಹುದು’ ಎನ್ನುವುದು ಡಾ. ಡಿ.ಕೆ.ಸಿದ್ದೇಗೌಡ ಅವರ ಅನಿಸಿಕೆ.

ಪಾಶಾ್ಚತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಇಂಥದೊಂದು ಪದ್ಧತಿ ಸಾಮಾನ್ಯವಾಗಿದೆ. ಭಾರತದಲ್ಲೂ ನಿಧಾನವಾಗಿ ರೈತರು ಈ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಕೇರಳ, ತಮಿಳುನಾಡು, ಪಂಜಾಬ್ ರಾಜ್ಯಗಳಲ್ಲಿಯೂ ರೈತರು ಈ ಮಾದರಿ ಅನುಸರಣೆಗೆ ಮುಂದಾಗಿದ್ದಾರೆ. ಕರ್ನಾಟಕದಲ್ಲೂ ಭತ್ತದ ಬಿತ್ತನೆ ಸಮಯದಲ್ಲಿ ‘ಟ್ರೇ ನರ್ಸರಿ ಪದ್ಧತಿ’ ಅನ್ನು ಜನಪ್ರಿಯಗೊಳಿಸಬೇಕು ಎಂಬ ಉದ್ದೇಶವನ್ನು ಇಲ್ಲಿನ ವಿಜ್ಞಾನಿಗಳು ಹೊಂದಿದ್ದಾರೆ.

ವಿವರಗಳಿಗೆ, ಡಾ. ಡಿ.ಕೆ.ಸಿದ್ದೇಗೌಡ (94496 87599) ಅಥವಾ ದೂ.ಸಂ. 08232-277008 ಅನ್ನು ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT