ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದೂರಿನಲ್ಲಿ ಬೊಂಬೆ ಬೆಲ್ಲ

Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಸಂದರ್ಭದಲ್ಲಿ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬೆಳೆಯಲು ಆಗದಂಥ ಪರಿಸ್ಥಿತಿ. ಇಂಥ ಸನ್ನಿವೇಶದಲ್ಲಿ ಯಥೇಚ್ಛ ನೀರನ್ನು ಅವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ ಆಲೆಮನೆ ನಡೆಸಲು ಸಾಧ್ಯವೇ...? ಇಲ್ಲವೇ ಇಲ್ಲ ಎಂಬುದು ಬರುವ ದಿಟ್ಟ ಉತ್ತರ.

ಆದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹನೂರಿನ ಜಮೀನೊಂದರಲ್ಲಿ ಆಲೆಮನೆ ನಡೆಯುತ್ತಿದೆ. ಈ ಆಲೆಮನೆಯಲ್ಲಿ ವಿಶಿಷ್ಟ ರೂಪದ ಬೊಂಬೆ ಬೆಲ್ಲ ಮೈದಾಳುತ್ತಿದೆ. ಮಳೆ-ಬೆಳೆ ಇಲ್ಲದೆ ಈ ಗ್ರಾಮದ ಹಲವಾರು ರೈತಾಪಿ ಜನರು ಗುಳೆ ಹೋದ ಮೇಲೆ ಉಳಿದುಕೊಂಡಿರುವ ಕೆಲವು ಕೂಲಿ ಕಾರ್ಮಿಕರಿಗೆ ಆಲೆಮನೆ ಆಸರೆಯೂ ಆಗಿದೆ!

ಇದು ಗ್ರಾಮದ ರೈತ ಕೃಷ್ಣನಾಯ್ಡು ಅವರ ಯಶಸ್ಸಿನ ಕಥೆ. ಈ ಭಾಗದಲ್ಲಿ ಕಬ್ಬು ಬೆಳೆಯದಿದ್ದರೇನಂತೆ? ಕಬ್ಬು ಬೆಳೆಯುವ ಕಡೆಗಳಿಂದ ಹರಸಾಹಸ ಮಾಡಿಯಾದರೂ ಅದನ್ನು ಖರೀದಿಸಿ ಆಲೆಮನೆ ನಡೆಸಬಹುದಲ್ಲ ಎಂದುಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೃಷ್ಣನಾಯ್ಡು ಅವರ ಶ್ರಮದ ಫಲವಾಗಿ ಇಂದು ಇಲ್ಲಿ ಆಲೆಮನೆ ನಡೆಯುತ್ತಿದೆ. ಇಲ್ಲಿ ತಯಾರಾಗುವ ಬೊಂಬೆ ಬೆಲ್ಲಕ್ಕೆ ಭಾರಿ ಬೇಡಿಕೆ ಇದ್ದು, ಉತ್ತಮ ಮಾರುಕಟ್ಟೆಯನ್ನೂ ಕುದುರಿಸಿಕೊಳ್ಳುತ್ತಿದೆ.

ಸಾಹಸದ ಆರಂಭ...
ಕೃಷ್ಣನಾಯ್ಡು ಅವರ ಬಳಿ ಹತ್ತು ಎಕರೆ ಜಮೀನು ಇದೆ. ಇಲ್ಲಿರುವ ಕೊಳವೆ ಬಾವಿಗಳಲ್ಲಿ ಅಂರ್ತಜಲ ಕುಸಿದಿದೆ. ಆದರೆ ಸಿಕ್ಕ ಅಲ್ಪಸಲ್ಪ ನೀರಿನಲ್ಲಿ ಎರಡು ಎಕರೆ ಜಮೀನಿನಲ್ಲಿ ಕೆಲ ವರ್ಷಗಳ ಹಿಂದೆ ಬೆಲ್ಲ ಉತ್ಪಾದಕ ಘಟಕವನ್ನು ಸ್ಥಾಪಿಸಿಕೊಂಡಿದ್ದಾರೆ. ಇದಕ್ಕೆ ಅವರಿಗೆ ತಗಲಿರುವ ವೆಚ್ಚ ರೂ25 ಲಕ್ಷ. ಇದರಲ್ಲಿ ಮೂರು ಗಾಣ (ಕಬ್ಬು ಅರೆಯುವ ಯಂತ್ರ) ಹಾಗೂ ಮೂರು ಕೊಪ್ಪರಿಕೆಗಳನ್ನು ಅಳವಡಿಸಿಕೊಂಡಿದ್ದಾರೆ.

ನೀರಿನ ಕೊರತೆಯಿಂದ ಇವರ ಜಮೀನು ಸೇರಿದಂತೆ ಅಕ್ಕಪಕ್ಕ ಎಲ್ಲಿಯೂ ಕಬ್ಬು ಬೆಳೆಯುತ್ತಿಲ್ಲ. ಹಾಗಂತ ಕೃಷ್ಣನಾಯ್ಡು ಅವರು ಧೃತಿಗೆಡಲಿಲ್ಲ. ಕೊಳ್ಳೇಗಾಲ, ನರಸೀಪುರ ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿನ ರೈತರು ಬೆಳೆದ ಕಬ್ಬನ್ನು ಖರೀದಿಸಿ ತಂದು ಆಲೆಮನೆ ನಡೆಸುವ ಸಾಹಸ ಮಾಡುತ್ತಿದ್ದಾರೆ. ಐದು ವರ್ಷಗಳಿಂದಲೂ ಅವರ ಈ ಕಾಯಕ ನಡೆಯುತ್ತಿದೆ.

ಒಂದು ಟನ್ ಕಬ್ಬಿಗೆ 2000 ದಿಂದ 2100 ರೂಪಾಯಿವರೆಗೆ ಹಣ ನೀಡಿ ಖರೀದಿಸುತ್ತಾರೆ. ಸಾಗಾಣಿಕೆ, ಕೂಲಿ ಆಳು, ಖರ್ಚು ವೆಚ್ಚ ಎಲ್ಲಾ ಸೇರಿ 3500 ರೂಪಾಯಿ ಖರ್ಚಾಗುತ್ತದೆ. ಒಂದು ಟನ್ ಕಬ್ಬಿಗೆ ನೂರು ಕೆ.ಜಿ. ಬೆಲ್ಲ ದೊರಕುತ್ತದೆ. 15 ಟನ್ ಕಬ್ಬಿನಿಂದ ಪ್ರತಿದಿನ 60 ಮೂಟೆ ಬೆಲ್ಲ ತಯಾರಿಕೆಯಾಗುತ್ತದೆ.

ಉತ್ಪಾದನಾ ಘಟಕದಲ್ಲಿ 20 ಕೂಲಿ ಕಾರ್ಮಿಕರು ಹಾಗೂ ಸಾಗಾಣಿಕೆಗೆ 20 ಕಾರ್ಮಿಕರು... ಹೀಗೆ ಒಟ್ಟು 40 ಕಾರ್ಮಿಕರಿಗೆ ಪ್ರತಿದಿನ ತಲಾ 300 ರೂಪಾಯಿ ಕೂಲಿ ನೀಡುತ್ತಾರೆ. ಕಬ್ಬು ಖರೀದಿ ಸಂದರ್ಭಗಳಲ್ಲಿ ಉತ್ಪಾದನೆ ಮಾಡಿದ ಬೆಲ್ಲಕ್ಕೆ ಬೆಲೆ ಸಿಗದೆ ಹಲವಾರು ಬಾರಿ ನಷ್ಟ ಅನುಭವಿಸಿದ್ದೂ ಉಂಟು. ಆದರೂ ಧೃತಿಗೆಡದ ಕೃಷ್ಣನಾಯ್ಡು ಆಲೆಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಬೇಡಿಕೆಯ ಬೊಂಬೆ ಬೆಲ್ಲ
ಮಾಮೂಲಿ ಬೆಲ್ಲವೊಂದನ್ನೇ ಕೃಷ್ಣನಾಯ್ಡು ಅವರು ನೆಚ್ಚಿಕೊಂಡಿಲ್ಲ. ‘ಬೆಲ್ಲವನ್ನು ಬಿಟ್ಟು ಜನರು ಕಾಫಿ- ಟೀಗಾಗಿ ಸಕ್ಕರೆಯನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಬೆಲ್ಲ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಆದ್ದರಿಂದ ಇದನ್ನೊಂದನ್ನೇ ನಂಬಿ ಬದುಕಿದರೆ ನಾನು ಮಾತ್ರವಲ್ಲದೇ ಕೂಲಿ ಕಾರ್ಮಿಕರೂ ತೊಂದರೆ ಅನುಭವಿಸಬೇಕಾಗುತ್ತಿತ್ತು. ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡುವ ಯೋಚನೆಯಲ್ಲಿದ್ದಾಗ ನನ್ನ ಅರಿವಿಗೆ ಬಂದದ್ದು ಬೊಂಬೆ ಬೆಲ್ಲದ ತಯಾರಿಕೆ’ ಎನ್ನುತ್ತಾರೆ ನಾಯ್ಡು ಅವರು.

ವಿಶಿಷ್ಟ ರೂಪ ಹಾಗೂ ಆಕಾರದ ಬೊಂಬೆ ಬೆಲ್ಲ ಇಲ್ಲಿ ತಯಾರಾಗುತ್ತಿದೆ. ಇವರು ಬೆಲ್ಲ ತಯಾರಿಕೆಯ ಜತೆ ಬೇಡಿಕೆ ಇರುವ ಕಡೆಗೆ ತಾವೇ ಸಾಗಿಸಿ ಸರಬರಾಜು ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ.

‘ಬೊಂಬೆ ಬೆಲ್ಲವನ್ನು ಕೇರಳದ ಮಾನಂದವಾಡಿ, ಕ್ಯಾಲಿಕಟ್, ಗೂಡ್ಲೂರು, ನೆಲಂಬೂರ್ ಹಾಗೂ ತಮಿಳು ನಾಡಿನ ಚಿತ್ತೋಡು ಮತ್ತು ಕರ್ನಾಟಕದ ಚಾಮರಾಜನಗರ, ಮಂಡ್ಯಗಳಲ್ಲಿ ಆಯಾ ದಿನದ ಬೆಲೆಗೆ ಅನುಗುಣವಾಗಿ 30 ಕೆ.ಜಿ ಬೆಲ್ಲಕ್ಕೆ  ರೂ1150 ರಂತೆ ಮಾರಾಟ ಮಾಡಿದರೆ ರೂ200 ಲಾಭಗಳಿಸುತ್ತೇನೆ’ ಎನ್ನುತ್ತಾರೆ ನಾಯ್ಡು.

‘ದಿನವೊಂದಕ್ಕೆ 15 ಟನ್ ಕಬ್ಬು ಅರೆದು ಪ್ರತ್ಯೇಕ ಮೂರು ಕಡೆ ಮೂರು ಕೊಪ್ಪರಿಕೆಗಳಲ್ಲಿ ಬೊಂಬೆ ಬೆಲ್ಲ ತಯಾರಿಸಿ ಕೇರಳ, ತಮಿಳುನಾಡು. ಕೇರಳದ ಮಾನಂದವಡಿ ಇನ್ನಿತರ ಕಡೆಗಳ ಮಾರುಕಟ್ಟೆಗಳಿಗೆ ಕಳುಹಿಸುತ್ತೇನೆ. ಆಯಾದಿನದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಲಾಭ ದೊರಕುತ್ತದೆ. ಒಂದು ದಿನ ಹೆಚ್ಚು ಲಾಭ ಬಂದರೆ ಮತ್ತೊಂದು ದಿನ ಮಾರುಕಟ್ಟೆಯಲ್ಲಿ ಅಧಿಕ ನಷ್ಟ ಅನುಭವಿಸಿದ್ದೇನೆ. ಆದರೂ ಕಳೆದ ಐದು ವರ್ಷಗಳಿಂದ ಉತ್ಪಾದನಾ ಘಟಕದಲ್ಲಿ ಬೆಲ್ಲ ತಯಾರಿಸಲು 40 ಜನರಿಗೆ ಉದ್ಯೋಗ ಕಲ್ಪಿಸಿರುವುದು ನನಗೆ ತೃಪ್ತಿ ತಂದಿದೆ’ ಎನ್ನುತ್ತಾರೆ ಅವರು.

ಕಳೆದ ಐದು ವರ್ಷಗಳಿಂದ ಕೊಳ್ಳೇಗಾಲ ತಾಲ್ಲೂಕಿನ ಹನೂರು ಕೃಷ್ಣನಾಯ್ಡು ಆಲೆಮನೆ ಘಟಕ ಹಲವಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವ ತೃಪ್ತಿ ತಂದಿದ್ದು ಕರ್ನಾಟಕದಲ್ಲಿ ತಯಾರಾದ ಬೊಂಬೆ ಬೆಲ್ಲಕ್ಕೆ ಅನ್ಯರಾಜ್ಯಗಳಲ್ಲಿ ಭಾರೀ ಬೇಡಿಕೆ ಇರುವುದು. ಈ ಭಾಗದ ರೈತರಲ್ಲಿ ಹರ್ಷ ತಂದಿದೆ.

‘ಕೃಷ್ಣನಾಯ್ಡುರವರ ಆಲೆಮನೆ ಘಟಕದಲ್ಲಿ ನಾನು ಕೂಲಿ ಕಾರ್ಮಿಕ. ನನ್ನಂತೆ ನನ್ನ ಜತೆ ಕೆಲಸ ನಿರ್ವಹಿಸುವ ಇತರೆ 40 ಮಂದಿ ಕೂಲಿಕಾರ್ಮಿಕರಿಗೆ ದಿನವೊಂದಕ್ಕೆ ₨300 ಕೂಲಿ ನೀಡುತ್ತಾರೆ.  ಎಲ್ಲರ ಸಹಕಾರದಿಂದ ದಿನಕ್ಕೆ 15 ಟನ್ ಕಬ್ಬು ಅರೆದು ಬೆಲ್ಲ ತಯಾರಿಸುತ್ತೇವೆ. ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಮಳೆಯಿಲ್ಲದೆ, ಕೂಲಿ ಸಿಗದೆ ಜೀವನ ನಿರ್ವ ಹಣೆಗೆ ಕಷ್ಟವಾಗಿರುವ ಇಂತಹ ದಿನಗಳಲ್ಲಿ ಆಲೆಮನೆ ನಮ್ಮ ಕೈ ಹಿಡಿದಿದೆ’ ಎನ್ನುತ್ತಾರೆ ಕೂಲಿ ಕಾರ್ಮಿಕ ಚಿಕ್ಕಪುಟ್ಟಯ್ಯ. ಸಂಪರ್ಕಕ್ಕೆ 9008504463.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT