ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿ ಮೊಗ್ಗು, ಹಿಗ್ಗು

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಆಹಾರಕ್ಕೆ ವಿಶೇಷ ಪರಿಮಳ ಮತ್ತು ರುಚಿ ಬರುವುದೇ ಸಾಂಬಾರ ಪದಾರ್ಥಗಳಿಂದ. ಲವಂಗ, ಇಂಗು, ದಾಲ್ಚಿನ್ನಿ, ಜಾಯಿಕಾಯಿ, ಕಾಳುಮೆಣಸು, ಶುಂಠಿ... ಎಲ್ಲವೂ ಗೊತ್ತು. ಆದರೆ ಇದೇ ಸಾಲಿಗೆ ಸೇರಿರುವ ಮರಾಠಿ ಮೊಗ್ಗು ಬಗ್ಗೆ ಮಾತ್ರ ಹಲವರಿಗೆ ಗೊತ್ತೇ ಇಲ್ಲ. ಪಲಾವ್‌ಗೆ ಮೊಗ್ಗು ಹಾಕಿಲ್ಲ ಅಂದರೆ ರುಚಿ ಇಲ್ಲ. ಬಿಸಿಬೇಳೆ ಬಾತ್‌ಗೆ ಮೊಗ್ಗು ಬೇಕೇ ಬೇಕು. ಆದರೂ ಸಾಂಬಾರ ಪದಾರ್ಥವೆಂದು ಇದುವರೆಗೆ ಪರಿಗಣಿಸಲಿಲ್ಲ, ಹಾಗಾಗಿ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದೇ ಇಲ್ಲ!

ಏನಿದು ಮರಾಠಿ ಮೊಗ್ಗು?
ನೋಡಲು ಲವಂಗದಂತಿದ್ದರೂ ಮರಾಠಿ ಮೊಗ್ಗು ಗಾತ್ರದಲ್ಲಿ ದೊಡ್ಡದು. ಒಂದು-ಒಂದೂವರೆ ಇಂಚು ಉದ್ದ. ಬೂದು ಬಣ್ಣ. ಬಾಗಿರುವ ತೊಟ್ಟು. ಲವಂಗದ ತೊಟ್ಟಿನ ತುದಿಯಲ್ಲಿರುವಂತೆ ಅಂಚುಗಳಿಲ್ಲ. ವೃತ್ತಾಕಾರ, ತೊಟ್ಟಿಗಂಟಿರುವ ಶಂಕು ಆಕಾರದ ಮೊಗ್ಗು. ದಾಸ್ತಾನಿಟ್ಟರೆ ಕಾಳುಮೆಣಸಿನಂತಹ ಒಂದು ರೀತಿಯ ಘಾಟು. ಇತರ ಸಾಂಬಾರ ವಸ್ತುಗಳಂತೆ ಸುವಾಸನೆ, ರುಚಿ ಇಲ್ಲ. 

ಬಯಲುಸೀಮೆ ಮತ್ತು ಮಲೆನಾಡಿನಲ್ಲಿ ಕಂಡುಬರುವ ಬೂರುಗದ ಮರವೇ ಮರಾಠಿ ಮೊಗ್ಗಿನ ಮೂಲ. ಈ ಮರಕ್ಕೆ ಮರ ಹತ್ತಿ, ಕೋಡು ಹತ್ತಿ ಅಥವಾ ಕೆಂಪು ಬೂರುಗ ಅನ್ನುವ ಹೆಸರಿದೆ. ವೈಜ್ಞಾನಿಕ ಹೆಸರು ಬಾಂಬೆಕ್ಸ್ ಸೀಬಾ. ಸಂಸ್ಕೃತದಲ್ಲಿ ಶಾಲ್ಮಲೀ, ಹಿಂದಿಯಲ್ಲಿ ರಗತ್ ಸೆಮಲ್ ಮತ್ತು ಇಂಗ್ಲಿಷ್‌ನಲ್ಲಿ ರೆಡ್ ಸಿಲ್ಕ್ ಕಾಟನ್ ಅನ್ನುವ ಹೆಸರಿದೆ. ಇದು ನಲ್ವತ್ತರಿಂದ ಅರುವತ್ತು ಅಡಿ ಎತ್ತರ ಬೆಳೆಯುವ ಬೃಹತ್ ಗಾತ್ರದ ಮರ. ಈ ಮರದ ಕಾಂಡದ ಮೇಲೆ ಕೋನಾಕಾರದ ಮುಳ್ಳುಗಳಿವೆ. ಕೈಯಂತಿರುವ ಸಂಯುಕ್ತ ಎಲೆಯಲ್ಲಿ ಐದಾರು ಕಿರು ಎಲೆಗಳಿರುತ್ತವೆ.

ಜನವರಿಯಲ್ಲಿ ಮರದ ಎಲೆ ಉದುರಿ ಪೂರ್ತಿ ಬೋಳಾಗುತ್ತದೆ. ರೆಂಬೆಕೊಂಬೆಗಳಲ್ಲಿ ಹೂವಿನ ಮೊಗ್ಗುಗಳು ಹುಟ್ಟುತ್ತವೆ. ಶಿವರಾತ್ರಿ ಹಬ್ಬದ ಸಮಯಕ್ಕೆ ರೆಂಬೆಗಳ ಮೇಲೆ ದೊಡ್ಡದೊಡ್ಡ ಕೆಂಪು ಹೂಗಳು ಕಾಣಿಸುತ್ತವೆ. ಹೂವಿಗೆ ದಾಸವಾಳದಂತೆ ಐದು ಎಸಳು. ಮರವಿಡೀ ಕೆಂಪುಕೆಂಪಾಗಿ ಕಾಣಿಸುವಷ್ಟು ಹೂವು ಬಿಡುತ್ತವೆ. ಹೂವು ಉದುರಿದ ಮೇಲೆ ಉದ್ದನೆಯ ಹತ್ತಿಯ ಕೋಡು ಬೆಳೆಯುತ್ತದೆ. ಈ ಹತ್ತಿಯನ್ನು ಕೂಡಾ ಹಾಸಿಗೆ ತಯಾರಿಸಲು ಬಳಸುತ್ತಾರೆ.

ಅರಳಿದ ಹೂಗಳು ಒಂದೆರಡು ದಿನಗಳಲ್ಲಿ ಉದುರಿ ಬೀಳುತ್ತವೆ. ಹೂವಿನ ತೊಟ್ಟಿನೊಂದಿಗಿನ ಹೀಚುಕಾಯಿ ಬೆಳೆದರೆ ಹತ್ತಿ ಕೋಡಾಗುತ್ತದೆ. ಬೆಳೆಯದೆ ತೊಟ್ಟು ಸಮೇತ ಉದುರಿದರೆ ಅವೇ  ಬೂರುಗದ ಮೊಗ್ಗುಗಳು. ಅವುಗಳನ್ನು ಒಣಗಿಸಿದರೆ ಸುಕ್ಕುಗಟ್ಟಿ ಚಿಕ್ಕದಾಗುತ್ತವೆ. ಅವೇ ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಮರಾಠಿ ಮೊಗ್ಗು. ಬೂರುಗದ ಮರದ ಹೂವಿಗೆ ಆಕರ್ಷಿತರಾಗಿ ಬರುವ ಹಕ್ಕಿಗಳ ಕಾಲಿಗೆ ಸಿಕ್ಕುವುದೇ ಈ ಮೊಗ್ಗುಗಳು ಉದುರಲು ಮುಖ್ಯ ಕಾರಣ. ಇದು ಮೊತ್ತಮೊದಲು ಮರಾಠರ ಪಾಕದಲ್ಲಿ ಬಳಕೆಯಾಗಿರಬಹುದು ಅಥವಾ ಅವರು ಜಾಸ್ತಿ ಬಳಸುತ್ತಿರುವುದರಿಂದ `ಮರಾಠಾ ಮೊಗ್ಗು' ಎಂದು ಹೆಸರು ಬರಲು ಕಾರಣ ಎನ್ನುತ್ತಾರೆ. ಈಗ ನಮ್ಮ ರಾಜ್ಯದ ಎಲ್ಲಾ ಭಾಗದಲ್ಲೂ ಇದರ ಬಳಕೆ ಇದೆ.

ರುಚಿ ಹೆಚ್ಚಿಸುವ ಗುಣ
ಒಂದು ಕ್ವಿಂಟಾಲ್ ಅಕ್ಕಿಯ ಪಲಾವ್ ಮಾಡುವಾಗ ಒಂದು ಕಿಲೋದಷ್ಟು ಪ್ರಮಾಣದ ಮರಾಠಿ ಮೊಗ್ಗು ಬೇಕಾಗುತ್ತದೆ. ಇದನ್ನು ಮೊದಲು ನೀರಿನಲ್ಲಿ ನೆನೆಸಿ, ಇತರೆ ಮಸಾಲೆಗಳೊಂದಿಗೆ ಎಣ್ಣೆಯಲ್ಲಿ ಹುರಿದು ಅನ್ನದೊಡನೆ ಬೇಯಿಸುತ್ತಾರೆ. ಇದರಲ್ಲಿರುವ ಲೋಳೆಯಂತಹ ಪದಾರ್ಥಕ್ಕೆ ಅಡುಗೆಯ ರುಚಿ ಹೆಚ್ಚಿಸುವ ಗುಣವಿದೆ ಎನ್ನುತ್ತಾರೆ ಬಾಣಸಿಗರು. ಇತರೆ ಸಾಂಬಾರ ಪದಾರ್ಥಗಳಂತೆ ಮರಾಠಿ ಮೊಗ್ಗಿಗೂ ಕೂಡಾ ಔಷಧೀಯ ಗುಣವಿದೆ.

ಬೂರುಗ ಮರವೇ ಔಷಧೀಯ ಗುಣದ ಆಗರ. ಅಭಯಾರಿಷ್ಟ, ಉಶಿರಾಸವ, ನರಸಿಂಹ ಲೇಹ್ಯ, ಔಜೋಲ, ಜೀವನಿ, ಪುಷ್ಯಾನುಗ ಚೂರ್ಣ, ಶಾಲ್ಮಲೀ ಚೂರ್ಣಗಳ ತಯಾರಿಕೆಯಲ್ಲಿ ಇದರ ಭಾಗಗಳನ್ನು ಉಪಯೋಗಿಸುತ್ತಾರೆ. ಈ ಔಷಧಿಗಳು ಸೌಂದರ್ಯ-ವೀರ್ಯವರ್ಧಕ, ಮೂತ್ರಕೋಶ ಮತ್ತು ಸ್ತ್ರೀ ಸಂಬಂಧಿ ಕಾಯಿಲೆಗಳಲ್ಲೂ ಬಳಕೆಯಾಗುತ್ತವೆ. ಮರದ ಅಂಟು ಮಲಬದ್ಧತೆ ತಡೆಯುತ್ತದೆ. ಮರಾಠಿ ಮೊಗ್ಗಿನ ಲೋಳೆಯೂ ಮೂಲವ್ಯಾಧಿ ನಿವಾರಣೆಗೆ ಸಹಾಯವಾಗಬಹುದು. ಪಿತ್ತಕೋಶದ ಮತ್ತು ಮೂತ್ರಪಿಂಡದ ಕಲ್ಲು ಕರಗಿಸುವ ಗುಣ ಇದಕ್ಕಿದೆ ಅನ್ನುತ್ತಾರೆ ಆಯುರ್ವೇದ ತಜ್ಞರು.

ರಾಮನಗರ ಜಿಲ್ಲೆಯ ಚಿಕ್ಕಸಾಧೇನಹಳ್ಳಿಯಲ್ಲಿರುವ ನೂರು ವರ್ಷದ ಬೂರುಗ ಮರ ಎಲ್ಲರ ಗಮನ ಸೆಳೆಯುತ್ತಿದೆ. ಕಾಂತಣ್ಣ ಅನ್ನುವವರ ಹೊಲದಲ್ಲಿರುವ ಈ ಮರದಿಂದ ಉದುರುವ ಮೊಗ್ಗನ್ನು ಮಕ್ಕಳೆಲ್ಲಾ ಸೇರಿ ಆಯುತ್ತಾರೆ. ಒಂದೇ ಮರದಿಂದ ಪ್ರತೀ ವರ್ಷ ನೂರರಿಂದ ನೂರೈವತ್ತು ಕೆ.ಜಿ ಮೊಗ್ಗು ಸಂಗ್ರಹಿಸುತ್ತಾರೆ. ಒಂದು ಕೆ.ಜಿಗೆ 250 ರೂಪಾಯಿ ಧಾರಣೆ ಇದೆ. ಬಯಲು ಸೀಮೆಯ ಹೊಲಗಳಲ್ಲಿರುವ ಮರಗಳ ಬುಡದಿಂದ ಮಕ್ಕಳು ಈ ಮೊಗ್ಗುಗಳನ್ನು ಸಂಗ್ರಹಿಸಿ ಮಾರುತ್ತಾರೆ. ಮಲೆನಾಡಿನಲ್ಲಿ ಗಿರಿಜನರು ಕಾಡಿನಿಂದ ಸಂಗ್ರಹಿಸಿ ಪೇಟೆಯಲ್ಲಿರುವ ಮಂಡಿಗಳಿಗೆ ತಂದು ಮಾರುತ್ತಾರೆ.

ಯಾವುದೇ ಉಪಯೋಗವಿಲ್ಲದ ಮರವೆಂಬ ಹಣೆಪಟ್ಟಿ ಹೊತ್ತಿರುವ ಬೂರುಗದ ಮರದ ಬೆಲೆ ಹಿಗ್ಗಬೇಕಾದರೆ ಮರಾಠಿ ಮೊಗ್ಗು ಆಯ್ದು ಮಾರಿದರೆ ಸಾಕು !
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT