ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಸಮಸ್ಯೆ ಈರುಳ್ಳಿ ವಿಷಬಾಧೆ

Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಈರುಳ್ಳಿ ವಿಷಬಾಧೆಯು ದನಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡುಬರುತ್ತದೆ. ಈರುಳ್ಳಿಯ ಸಸ್ಯದ ಬಲಿತ ಕಾಂಡಗಳಲ್ಲಿ ಹಾಗೂ ಬಲಿತ ಈರುಳ್ಳಿಯಲ್ಲಿ ಎನ್-ಪ್ರೊಪೈಲ್ ಡೈಸಲ್ಪೈಡ್ ಎಂಬ ವಿಷ ರಾಸಾಯನಿಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಗಬ್ಬದ ದನಗಳು, ಇತ್ತೀಚಿಗೆ ಕರು ಹಾಕಿದ ದನಗಳು ಮತ್ತು ಬೇಸಿಗೆ ಬಿಸಿಲಿನ ತಾಪದಲ್ಲಿ ದುಡಿಯುವ ಎತ್ತುಗಳು ಉತ್ಕರ್ಷಣಾ ಒತ್ತಡಕ್ಕೆ ಒಳಗಾಗಿರುತ್ತವೆ. ಈ ಸಂದರ್ಭಗಳಲ್ಲಿ ವಿಷವಸ್ತು ಹೊಂದಿರುವ ಈರುಳ್ಳಿಯ ಸಸಿ ಮತ್ತು ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ದನಗಳಲ್ಲಿ ಈರುಳ್ಳಿ ವಿಷಬಾಧೆ ಕಂಡುಬರುತ್ತದೆ.

ರೋಗ ಲಕ್ಷಣಗಳು
ತೀವ್ರರೂಪದ ವಿಷಬಾಧೆಯಲ್ಲಿ ದನಗಳು ಯಾವುದೇ ಲಕ್ಷಣಗಳನ್ನು ತೋರದೆ ಸಾವನ್ನಪ್ಪುತ್ತವೆ. ಸಾಮಾನ್ಯವಾಗಿ ಈರುಳ್ಳಿ ವಿಷಬಾಧೆಗೊಳಗಾಗುವ ದನಗಳಲ್ಲಿ ರಕ್ತಕಣಲಯನ ಕಾಮಾಲೆ ಕಂಡುಬಂದು, ಕಪ್ಪುಕಂದು ಬಣ್ಣ ಅಥವಾ ಕಾಫಿ ಡಿಕಾಕ್ಷನ್ ಬಣ್ಣದ ಮೂತ್ರ ವಿಸರ್ಜನೆ ಕಂಡುಬರುತ್ತದೆ. ರಕ್ತಹೀನತೆಯಿಂದ ಬಳಲುವ ದನಗಳ ಕಣ್ಣು ಮತ್ತು ಯೋನಿಯ ಲೋಳ್ಪರೆ ಬಿಳಿಚಿಕೊಳ್ಳುತ್ತದೆ.

ಹೃದಯದ ಬಡಿತ ಮತ್ತು ಶ್ವಾಸೋಚ್ಛಾಸದ ಪ್ರಮಾಣ ಹೆಚ್ಚಾಗಿರುತ್ತದೆ. ಉಸಿರು ಮತ್ತು ಸೆಗಣಿಯಲ್ಲಿ ಈರುಳ್ಳಿಯ ವಾಸನೆ ಕಂಡುಬರುತ್ತದೆ. ದೇಹದ ಉಷ್ಣತೆ ಸಾಮಾನ್ಯ ಅಥವಾ ಕಡಿಮೆ ಮಟ್ಟದಲ್ಲಿರುತ್ತಲ್ಲದೆ, ಕೆಲವೊಮ್ಮೆ ಜ್ವರ ಕಂಡುಬರಬಹುದು. ಭೇದಿ, ಅಶಕ್ತಿ, ಮೇವು ತಿನ್ನದಿರುವುದು, ಸ್ನಾಯುಗಳ ದೌರ್ಬಲ್ಯ, ಗಬ್ಬದ ದನಗಳಲ್ಲಿ ಗರ್ಭಪಾತ, ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ವಿಷಬಾಧೆ ಪತ್ತೆ ವಿಧಾನ: ಈರುಳ್ಳಿ ಸಸ್ಯಕಾಂಡ ಮತ್ತು ಈರುಳ್ಳಿಯನ್ನು ಮೇವಾಗಿ ತಿಂದ ಬಗ್ಗೆ ಮಾಹಿತಿ ಪಡೆದು, ಮೇಲೆ ತಿಳಿಸಿದ ಲಕ್ಷಣಗಳಿಂದ ರೋಗ ಪತ್ತೆ ಹಚ್ಚಬಹುದಲ್ಲದೆ, ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವಿಷಬಾಧೆ ಧೃಡಪಡಿಸಬಹುದು.

ಚಿಕಿತ್ಸೆ: ಈರುಳ್ಳಿ ವಿಷಬಾಧೆಯನ್ನು ನಿಷ್ಕ್ರಿಯಗೊಳಿಸಲು ನಿಖರವಾದ ಔಷಧವಿಲ್ಲವಾದುದರಿಂದ, ಸಾಮಾನ್ಯವಾಗಿ ಕಂಡುಬರುವ ರಕ್ತಹೀನತೆಯನ್ನು ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಸರಿಪಡಿಸಬಹುದಲ್ಲದೆ, ಉತ್ಕರ್ಷಣಾ ಒತ್ತಡವನ್ನು ಕಡಿಮೆ ಮಾಡುವ ಇ ಮತ್ತು ಸಿ ಜೀವಸತ್ವದ ಔಷಧಿಗಳನ್ನು ಉಪಯೋಗಿಸಬಹುದು. ಈರುಳ್ಳಿಯನ್ನು ಮೇವಾಗಿ ತಿನ್ನಿಸುವುದನ್ನು ತಕ್ಷಣ ನಿಲ್ಲಿಸಬೇಕು.

ನಿಯಂತ್ರಣ: ಬೇಸಿಗೆಯಲ್ಲಿ ದನಗಳಿಗೆ ಸಾಕಷ್ಟು ಒಣಮೇವು ಮತ್ತು ಸ್ವಚ್ಛವಾದ ನೀರನ್ನು ಒದಗಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ರಂಜಕ ಮತ್ತು ಸಸಾರಜನಕದ ಅಂಶವಿರುವ ಆಹಾರ ಒದಗಿಸಬೇಕು.   

(ಲೇಖಕರು ಬೀದರ್ ಪಶುವೈದ್ಯಕೀಯ ಮಹಾವಿದ್ಯಾಲಯದ ಮೆಡಿಸಿನ್ ವಿಭಾಗದ ಮುಖ್ಯಸ್ಥರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT