ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ: ಹೈಬ್ರಿಡ್ ತಳಿಗೂ ರೆಡಿ

Last Updated 23 ಅಕ್ಟೋಬರ್ 2012, 9:30 IST
ಅಕ್ಷರ ಗಾತ್ರ

ಸಾವಯವ ಕೃಷಿ ಅಂದ್ರೆ ನಾಟಿ ತಳಿಗಳೇ ಆಗಬೇಕೆಂದಿಲ್ಲ. ಹೈಬ್ರಿಡ್‌ಗಳನ್ನೂ ಬೆಳೆದು ಸಾಧನೆ ಮಾಡಿದ್ದಾರೆ ಇಲ್ಲಿ ಒಬ್ಬ ಕೃಷಿಕರು.

ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಬಾಬು(30) ಅವರ ತೋಟ ಮೊದಲು ಕೃಷಿ ಇಲಾಖೆಯ ಪ್ರಾತ್ಯಕ್ಷಿತೆಗೆ ಮೀಸಲಾಗಿತ್ತು. ಇಲಾಖೆಯಲ್ಲಿ ಯಾವುದೇ ಹೊಸ ತಳಿ ಬಂದರೂ ಮೊದಲು ಇವರ ತೋಟದಲ್ಲಿ ಬಿತ್ತನೆಯಾಗುತ್ತಿತ್ತು. ಅದಕ್ಕೆ ಅವರ ಶಿಫಾರಸಿನ ಗೊಬ್ಬರ ಮತ್ತು ಔಷಧಿ ಬಳಸುತ್ತಿದ್ದರು. ಆ ಬೆಳೆಗಳನ್ನು ನೋಡಲು ಬೇರೆ ಬೇರೆ ಭಾಗಗಳ ರೈತರನ್ನು ಕೃಷಿ ಅಧಿಕಾರಿಗಳು ಕರೆದುಕೊಂಡು ಬರುತ್ತಿದ್ದರು.

ಎಂಟು ವರ್ಷಗಳ ಹಿಂದೆ ಒಂದು ಸಾವಯವ ಕೃಷಿ ಕಾರ್ಯಕ್ರಮಕ್ಕೆ ಅವರ ಸ್ನೇಹಿತನ ಒತ್ತಾಯಕ್ಕೆ ಹೋಗಿದ್ದರು. ರಾಸಾಯನಿಕ ಬಳಸದೇ ಕೃಷಿ ಹೇಗೆ ಮಾಡಬಹುದೆಂಬ ವಿಷಯವನ್ನು ಅಲ್ಲಿ ತಿಳಿದುಕೊಂಡು ಅದರ ಪ್ರಯೋಗಕ್ಕೆ ಮುಂದಾದರು.

ಕುರಿ ಸಾಕಣೆಯಿಂದ ಆರಂಭ
ಅದಕ್ಕಾಗಿ ಅವರ ತಂದೆ ಕುರಿ ಸಾಕಣೆಗಿಳಿದರು. ಎರಡು ಕುರಿಗಳಿಂದ ಸಾಕಣೆ ಪ್ರಾರಂಭ ಮಾಡಿದ ಅವರ ಬಳಿ ಈಗ ಅರವತ್ತು ಕುರಿಗಳಿವೆ. ಕೃಷಿಗೆ ಬೇಕಾದಷ್ಟು ಗೊಬ್ಬರವೂ ಸಿಕ್ಕಿತು. ಅದೇ ರೀತಿ ಒಂದು ಜೊತೆ ನಾಟಿ ಹಸು ಮತ್ತು ಒಂದು ಹಾಲು ಕರೆಯುವ ಸೀಮೆ ಹಸು ಕೂಡಾ ಇದೆ. ಹಸಿರು ತ್ಯಾಜ್ಯ ಕೊಳೆಸಿ ದ್ರವಗೊಬ್ಬರ ಮಾಡುವ ಬಯೋಡೈಜೆಸ್ಟರ್ ಮಾಡಿಕೊಂಡಿದ್ದಾರೆ.

ಒಟ್ಟು ನಾಲ್ಕೂವರೆ ಎಕರೆ ಭೂಮಿಯಲ್ಲಿ ಒಂದೂವರೆ ಎಕರೆ ಮಳೆಯಾಶ್ರಿತ ಬೆಳೆಗೆ ಮೀಸಲು. ಮೂರು ಎಕರೆಯಲ್ಲಿ ಬಾಳೆ, ತರಕಾರಿ ಮತ್ತು ಮೆಕ್ಕೆ ಜೋಳ ಬೆಳೆಯುತ್ತಾರೆ. ಅದಕ್ಕೆ ಒಂದು ಕೊಳವೆ ಬಾವಿಯ ನೀರಿದೆ.

ಬಾಳೆಹಣ್ಣಿಗೂ ಸೈ
ಒಣ ಭೂಮಿಯಲ್ಲಿ ಜಿಪಿಯು-28 ರಾಗಿ ಮತ್ತು ಟಿಡಿಬಿ-7 ತೊಗರಿ ಬೆಳೆದು ನೋಡಿದ್ದಾರೆ. ನೀರಾವರಿಯಲ್ಲಿ ವೈಟ್ ಲಾಂಗ್ ಬದನೆ, ಹೈಬ್ರಿಡ್ ಟೊಮೆಟೊ, ಅರ್ಕಾ ಅನಾಮಿಕಾ ಬೆಂಡೆ, ಮೆಕ್ಕೆ ಜೋಳ, ಬೂದುಗುಂಬಳ ಮತ್ತು ಯಾಲಕ್ಕಿ ಬಾಳೆ ಬೆಳೆದಿದ್ದಾರೆ.

ಕುರಿಗೊಬ್ಬರಕ್ಕೆ ಗಂಜಲ ಸೇರಿಸಿ ಅವರದೇ ವಿಧಾನದಲ್ಲಿ `ಸಾವಯವ ಯೂರಿಯಾ~ ಮಾಡುತ್ತಾರೆ. ಅದನ್ನು ರಾಗಿಗೆ ಕಡ್ಡಾಯವಾಗಿ ಹಾಕುತ್ತಾರೆ. ಬಾಳೆಗೆ ಹೊಂಗೆ ಹಿಂಡಿ ಹಾಕುವುದರ ಬದಲು ಹೊಂಗೆ ಬೀಜವನ್ನೇ ಜಜ್ಜಿ ಹಾಕುತ್ತಾರೆ. ಪಾಳೇಕರ್ ವಿಧಾನದಲ್ಲಿ ಜೀವಾಮೃತ ಮಾಡಿ ತರಕಾರಿಗೆ ಬಳಸುತ್ತಾರೆ. ಕೀಟಗಳ ಬಾಧೆಯಿದ್ದರೆ `ಪೂಚಿ ಮರುಂದು~ ಮಾಡಿ ಸಿಂಪಡಿಸುತ್ತಾರೆ.

ಪ್ರಾರಂಭದ ಎರಡು ವರ್ಷ ಇಳುವರಿ ಕಡಿಮೆ ಬಂದರೂ ಈಗ ಎಲ್ಲಾ ಬೆಳೆಗಳೂ ಒಳ್ಳೆ ಆದಾಯ ತರುತ್ತಿವೆ. ಮನೆಗೆ ನಿತ್ಯ ಬಳಕೆಗೆ ಬೇಕಾದಷ್ಟು ಬೇಳೆ ಕಾಳು ಮತ್ತು ತರಕಾರಿ ಉಳಿಸಿ ಉಳಿದದ್ದು ಮಾರಾಟ ಮಾಡುತ್ತಾರೆ.

ತರಕಾರಿಗಳನ್ನು ಹಾರೋಹಳ್ಳಿ ಪೇಟೆಯ ಮನೆ ಮನೆಗೂ ಹೋಗಿ ಮಾರುತ್ತಾರೆ. ಅದಕ್ಕಾಗಿ ಒಂದು ತಳ್ಳುಗಾಡಿ ಮಾಡಿಕೊಂಡಿದ್ದಾರೆ. ಒಂದು ವಾರ ಇಟ್ಟರೂ ಇವರ ಟೊಮೆಟೊ ಹಾಳಾಗುವುದಿಲ್ಲ ಎನ್ನುವ ಹೆಮ್ಮೆ ಇವರದ್ದು.

ನೇರ ಮಾರುಕಟ್ಟೆಯೇ ಉತ್ತಮ
ಬೆಂಗಳೂರಿಗೆ ಸಾಗಿಸುವ ಖರ್ಚು, ಶ್ರಮ, ಕೂಲಿ, ಕಮೀಷನ್ ಎಲ್ಲಾ ಉಳಿತಾಯಕ್ಕೆ ನೇರ ಮಾರುಕಟ್ಟೆ ಅವರು ಕಂಡುಕೊಂಡ ದಾರಿ. ಅದಕ್ಕಾಗಿ ಯಾವುದೇ ತರಕಾರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ.

ಬಾಬು ಐಟಿಐ ಓದಿ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಹಳ್ಳಿಗೆ ಹಿಂದಿರುಗಿದವರು. ಈಗ ಸಾವಯವ ಕೃಷಿ ಅವರ ಕೈ ಹಿಡಿದಿದೆ. ಕೃಷಿ ಇಲಾಖೆಯವರು ಈಗಲೂ ಅವರ ತೋಟಕ್ಕೆ ಬರುತ್ತಾರೆ. ತಾವು ಕೊಟ್ಟ ಹೈಬ್ರಿಡ್ ಬೀಜಗಳು ಸಾವಯವ ಕೃಷಿಗೆ ಹೇಗೆ ಸ್ಪಂದಿಸುತ್ತವೆ ಎಂದು ನೋಡುವ ಕುತೂಹಲ ಅವರಿಗೆ.

ಹೆಚ್ಚಿನ ಮಾಹಿತಿಗೆ ಬಾಬುರವರ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ 8123447923.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT