ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಕಂಡ ಅಗರ್‌

Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ನಮ್ಮಲ್ಲಿ ಅಗರ್ ಬೆಳೆ ಸಾಧ್ಯವೇ...? ಇಂಥದ್ದೊಂದು ಪ್ರಶ್ನೆ ನಮ್ಮ ಬೆಳೆಗಾರರನ್ನು ಬಹಳ ಕಾಡುತ್ತಿತ್ತು. ಆದರೆ ಇದಕ್ಕೆ ಸಕಾರಾತ್ಮಕ ಉತ್ತರ ದೊರೆತಿದೆ. ಈ ಬೆಳೆಯನ್ನು ನಮ್ಮ ಮಣ್ಣಿನಲ್ಲೂ ಬೆಳೆಯಬಹುದಾದ ಸಾಧ್ಯತೆಯನ್ನು ಶೃಂಗೇರಿಯ ವನದುರ್ಗಿ ಎಸ್ಟೇಟ್‌ ರುಜು ಮಾಡಿದೆ.

ಕಳೆದ ಜುಲೈನಲ್ಲಿ ಈ ಎಸ್ಟೇಟ್‌ನಲ್ಲಿ ಅಗರ್ ಮರಗಳಿಗೆ ಇನಾಕ್ಯುಲೇಶನ್ ಮಾಡಲಾಗಿತ್ತು. ಪ್ರಾಯೋಗಿಕವಾಗಿ ಕೆಲವು ಅಗರ್ ಮರಗಳಿಗೆ ಕೃತಕ ಶಿಲೀಂಧ್ರಗಳನ್ನು ಸಿರಿಂಜ್‌ಗಳ ಮೂಲಕ ಒಳ ಭಾಗಕ್ಕೆ ಹರಿಯಬಿಡಲಾಗಿತ್ತು. ಆದರೆ ಫಲಿತಾಂಶ ಪ್ರಶ್ನೆಯಾಗಿಯೇ ಉಳಿದಿತ್ತು. ಅಗರ್‌ ಬೆಳೆ ಆಕಾಂಕ್ಷಿಗಳೆಲ್ಲ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದರು. ಈಗ ಫಲಿತಾಂಶ ಸಿಕ್ಕಿದೆ. ಇನಾಕ್ಯುಲೇಷನ್‌ ಯಶಸ್ವಿಯಾಗಿದೆ. ಉತ್ತಮ ರೀತಿಯಲ್ಲಿ ಅಗರ್ ಬೆಳವಣಿಗೆಯಾಗುತ್ತಿದೆ ಎನ್ನುತ್ತಾರೆ ವನದುರ್ಗಿ ತೋಟದ ಮಲ್ಲಪ್ಪ ಹೆಗ್ಡೆ.

ಕರ್ನಾಟಕದ ಮಲೆನಾಡು ಭಾಗದ ಆರು ಜಿಲ್ಲೆಗಳ ಪ್ರಮುಖ ಬೆಳೆಗಳಾದ ಕಾಫಿ, ಅಡಿಕೆ, ತೆಂಗು, ರಬ್ಬರ್, ಕೊಕೊ ಬೆಳೆಗಳೊಟ್ಟಿಗೆ ಅಗರ್‌ವುಡ್‌ ಅನ್ನು ಮಿಶ್ರ ಬೆಳೆಯಾಗಿ ಈಗಾಗಲೇ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಕೃಷಿಕರು ಆಯ್ದುಕೊಂಡಿದ್ದಾರೆ. ಇವರಿಗೆಲ್ಲಾ ಆತಂಕವಿದ್ದದ್ದು ಇದರ ಯಶಸ್ಸಿನ ಬಗ್ಗೆ. ಈಗ ಅವರ ಆತಂಕ ದೂರವಾಗುವ ಕಾಲ ಬಂದಿದೆ.

ಅಗರ್ ಕೃಷಿಯ ಮೇಲುಸ್ತುವಾರಿ ವಹಿಸಿಕೊಂಡಿರುವ ‘ವನದುರ್ಗಿ ಅಗರ್‌ವುಡ್ ಇಂಡಿಯಾ’ ಸಂಸ್ಥೆ ಇತ್ತೀಚೆಗೆ ವನದುರ್ಗಿ ತೋಟದಲ್ಲಿ ಇನಾಕ್ಯುಲೇಶನ್ ಪ್ರಗತಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ, ಈಗಾಗಲೇ ಇನಾಕ್ಯುಲೇಶನ್‌ಗೆ ಒಳಪಡಿಸಿದ್ದ ಅಗರ್ ಮರಗಳ ಕಾಂಡದ ತೊಗಟೆ ಕೆತ್ತುವುದಲ್ಲದೆ ಕೆಲವು ಮರಗಳನ್ನು ಕೃಷಿಕರ ಸಮ್ಮುಖದಲ್ಲಿ ಕತ್ತರಿಸಿ ತೋರಿಸಿದೆ. ಈ ಮೂಲಕ ಬೆಳೆಗಾರರು  ನಿಟ್ಟುಸಿರು ಬಿಟ್ಟಿದ್ದಾರೆ.

ಕೇವಲ ಎಂಟು ತಿಂಗಳಲ್ಲೇ ರೆಸಿನಸ್‌ವುಡ್ ಬೆಳವಣಿಗೆ ಉತ್ತಮ ರೀತಿಯಲ್ಲಾಗಿದ್ದು, ಕಟಾವಿಗೆ ಇನ್ನೂ ಹತ್ತು ತಿಂಗಳ ಕಾಲಾವಕಾಶ ಇರುವುದರಿಂದ ಗುಣಮಟ್ಟದ ಅಗರ್ ಉತ್ಪಾದನೆ ಸಾಧ್ಯವಿದೆ ಎಂಬುದು ದೃಢಪಟ್ಟಂತಾಗಿದೆ.

ಅಗರ್ ಸಾಂದ್ರತೆಯನ್ನು ಪರಿಶೀಲಿಸಲೆಂದು ವಿದೇಶಿ ಅಗರ್ ತಜ್ಞರನ್ನು ಕರೆಸಲಾಗಿತ್ತು.  ಇನಾಕ್ಯುಲೇಶನ್ ಮಾಡಿದ ಅಗರ್ ಮರಗಳನ್ನು ಇನ್ನುಳಿದ ಮರಗಳಿಗೆ ಹೋಲಿಸಿದರೆ ಇದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸ್ವಲ್ಪ ನಿಸ್ತೇಜ ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ. ಆದರೂ ಇನ್ನೂ ಆರೋಗ್ಯದಿಂದಿವೆ. ತಜ್ಞರ ಪ್ರಕಾರ ಮರಗಳ ಆರೋಗ್ಯ ಹೆಚ್ಚಿದಷ್ಟೂ ದಿನ ಅಗರ್ ಉತ್ಪಾದನೆ ಮತ್ತು ಗುಣಮಟ್ಟವು ಉತ್ತಮಗೊಳ್ಳುತ್ತದೆ. ಇದರಿಂದ ಸಾಕಷ್ಟು ಪ್ರಮಾಣದ ಅಗರ್ ನಿರೀಕ್ಷಿಸಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ವನದುರ್ಗಿ ತೋಟದ ಮಾಲೀಕರಾದ  ಮಲ್ಲಪ್ಪ ಹೆಗ್ಡೆಯವರ ಪ್ರಕಾರ ಇನಾಕ್ಯುಲೇಶನ್ ಮಾಡಿದ ಮರಗಳಿಗೆ ಹೆಚ್ಚಿನ ಆರೈಕೆಯನ್ನೇನೂ ಮಾಡಿಲ್ಲ. ಅಗರ್‌ವುಡ್ ತಜ್ಞರು ಮರದ ಕಾಂಡಗಳನ್ನು ಪರೀಕ್ಷಿಸಿ ಥೈಲ್ಯಾಂಡ್ ಹಾಗೂ ಮಲೇಷಿಯಾಗಳಲ್ಲಿಯೂ ಇದೇ ಮಾದರಿಯಲ್ಲಿ ಇನಾಕ್ಯುಲೇಶನ್ ನಡೆಸಿದ್ದು, ಅಲ್ಲಿಯ ರೀತಿಯಲ್ಲಿಯೇ ಇಲ್ಲಿಯೂ ಶೇ85ರಷ್ಟು ಯಶಸ್ಸು ದೊರೆತಿದೆ.

ಮುಂದಿನ ದಿನಗಳಲ್ಲಿ ರೆಸಿನಸ್ಸ್ ಸಾಂದ್ರತೆಯು ಇನ್ನೂ ಹೆಚ್ಚಾಗಲಿದೆ. ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಇನಾಕ್ಯುಲೇಶನ್ ಮಾಡುವ, ಕಾಲ ಹವಾಮಾನದಂತಹ ಸಣ್ಣಪುಟ್ಟ ಬದಲಾವಣೆ ಮಾಡುವುದರ ಮೂಲಕ ಹೆಚ್ಚಿನ ಅಗರ್ ನಿರೀಕ್ಷಿಸಬಹುದು ಎಂಬುದು ಅವರ ಅಭಿಪ್ರಾಯ.

ಸಂಸ್ಥೆಯು ಇನ್ನೂ ಎರಡು ರೀತಿಯ ಇನಾಕ್ಯುಲೇಶನ್  ತಾಂತ್ರಿಕತೆ ಬಳಸುವ ಸಲುವಾಗಿ ಇತರೆ ವಿದೇಶಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈಗಾಗಲೇ ನಡೆಸಿರುವ ವಿಧಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಬೇರೆ ವಿಧಾನಗಳನ್ನು ಅಳವಡಿಸಲು ಚಿಂತಿಸಲಾಗಿದೆ.

ಇದಲ್ಲದೆ ಸಂಸ್ಥೆಯು ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಸ್ಥಳೀಯ ಸೂಕ್ಷ್ಮಾಣು ಜೀವಿಗಳನ್ನು ಬಳಸಿಕೊಂಡು ದೇಸೀಯ ಇನಾಕ್ಯುಲೇಶನ್ ಕಿಟ್ ಅಭಿವೃದ್ಧಿ ಮಾಡಲು ಕರಾರು ಮಾಡಿಕೊಂಡಿದೆ. ಈ ಅಭಿವೃದ್ಧಿಗೆ ಸುಮಾರು 50 ಲಕ್ಷ ರೂಪಾಯಿ ಖರ್ಚಾಗಲಿದ್ದು ಇದಕ್ಕೆ ಕೇಂದ್ರ ಸರ್ಕಾರದ ತಾಂತ್ರಿಕ ಅಭಿವೃದ್ಧಿ ಸಂಸ್ಥೆ ಹಾಗೂ ವನದುರ್ಗಿ ಸಂಸ್ಥೆ ಪಾಲುದಾರರಾಗಿ ಖರ್ಚನ್ನು ಭರಿಸಲು ತೀರ್ಮಾನ ಕೈಗೊಂಡಿದೆ.

ಈ  ಮೇಲಿನ ರೀತಿಯಲ್ಲಿ ಇನ್ನೆರಡು ಸರ್ಕಾರಿ ಸಂಸ್ಥೆಗಳು ಅಗರ್ ಕಿಟ್ ಅಭಿವೃದ್ಧಿಪಡಿಸುವ ಹಾಗೂ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಆಸಕ್ತಿ ಹೊಂದಿದೆ. ಈ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ. ಸಂಸ್ಥೆಯ ಉದ್ದೇಶ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಅಗರ್ ಉತ್ಪಾದಿಸುವ ತಂತ್ರಜ್ಞಾನ ಬಳಸುವುದಾಗಿದ್ದು, ಇದರಿಂದ ಕಡಿಮೆ ಖರ್ಚಿನಲ್ಲಿ ರೈತರಿಗೂ ಇನಾಕ್ಯುಲೇಶನ್ ಸಿಕ್ಕಂತಾಗುತ್ತದೆ. ಸಂಸ್ಥೆಗೂ ಖರ್ಚು ತಗ್ಗಿದಂತಾಗುತ್ತದೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವನದುರ್ಗಿ ಸಂಸ್ಥೆ ತನ್ನದೇ ತಂತ್ರಜ್ಞಾನವನ್ನು ರೂಪಿಸಲು ಉದ್ದೇಶಿಸಿದೆ.

ಈಗಾಗಲೇ ಪ್ರಾಯೋಗಿಕವಾಗಿ ನಡೆಸಿರುವ ಇನಾಕ್ಯುಲೇಶನ್‌ನಿಂದ ಉತ್ಪಾದನೆಯಾಗುವ ಅಗರ್ ಗುಣಮಟ್ಟ ಪರಿಶೀಲಿಸುವುದು, ಉದ್ದೇಶಿತ ಎರಡು ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಹಾಗೂ ಅದರ ಯಶಸ್ಸನ್ನು ಪರಿಶೀಲಿಸಿದ ನಂತರ ವಾಣಿಜ್ಯಿಕವಾಗಿ ಬೇರೆಡೆಯ ಬೆಳೆಗಾರರ ತೋಟಗಳಲ್ಲಿ ಬೆಳೆದಿರುವ ಅಗರ್ ಮರಗಳಿಗೆ ಇನಾಕ್ಯುಲೇಶನ್ ನಡೆಸಲು ಉದ್ದೇಶಿಸಲಾಗಿದೆ.

‘ಈಗಾಗಲೇ ಪ್ರಾರಂಭಿಕ ವರ್ಷದಲ್ಲಿ ನಾಟಿ ಮಾಡಿದ ರೈತರ ಮರಗಳು ಸಾಕಷ್ಟು ಬೆಳವಣಿಗೆ ಹೊಂದಿದ್ದು ಮುಂದಿನ ದಿನಗಳಲ್ಲಿ ಇನಾಕ್ಯುಲೇಶನ್ ನಡೆಸಲಿದ್ದೇವೆ’ ಎನ್ನುತ್ತಾರೆ ವನದುರ್ಗಿ ಸಂಸ್ಥೆಯ ನಿರ್ದೇಶಕ ಧರ್ಮೇಂದ್ರ ಹೆಗ್ಡೆ .
*
ಕಪ್ಪು ಬಂಗಾರ ಅಗರ್
ಶ್ರೀಗಂಧಕ್ಕಿಂತ 6-8 ಪಟ್ಟು ಹೆಚ್ಚಿನ ಬೆಲೆಯುಳ್ಳ ಅಗರ್‌ ‘ಕಪ್ಪು ಬಂಗಾರ’ ಎಂದೇ ಖ್ಯಾತಿ ಪಡೆದಿದೆ. ಇದನ್ನು ಅಸ್ಸಾಮಿಗರು ‘ದೇವರ ವೃಕ್ಷ’ ಎಂದು ಕರೆಯುತ್ತಾರೆ. ಸುಗಂಧ ದ್ರವ್ಯ ತಯಾರಿಕೆಯಲ್ಲಿ ಇದರದ್ದು ಎತ್ತಿದ ಕೈ. ಔಷಧಿಯಾಗಿಯೂ ಇದರ ಬಳಕೆ ಅಧಿಕ. ಶ್ರೀಗಂಧ ನಾಟಿ ಮಾಡಿದ ನಂತರ ಕೊರಡಾಗಿ ಪರಿಮಳ ಬೀರಲು ಕನಿಷ್ಠ 20 ವರ್ಷ ಬೇಕು. ಆದರೆ, ಅಗರ್ ಸಸ್ಯಗಳು 8- 15 ವರ್ಷದಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಅಗರ್‌ವುಡ್‌ಗೆ ದರ್ಜೆಗನುಗುಣವಾಗಿ 60 ಸಾವಿರದಿಂದ 10 ಲಕ್ಷ ಅಮೆರಿಕನ್ ಡಾಲರ್ ಬೆಲೆಯಿದೆ.

ಹೆಚ್ಚಿನ ಮಾಹಿತಿಗೆ: (080) 25592426

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT