ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಡ್ರಮ್ ಸೀಡರ್‌

ಬತ್ತದಿರಲಿ ಭತ್ತದ ಕಣಜ -1
Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಡ್ರಮ್ ಸೀಡರ್ ಒಂದು ಸರಳ, ಸುಲಭ ಹಾಗೂ ಅತಿ ಕಡಿಮೆ ಖರ್ಚಿನ ಉಪಕರಣ. ಇದನ್ನು ಗುಡಿ ಕೈಗಾರಿಕೆಯಲ್ಲಿ ಸ್ಥಳೀಯವಾಗಿ ತಯಾರಿಸಬಹುದು. ಯಾವುದೇ ನಿರ್ವಹಣಾ ವೆಚ್ಚವಿಲ್ಲದೆ ಬಳಸುವುದರ ಜೊತೆ ಸುಲಭವಾಗಿ ದೊರೆಯುವ ಅಲ್ಯುಮಿನಿಯಂ, ಸ್ಟೀಲ್ ಅಥವಾ ಸತುವಿನಿಂದ ತಯಾರಿಸಬಹುದು.

ಒಂದು ಉಪಕರಣದಲ್ಲಿ ನಾಲ್ಕು ಡ್ರಮ್‌ಗಳಿದ್ದು ಪ್ರತಿ ಡ್ರಮ್‌ನ ಸುತ್ತಳತೆ 60 ಸೆಂ.ಮೀ ಹಾಗೂ ಉದ್ದ 70 ಸೆಂ.ಮೀ ಇರುತ್ತದೆ. ಡ್ರಮ್‌ನ ಎರಡೂ ಕಡೆಗಳಲ್ಲಿ ಸಣ್ಣ ರಂಧ್ರಗಳಿದ್ದು, ಡ್ರಮ್ ತಿರುಗಿದಾಗ ಮೊಳಕೆ ಬಂದಿರುವ ಬಿತ್ತನೆ ಬೀಜ ಸುಲಭವಾಗಿ ರಂಧ್ರಗಳ ಮೂಲಕ ಬೀಳುತ್ತದೆ. ಪ್ರತಿ ಬಾರಿ ಡ್ರಮ್‌ಗೆ 3 ಕಿ.ಗ್ರಾಂ ಬಿತ್ತನೆ ಬೀಜವನ್ನು ತುಂಬಬಹುದು.

ಡ್ರಮ್ ಸೀಡರ್‌ ಅನ್ನು ಸುಲಭವಾಗಿ ಎಳೆಯಲು ಆಯತಾಕಾರದ ಕಬ್ಬಿಣದ ಕೈಹಿಡಿಗಳನ್ನು ಕೊಡಲಾಗಿದ್ದು, ಅದನ್ನು ಹಿಡಿಕೆಗೆ ಜೋಡಿಸಲಾಗಿದೆ ಹಾಗೂ ಹಿಡಿಕೆಯ ಕೆಳ ಭಾಗದಲ್ಲಿ 8 ಕಬ್ಬಿಣದ ಗೂಟಗಳನ್ನು ನಿರ್ದಿಷ್ಟ ಅಂತರದಲ್ಲಿ ಡ್ರಮ್‌ಗಳ ರಂಧ್ರಗಳಿಗೆ ಸರಿಹೊಂದುವಂತೆ ಜೋಡಿಸಿದ್ದು ಇದು ಬಿತ್ತನೆ ಸಾಲು ತೆಗೆಯಲು ಸಹಾಯ ಮಾಡುತ್ತದೆ. ಕೆಸರು ಗದ್ದೆಯಲ್ಲಿ ಚಲಿಸಲು ಅನುಕೂಲ ಆಗುವಂತೆ ಡ್ರಮ್‌ನ ಎರಡೂ ಕಡೆ ಕಬ್ಬಿಣದ ಚಕ್ರಗಳನ್ನು ಅಳವಡಿಸಲಾಗಿದೆ.

ಭೂಮಿ ಸಿದ್ಧಪಡಿಕೆ
ಡ್ರಮ್ ಸೀಡರ್ ಬಿತ್ತನೆಯ ಯಶಸ್ಸಿಗೆ ಸರಿಯಾದ ರೀತಿ ಭೂಮಿ ಸಿದ್ಧಪಡಿಸುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಬಿತ್ತನೆಯಲ್ಲಿ ವ್ಯತ್ಯಾಸವಾಗಿ ಸಸಿಗಳ ಸಂಖ್ಯೆ, ಬೆಳವಣಿಗೆಯಲ್ಲಿ ಏರುಪೇರಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಆದಕಾರಣ ಭೂಮಿಯನ್ನು ಚೆನ್ನಾಗಿ 2 ರಿಂದ 3 ಬಾರಿ ಕೆಸರು ಉಳುಮೆ ಮಾಡಿ ಮಟ್ಟ ಮಾಡಬೇಕು.

ನಾಟಿಗೆ ಭೂಮಿಯನ್ನು ಸಿದ್ಧಪಡಿಸುವ ರೀತಿಯಲ್ಲಿಯೇ ಸಿದ್ಧಪಡಿಸಿ ಗದ್ದೆಯ ಏರು ತಗ್ಗುಗಳಿಲ್ಲದೇ ಮಟ್ಟ ಮಾಡುವುದರಿಂದ ಬಿತ್ತನೆಯನ್ನು ಉತ್ತಮವಾಗಿ ಮಾಡಲು ಸಾಧ್ಯ. ಅವಶ್ಯಕತೆಗನುಸಾರವಾಗಿ ಗದ್ದೆಯ ನೀರನ್ನು ಹೊರಗೆ ಬಸಿಯಲು ಹಾಗೂ ತೆಳುವಾಗಿ ನೀರುಣಿಸಲು ಅವಕಾಶವಿರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.

ಮೊಳಕೆಯೊಡೆದ ಬೀಜವನ್ನು ಡ್ರಮ್  ಸೀಡರ್‌ ನಲ್ಲಿರುವ ನಾಲ್ಕು ಡ್ರಮ್ಗಳಿಗೂ ಸಮನಾಗಿ, ಅಂದರೆ ಡ್ರಮ್ ನಲ್ಲಿ ಮುಕ್ಕಾಲು ಭಾಗ ಬರುವಂತೆ ತುಂಬಿ, ಅದರ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಮುಚ್ಚಳದ ಬೀಗವನ್ನು ಮರದ ಕಡ್ಡಿ ಅಥವಾ ಕಬ್ಬಿಣದ ತಂತಿ ಅಥವಾ ಮೊಳೆಯಿಂದ ಭದ್ರಪಡಿಸಬೇಕು. ನಂತರ ಡ್ರಮ್ಮನ್ನು ಗದ್ದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಲುಗಳು ಬರುವಂತೆ ಕೈಯಿಂದ ಎಳೆಯಬೇಕು.

ಸಾಮಾನ್ಯವಾಗಿ ಇದನ್ನು ಕೆಸರು ಗದ್ದೆಯಲ್ಲಿ ಎಳೆಯಲು ಒಬ್ಬ ಕಾರ್ಮಿಕನಿಂದ ಸಾಧ್ಯ. ಈ ರೀತಿ ಎಳೆದಾಗ ಗಾಲಿಗಳು ತಿರುಗಿ, ಡ್ರಮ್‌ಗಳೂ ತಿರುಗಿ ರಂಧ್ರಗಳ ಮೂಲಕ ಬೀಜಗಳು ಸಾಲಿನಲ್ಲಿ ಬೀಳುತ್ತವೆ. ಒಮ್ಮೆಗೇ ಎಂಟು ಸಾಲುಗಳು ಮೂಡುತ್ತವೆ.

ಒಬ್ಬರು ಒಂದು ದಿವಸಕ್ಕೆ 2 ಎಕರೆ ಬಿತ್ತನೆ ಮಾಡಬಹುದು. ಬಿತ್ತಿದ ತಾಕುಗಳಲ್ಲಿ ಮೊದಲು ಹತ್ತು ದಿನಗಳವರೆಗೆ ತೇವ ಆರದಂತೆ ನೀರು ಸಹ ನಿಲ್ಲದಂತೆ ಎಚ್ಚರಿಕೆ ವಹಿಸಿ, ಪೈರು ಬೆಳೆದಂತೆ ನೀರಿನ ಪ್ರಮಾಣ ಹೆಚ್ಚಿಸಿ ಎರಡು ಇಂಚು ನೀರು ನಿಲ್ಲಿಸಬೇಕು.

‘ಈ ಉಪಕರಣದಿಂದ ಬಿತ್ತುವುದರಿಂದ  ಹೆಚ್ಚು ಕೆಲಸಗಾರರ ಅಗತ್ಯವಿಲ್ಲ ಹಾಗೂ ಖರ್ಚೂ ಉಳಿತಾಯವಾಗುತ್ತದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಚಂದಗಾಲು ಗ್ರಾಮದ ಮಣಿಕುಮಾರ್.

ಸಾಲುಗಳಲ್ಲಿ ಬಿತ್ತನೆ
ಬಿತ್ತನೆ ಬೀಜವನ್ನು ನೇರವಾಗಿ ಸಾಲುಗಳಲ್ಲಿ ಬಿತ್ತುವುದರಿಂದ ಕಳೆ ತೆಗೆಯುವುದು ಬಹು ಸುಲಭ. ಬಿತ್ತಿದ 20 ಮತ್ತು 40 ದಿವಸಗಳಲ್ಲಿ ಎರಡು ಸಾರಿ ಕಳೆಯಂತ್ರವಾದ ‘ಕೋನೋ ರೋಟರಿ ವೀಡರ್’ ಅನ್ನು ಸಾಲುಗಳ ಮಧ್ಯೆ ಹಾಯಿಸಿದಾಗ ಕಳೆಗಳು ಸಾವಯವ ಗೊಬ್ಬರವಾಗಿ ಪರಿವರ್ತನೆಗೊಂಡು ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ, ಬೇರುಗಳ ಬೆಳವಣಿಗೆಯೂ ವೃದ್ಧಿಯಾಗುತ್ತದೆ. ಪೈರಿನ ಮಧ್ಯದ ಕಳೆಗಳನ್ನು ಕೈಯಿಂದ ತೆಗೆಯಬೇಕು. ಈ ಪದ್ಧತಿಯಲ್ಲಿ, ಎಕರೆಗೆ ಕೇವಲ 13 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ 25 ಕ್ವಿಂಟಾಲ್ ಭತ್ತದ ಇಳುವರಿ ಪಡೆದಿರುವ ರೈತ ದೇವರಾಜು ಅವರ ಸಂಪರ್ಕಕ್ಕೆ 9008251750

ಕೈಯಿಂದ ನೇರ ಬಿತ್ತನೆ
ಕೈಯಿಂದಲೇ ನೇರ ಬಿತ್ತನೆ ಮಾಡುವ ಮೂಲಕವೂ ಭತ್ತದಲ್ಲಿ ಅಧಿಕ ಇಳುವರಿ ಪಡೆಯಬಹುದು. ಇದಕ್ಕಾಗಿ ಭೂಮಿಯನ್ನು ಡ್ರಮ್  ಸೀಡರ್ ಬಿತ್ತನೆಗೆ ಸಿದ್ಧಪಡಿಸುವ ರೀತಿಯಲ್ಲಿಯೇ ತಯಾರು ಮಾಡ ಬೇಕು. ಮೊಳಕೆಯೊಡೆದ ಬೀಜವನ್ನು ಸಮನಾಗಿ ಎರಚಬೇಕು. ಬೀಜವನ್ನು ಎಷ್ಟು ಸಮ ಪ್ರಮಾಣದಲ್ಲಿ ಚೆಲ್ಲುತ್ತೀರೋ ಅಷ್ಟು ಬಿತ್ತನೆ ಯಶಸ್ವಿಯಾಗುತ್ತದೆ.

ಬಿತ್ತನೆ ಬೀಜ ಚೆಲ್ಲುವಾಗ ಗದ್ದೆಯಲ್ಲಿ ಕೆಸರಿರಬೇಕೇ ಹೊರತು ನೀರಿರಬಾರದು. ನೀರಿದ್ದರೆ ಬಿತ್ತನೆ ಬೀಜ ತೇಲುವುದಲ್ಲದೇ ಬಿತ್ತಿದ ಬೀಜ ಕೊಳೆಯುತ್ತದೆ. ಬಿತ್ತಿದ ಸುಮಾರು 10 ರಿಂದ 15 ದಿವಸಗಳವರೆಗೆ ತೇವ ಆರದಂತೆ ಮತ್ತು ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಪೈರು ಬೆಳೆದ ಹಾಗೆ ತೆಳುವಾಗಿ ನೀರು ನಿಲ್ಲಿಸಿ, ನಂತರ ನೀರಿನ ಪ್ರಮಾಣವನ್ನು ಎರಡು ಇಂಚು ಮೀರದಂತೆ ನೋಡಿಕೊಳ್ಳಬೇಕು. 

ಬಿತ್ತಿದ 20 ಮತ್ತು 25 ದಿವಸಗಳಲ್ಲಿ ಭತ್ತದ ಪೈರು ಕಡಿಮೆ ಇದ್ದಲ್ಲಿ, ಒತ್ತಾಗಿ ಬಂದಿರುವ ಕಡೆ ಭತ್ತದ ಪೈರನ್ನು ಕಿತ್ತು ನಾಟಿ ಮಾಡಬೇಕು. ನೇರ ಬಿತ್ತನೆ ತಾಕಿನಲ್ಲಿ ನೀರು ನಿರ್ವಹಣೆ ಅತಿ ಮುಖ್ಯ. ಬೀಜ ಬಿತ್ತಿದ 2 ವಾರದವರೆಗೆ ಗದ್ದೆಯಲ್ಲಿ ತೇವ ಆರದಂತೆ ಹಾಗೂ ಹೆಚ್ಚು ನೀರೂ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.

ಬೆಳವಣಿಗೆಗೆ ಅನುಕೂಲವಾಗಿ ನೀರಿನ ಮಟ್ಟ ಹೆಚ್ಚಿಸಿ ಕೊನೆ ತನಕ ನೀರಿನ ಮಟ್ಟ 2 ಅಂಗುಲ ಮೀರದಂತೆ ನೋಡಿಕೊಳ್ಳಬೇಕು. ಕಟಾವಿಗೆ ಹತ್ತು ದಿವಸ ಮುಂಚಿತವಾಗಿ ನೀರು ಹಾಯಿಸುವುದನ್ನು ತಪ್ಪಿಸಿ ಭೂಮಿ ಒಣಗಲು ಅನುವು ಮಾಡಿ ನಂತರ ಕಟಾವು ಮಾಡುವುದು ಒಳ್ಳೆಯದು. ಎಕರೆಗೆ 1,200 ರೂಪಾಯಿ ಖರ್ಚು ಮಾಡಿ 21 ಕ್ವಿಂಟಾಲ್ ಇಳುವರಿ ಪಡೆದಿರುವ ಮಂಡ್ಯ ಜಿಲ್ಲೆಯ ಕುರಿಕೊಪ್ಪಲು ಗ್ರಾಮದ ಆನಂದ್ ಅವರ ಸಂಪರ್ಕಕ್ಕೆ 9663162514.

(ಲೇಖಕರು ಮಣ್ಣು ಮತ್ತು ನೀರು ನಿರ್ವಹಣಾ ಇಲಾಖೆ ಮಂಡ್ಯ ವಿಭಾಗದ ಸಹ ಪ್ರಾಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT