ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ನೆಲದಲಿ ಅಲಸಂದೆ

Last Updated 20 ಮೇ 2013, 19:59 IST
ಅಕ್ಷರ ಗಾತ್ರ

ಬೀಜ, ಗೊಬ್ಬರ, ಕಟಾವು, ಒಕ್ಕಲು ಹೀಗೆ ಶೇಂಗಾ ಬೇಸಾಯ ದುಬಾರಿ ಎನಿಸುತ್ತದೆ. ಬೇಸಿಗೆ ಬಿರು ಬಿಸಿಲಿಗೆ ಕೆರೆಗಳೆಲ್ಲ ಬತ್ತುವುದರಿಂದ ನಾಲ್ಕು ನಾಲ್ಕೂವರೆ ತಿಂಗಳ ಶೇಂಗಾ ಬೆಳೆಗೆ ನೀರಿನ ಅಭಾವಕ್ಕೂ ಹೆದರುತ್ತಿರುವ ಅನೇಕ ರೈತರು ಶೇಂಗಾಕ್ಕೂ ಶರಣು ಹೇಳಿ ಕ್ರಮೇಣ 3 ತಿಂಗಳಲ್ಲೇ ಕಟಾವಿಗೆ ಬರುವ ಸುಲಭ ಬೇಸಾಯದ, ಅಷ್ಟೊಂದು ಖರ್ಚು ಕೇಳದ ಅಲಸಂದೆಗೆ ಜೈ ಎನ್ನುತ್ತಿದ್ದಾರೆ.

ಉತ್ತರ ಕರ್ನಾಟಕದ ಹಾವೇರಿ, ರಾಣಿಬೆನ್ನೂರ ಭಾಗದಲ್ಲಿ ಬೇಸಿಗೆ ಹಂಗಾಮಿನಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಶೇಂಗಾ ಫಸಲೇ ಕೇಕೆ ಹಾಕುತ್ತಿದ್ದ ಕಾಲ ಒಂದಿತ್ತು. ಜಿಲ್ಲೆಯಲ್ಲಿ ಹರಿದಿರುವ ವರದಾ ಹಾಗೂ ತುಂಗಭದ್ರಾ ನದಿಗಳ ಮೆಕ್ಕಲು ನೆಲ, ಕೊಳವೆಬಾವಿ ಆಶ್ರಯದಲ್ಲೂ ಮುಂಗಾರು ಹಂಗಾಮಿನಲ್ಲಿ ಹಾಕಿದ ಹತ್ತಿ, ಮೆಕ್ಕೆ ಜೋಳ, ಕಟಾವಿನ ನಂತರ ಹಿಂಗಾರು ಹಂಗಾಮಿನಲ್ಲಿ ಅದೇ ನೆಲವನ್ನು ಸಮಗ್ರವಾಗಿ ಶೇಂಗಾ ಬಿತ್ತನೆಗೆ ಬಳಸಿಕೊಳ್ಳುತ್ತಿದ್ದುದು ರೂಢಿಯಾಗಿತ್ತು. ಆ ಕಾಲ ಈಗ ಉಳಿದಂತಿಲ್ಲ. ಕ್ರಮೇಣ ಶೇಂಗಾ ನೆಲದಲ್ಲಿ ಅಲಸಂದೆ ಕಾಣುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿರುವ ವಾಡಿಕೆ. ಇದರಿಂದಾಗಿ ಶೇಂಗಾ ಕ್ಷೇತ್ರ ಕಮ್ಮಿಯಾಗುತ್ತಿದೆ.

ಶೇಂಗಾ ಜನಪ್ರಿಯತೆ ಕುಗ್ಗಲು ಕಾರಣ ಹಲವುಂಟು. ಅಲಸಂದೆಗೆ ಹೋಲಿಸಿದರೆ ಶೇಂಗಾ ಅಲ್ಪಾವಧಿ ಬೆಳೆಯಂತೂ ಅಲ್ಲ. ಬಿತ್ತಿದ ನಂತರ ಕಟಾವಿಗೆ ಬರಲು ನಾಲ್ಕು ನಾಲ್ಕೂವರೆ ತಿಂಗಳುಗಳೇ ಬೇಕು. ಬೇಸಿಗೆ ಬಿರು ಬಿಸಿಲಿನ ಬೆಳೆಯಾಗುವುದರಿಂದ 8-10 ಬಾರಿಯಾದರೂ ಬಿತ್ತಿದ ನಂತರ ನೀರು ಬಿಡಲೇಬೇಕಾಗುತ್ತದೆ. ಬೇಸಿಗೆಯಲ್ಲಿ ತುಂಗಭದ್ರೆಗೂ ಭಯ ಆವರಿಸುವುದು ಈಗ ಸಾಮಾನ್ಯವಾಗಿದೆ. ತೆರೆದ ಬಾವಿಗಳಂತೂ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದೆ. ಕೊಳವೆ ಬಾವಿಗಳಲ್ಲಿನ ಅಂತರ್ಜಲವೂ ಪಾತಾಳಕ್ಕೆ ಕುಸಿಯುವುದರಿಂದ ನೀರಿನ ಕೊರತೆ ಕಂಡುಬರುವುದೂ ಸಾಮಾನ್ಯವಾಗಿ ಹೋಗಿದೆ.

ನೀರಿದ್ದರೂ ವಿದ್ಯುತ್ ಸಮಸ್ಯೆ. ಮೇಲಾಗಿ ದುಬಾರಿ ಬೀಜ, ಗೊಬ್ಬರ. ಸಿಂಪರಣೆ, ಕಳೆ ಕಟಾವಿಗೂ ಸಿಕ್ಕಾಪಟ್ಟೆ ಖರ್ಚು ಮಾಡಬೇಕು. ಏನಿಲ್ಲವೆಂದರೂ ಎಕರೆಗೆ 8-10 ಸಾವಿರ ರೂಪಾಯಿ ಖರ್ಚು ಮಾಡಲೇಬೇಕು. ಅದರಿಂದ ನಿರೀಕ್ಷೆ ಮಾತ್ರ ಅದೃಷ್ಟದಾಟವಿದ್ದಂತೆ. ಎಲ್ಲ ಸಮಸ್ಯೆಗಳನ್ನು ನೀಗಿಸಿಕೊಂಡು ಬಿತ್ತಿದ ಫಸಲು ಚೆನ್ನಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಫಲಿಸಿತೆಂದರೆ ಖರ್ಚು ತೆಗೆದು ಎಕರೆಗೆ 10-15 ಸಾವಿರ ರೂಪಾಯಿ ಉಳಿಯುವ ಸಾಧ್ಯತೆಗಳಿವೆ. ಇಷ್ಟೆಲ್ಲಾ ರಾದ್ಧಾಂತಗಳಿರುವ ಶೇಂಗಾ ಉಸಾಬರಿಯೇ ಬೇಡ ಅನ್ನುವ ನಿಲುವು ರೈತರಲ್ಲಿ ಕಂಡುಬಂದಂತಿದೆ. ಹೆಚ್ಚು ಶ್ರಮವೂ ಇಲ್ಲದೆ 3 ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುವ ಅಲಸಂದೆ ಬೆಳೆಯನ್ನು ಓಲೈಸುವುದರ ಪರಿಣಾಮವಾಗಿ ಶೇಂಗಾ ನೆಲದಲ್ಲಿ ಹಂತ ಹಂತವಾಗಿ ಅಲಸಂದೆ ಆಗಮಿಸುತ್ತಿರುವುದು ಕಂಡುಬರುತ್ತಿದೆ.

ಅಲ್ಪಾವಧಿ ಬೆಳೆ-ಖರ್ಚೂ ಕಮ್ಮಿ
ಮೂರು ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುವ ಅಲಸಂದೆ ಬೇಸಾಯ ತುಂಬಾ ಸರಳ. ಡಿಸೆಂಬರ್ ಜನವರಿ ಮಾಹೆಗಳಲ್ಲೂ ಬಿತ್ತನೆ ಮಾಡುವುದು ಸಾಮಾನ್ಯವಾಗಿದೆ. ಮುಂಗಾರು ಹಂಗಾಮಿನ ಹತ್ತಿ, ಜೋಳ ಕಟಾವು ಆದ ನಂತರ ಹೊಲ ಉಳುಮೆ ಮಾಡಿಕೊಂಡು ಎಕರೆಗೆ 4-5 ಕೆ.ಜಿ. ಬೀಜ ಬಿತ್ತನೆ ಮಾಡಿದರಾಯ್ತು. ಬಿತ್ತನೆ ಬೀಜಕ್ಕೂ ಶೇಂಗಾದಷ್ಟು ಖರ್ಚು ಮಾಡಬೇಕಾಗಿಲ್ಲ.

ಬಿತ್ತಿದ ನಂತರ 4-5 ಸಲ ಹಗುರವಾಗಿ ನೀರು ಹಾಯಿಸಿದರಾಯ್ತು. ಫಸಲು ಕಟಾವಿಗೆ ಸಿದ್ಧವಾಗುತ್ತದೆ. ಕಳೆ, ಕ್ರಿಮಿನಾಶಕಗಳಿಗೂ ಅಲಸಂದೆಗಾಗಿ ಹೇಳಿಕೊಳ್ಳುವಷ್ಟು ಖರ್ಚು ಮಾಡಬೇಕಾಗಿಲ್ಲ. ಬಿತ್ತನೆಯಾದ 3 ತಿಂಗಳಲ್ಲಿ ಫಸಲು ಸಂಪೂರ್ಣ ಮಾಗಿಗೆ ಬರುತ್ತದೆ. ಕಟಾವು, ಒಕ್ಕಲು ಕೂಡಾ ತುಂಬಾ ಸುಲಭ. ಚೆನ್ನಾಗಿ ಬಲಿತು ಒಣಗಿದ ಕಾಯಿಗಳನ್ನು ಹರಿದು 2 ದಿನ ಬಿಸಿಲಿಗೆ ಒಣಗಿಸಿ ಕಣದಲ್ಲಿ ಬಡಿದು ಇಲ್ಲವೆ ಎತ್ತಿನ ಕಾಲಿಗೆ ಹಾಕಿ ತುಳಿಸಿದರಾಯ್ತು, ಗಾಳಿ ಬಿಟ್ಟಾಗ ತೂರಿಕೊಂಡರೆ ಕಾಳು ಸಿಪ್ಪೆ ಬೇರ್ಪಟ್ಟು ಒಕ್ಕಲು ಮುಗಿದಂತೆಯೇ.

ಯಾವುದೇ ಹೆಚ್ಚಿನ ಜಂಜಾಟವಿಲ್ಲದೇ ಎಕರೆಗೆ 3 ತಿಂಗಳಲ್ಲಿ 2-3 ಕ್ವಿಂಟಾಲ್ ಕಾಳಿನ ಇಳುವರಿ ಇಲ್ಲಿ ನಿರೀಕ್ಷಿತ. ಕಾಯಿ ಹೆಕ್ಕಿ ತೆಗೆದ ಸೊಪ್ಪು, ಬಳ್ಳಿ ದಂಟು, ದೇಟು ದನಗಳಿಗೆ ಉತ್ತಮ ಮೇವು ಕೂಡಾ. ಮಾರುಕಟ್ಟೆಯಲ್ಲಿ ಅಲಸಂದೆ ಕಾಳಿಗೆ ಇತ್ತೀಚೆಗೆ ಉತ್ತಮವಾದ ಬೆಲೆಯೂ ಇದೆ. ಕ್ವಿಂಟಲ್‌ಗೆ 4-5 ಸಾವಿರದವರೆಗೂ ಮಾರುಕಟ್ಟೆ ಬೆಲೆ ಇರುವುದರಿಂದ ಹೊಲ ಖಾಲಿ ಬಿಡುವ ಬದಲು 3 ತಿಂಗಳಲ್ಲಿ 8-10 ಸಾವಿರ ರೂಪಾಯಿ ಆದಾಯ ಇಲ್ಲಿ ನಿಶ್ಚಿತ.

ಹೆಚ್ಚು ನೀರು ಕೇಳದ ಅಷ್ಟೊಂದು ದುಬಾರಿಯಲ್ಲದ ಬೇಸಾಯ ಕ್ರಮವೇ ರೈತರು ಅಲಸಂದೆಯನ್ನು ಓಲೈಸುತ್ತಿರುವುದಕ್ಕೂ ಕಾರಣವಾಗಿದೆ. ಹಾಗಂತ ಈ ಪ್ರವೃತ್ತಿ ಇದೇ ರೀತಿ ಮುಂದುವರಿಯಲು ಬಿಡಬಾರದು. ಶೇಂಗಾ ಒಂದು ಪ್ರಮುಖ ಎಣ್ಣೆ ಬೆಳೆ. ಜೊತೆಗೆ ದನಕರುಗಳಿಗೆ ಉತ್ತಮವಾದ ಮೇವು ಕೂಡ. ಬೆಳೆ ಸಮತೋಲನವನ್ನು ಕಾಯ್ದುಕೊಳ್ಳುವ ಜಾಯಮಾನವನ್ನು ರೈತರು ರೂಢಿಸಿಕೊಳ್ಳಬೇಕು.
-ಆರ್. ಎಸ್. ಪಾಟೀಲ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT