ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB ಎದುರು ನಾನು ಆಡಿದ್ದರೆ, ಪ್ಲೇ ಆಫ್ ತಲುಪುವ ಅವಕಾಶವಿರುತ್ತಿತ್ತು: ರಿಷಭ್ ಪಂತ್

Published 15 ಮೇ 2024, 11:35 IST
Last Updated 15 ಮೇ 2024, 11:35 IST
ಅಕ್ಷರ ಗಾತ್ರ

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಮೇ 12ರಂದು ನಡೆದ ಪಂದ್ಯದಲ್ಲಿ ತಾವು ಆಡಿದ್ದರೆ, ತಮ್ಮ ತಂಡ ಪ್ಲೇ ಆಫ್‌ ತಲುಪುವ ಅವಕಾಶ ಇರುತ್ತಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್ ಪಂತ್‌ ಹೇಳಿದ್ದಾರೆ.

ಡೆಲ್ಲಿ ತಂಡ ಮೂರು ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ಪ್ರದರ್ಶನ ತೋರಿದ ಕಾರಣ, ಅದರ ನಾಯಕ ಪಂತ್‌ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿತ್ತು. ಹೀಗಾಗಿ ಪಂತ್‌ ಆರ್‌ಸಿಬಿ ಎದುರು ಕಣಕ್ಕಿಳಿದಿರಲಿಲ್ಲ.

ಆ ಪಂದ್ಯವನ್ನ ಡೆಲ್ಲಿ ತಂಡ 47 ರನ್‌ ಅಂತರದಿಂದ ಸೋತಿತ್ತು. ಆದರೆ, ಲೀಗ್‌ ಹಂತದಲ್ಲಿ ತಾನಾಡಿದ ಕೊನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ವಿರುದ್ಧ 19 ರನ್‌ ಅಂತರದ ಗೆಲುವನ್ನು ಮಂಗಳವಾರ ಸಾಧಿಸಿದೆ. ಆದಾಗ್ಯೂ, ಪ್ಲೇ ಆಫ್‌ ತಲುಪುವುದಕ್ಕಾಗಿ ಇತರ ಪಂದ್ಯಗಳ ಫಲಿತಾಂಶವನ್ನು ಎದುರು ನೋಡುವಂತಾಗಿದೆ.

ಪಂದ್ಯದ ಬಳಿಕ ಮಾತನಾಡಿದ ಪಂತ್‌, 'ಆರ್‌ಸಿಬಿ ವಿರುದ್ಧ ನಾನು ಆಡಿದ್ದರೆ, ಪಂದ್ಯವನ್ನು ಖಂಡಿತಾ ಗೆಲ್ಲುತ್ತಿದ್ದೆವು ಎಂದು ಹೇಳಲಾರೆ. ಆದರೆ, ನಾನು ಆಡುವಂತಿದ್ದಿದ್ದರೆ, ಪ್ಲೇ ಆಫ್‌ ತಲುಪಲು ಇನ್ನಷ್ಟು ಉತ್ತಮ ಅವಕಾಶ ಇರುತ್ತಿತ್ತು' ಎಂದಿದ್ದಾರೆ.

ಡೆಲ್ಲಿ ತಂಡದ ಅನುಭವಿ ಆಟಗಾರರಾದ ಡೇವಿಡ್‌ ವಾರ್ನರ್‌, ಇಶಾಂತ್‌ ಶರ್ಮಾ, ಪ್ರಮುಖ ವೇಗಿಗಳಾದ ಮುಕೇಶ್‌ ಕುಮಾರ್‌, ಖಲೀಲ್‌ ಅಹಮದ್‌ ಟೂರ್ನಿಯುದ್ದಕ್ಕೂ ಗಾಯದ ಸಮಸ್ಯೆಯಿಂದ ಬಳಲಿದ್ದರು. ಈ ಬಗ್ಗೆ ಮಾತನಾಡಿದ ಪಂತ್, 'ಸಾಕಷ್ಟು ನಿರೀಕ್ಷೆಗಳೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದೆವು. ಆದರೆ, ಗಾಯದ ಸಮಸ್ಯೆ ಹಾಗೂ ಆಟದಲ್ಲಿ ಸಾಕಷ್ಟು ಏರು–ಪೇರುಗಳಾದವು. ಆದರೂ ಒಂದು ಫ್ರಾಂಚೈಸ್‌ ಆಗಿ, ಸದಾ ನೆಪಗಳನ್ನು ಹೇಳುತ್ತಾ ಇರಲಾಗದು. ನಾವು ನಿಯಂತ್ರಿಸಲು ಸಾಧ್ಯವಿರುವ ಸಾಕಷ್ಟು ವಿಚಾರಗಳಿದ್ದರೆ, ನಿಯಂತ್ರಣಕ್ಕೆ ಸಿಗದ ಹಲವು ಸಮಸ್ಯೆಗಳೂ ಇರುತ್ತವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಲಿ ತಂಡ 14 ಪಂದ್ಯಗಳಿಂದ ತಲಾ 7 ಜಯ ಹಾಗೂ ಸೋಲು ಕಂಡಿದ್ದು, ಪಾಯಿಂಟ್‌ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್‌ ಕಳೆದುಕೊಂಡದ್ದು ಹಿನ್ನಡೆಯಾಯಿತು: ರಾಹುಲ್
'ಟೂರ್ನಿಯುದ್ದಕ್ಕೂ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು ಹಿನ್ನಡೆಯಾಗಿ ಪರಿಣಮಿಸಿತು. ನಮಗೆ ಅತ್ಯುತ್ತಮ ಆರಂಭ ಸಿಗಲಿಲ್ಲ. ಇದರಿಂದಾಗಿ ಸ್ಫೋಟಕ ಬ್ಯಾಟರ್‌ಗಳಾದ ನಿಕೋಲಸ್ ಪೂರನ್‌ ಮತ್ತು ಮಾರ್ಕಸ್‌ ಸ್ಟೋಯಿನಸ್‌ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾವು ಈ ಸ್ಥಿತಿಯಲ್ಲಿರುವುದಕ್ಕೆ ಇದೇ ಮುಖ್ಯಕಾರಣ' ಎಂದು ಎಲ್‌ಎಸ್‌ಜಿ ನಾಯಕ ಕೆ.ಎಲ್‌.ರಾಹುಲ್ ಹೇಳಿದ್ದಾರೆ.

ಲಖನೌ ಪಡೆ, ಲೀಗ್ ಹಂತದಲ್ಲಿ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಷ್ಟೇ ಗೆದ್ದಿದೆ. ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ಗೆದ್ದರೂ, ರನ್‌ರೇಟ್‌ ಉತ್ತಮವಾಗಿ ಇಲ್ಲದ ಕಾರಣ ಪ್ಲೇ ಆಫ್‌ ಪ್ರವೇಶದ ಹಾದಿ ಕಠಿಣವಾಗಿದೆ. ಬೇರೆ ತಂಡಗಳ ಫಲಿತಾಂಶ ತಮಗೆ ಪೂರಕವಾಗಿ ಇರುವಂತೆ ಬಯಸುವುದನ್ನು ಬಿಟ್ಟು ಬೇರೆ ದಾರಿ ಈ ತಂಡಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT