ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲಿ ಕರಬೂಜ

Last Updated 25 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಳೆಯೇ ಇಲ್ಲದ ಭೂಮಿಯಲ್ಲಿ ಅಂತರ್ಜಲಕ್ಕಾಗಿ ಪರದಾಡುತ್ತಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ರೈತರು ಕರಬೂಜ ಹಣ್ಣಿನತ್ತ ಮುಖ ಮಾಡಿದ್ದಾರೆ. ಬರದಲ್ಲೂ ಕರಬೂಜ ಬೆಳೆದು ಅಧಿಕ ಲಾಭ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಚಳ್ಳಕೆರೆ ಸಮೀಪದ ರಂಗವ್ವನ ಹಳ್ಳಿಯ ರೈತ ವೆಂಕಟೇಶ ರೆಡ್ಡಿ. ಆರೇಳು ವರ್ಷಗಳಿಂದ 15 ಎಕರೆ ಪ್ರದೇಶದಲ್ಲಿ ಕರಬೂಜ ಕೃಷಿ ಕೈಗೊಂಡಿದ್ದಾರೆ ಇವರು.

ಕೊಹಿನೂರ್ ಹೆಸರಿನ ಕರಬೂಜದ ಬೀಜಗಳನ್ನು ಕೊಂಡು ಕೃಷಿ ಮಾಡಿರುವ ಇವರು ಎರಡು ತಿಂಗಳಿಗೊಮ್ಮೆ ಬರುವ ಹಣ್ಣುಗಳನ್ನು ದೆಹಲಿಗೆ ಕಳಿಸುತ್ತಾರೆ. ಉತ್ತರ ಭಾರತದ ಜನರಿಗೆ ಬಹುಪ್ರಿಯವಾದ ಕರಬೂಜದ ಹಣ್ಣು ಇವರಿಗೆ ಅಧಿಕ ಲಾಭ ತಂದುಕೊಡುವ ಬೆಳೆಯಾಗಿದೆ.

ಒಂದು ಎಕರೆಗೆ 5 ಸಾವಿರ ಕರಬೂಜದ ಬೀಜಗಳನ್ನು ನಾಟಿ ಮಾಡಿದ ಹದಿನೈದು ದಿನಗಳಿಗೆ ಹೂ ಬಿಟ್ಟು, ಎರಡು ತಿಂಗಳಿಗೆ ಬೆಳೆ ಇವರ ಕೈ ಸೇರುತ್ತದೆ. ಗೊಬ್ಬರ, ಉಳುಮೆ, ಕೆಲಸಗಾರರಿಗೆ ಕೊಡುವ ಕೂಲಿ, ದೆಹಲಿಗೆ ಸಾಗಿಸಲು ಬೇಕಾದ ಲಾರಿ ಬಾಡಿಗೆ ಸೇರಿ 1.50 ಲಕ್ಷ ರೂಪಾಯಿ ಖರ್ಚಾಗುತ್ತದೆ. ಎಲ್ಲಾ ಖರ್ಚು ತೆಗೆದು ರೂ1.50ಲಕ್ಷ ಲಾಭ ಬರುತ್ತದೆ. ಇದು ಒಂದು ಎಕರೆಗೆ ಮಾತ್ರ.

ಇನ್ನು 15ಎಕರೆಗೆ ಎರಡು ತಿಂಗಳಿಗೊಮ್ಮೆ 15ರಿಂದ 20ಲಕ್ಷ ಅಧಿಕ ಲಾಭ ಗಳಿಸುತ್ತಾ ಬಂದಿದ್ದಾರೆ. ಇದಕ್ಕಾಗಿ 65ರ ಇಳಿವಯಸ್ಸಿನಲ್ಲೂ ವೆಂಕಟೇಶ ರೆಡ್ಡಿ ಅವರು ಪಡುತ್ತಿರುವ ಶ್ರಮವೂ ಅಷ್ಟೇ ಅಧಿಕವಾದದ್ದು. ಹೆಚ್ಚು ವಿದ್ಯಾವಂತರಲ್ಲದ ಇವರು ಕೃಷಿಯಲ್ಲಿಯೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇಂದಿಗೂ ಉತ್ಸಾಹದಿಂದ ಕೃಷಿ ಬದುಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾಟಿ ವಿಧಾನ
ನೀರಾವರಿ ಜಮೀನನ್ನು ಹದವಾಗಿ ಉಳುಮೆ ಮಾಡಿ ಕೋಳಿಗೊಬ್ಬರ ಹಾಕಲಾಗುತ್ತದೆ. ಹದಮಾಡಿದ ಭೂಮಿಯಲ್ಲಿ ಏರಿ ಸಾಲುಗಳನ್ನು ಮಾಡಿ ಸಾಲಿನಿಂದ ಸಾಲಿಗೆ 7ಅಡಿ ಅಂತರ ಜಾಗ ಬಿಟ್ಟು ಏರಿ ಸಾಲುಗಳನ್ನು 3ಅಡಿ ಅಗಲ ಮಾಡಿ ಅವುಗಳಿಗೆ ಮೇಲು ಹೊದಿಕೆಯಾಗಿ ಪ್ಲಾಸ್ಟಿಕ್ ಶೀಟ್‌ಗಳನ್ನು ಹಾಕಿ ಅದರ ಒಳಗೆ 1ರಿಂದ 1.50 ಅಂತರದಲ್ಲಿ ಎರಡೆರೆಡು ತೂತು ಮಾಡಿ ಅದಕ್ಕೆ ಕೊಹಿನೂರ್ ತಳಿಯ ಕರಬೂಜದ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ.

ಪ್ಲಾಸ್ಟಿಕ್ ಶೀಟ್‌ಗಳಲ್ಲಿಯೇ ನೀರು ಹೊರ ಚೆಲ್ಲದಂತೆ ಇನ್‌ಲೈನ್ ಡ್ರಿಪ್ಪರ್ ಅಳವಡಿಸಿ ನೀರು ಒದಗಿಸಲಾಗುತ್ತದೆ. ಪ್ಲಾಸ್ಟಿಕ್ ಶೀಟ್ ಹಾಕುವುದರಿಂದ ಗಿಡಗಳಲ್ಲಿ ಕಳೆ ಬರುವುದಿಲ್ಲ. ನಂತರ ಹಣ್ಣು ಮಣ್ಣಿಗೆ ತಾಗದಂತೆ ಪ್ಲಾಸ್ಟಿಕ್ ಶೀಟ್ ಮೇಲೆಯೇ ಇರುವುದರಿಂದ ಹಣ್ಣು ಕೊಳೆಯುವುದಿಲ್ಲ ಮತ್ತು ಕಾಲಕಾಲಕ್ಕೆ ಬೆಳೆಗೆ ನೀಡುವ ಪೋಷಕಾಂಶಗಳ ನಷ್ಟ ಆಗುವುದಿಲ್ಲ. ಪ್ರಮುಖವಾಗಿ ಸಸ್ಯಗಳ ಬುಡಕ್ಕೆ ಬಿಸಿಲು ಬಿದ್ದು ಒಣಗುವಿಕೆ ತಪ್ಪಿಸಿದಂತಾಗುತ್ತದೆ.

ಕರಬೂಜದ ಬೆಳೆ ಎರಡು ತಿಂಗಳಿಗೊಮ್ಮೆ ಫಸಲು ನೀಡುವುದರಿಂದ ಪ್ರಾರಂಭದಿಂದಲೂ ಅಗತ್ಯ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ. ಸಾರಜನಕ, ರಂಜಕ, ಪೋಟ್ಯಾಶ್ ಹಾಗೂ ಲಘು ಪೋಷಕಾಂಶಗಳಾದ ಸತು, ಬೋರಾನ್,ಮೆಗ್ನೀಷಿಯಂ ಬೇಕಾಗುತ್ತದೆ. ಕೆಲವೊಂದು ಕೀಟರೋಗ ಬಾಧೆಯೂ ಕಾಣಿಸುತ್ತದೆ. ಇದಕ್ಕೆ ನೊಣದ ಉಪಟಳ ಹೆಚ್ಚು. ಆದ್ದರಿಂದ, ಗಿಡಗಳು ಹೂವು ಬಿಡಲು ಪ್ರಾರಂಭಿಸಿದ ದಿನದಿಂದಲೇ ನೊಣದ ಟ್ರಾಪ್‌ಗಳನ್ನು ನೇತು ಹಾಕಿ ಹತೋಟಿ ಮಾಡಲಾಗುತ್ತದೆ.

ಇದಕ್ಕಾಗಿ ನಿತ್ಯವೂ ಜಮೀನಿನಲ್ಲಿ ಕೆಲಸಗಾರರು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಪ್ರಾರಂಭದಲ್ಲಿ ಜಮೀನು ಹದ ಮಾಡುವುದರಿಂದ ಹಿಡಿದು ಹಣು ಕಿತ್ತು ಲಾರಿಗೆ ತುಂಬುವವರೆಗೂ ಕೆಲಸಗಾರರೇ ಪ್ರಮುಖ ಪಾತ್ರವಹಿಸುತ್ತಾರೆ. ಇನ್ನು ಜಲದೇವತೆ ಬಯಲುಸೀಮೆ ರೈತನ ಮೇಲೆ ಮುನಿಸು ತೋರುತ್ತಿದ್ದಾಳೆ. 15 ಎಕರೆಯಲ್ಲಿ 35 ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಬಂದಿಲ್ಲ. ಇರುವ ಎರಡು ಬೋರ್‌ವೆಲ್‌ಗಳಲ್ಲಿ ಮಾತ್ರ ತಲಾ ಎರಡು ಇಂಚು ನೀರು ಬರುತ್ತದೆ. ಇಂತಹ ಸಂಕಷ್ಟದಲ್ಲೂ ಬದುಕಿಗೆ ಆಧಾರ ಆಗಿರುವ ಕೃಷಿಯನ್ನು ಬಿಡದೇ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ವಿವರಿಸುತ್ತಾರೆ ರೈತ ವೆಂಕಟೇಶ ರೆಡ್ಡಿ.

ಭಾರೀ ಬೇಡಿಕೆ
ದೆಹಲಿ ಮಾರುಕಟ್ಟೆಯಲ್ಲಿ ಬಯಲುಸೀಮೆ ಕರಬೂಜಕ್ಕೆ ಭಾರೀ ಬೇಡಿಕೆ ಇದೆ. ಈ ಹಣ್ಣುಗಳಲ್ಲಿ ಕೊಹಿನೂರ್, ಬಾಬಿ, ನಾಮಧಾರಿ, ರಾಜ ಎಂಬ ಅನೇಕ ತಳಿಗಳನ್ನು ಕಾಣಬಹುದು. ಕೊಹಿನೂರ್, ಬಾಬಿ, ನಾಮಧಾರಿ ತಳಿಗಳನ್ನು ಬಯಲುಸೀಮೆಯ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಇಂತಹ ಹಣ್ಣುಗಳನ್ನು ಒಂದು ಪ್ಯಾಕ್‌ನಲ್ಲಿ 9ರಿಂದ 10 ಹಣ್ಣುಗಳನ್ನು ಇಟ್ಟು ಪ್ಯಾಕ್ ಮಾಡಲಾಗುತ್ತದೆ. ಇದಕ್ಕೆ ಅತಿ ಕಡಿಮೆ ಎಂದರೂ ರೂ 350ರಿಂದ 450ರವರೆಗೆ ಮಾರುಕಟ್ಟೆಯಲ್ಲಿ ಬೆಲೆ ಇರುತ್ತದೆ. ದಲ್ಲಾಳಿಗಳ ಮೂಲಕ ದೆಹಲಿ ಮಾರುಕಟ್ಟೆಗೆ ಹಣ್ಣುಗಳನ್ನು ಕಳಿಸುವ ಇವರಿಗೆ ಡಿ.ಡಿ. ರೂಪದಲ್ಲಿ ಹಣ ಕೈ ಸೇರುತ್ತದೆ.

ನೀರಾವರಿ ಜಮೀನುಗಳಲ್ಲಿ ರೈತರು ಪಾರಂಪರಿಕ ಬೆಳೆಗಳನ್ನು ಬೆಳೆಯುವುದರ ಜತೆಗೆ ಹೊಸ ಪ್ರಯೋಗ ಮಾಡಬೇಕು. ಇದರಿಂದಾಗಿ ಅಧಿಕ ಲಾಭ ಗಳಿಸುವುದೂ ಸೇರಿದಂತೆ ನೀರಿನ ಪ್ರಮಾಣ ಕಡಿಮೆ ಇರುವ ಪ್ರದೇಶದಲ್ಲೂ ಉತ್ತಮ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಇವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT