ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರದ ಕಚ್ಚಾವಸ್ತು ಒಡವೆಯಾಗಿ...

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಜೈಪುರದಲ್ಲಿ ತಯಾರುಗುವ ಹ್ಯಾಂಡಿಕ್ರಾಫ್ಟ್ ಜೆಮ್ಸ ಜ್ಯುವೆಲರಿಗಳಿಗೆ ಕರ್ನಾಟಕದಲ್ಲಿ ಭಾರೀ ಬೇಡಿಕೆ. ಸ್ಥಳೀಯರಿಗಿಂತಲೂ ಹೆಚ್ಚಾಗಿ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಈ ಬಗೆಯ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
 
ರಾಜಾಜಿನಗರದ ನಿವಾಸಿ ಅಪ್ಸರ್ ಮತ್ತು ಪತ್ನಿ ರಜಿಯಾ ಸುಲ್ತಾನ ರಾಜಸ್ತಾನದ ಜೈಪುರ ಮೂಲದವರಿಂದ ಹ್ಯಾಂಡಿಕ್ರಾಫ್ಟ್ ಜೆಮ್ಸ ಜ್ಯೂವೆಲರಿಗಳನ್ನು ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳನ್ನು ಕೊಂಡು, ಸ್ವತಃ ತಾವೇ ಆಕರ್ಷಕವಾದ ಸರಗಳು, ಅದಕ್ಕೆ ಮ್ಯಾಚಿಂಗ್ ನೀಡುವ ಕಿವಿ ಓಲೆ, ಬ್ರೇಸ್‌ಲೈಟ್, ಕಾಲಿನ ಗೆಜ್ಜೆಗಳನ್ನು ಎಂಟು ವರ್ಷಗಳಿಂದ ತಯಾರಿಸುತ್ತಿದ್ದಾರೆ.
 
ಜಿ.ಎಸ್ ಬೀಡ್ಸ್, ಬಿಳಿ ಅಥವಾ ವಿಭಿನ್ನ ಬಣ್ಣದ ಹರಳುಗಳಿರುವ ಜಿ.ಎಸ್. ಬೀಡ್ಸ್, ಸನ್‌ಸ್ಟೋನ್ (ಸೂರ್ಯಮಣಿ) ಜೇಡ್ (ನಾನಾ ಬಣ್ಣಗಳನ್ನು ಹೊಂದಿದೆ.), ಲ್ಯಾಪ್ರೋಡೈಸ್, ಗೋಲ್ಡನ್ ಟೋಪಾಸ್, ಲೆಮನ್ ಟೋಪಾಸ್, ಸ್ಮೋಕಿ ಟೋಪಾಸ್, ಬ್ಲ್ಯಾಕ್ ಟೈಗರ್ ಐ, ಪೀಕಾಕ್ ಸ್ಟೋನ್, ಫಿರೋಜಾ ಹೀಗೆ ನಾನಾ ಹೆಸರುಗಳುಳ್ಳ ಬಗೆ ಬಗೆ ಆಕಾರದ, ಬಣ್ಣಗಳ ಮಣಿಗಳಿಂದ ತಯಾರಿಸಲಾಗುವ ಜೆಮ್ಸ ಆಭರಣಗಳು ನೋಡುಗರನ್ನು ದೂರದಿಂದಲೂ ಆಕರ್ಷಿಸುತ್ತವೆ.
 
ಯಾವುದೇ ಬಣ್ಣದ ಉಡುಪುಗಳಿಗೆ ಹೋಲುವಂತೆ ಸರ, ಕಿವಿ ಓಲೆ, ಬ್ರೇಸ್‌ಲೇಟ್, ಕಾಲಿನ ಗೆಜ್ಜೆಗಳನ್ನು ಬಹಳ ಚೆಂದವಾಗಿ ತಯಾರಿಸಿ ಕೊಡುವ ಅಪ್ಸರ್ ಅವರ ಕರಕುಶಲ ಕೆಲಸ ಮಹಿಳೆಯರು ನಿರ್ವಹಿಸುವ ಸಹನೆಯ ಕೆಲಸಗಳನ್ನೂ ಮೀರಿಸುವಂತಿದೆ. ಮೂಲತಃ ದೊಡ್ಡ ದೊಡ್ಡ ಕಟ್ಟಡಗಳಿಗೆ ಒಳ ವಿನ್ಯಾಸಕಾರರಾಗಿ ಕಾರ್ಯ ನಿರ್ವಹಿಸುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಪತ್ನಿಯನ್ನೂ ಆಭರಣಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಹೊಸ ಬಗೆಯ ಫ್ಯಾಷನ್ ಬಯಸುವವರ ಮನ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೈಪುರದ ಫ್ಯಾಷನ್‌ನ್ನು ಕರ್ನಾಟಕಕ್ಕೂ ಪರಿಚಯಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
 
ತಮ್ಮ ಮನೆಯಲ್ಲಿಯೇ ತಯಾರಿಸುವ ರತ್ನಾಭರಣಗಳ ಮಾರಾಟಕ್ಕೆ ಸ್ವಂತ ಮಳಿಗೆಯನ್ನು ಹೊಂದಿರದಿದ್ದರೂ ವ್ಯಾಪಾರಕ್ಕೇನೂ ಕೊರತೆ ಇಲ್ಲ. ತಾವು ಮಾಡಿದ ಬಗೆ ಬಗೆಯ ಜೆಮ್ಸ ಜ್ಯುವೆಲರಿಗಳನ್ನು ಸುಮಾರು 20ಕ್ಕೂ ಹೆಚ್ಚು ಕರಕುಶಲ ಮಳಿಗೆಗಳಿಗೆ ನೀಡುತ್ತಾರೆ. ಅಲ್ಲಿ ಅವುಗಳ ಮಾರಾಟವಾದ ಬಳಿಕ ಇವರ ಕಿಸೆಗೆ ಹಣ ಸೇರುತ್ತದೆ. ಮನೆಯಲ್ಲಿಯೂ ಮಾರಾಟ ಮಾಡುತ್ತಾರೆ. 
 
ಈ ಕುರಿತ ತರಬೇತಿಯನ್ನು ವಿಶೇಷ ಸಾಮರ್ಥ್ಯದ ಜನರಿಗೆ ನೀಡಬೇಕು ಎಂಬ ಮಹದಾಸೆಯನ್ನು ಹೊಂದಿರುವ ಇವರು, `ಈ ಕೆಲಸಕ್ಕೆ ಕಣ್ಣು ಮತ್ತು ಕೈ ಸರಿಯಾಗಿದ್ದರೆ ಸಾಕು. ಅಂಗವೈಕಲ್ಯ ಹೊಂದಿರುವ ಯಾರೂ ಏನೂ ಮಾಡಲಾಗುತ್ತಿಲ್ಲವಲ್ಲ ಎಂದು ಕೊರಗುವ ಅಗತ್ಯವಿಲ್ಲ. ಮಾರುಕಟ್ಟೆ ಸೌಲಭ್ಯವನ್ನು ಹೊಂದಿಸಿಕೊಂಡಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದು. ಯಾರ ಮುಂದೆಯೂ ಕೈ ಚಾಚದೆ ಸ್ವಾವಲಂಬಿಗಳಾಗಿ ಬದುಕಬಹುದು. ಆಸಕ್ತರು ಮುಂದೆ ಬಂದಲ್ಲಿ ತರಬೇತಿಯನ್ನೂ ನೀಡುತ್ತೇನೆ' ಎನ್ನುತ್ತಾರೆ.
 
`ಬದಲಾಗಿರುವ ಫ್ಯಾಷನ್ ಜಗತ್ತಿನಲ್ಲಿ ಹುಡುಗಿಯರಿಗೆ ಇಂಥ ಹರಳುಗಳು ಅಚ್ಚುಮೆಚ್ಚು. ಎಲ್ಲಾ ಉಡುಪುಗಳಿಗೆ ಬಂಗಾರದ ಒಡವೆಗಳೇ ಹೊಂದುವುದಿಲ್ಲ. ಉಡುಪುಗಳಿಗೆ ತಕ್ಕಂತೆ ಒಡವೆಗಳನ್ನು ಕೊಳ್ಳುವುದು ಕೂಡ ದುಬಾರಿ. ಹಾಗಾಗಿ ಇಂತಹ ಆಭರಣಗಳು ಈಗಿನ ಫ್ಯಾಷನ್‌ಗೆ ಹೇಳಿ ಮಾಡಿಸಿದಂತಿರುವುದರಿಂದ ಲಲನೆಯರ ಸೌಂದರ್ಯವೂ ಹೆಚ್ಚುತ್ತದೆ' ಎನ್ನುತ್ತಾರೆ ಉದ್ಯೋಗಿ ಹೇಮಾ.
 
ಬಹಳ ವರ್ಷಗಳಿಂದ ಅಪ್ಸರ್ ಅವರ ಕೆಲಸವನ್ನು ನೋಡುತ್ತಿದ್ದೇವೆ. ತುಂಬಾ ಚೆನ್ನಾಗಿ ಮಾಡುತ್ತಾರೆ. ಶ್ರಮ ಜೀವಿಯೂ ಹೌದು. ಜೈಪುರದಿಂದ ವಸ್ತುಗಳನ್ನು ಕೊಂಡು ರಿಯಾಯಿತಿ ಬೆಲೆಗೆ ಆಭರಣಗಳನ್ನು ತಯಾರಿಸಿ ಕೊಡುವವರು ಅಪರೂಪ. ನಾವು ಇವರ ಪಕ್ಕದ ನಿವಾಸಿ ಆಗಿದ್ದರಿಂದ ನಮಗೂ ಈ ರೀತಿಯ ಕೆಲಸದ ಮತ್ತು ಆಭರಣಗಳ ಬಗ್ಗೆ ಪರಿಚಯವಾಯಿತು. ಎಷ್ಟೋ ಜನ ಇಲ್ಲಿ ಕೊಂಡ ಆಭರಣ ಕಂಡು ಚಿನ್ನದ ಆಭರಣವೇ ಎಂದು ನನ್ನ ಪತ್ನಿಯನ್ನು ಪ್ರಶ್ನಿಸಿದ್ದುಂಟು. ಬಂಗಾರದ ಬೆಲೆ ಏರುತ್ತಿರುವ ಈ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಚಿನ್ನದ ಆಭರಣಗಳನ್ನು ತೊಡಲು ಕಷ್ಟಸಾಧ್ಯ.

ಇಂತಹ ಆಭರಣಗಳು ಎಲ್ಲ ವರ್ಗದ ಜನರ ಕೈಗೆ ಎಟುಕುವುದು ಮಾತ್ರವಲ್ಲ ಸಂತೋಷವನ್ನೂ ನೀಡುತ್ತದೆ. ಕತ್ತಿನಲ್ಲಿ ಸಣ್ಣ ಚಿನ್ನದ ಸರ ಕಂಡರೂ ಸಾಕು ಕುತ್ತಿಗೆಗೆ ಕೈ ಹಾಕಿ ಎಳೆಯುವ ಕಳ್ಳರ ನಡುವೆ ಚಿನ್ನದ ಆಭರಣಗಳ ಬದಲಿಗೆ ಕೈಯಲ್ಲೆ ತಯಾರಿಸಿದ ಕೃತಕ ಮಣಿಗಳ ಆಭರಣಗಳನ್ನು ತೊಟ್ಟರೆ ಕಳ್ಳರ ಕಣ್ಣಿನಿಂದಲೂ ಪಾರಾಗಬಹುದು' ಎನ್ನುತ್ತಾರೆ ನೆರೆಮನೆಯ ಬಿ.ಸಿ. ವೆಂಕಟೇಶ್. 
ಮಾಹಿತಿಗೆ : 78998 84849.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT