ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಮಾದರಿ ಕೇರಳದ ಕೃಷಿ

Last Updated 21 ನವೆಂಬರ್ 2016, 19:30 IST
ಅಕ್ಷರ ಗಾತ್ರ

ತರಕಾರಿ ಆಗಲೀ, ಹಣ್ಣಾಗಲೀ, ಸ್ಥಳೀಯದ್ದೇ ಚೆನ್ನ ಎನ್ನುತ್ತೇವೆ. ಆದರೂ ದೂರದ ಉತ್ಪನ್ನಕ್ಕೆ ಮನಸೋಲುವುದು ಸಹಜ. ಹಿಮಾಲಯದ ತಪ್ಪಲಿನವರಿಗೆ ತೆಂಗಿನಕಾಯಿ ಅಚ್ಚುಮೆಚ್ಚು, ನಮ್ಮೂರಿನವರಿಗೆ ಸೇಬು ಇಷ್ಟ... ಹೀಗೆ...

‘ಗೋಬಿ ಮಂಚೂರಿ’ ಅಂತೂ ದಕ್ಷಿಣ ಭಾರತದ ದೌರ್ಬಲ್ಯ ಆಗಿಬಿಟ್ಟಿದೆ. ಅಂತರ್ಗತ ರಸವಿಷದ ಬಗ್ಗೆ ಗೊತ್ತಿರುವವರಿಗೂ ಹೂಕೋಸು (ಗೋಬಿ) ಬೇಕು. ಅದಿಲ್ಲದೇ ನಡೆಯುವುದಿಲ್ಲ. ರಾಸಾಯನಿಕ ಪೀಡೆನಾಶಕಗಳ ಬಗ್ಗೆ ಜಾಗೃತವಾಗಿರುವ ರಾಜ್ಯ ಕೇರಳ.

ನಾಮಮಾತ್ರಕ್ಕೆ ಎಲೆಕೋಸು, ಹೂಕೋಸು ಬೆಳೆಯುತ್ತಿದ್ದ ಕೇರಳದಲ್ಲಿ ಈಗ ಚಿತ್ರ ಬದಲಾಗಿದೆ. ಚಳಿಗಾಲದ ತರಕಾರಿ ಗಿಡಗಳು ಬಂದಿವೆ. ಶೀತಕಾಲ ತರಕಾರಿ ಕೃಷಿ ಬೇರುಬಿಡತೊಡಗಿದೆ. ಜನಪ್ರಿಯವೂ ಆಗಿದೆ. ಈಗ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಚಳಿಗಾಲದ ತರಕಾರಿಗಳಾದ ಕ್ಯಾಬೇಜು, ಕಾಲಿಫ್ಲವರ್, ಬೀಟ್‌ರೂಟ್, ಕ್ಯಾರೆಟ್, ಮೂಲಂಗಿಗಳ ಗಿಡ ಲಭ್ಯ.

ಕೇರಳವನ್ನು ಗೆದ್ದ ಈ ಬೆಳೆಗಳು ಕರ್ನಾಟಕ ಕರಾವಳಿಯನ್ನೂ ಗೆಲ್ಲಬಲ್ಲವು. ಈ ನಿಟ್ಟಿನಲ್ಲಿ ಕೇರಳ ನಮಗೆ ಮಾದರಿಯಾಗಬಲ್ಲುದು. ನವೆಂಬರಿನಿಂದ ಮಾರ್ಚ್‌ವರೆಗೆ ಉಷ್ಣತೆ 35 ಡಿಗ್ರಿಗಿಂತ ಮೇಲೇರದ ಪ್ರದೇಶಗಳಲ್ಲೆಲ್ಲಾ ಈ ಬೆಳೆ ಬೆಳೆಯಬಹುದು. ಆದರೆ ಆಯ್ದ ತಳಿ ಬೀಜ ಬಳಸಿ ಟ್ರೇ ಗಿಡ ಮಾಡಿಕೊಡುವ ಏಜೆನ್ಸಿ ಬೇಕಾಗಿದೆ. ಕೇರಳದ ತ್ರಿಶೂರು ಬಳಿಯ ಅರೂರಿನ ಜೋಸ್ ಆರು ವರ್ಷಗಳಿಂದ ಹೂಕೋಸು, ಎಲೆಕೋಸು ಬೆಳೆಸುತ್ತಿದ್ದಾರೆ.

ಚಳಿಗಾಲದಲ್ಲಿ ಒಂದು ಬೆಳೆ ಮಾತ್ರ ಇಲ್ಲಿ ಸಾಧ್ಯ. ಅನುಕೂಲ ಸೀಸನ್‌ನಲ್ಲಿ ಮಾತ್ರ ಬೆಳೆಯುವ ಕಾರಣ ಕೀಟ-ರೋಗ ಸಮಸ್ಯೆ ಕಡಿಮೆ. ಆದರೂ ಎಲೆ ತಿನ್ನುವ ಕೀಟಗಳ ಸಮಸ್ಯೆ ಇದ್ದೇ ಇದೆ. ಜೋಸ್, ಬೆಳ್ಳುಳ್ಳಿ- ಹಸಿಮೆಣಸು ಕಷಾಯದಂತಹ ಜೈವಿಕ ಕೀಟನಾಶಕ ಬಳಸುತ್ತಾರೆ. ಗೊಬ್ಬರವಾಗಿ ಗೋಮೂತ್ರ, ಕಡಲೆ ಹಿಂಡಿ, ಸೆಗಣಿ ಬಳಸುತ್ತಾರೆ. ಆರಂಭದಲ್ಲಿ ಚಿಕ್ಕ ಪ್ರಮಾಣದಲ್ಲಿ ಬೆಳೆದು ಮನೆ ಖರ್ಚಿಗೆ ಬಳಸುತ್ತಿದ್ದರು.

ಈಚೆಗೆ ಮಾರಾಟಕ್ಕೂ ಆರಂಭಿಸಿದ್ದಾರೆ. ಇವರಲ್ಲಿ ಕಾಲಿಫ್ಲವರಿಗೆ ಕ್ಯಾಬೇಜಿನಿಂದಲೂ ಹೆಚ್ಚು ಬೇಡಿಕೆಯಂತೆ. ಕ್ಯಾಬೇಜು ಎರಡು ಕೆ.ಜಿವರೆಗೂ ಬರುತ್ತದೆ. ಕಾಲಿಫ್ಲವರ್ ಸ್ವಲ್ಪ ಚಿಕ್ಕದು. ಕ್ಯಾಬೇಜಿನಷ್ಟು ದೊಡ್ಡದಾಗಿ ಹೂಕೋಸು ಬೆಳೆಯುವುದಿಲ್ಲ. ‘ಎರಡನ್ನೂ 40–50 ರೂಪಾಯಿಗೆ ಒಂದರಂತೆ ಮಾರಿಬಿಡುತ್ತೇನೆ’ ಎನ್ನುತ್ತಾರೆ.

ತ್ರಿಶೂರಿನ ಕುಟ್ಟೂರಿನಲ್ಲಿರುವ ಕೃಷ್ಣಾನಂದನ್ ಆಚಾರಿ ಚಳಿಗಾಲ ತರಕಾರಿ ಬೆಳೆಸತೊಡಗಿ ವರ್ಷ ಒಂಬತ್ತು ಆಗಿದೆ. ಮೊದಮೊದಲು ಅವರು ಚಿತ್ರದುರ್ಗದಿಂದ ಬೀಜ ತಂದು ಬೆಳೆಸುತ್ತಿದ್ದರು. ಕೇರಳ ಕೃಷಿ ವಿಶ್ವವಿದ್ಯಾಲಯದಿಂದ ಗಿಡ ಉತ್ಪಾದಿಸಿ ಕೊಡತೊಡಗಿದ್ದು ಇವರ ಉಮೇದು ಹೆಚ್ಚಿಸಿತು. ಈ ವರ್ಷ 300 ಹೂಕೋಸು, 200 ಎಲೆಕೋಸು ಬೆಳೆಸುತ್ತಿದ್ದಾರೆ. ಸ್ವಲ್ಪ ರಸಗೊಬ್ಬರ ಕೊಡುತ್ತಾರೆ. ಜೈವಿಕ ಕೀಟನಾಶಿನಿ ಬಳಸುತ್ತಾರೆ.

ಕ್ಯಾಬೇಜು ಸುಮಾರು ಒಂದೂವರೆಯಿಂದ ಎರಡು ಕಿಲೋ, ಕಾಲಿಫ್ಲವರ್ 800 ಗ್ರಾಮಿನಿಂದ ಒಂದು ಕಿಲೋ ತೂಕ ಬರುತ್ತಿದೆ. ಕೃಷ್ಣಾನಂದನ್ ನಾಲ್ಕು ವರ್ಷದಿಂದ ತರಕಾರಿ ಮಾರತೊಡಗಿದ್ದಾರೆ. ಒಂದಕ್ಕೆ ₹15–20ನಂತೆ ಕೊಡುತ್ತಿದ್ದಾರೆ. ಇವರೆಲ್ಲರ ಮಾದರಿ ಇಲ್ಲೂ ಅನುಸರಣೀಯ.

ಕೃಷಿ ವಿಜ್ಞಾನಿಯೊಬ್ಬರು ಮನಸ್ಸು ಮಾಡಿದರೆ ಕೇರಳದಂತೆ ಇಲ್ಲೂ ಸಾಧನೆ ಮಾಡಲು ಸಾಧ್ಯ. ಏಕೆಂದರೆ ಕೇರಳಿಗರು ‘ಹೋಮ್ ಗ್ರೋನ್’ ಕ್ಯಾಬೇಜು ಸವಿಯುವಂತೆ ಮಾಡಿದವರು ಕೃಷಿ ವಿಜ್ಞಾ ಡಾ. ನಾರಾಯಣ ಕುಟ್ಟಿ. ಅವರಿಗೆ ಈ ಹೊಳಹು ಸಿಕ್ಕಿದ್ದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಕೇಂದ್ರದಿಂದ. ದಶಕದ ಹಿಂದೆ ಅಲ್ಲಿಗೆ ಹೋಗಿದ್ದರು. ಅಲ್ಲಿ 35 ಡಿಗ್ರಿ ಉಷ್ಣತೆಯಲ್ಲೂ ಬೆಳೆವ ಕ್ಯಾಬೇಜು ತಳಿಗಳ ಕೃಷಿ ನಡೆದಿತ್ತು. ಅಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಚಾರ ಮಂಡಿಸಿದಾಗ ಉಮೇದಿಗೆ ತಣ್ಣೀರೆರೆದವರೇ ಹೆಚ್ಚು.

‘ಇಲ್ಲಿ ಕ್ಯಾಬೇಜು ಬೆಳೆಯಲು ಆಗೋದಿಲ್ಲ ಎಂದು ಗೊತ್ತಿದ್ದರೂ ವ್ಯರ್ಥ ಯತ್ನ ಏಕೆ’ ಎಂದರು. ಆದರೆ ಇವರ ಮೇಲಧಿಕಾರಿ ಡಾ. ಯು. ಜಯಕುಮಾರನ್ ಈ ಪ್ರಯೋಗಕ್ಕೆ ಬೆಂಬಲಿಸಿ ‘ಚಿಕ್ಕದಾಗಿ ಮಾಡಿ ನೋಡಿ’ ಎಂದರು.

2006ರಲ್ಲಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಚಳಿಗಾಲದ ತರಕಾರಿ ಗಿಡ ಮೇಲೆದ್ದಿತು. ಮೊದಲ ಯತ್ನದಲ್ಲೇ ಗೆಲುವು ಸಾಧಿಸಲಾಯಿತು. ಆದರೆ, ಸವಾಲು ಅಷ್ಟಕ್ಕೇ ಮುಗಿಯಲಿಲ್ಲ. ಕೇರಳದಲ್ಲಿ ಆವರೆಗೆ ಮಣ್ಣಿನಲ್ಲಿ ನೇರ ಬೀಜ ಬಿತ್ತುವುದೇ ರೂಢಿ. ನೆರೆರಾಜ್ಯಗಳಂತೆ ‘ನರ್ಸಿಂಗ್ ಹೋಮ್‌’ನಲ್ಲಿ ಸಸಿ ಉತ್ಪಾದಿಸಿ ಪೂರೈಸುವ ಕ್ರಮವೇ ಇರಲಿಲ್ಲ. ಟ್ರೇಗಳಲ್ಲಿ ಗಿಡ ಬೆಳೆಸಿ ಕೊಡುವುದೊಂದೇ ಪರಿಹಾರವಾಗಿತ್ತು. ಆದರೆ  ನಾರಾಯಣನ್ ಕುಟ್ಟಿ ಅವರು ಎದೆಗುಂದದೇ ಮುನ್ನುಗ್ಗಿದರು. ಕ್ಯಾಬೇಜ್ ಕೃಷಿಯ ಗೆಲುವು ಕೇಳಿ ಕೃಷಿಕರು ಕೂಡಲೇ ಮುಂದೆ ಬಂದರು. ‘ನಮಗೂ ಕೊಡಿ ಗಿಡ’ ಎಂದರು. ಚಿಂತೆಯೆಲ್ಲಾ ಕರಗಿತು.

ಕಳೆದೊಂದು ದಶಕದಲ್ಲಿ ಚಳಿಗಾಲ ತರಕಾರಿಗಳು ರಾಜ್ಯಕ್ಕಿಡೀ ಹಬ್ಬಿವೆ. ತೊಂಬತ್ತು ಪಾಲು ಮಂದಿಯೂ ಮನೆಮಟ್ಟಿಗೆ ಬೆಳೆಯುವವರೇ. ಇದರ ದೊಡ್ಡ ಗುಣ ಏನು ಗೊತ್ತೇ? ಹೆಚ್ಚಾಗಿ ಹಾನಿಕಾರಕ ರಾಸಾಯನಿಕ ಸುರಿಯದಿರುವುದು. ನೆರೆಹೊರೆಯವರಿಗೆ ಚಿಕ್ಕ ಪ್ರಮಾಣದಲ್ಲಿ ಮಾರಾಟವೂ ನಡೆಯುತ್ತಿದೆ. ವಾಣಿಜ್ಯ ಮಟ್ಟದಲ್ಲಿ ಇನ್ನೂ ಯಾರೂ ಆರಂಭಿಸಿದಂತಿಲ್ಲ. ಈ ವರ್ಷ ಕೇರಳದ ಕೃಷಿ ವಿಶ್ವವಿದ್ಯಾಲಯ ಒಂದು ಲಕ್ಷ ಚಳಿಗಾಲ ತರಕಾರಿ ಗಿಡ ಮಾರಿದೆ. ಬೆಲೆ ಗಿಡಕ್ಕೆ ₹2.25. ಇನ್ನೊಂದು ಲಕ್ಷಕ್ಕೆ ಆದೇಶ ಇದೆಯಂತೆ.

‘ವೆಜಿಟೆಬಲ್ ಆಂಡ್ ಫ್ರೂಟ್ಸ್ ಪ್ರೊಮೋಶನ್ ಕಾರ್ಪೊರೇಶನ್ ಆಫ್ ಕೇರಳ’ (ವೀಯೆಫ್‌ಪೀಸೀಕೆ) ಎಂಬ ಸರ್ಕಾರಿ ಸಂಸ್ಥೆಗೂ ಗಿಡ ಬೆಳೆಸಲು ಕಲಿಸಿಕೊಟ್ಟಿದೆ. ಅವರೂ ದೊಡ್ಡ ಪ್ರಮಾಣದಲ್ಲಿ ಗಿಡ ಉತ್ಪಾದಿಸುತ್ತಿದ್ದಾರೆ. ಕೆಲವರು ಓಣಂ ಕಾಲಕ್ಕೆ ಸಿಗುವಂತೆ ಬೆಳೆ ತೆಗೆಯುತ್ತಿದ್ದಾರೆ. ಕ್ಯಾಬೇಜಿನಲ್ಲಿ ಇಲ್ಲಿಗೆ ಹೊಂದುವ 30 ಜಾತಿ, ಕಾಲಿಫ್ಲವರಿನಲ್ಲಿ 35 ಜಾತಿಗಳನ್ನು ವಿಶ್ವವಿದ್ಯಾಲಯ ಗುರುತಿಸಿದೆ.

ಕರ್ನಾಟಕದ ಅಸಾಂಪ್ರದಾಯಿಕ ಭಾಗಗಳಲ್ಲೂ ಈ ಬೆಳೆ ಬೆಳೆಯಬಹುದಲ್ಲ ಎಂಬ ಪ್ರಶ್ನೆಯನ್ನು ಕೇರಳದ ಈ ಪ್ರಯತ್ನ ಹುಟ್ಟುಹಾಕಿದೆ. ಇದಕ್ಕೆ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿಕರು ಪ್ರಯತ್ನಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT