ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಬೆಟ್ಟದ ನೆಲ್ಲಿ!

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಶಾಲೆಯಂಗಳದಲ್ಲಿ ಖಾಲಿ ಜಾಗವಿದೆಯೇ, ಇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಮನಸ್ಸು ಹಾತೊರೆಯುತ್ತಿದೆಯೇ, ಉಸಿರಾಡಲು ಉತ್ತಮ ಗಾಳಿಯ ಜೊತೆಗೆ ಆರೋಗ್ಯವೂ ಬೇಕೆಂಬ ಹಂಬಲವಿದೆಯೇ, ಹಾಗಿದ್ದರೆ ನೋಡಿ ಇಲ್ಲಿದೆ ಉಪಾಯ ಎನ್ನುತ್ತಿದೆ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ.

ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯ, ಕಲಿಕಾ ವಾತಾವರಣ ರೂಪಿಸಲು ಕೇಂದ್ರ ಸರ್ಕಾರದ ಈ ಮಂಡಳಿ ಇದೀಗ ಹೊಸ ಯೋಜನೆ ಹಾಕಿಕೊಂಡಿದೆ. ಬೆಟ್ಟದ ನೆಲ್ಲಿಯ ಪ್ರಚಾರಾಂದೋಲನದಲ್ಲಿ ತೊಡಗಿದೆ. ಉಚಿತವಾಗಿ ಬೆಟ್ಟದ ನೆಲ್ಲಿ ಗಿಡಗಳನ್ನು ಶಾಲಾ-ಕಾಲೇಜುಗಳಿಗೆ ವಿತರಿಸಿ ಖಾಲಿ ಇದ್ದ ಕಡೆ ಬೆಟ್ಟದ ನೆಲ್ಲಿ ಗಿಡುನೆಡುವಂತೆ ದುಂಬಾಲು ಬೀಳುತ್ತಿರುವುದು ಈಗ ಮಾಮೂಲಿ. ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹ ಇದಕ್ಕಾಗಿ ಕೈ ಜೋಡಿಸಿವೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 19 ಜಿಲ್ಲೆಗಳ ಎರಡು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಸುಮಾರು 45 ಸಾವಿರ ಬೆಟ್ಟದ ನೆಲ್ಲಿಕಾಯಿ ಗಿಡ ನೆಡಲಾಗಿದೆ. ಈ ಸಾಲಿನಲ್ಲಿ ಎಂಟೂವರೆ ಸಾವಿರ ಸಸಿಗಳನ್ನು ಸುಮಾರು ಆರು ನೂರು ಶಾಲೆಗಳಲ್ಲಿ ನೆಡಲಾಯಿತು. ಶಾಲಾ-ಕಾಲೇಜುಗಳು ಬೆಟ್ಟದ ನೆಲ್ಲಿ ನೆಡಲು ಸರ್ಕಾರಕ್ಕೆ ಏಕಿಷ್ಟು ಆಸಕ್ತಿ? ದಾವಣಗೆರೆ ಜಿಲ್ಲೆಯ ಕುಕ್ಕವಾಡಿ ಪ್ರೌಢಶಾಲೆ ಬೆಟ್ಟದ ನೆಲ್ಲಿ ಗಿಡ ಬೆಳೆದ ವೈಖರಿ ಇಡೀ ರಾಜ್ಯದಲ್ಲಿ ಮನೆಮಾತಾಗಿದೆ. ಈ ಶಾಲೆಯ ಪ್ರತಿ ವಿದ್ಯಾರ್ಥಿಒಂದೊಂದು ಗಿಡ ಬೆಳೆಯುವಲ್ಲಿ ನಿರತರಾಗಿರುವುದು ವಿಶೇಷತೆ.

`ಈ ಮೊದಲು ಶಾಲಾ ಅಂಗಳ ಸುಂದರಗೊಳಿಸುವ ಅಂದಚೆಂದದ ಗಿಡ ನೆಡುತ್ತಿದ್ದವು. ಬೆಟ್ಟದ ನೆಲ್ಲಿ ಗಿಡಗಳಿಂದ ವಿದ್ಯಾರ್ಥಿಗಳ ಆರೋಗ್ಯ, ಕಲಿಕಾ ಮಟ್ಟ ಉತ್ತಮವಾಗಲಿದೆ ಎಂದು ತಿಳಿದ ಕ್ಷಣದಿಂದಲೇ ಶಾಲಾ ಆವರಣದಲ್ಲಿ ಬೆಟ್ಟದ ನೆಲ್ಲಿ ನೆಡಲು ಶುರು ಮಾಡಿದೆವು ಎನ್ನುತ್ತಾರೆ ಕುಕ್ಕವಾಡಿ ಪ್ರೌಢಶಾಲಾ ಶಿಕ್ಷಕ ಮಂಜುನಾಥ್. ಶಾಲಾ ಆವರಣದಲ್ಲಿ 125 ಬೆಟ್ಟದ ನೆಲ್ಲಿ ಗಿಡಗಳಿವೆ. ಶಾಲೆಯ ಅರ್ಧ ಎಕರೆ ಜಾಗದಲ್ಲಿ ಬೆಟ್ಟದ ನೆಲ್ಲಿ ಗಿಡಗಳನ್ನು ಬೆಳೆಯಲಾಗುತ್ತಿದೆ. ರಜದ ದಿನಗಳಲ್ಲೂ ವಿದ್ಯಾರ್ಥಿಗಳು ಗಿಡಗಳ ಪೋಷಣೆ ಮಾಡುವಷ್ಟು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಕೂಡ ಮಾಡಲಾಗಿದೆ' ಎಂದರು.

ಜ್ಞಾಪಕ ಶಕ್ತಿ ಹೆಚ್ಚಳ
ಬೆಟ್ಟದ ನೆಲ್ಲಿಕಾಯಿಯಲ್ಲಿ `ಸಿ' ಅನ್ನಾಂಗ ಇರುವುದೇ ಸರ್ಕಾರ ಇಷ್ಟೆಲ್ಲ ಪ್ರಾಮುಖ್ಯತೆ ನೀಡಲು ಕಾರಣ. ಗಿಡ ಹಾಕಿ ನಾಲ್ಕು ವರ್ಷದಲ್ಲೇ ಕಾಯಿ ಬಿಡಲಿದೆ. ಶಾಲೆಗೆ ಬರುವ ಮಕ್ಕಳು ಅಂಗಳದಲ್ಲೇ ಇರುವ  ಬೆಟ್ಟದ ನೆಲ್ಲಿ ತಿನ್ನದೇ ಇರುತ್ತಾರೆಯೇ? ಬೆಟ್ಟದ ನೆಲ್ಲಿ ತಿನ್ನುತ್ತಾ ಮಕ್ಕಳ `ಸಿ' ಅನ್ನಾಂಗದ ಕೊರತೆ ನೀಗಲಿದೆ. ಇಷ್ಟೇ ಅಲ್ಲ ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಲಿದೆ. ಅಲ್ಲದೇ ಮಕ್ಕಳಲ್ಲಿ ಬರುವ ಮಧುಮೇಹ ತಡೆಯಲಿದೆ. ಮೂಳೆಗೆ ಗಟ್ಟಿತನ ಬರಲಿದೆ. ಅಧಿಕ ಕೊಬ್ಬಿನಂಶ ನಿವಾರಿಸಲಿದೆ.

ಯುರೋಪಿನ ಜರ್ನಲ್ ಮೆಡಿಸನಲ್ ಫುಡ್ಸ್ ಸಂಸ್ಥೆಯ ಸಂಶೋಧನೆ ಪ್ರಕಾರ `ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರ ದೊಡ್ಡದಿದೆ. ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎನ್ನುತ್ತಾರೆ ತುಮಕೂರಿನ ಸಿದ್ದಗಂಗಾ ಫಾಮರ್ಸಿ ಕಾಲೇಜಿನ ಪ್ರಾಂಶುಪಾಲ ಎಸ್.ಬಾದಾಮಿ. ಮಕ್ಕಳಿಗೆ ಇಷ್ಟೆಲ್ಲ ಅನುಕೂಲ ಇರುವ ಬೆಟ್ಟದ ನೆಲ್ಲಿ ನೆಡಲು ಇನ್ನೇಕೆ ತಡ? ಅಂದ ಹಾಗೆ ಆಯಾ ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಉಚಿತ ಗಿಡ ನೀಡಲಿದೆ ಎಂಬುದು ನೆನಪಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT