ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಸುಂದರಿ ಡೇರೆ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಳೆಗಾಲ ಪ್ರಾರಂಭವಾದೊಡನೆ ಎಲ್ಲ ಕಡೆಗಳಲ್ಲಿಯೂ ಕೃಷಿ ಚಟುವಟಿಕೆಗಳು ಚುರುಕುಗೊಂಡು ರೈತಾಪಿ ವರ್ಗ ಕ್ರಿಯಾಶೀಲರಾಗುವುದು ಸರ್ವೇಸಾಮಾನ್ಯ. ಇದರೊಂದಿಗೆ ಮಲೆನಾಡಿನ ಮನೆಗಳಲ್ಲಿ ಕೈತೋಟವನ್ನು ಬೆಳೆಸುವ, ಸುಂದರಗೊಳಿಸುವ ಕೆಲಸಗಳೂ ವೇಗ ಪಡೆಯುತ್ತವೆ. ಮನೆಯಂಗಳದಲ್ಲಿ ಈಗ ಡೇರೆ ಹೂವುಗಳದ್ದೇ ಕಾರುಬಾರು.

ದೊಡ್ಡದಾದ, ಅಂದವಾದ, ವಿವಿಧ ಬಣ್ಣದಲ್ಲಿ ಬಿಡುವ ಡೇರೆಗಳನ್ನು ಬೆಳೆಯುವುದು ಮಲೆನಾಡಿನ ಗೃಹಿಣಿಯರ ನೆಚ್ಚಿನ ಹವ್ಯಾಸವೂ ಹೌದು. ತಂಪಾದ ಹವಾಗುಣ ಮತ್ತು ಅಧಿಕ ಪ್ರಮಾಣದ ಮಳೆ ಮಲೆನಾಡನ್ನು ಡೇರೆ ಗಿಡ ಬೆಳೆಯಲು ಅತ್ಯಂತ ಯೋಗ್ಯ ತಾಣವನ್ನಾಗಿಸಿದೆ.
 
80 ಬಗೆ
ಡೇರೆಯಲ್ಲಿ ಸರಿಸುಮಾರು 80ಕ್ಕೂ ಅಧಿಕ ಪ್ರಕಾರಗಳಿವೆ. ಸುದರ್ಶನ ಕಡ್ಡಿ, ಲಿಲ್ಲಿಪುಟ್ಟಿ, ಜಮಖಾನ ಪಟ್ಟೆ, ಯಜ್ಞಕುಂಡ, ಡಬಲ್ ಅರಿಸಿನ, ಕೇಸರಿ ಕೊಟ್ಟೆ ಮುಂತಾಗಿ ಪ್ರತಿಯೊಂದು ಬಗೆಗೂ ತನ್ನದೇ ಆದ ಸ್ಥಳೀಯ ಹೆಸರಿದೆ. ವೈಜ್ಞಾನಿಕವಾಗಿ ಒಂದು ಡೇರೆ ಅಂದರೆ ಅದು ಹಲವು ಹೂವುಗಳು ಸೇರಿ ಆದ ಹೂಗೊಂಚಲು. ಡೇರೆ ಹೂವಿನ ಮಧ್ಯಭಾಗದಲ್ಲಿರುವ ಸಪೂರಾದ ರಚನೆಯನ್ನು ದ್ವಿಲಿಂಗಿ ಹೂವೆಂದು, ತುದಿಯಲ್ಲಿ ಕಾಣುವ ಹೂವಿನ ಪಕಳೆಯಂತಿರುವ ರಚನೆಯನ್ನು ಹೆಣ್ಣು ಹೂವೆಂದು ಕರೆಯಲಾಗುತ್ತದೆ.

ಹೀಗೆ ನೆಡಿ
ಗಿಡದ ಬುಡದಲ್ಲಿ ಬೆಳೆಯುವ ಗಡ್ಡೆಗಳಿಂದ ಹೊಸ ಸಸ್ಯಗಳನ್ನು ಬೆಳೆಸಬಹುದಾಗಿದೆ. ಹಿಂದಿನ ವರ್ಷ ಬೆಳೆದ ಡೇರೆ ಗಿಡದ ಗಡ್ಡೆಯನ್ನು ಒಣಗಿಸಿ ನಂತರ ಅದನ್ನು ಹುಳಹುಪ್ಪಡಿಗಳಿಲ್ಲದ ಒಣ ಮಣ್ಣಿನಲ್ಲಿ ಶೇಖರಿಸಿಡಬೇಕು. ನಂತರ ಮಳೆಗಾಲದ ಆರಂಭದಲ್ಲಿ ಪ್ಲಾಸ್ಟಿಕ್ ಅಥವಾ ನೀರಿನ ಚೀಲಗಳಲ್ಲಿ ಅಡಿಕೆ ಸಿಪ್ಪೆ, ಕೊಟ್ಟಿಗೆ ಗೊಬ್ಬರ ಮಿಶ್ರಿತ ಮಣ್ಣನ್ನು ತುಂಬಿ ಗಡ್ಡೆಗಳನ್ನು ಹುಗಿದು, ಚೀಲಗಳನ್ನು ಅಂಗಳದಲ್ಲಿ ಸಾಲಿನಲ್ಲಿ ಜೋಡಿಸಿಡಬೇಕು ಅಥವಾ ಬೇರೆ ಸ್ಥಳದಲ್ಲಿ ಗಡ್ಡೆಗಳಿಂದ ಬೆಳೆದ ಮರಿಗಿಡ (ಹಿಳ್ಳು)ಗಳನ್ನು ತಂದು ಚೀಲಗಳಲ್ಲಿ ನೆಟ್ಟು ಜೋಡಿಸಬಹುದು. 

ಇನ್ನು ಕೆಲವು ಕಡೆಗಳಲ್ಲಿ ಮಣ್ಣಿನ ಸಾಲುಗಳನ್ನು ಏರಿಸಿಯೂ ಗಿಡವನ್ನು ನೆಡಲಾಗುತ್ತದೆ. ಸಮಪ್ರಮಾಣದಲ್ಲಿ ಮಳೆಯಾದರೆ ಗಿಡನೆಟ್ಟು ಒಂದೂವರೆ ತಿಂಗಳಿನಲ್ಲಿಯೇ ಹೂವುಗಳು ಬಿಡಲು ಪ್ರಾರಂಭವಾಗುತ್ತದೆ.  ಹೆಚ್ಚು ಕಡಿಮೆ ಮಳೆಗಾಲ ಮುಗಿಯುವ ತನಕವೂ ಗಿಡ ಹಸಿರಾಗಿದ್ದು, ಹೊಸ ಹೆಣೆಗಳನ್ನು ನೀಡುತ್ತ ಹೂ ಬಿಡುತ್ತಲೇ ಇರುತ್ತದೆ.

ಮಹಿಳೆಯರ ಪಾತ್ರ
ಮಳೆಗಾಲ ಬಂತೆಂದರೆ ಬೇರೆಬೇರೆ ಕಡೆಗಳಿಂದ ಡೇರೆ ಗಡ್ಡೆಗಳನ್ನು ತಂದು ನೆಡುವ, ತಮ್ಮಲ್ಲಿರುವ ಗಿಡದ ಗಡ್ಡೆ ನೀಡುವ ಕೆಲಸದಲ್ಲಿ ಬಹುತೇಕ ಮಹಿಳೆಯರು ನಿರತ. ಗಿಡಗಳು ಬೆಳೆದ ಮೇಲೆ ಕಳೆ ಕೀಳುವುದು ಹಾಗೂ ಗಿಡಗಳು ಬಗ್ಗದಂತೆ ಕೋಲು ಕೊಡುವ ಕಾರ್ಯವೂ ಭರದಿಂದ ಸಾಗುತ್ತವೆ.

ಇತ್ತೀಚಿನ ದಿನಗಳಲ್ಲಿ ನಗರಗಳಂತೆ ಹಳ್ಳಿಗಳಲ್ಲೂ ಪಾಟಿ ಕಲ್ಲು ಅಥವಾ ಸಿಮೆಂಟ್ ಅಂಗಳಗಳೇ ಕಾಣುತ್ತವೆ. ಆದರೂ ಮಳೆಗಾಲದಲ್ಲಿ ಮಾತ್ರ ಈ ಸಿಮೆಂಟಿನ ಮನೆಯಂಗಳಗಳು ಸುಂದರ ಡೇರೆ ಹೂಬನಗಳಾಗಿ ಮಾರ್ಪಾಟಾಗುತ್ತವೆ. ಮಣ್ಣಿನ/ ಸಿಮೆಂಟ್ ಅಂಗಳದಲ್ಲಿ ಮಳೆಗಾಲದಲ್ಲಿ ಒಂದಿಷ್ಟು ಹೂವಿನ ಗಿಡಗಳನ್ನು ನೆಟ್ಟು, ಪರೋಕ್ಷವಾಗಿ ಪರಿಸರವನ್ನು ಹಾಗೂ ಜೀವವೈವಿಧ್ಯತೆಯನ್ನು ಸಂರಕ್ಷಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. 
-ಪ್ರೊ. ಶಿವಾನಂದ ಎಸ್. ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT