ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಮೋಸಂಬಿ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಆದಾಯಕ್ಕಿಂತ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತಿರುವ ಈ ದಿನಗಳಲ್ಲಿ ಸಾವಯವ ಕೃಷಿ ಮೂಲಕ ಇದನ್ನು ಸುಳ್ಳು ಮಾಡಿ ತೋರಿಸಿದ್ದಾರೆ ಯಾದಗಿರಿ ಜಿಲ್ಲೆಯ ಕಂದಕೂರಿನ ರೈತ ತಿಮ್ಮಾರೆಡ್ಡಿ ಚೆನ್ನನಾಗಿರೆಡ್ಡಿ. ಸುಮಾರು 15 ಎಕರೆ ಹೊಲದಲ್ಲಿ ಅವರು ಬೆಳೆದಿರುವ ಮೋಸಂಬಿ ಮತ್ತು ಮಾವು ಫಸಲು ಗಿಡಗಳನ್ನೇ ಬಾಗಿಸುವಷ್ಟು ಭರ್ಜರಿಯಾಗಿವೆ.

ದುಬಾರಿ ರಸಗೊಬ್ಬರ, ಔಷಧಿಗಳನ್ನು ಬಳಸಿ ಬೆಳೆದರೂ ಇಷ್ಟೊಂದು ಆರೋಗ್ಯಪೂರ್ಣ ಮತ್ತು ಸಮೃದ್ಧ ಫಸಲು ದೊರೆಯಲಾರದು ಎಂಬಂತಿದೆ ಈ ಹೊಲದಲ್ಲಿ ಬೆಳೆದ ಮಾವು ಮತ್ತು ಮೋಸಂಬಿ ಪೈರು. ಐದು ವರ್ಷಗಳ ಹಿಂದೆ ಬೆಳೆಯಲಾದ ಈ ಗಿಡಗಳು ಈಗ ಭರ್ಜರಿಯಾಗಿ ಕಾಯಿ ಬಿಟ್ಟಿವೆ. ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಬೇವಿನ ಗೊಬ್ಬರಗಳೇ ಈ ಫಸಲಿನ ಬಂಡವಾಳ. ಎಲ್ಲಿಯೂ ರಾಸಾಯನಿಕ ಬಳಸಿಲ್ಲ.

ಸಾಧನೆ ವಿವರಿಸುವ ತಿಮ್ಮಾರೆಡ್ಡಿ, `10 ಎಕರೆಯಲ್ಲಿ 1,500 ಮೋಸಂಬಿ ಗಿಡಗಳಿವೆ. ಪ್ರತಿಯೊಂದು ಗಿಡಗಳು 30-40 ಕಾಯಿ ಬಿಟ್ಟಿವೆ. ಈಗಿನ ದರದಲ್ಲಿ ಈ ಗಿಡಗಳಲ್ಲಿರುವ ಕಾಯಿಗಳನ್ನು ಮಾರಿದರೆ 3 ಲಕ್ಷ ರೂ. ಆದಾಯ ಬರುತ್ತದೆ' ಎನ್ನುತ್ತಾರೆ. ವರ್ಷಕ್ಕೆ ಎರಡು ಬೆಳೆ.

ಈ ಗಿಡಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಆರೋಗ್ಯವಾಗಿರುವಂತೆ ನೋಡಿಕೊಂಡರೆ ಕನಿಷ್ಠ 20 ವರ್ಷ ಬೆಳೆ ನೀಡುತ್ತವೆ. ಈಗ ನಾಲ್ಕು ವರ್ಷ ಬಂಡವಾಳ ತೊಡಗಿಸಿ ಆರೈಕೆ ಮಾಡಿದ್ದಾಯಿತು. ಇನ್ನು ಫಲ ನೀಡಲಾರಂಭಿಸಿವೆ. ಇನ್ನು ಗೊಬ್ಬರ ಕೊಡುತ್ತಾ ಮೇಲುಸ್ತುವಾರಿ ನೋಡಿಕೊಳ್ಳುತ್ತಿರಬೇಕು. ಇನ್ನು ಮುಂದೆ ಅಂತಹ ಹೆಚ್ಚಿನ ವೆಚ್ಚವೇನೂ ಬರುವುದಿಲ್ಲ ಎನ್ನುತ್ತಾರೆ ಅವರು.

ಹೈದರಾಬಾದ್‌ನಲ್ಲಿ ಮಾರುಕಟ್ಟೆ ಇರುವುದರಿಂದ ಅಲ್ಲಿಗೇ ಹೋಗಿ ಮಾರಾಟ ಮಾಡಬಹುದು. ವ್ಯಾಪಾರಿಗಳೇ ಇಲ್ಲಿಗೆ ಬಂದು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಒಂದು ಟನ್‌ಗೆ 30ರಿಂದ 40 ಸಾವಿರ ತನಕ ದರವಿದೆ.

ಬೀಜೋಪಚಾರ
`ಸಾವಯವ ಕೃಷಿಯಲ್ಲಿ ಪ್ರಪ್ರಥಮವಾಗಿ ಬೀಜೋಪಚಾರ ಅತ್ಯಂತ ಮುಖ್ಯವಾದ ಕೆಲಸ. ಅತ್ಯಂತ ಕಟ್ಟುನಿಟ್ಟಾಗಿ ಬೀಜಾಮೃತ ಮಾಡುವುದರಿಂದ ಆ ಬೀಜದಿಂದ ಬರುವ ಫಸಲಿಗೆ ಯಾವುದೇ ರೀತಿಯ ರೋಗ ಬರುವುದಿಲ್ಲ' ಎನ್ನುವುದು ತಿಮ್ಮಾರೆಡ್ಡಿ ಅಭಿಮತ. ಸಾವಯವ ಕೃಷಿ ಬೆಳೆಯಿಂದ ಭೂಮಿ ತಂಪಾಗಿರುತ್ತದೆ, ಮೃದುವಾಗುತ್ತದೆ ಎನ್ನುತ್ತಾರೆ ಇನ್ನೊಬ್ಬ ಸಾವಯವ ಕೃಷಿಕ ಚಿನ್ನಾಕಾರದ ಗುಂಜಾಳಪ್ಪ ನಾಯಕ. ಅವರಿಗೆ ಸಾವಯವ ಕೃಷಿಯಲ್ಲಿ ಒಣ ಭೂಮಿಯಲ್ಲೇ ಹೆಸರು, ಉದ್ದು, ತೊಗರಿ, ಹುಣಸೆ, ಮಾವು, ಸುಬಾಬುಲ್ ಬೆಳೆದ ಅನುಭವಿದೆ.

ಉತ್ಪಾದನಾ ವೆಚ್ಚ ಹೆಚ್ಚಾದ್ದರಿಂದ ಆದಾಯ ಕಡಿಮೆಯಾಗಿ ಈ ಭಾಗದ ಜನರ ಹತ್ತಾರು ಕೂರಿಗೆ ಹೊಲವಿದ್ದರೂ ಇನ್ನೊಬ್ಬರಲ್ಲಿ ಕೆಲಸ ಮಾಡಿ ಹೊಟ್ಟೆ ಹೊರೆಯಲು ವಲಸೆ ಹೋಗುತ್ತಿದ್ದಾರೆ. ಸಂಪರ್ಕಕ್ಕೆ- 9741970206.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT