ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜಿತ ನಡಿಗೆಯ ಸರಿದಾರಿ

ಗೃಹಾಲಂಕಾರ ವಸ್ತು ಖರೀದಿ
Last Updated 7 ಮೇ 2015, 19:30 IST
ಅಕ್ಷರ ಗಾತ್ರ

‘ಹೋಮ್ ರಿಟೈಲ್ ಥೆರಪಿ’ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಪದಪುಂಜ. ಮನೆಯ ಒಳಾಂಗಣ ವಿನ್ಯಾಸಕ್ಕೆ ಅಗತ್ಯ ವಸ್ತುಗಳನ್ನು ಯೋಜಿತ ರೀತಿಯಲ್ಲಿ ಖರೀದಿಸುವ ಪ್ರಕ್ರಿಯೆಯನ್ನು ಸೂಚಿಸುವ ಪದಪುಂಜವಿದು. ತಂತಮ್ಮ ಅಗತ್ಯಗಳಿಗೆ ತಕ್ಕಂತೆ ಜನರು ಸ್ಥಳೀಯ ಮಾರುಕಟ್ಟೆಗಳಿಗೆ, ಪ್ರದರ್ಶನ ಮಾರಾಟದಲ್ಲಿನ ಮಳಿಗೆಗಳಿಗೆ ಎಡತಾಕುವುದು ಸಹಜ. ಹೋದೆಡೆಯೆಲ್ಲಾ ಒಂದೆರಡು ವಸ್ತುಗಳು ಅಗತ್ಯಕ್ಕೆ ಹೊಂದಿಕೆಯಾದಾವು. ಅವನ್ನು ಕೊಂಡ ನಂತರ ಮತ್ತೆ ಒಂದಿಷ್ಟು ಪ್ರಶ್ನೆಗಳು ತಲೆ ಕೊರೆಯುತ್ತವೆ: ಕೊಂಡ ವಸ್ತುವಿನಲ್ಲಿ ಏನಾದರೂ ಹಣ ಉಳಿಸಿದೆವೇ, ಗುಣಮಟ್ಟದ ವಿಷಯದಲ್ಲಿ ಅದು ಕೈಕೊಡುವುದಿಲ್ಲವಷ್ಟೆ, ಅಸಲಿ ಬೆಲೆಗಿಂತ ಕಡಿಮೆಗೆ ಅದು ಗಿಟ್ಟಿತೇ, ಇನ್ನಷ್ಟು ಮಾರುಕಟ್ಟೆ ಸಮೀಕ್ಷೆ ನಡೆಸಿ ಅವುಗಳನ್ನು ಕೊಳ್ಳಬೇಕಿತ್ತೆ... ಹೀಗೆ.

ಈ ರೀತಿಯ ಪ್ರಶ್ನೆಗಳನ್ನು ಉಳಿಸಿಕೊಳ್ಳದೆ ‘ಚೆಕ್‌ಲಿಸ್ಟ್‌’ಗೆ ತಕ್ಕಂತೆ ‘ಹೋಮ್ ರಿಟೈಲ್ ಥೆರಪಿ’ ಮಾಡಲು ಇಲ್ಲಿವೆ ಒಂದಿಷ್ಟು ಟಿಪ್ಸ್...
ಮೊದಲಿಗೆ ಒಂದು ಹಾಳೆಯಲ್ಲಿ ನಿಮಗೆ ಏನೇನು ಬೇಕು ಎಂದು ಬರೆದುಕೊಳ್ಳಿ. ಇದೊಂದು ಮೆದುಳಿಗೆ ಕಸರತ್ತು ಕೊಡುವ ಪ್ರಕ್ರಿಯೆ. ಒಂದೊಂದೇ ವಸ್ತುವನ್ನು ಬರೆಯುತ್ತಾ ಹೋದಂತೆ ಅಗತ್ಯಗಳು ಏನು ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಹೊಸ ಸೋಫಾ ಬೇಕಿದ್ದರೆ ಸ್ಪಷ್ಟವಾಗಿ ಹಳೆಯದನ್ನು ಬದಲಿಸಬೇಕು ಎಂದು ಬರೆದಿಟ್ಟುಕೊಳ್ಳಿ. ನಿರ್ದಿಷ್ಟ ವಸ್ತುವನ್ನು ಮೊದಲ ಬಾರಿಗೆ ಕೊಳ್ಳಬೇಕಿದ್ದರೆ ಅದನ್ನು ಪ್ರತ್ಯೇಕ ಕಾಲಂನಲ್ಲಿ ಬರೆಯಿರಿ. ಆಗ ಬದಲಿಸಬೇಕಾದ ಹಾಗೂ ಹೊಸದಾಗಿ ಕೊಳ್ಳಬೇಕಾದ ವಸ್ತುಗಳ ನಿಖರವಾದ ಪಟ್ಟಿ ಮಾಡಿದಂತಾಗುತ್ತದೆ.

ಪಟ್ಟಿ ಸಿದ್ಧವಾದ ಮೇಲೆ ಅದನ್ನು ವಿಮರ್ಶೆ ಮಾಡುವ ಹಂತ. ಅವೆಲ್ಲಾ ವಸ್ತುಗಳೂ ಅಗತ್ಯವೇ ಎಂದು ಪರಿಶೀಲಿಸಿ. ಯಾವ ವಸ್ತುಗಳನ್ನು ತಕ್ಷಣಕ್ಕೆ ಕೊಳ್ಳಲೇಬೇಕು ಎನ್ನಿಸುತ್ತದೋ ಅವನ್ನೆಲ್ಲಾ ಪ್ರತ್ಯೇಕವಾಗಿ ಪಟ್ಟಿ ಮಾಡಿ. ಸ್ನೇಹಿತರ ಮನೆಯಲ್ಲೋ, ಸಿನಿಮಾ-ಧಾರಾವಾಹಿಗಳಲ್ಲೋ ನೋಡಿ ಮನ ಸೆಳೆದ ಕಾರಣಕ್ಕೆ ಪಟ್ಟಿ ಮಾಡಿದ ವಸ್ತುಗಳನ್ನಷ್ಟೆ ಇನ್ನೊಂದು ಪಟ್ಟಿ ಮಾಡಿ.

ಮನೆಯಲ್ಲಿ ಬಹಳ ವರ್ಷಗಳಿಂದ ಇರುವ ಹಳೆಯ ಸೋಫಾ ನಿಮ್ಮ ಪಾಲಿಗೆ ಆಕರ್ಷಕ ಎನಿಸದೇ ಇರಬಹುದು. ಆದರೆ ಅದು ‘ಆ್ಯಂಟಿಕ್’ ಎಂಬಂತೆ ಬೇರೆಯವರ ಕಣ್ಣಿಗೆ ಕಾಣುವ ಸಾಧ್ಯತೆ ಇದೆ. ಇದನ್ನು ಮರೆತು ಹೊಸ ಸೋಫಾ ಕೊಳ್ಳಲು ಮನಸ್ಸು ತಕ್ಷಣ ಬಯಸಿರಬಹುದು. ಬಟ್ಟೆಗಳ ಸಂಖ್ಯೆಯ ದೃಷ್ಟಿಯಿಂದ ತಕ್ಷಣಕ್ಕೆ ವಾರ್ಡ್‌ರೋಬ್ ಬೇಕಿರಬಹುದು. ಅದೇ ಬಟ್ಟೆಯಿಂದ ಅಲಂಕರಿಸಿದ ಲ್ಯಾಂಪ್ ಶೇಡ್ ನಿಮಗಿಷ್ಟ ಎನ್ನುವ ಕಾರಣಕ್ಕೆ ಪಟ್ಟಿಯನ್ನು ಸೇರಿರಬಹುದು. ಹೀಗೆ ಪಟ್ಟಿ ಮಾಡಿದ ಎಲ್ಲಾ ವಸ್ತುಗಳನ್ನು ಖರೀದಿಸುವಿರಾದರೆ ಅದನ್ನು ಹುಚ್ಚುತನದ ಶಾಪಿಂಗ್ ಎನ್ನುತ್ತೇವೆ. ಪೀಠೋಪಕರಣ, ಕಲಾತ್ಮಕ ವಸ್ತುಗಳು, ವಿದ್ಯುತ್‌ಚಾಲಿತ ವಸ್ತುಗಳು ಹೀಗೆ ತಕ್ಷಣಕ್ಕೆ ಕೊಳ್ಳಬೇಕಾದ ವಸ್ತುಗಳ ಪಟ್ಟಿಯನ್ನು ವಿಂಗಡಿಸಿಕೊಂಡರೆ ಖರೀದಿಸಲು ಅನುಕೂಲ.

ಪರಿಕಲ್ಪನೆ ಸ್ಪಷ್ಟವಾಗಿರಲಿ
ಹೊಸ ಟ್ರೆಂಡ್ ಅನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ನಿಮ್ಮ ಇಷ್ಟದ ಬಣ್ಣವನ್ನು ಆರಿಸಿಕೊಳ್ಳಿ. ಮನೆಯ ಲಭ್ಯ ಸ್ಥಳಾವಕಾಶದ ಅರಿವಿನಿಂದ ಬೆಳಕು, ಪರದೆಗಳು, ಕಾರ್ಪೆಟ್‌ಗಳು ಇತ್ಯಾದಿಯನ್ನು ಕೊಳ್ಳಬೇಕು. ಪಟ್ಟಿ ಸಿದ್ಧಪಡಿಸುವ ಹಂತದಲ್ಲಿಯೇ ಯಾವ್ಯಾವುದಕ್ಕೆ ಕನಿಷ್ಠ ಎಷ್ಟು ಹಣ ಖರ್ಚು ಮಾಡಬಲ್ಲಿರಿ ಎನ್ನುವುದನ್ನು ನಮೂದಿಸುವುದೂ ಒಳ್ಳೆಯದು. ಕೊಳ್ಳುತ್ತಾ ಹೋದಂತೆ ಯಾವುದಾದರೂ ವಸ್ತುವಿನ ಬೆಲೆ ನಿಮ್ಮ ಬಜೆಟ್‌ಗಿಂತ ಸಾಕಷ್ಟು ಕಡಿಮೆ ಇದ್ದಲ್ಲಿ, ಅಲ್ಲಿ ಮಿಗಿತಾಯವಾದದ್ದನ್ನು ಬೇರೆ ವಸ್ತುವಿನ ಖರೀದಿಗೆ ವಿನಿಯೋಗಿಸಬಹುದು. ಯಾವುದೇ ಕಾರಣಕ್ಕೂ ಬಜೆಟ್ ಹೆಚ್ಚಾಗದಂತೆ ನಿಗಾ ವಹಿಸಿ.

ಮಾಲ್ ಮೇನಿಯ
ಪ್ರಮುಖ ಮಾಲ್‌ಗಳಲ್ಲಿ ಈಗ ಪೀಠೋಪಕರಣಗಳ ಪ್ರತ್ಯೇಕ ಮಳಿಗೆ ಇದ್ದೇ ಇರುತ್ತದೆ. ಅಲ್ಲಿ ಆಕರ್ಷಕವಾಗಿ ಕಾಣುವ ಪೀಠೋಪಕರಣಗಳನ್ನು ಒಪ್ಪವಾಗಿ ಇರಿಸಿರುತ್ತಾರೆ. ಎಂಡಿಎಫ್ ಅಥವಾ ಪ್ರಿ ಲ್ಯಾಮಿನೇಟೆಡ್ ಬೋರ್ಡ್‌ಗಳಿಂದ ಬಹುತೇಕ ಪೀಠೋಪಕರಣಗಳನ್ನು ತಯಾರಿಸಿರುತ್ತಾರೆ. ಅವು ನೋಡಲು ಆಕರ್ಷಕವಾಗಿಯೂ, ಹಗುರವಾಗಿಯೂ ಇರುತ್ತವೆ. ನಿತ್ಯಬಳಕೆಯ ದೃಷ್ಟಿಯಿಂದ ಎಂಡಿಎಫ್ ಪೀಠೋಪಕರಣಗಳು ಉತ್ತಮವಲ್ಲ. ಸಣ್ಣ ಸ್ಟೂಲ್‌ಗಳು, ಶೂ ಕ್ಯಾಬಿನೆಟ್ ಹಾಗೂ ಸಿಡಿ ಶೆಲ್ಫ್‌ಗಳು ಎಂಡಿಎಫ್ ಬೋರ್ಡ್‌ನಿಂದ ಮಾಡಿದವಾದರೆ ಚಿಂತೆ ಇಲ್ಲ.

ಹಳೆಯ ಪೀಠೋಪಕರಣಗಳನ್ನು ಕೊಟ್ಟು, ಹೊಸದನ್ನು ಖರೀದಿಸುವಿರಾದರೆ ತುಂಬಾ ಎಚ್ಚರಿಕೆ ಇರಬೇಕು. ಕೊಡುವ ಮಾಲಿನ ಗುಣಮಟ್ಟಕ್ಕೂ, ಕೊಳ್ಳುವ ವಸ್ತುವಿನ ಮೌಲ್ಯಕ್ಕೂ ತಾಳೆಹಾಕುವುದನ್ನು ಮರೆಯದಿರಿ. ಹೊಸ ಟ್ರೆಂಡ್‌ನ ಪೀಠೋಪಕರಣ ಎಂದಮಾತ್ರಕ್ಕೆ ಅದು ಗುಣಮಟ್ಟದಲ್ಲಿ ಟೊಳ್ಳಾಗಿರಬೇಕಿಲ್ಲ. ಜೋಡಣೆಯ ಭಾಗಗಳ ಕೆಲಸ ನಾಜೂಕಾಗಿ ಆಗಿದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಿ.

ರಿಯಾಯಿತಿ ನಿಜಾಯತಿ
ಬ್ರಾಂಡೆಡ್ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುವುದಿಲ್ಲ ಎಂದು ಎಷ್ಟೋ ಜನ ಭಾವಿಸಿದ್ದಾರೆ. ಇನ್ನು ಕೆಲವರು ಪ್ರದರ್ಶನ ಮಾರಾಟ ಮೇಳಗಳಲ್ಲಿ ರಿಯಾಯಿತಿ ಇದ್ದರೆ ಹೆಚ್ಚು ಆಯ್ಕೆಗಳು ಸಿಗುವುದಿಲ್ಲ ಎಂದುಕೊಂಡಿದ್ದಾರೆ. ಇವೆರೆಡೂ ತಪ್ಪು ಕಲ್ಪನೆಗಳು. ವರ್ಷದ ನಿರ್ದಿಷ್ಟ ಅವಧಿಯಲ್ಲಿ ರಿಯಾಯಿತಿ ಮಾರಾಟ ಇದ್ದೇ ಇರುತ್ತದೆ. ಆ ಸಂದರ್ಭ ನೋಡಿಕೊಂಡು ಮಾರುಕಟ್ಟೆ ಸಮೀಕ್ಷೆ ನಡೆಸಿಯೇ ಬ್ರಾಂಡೆಡ್ ವಸ್ತುಗಳನ್ನು ಕೊಳ್ಳಬಹುದು. ಅದರಲ್ಲೂ ಪೀಠೋಪಕರಣಗಳು, ವಿದ್ಯುತ್ ಅಲಂಕಾರಿಕ ಪರಿಕರಗಳು, ಕಾರ್ಪೆಟ್‌ಗಳನ್ನು ರಿಯಾಯಿತಿ ಇರುವಾಗ ಕೊಳ್ಳುವುದು ಉತ್ತಮ.

ಪ್ರದರ್ಶನ ಮಾರಾಟದ ಅವಕಾಶ
ಹೊಸ ಉತ್ಪನ್ನಗಳನ್ನು ಯಾವುದಾದರೂ ಕಂಪೆನಿ ಪರಿಚಯಿಸುವಾಗ ಅದನ್ನು ಮಾರಾಟ ಮಳಿಗೆಯಲ್ಲೋ ಪ್ರದರ್ಶನ ನಡೆಯುವ ಸ್ಥಳದಲ್ಲೋ ಎದ್ದುಕಾಣುವಂತೆ ಇಡುತ್ತದೆ. ಸಾಮಾನ್ಯವಾಗಿ ಹೊಸ ಟ್ರೆಂಡ್‌ನ ವಸ್ತುಗಳನ್ನು ಹಾಗೆ ಪ್ರದರ್ಶನಕ್ಕೆ ಇಡುವುದು ಮಾಮೂಲು. ವಿನ್ಯಾಸ, ಪರಿಕಲ್ಪನೆ ಎರಡರಲ್ಲೂ ಸ್ಪಷ್ಟತೆ ಇರುವವರು ಅಂಥ ಕಡೆ ಶಾಪಿಂಗ್ ಮಾಡಬಹುದು. ಒಂದಿಷ್ಟು ಪ್ರದರ್ಶನಗಳನ್ನು ನೋಡಿ ಬಂದರೆ ಸಮಕಾಲೀನ ವಿನ್ಯಾಸದ ಅರಿವಾದರೂ ಮೂಡುತ್ತದೆ. ಆಮೇಲೆ ಶಾಪಿಂಗ್‌ಗೆ ಅನುಕೂಲ.  ಮನೆಯ ಒಳಾಂಗಣವನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ಚೆಂದ ಮಾಡುವ ನಿರ್ಧಾರ ಮಾಡಿದ್ದರೆ, ಯೋಜಿತ ರೀತಿಯಲ್ಲಿ ಹೆಜ್ಜೆ ಇಡಿ.

ಬೀದಿಬದಿಯ ಮಾರುಕಟ್ಟೆ
ಸಂತೆಗಳಲ್ಲಿ ಚೌಕಾಸಿ ಸಲೀಸು ಎನ್ನುವ ನಂಬಿಕೆ ಭಾರತೀಯರಲ್ಲಿ ಮೊದಲಿನಿಂದಲೂ ಇದೆ. ಈಗ ನಗರಗಳಲ್ಲಿ ರಸ್ತೆಬದಿಯಲ್ಲಿಯೇ ಆ್ಯಂಟಿಕ್ ವಸ್ತುಗಳು, ಕರಕುಶಲ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಮಾರುವವರು ಇದ್ದಾರೆ. ಕೆಲವರು ನಿಮ್ಮ ಅಗತ್ಯಗಳನ್ನು ಅರಿತು, ಆರ್ಡರ್ ಪಡೆದುಕೊಂಡು ಬೇಕಾದ ಪೀಠೋಪಕರಣಗಳನ್ನು ಮಾಡಿಕೊಡುತ್ತಾರೆ. ಇಂಥ ಎಲ್ಲಾ ಮಾರಾಟಗಾರರು ಗುಣಮಟ್ಟಕ್ಕೆ ಆದ್ಯತೆ ಕೊಡುವುದಿಲ್ಲ ಎನ್ನುವುದೆಲ್ಲ ಸುಳ್ಳು. ಅವರಲ್ಲೂ ಕಸುಬುದಾರರು ಇರುತ್ತಾರೆ. ನಿಮಗೆ ಆಯ್ಕೆ ಹಾಗೂ ಆರ್ಡರ್ ಕೊಡುವ ವಿಷಯದಲ್ಲಿ ಸ್ಪಷ್ಟತೆ ಇದ್ದರೆ ಆದೀತು. ಉದಾಹರಣೆಗೆ, ನಿರ್ದಿಷ್ಟ ಮರವನ್ನೇ ಬಳಸಬೇಕು, ಇಂಥದ್ದೇ ವಿನ್ಯಾಸ ಬೇಕು ಎಂದು ಕಸುಬುದಾರರಿಗೆ ಸೂಚಿಸಬೇಕು. ನಿಮ್ಮ ‘ಬೇಕು’ಗಳಿಗೆ ಸ್ಪಂದಿಸದೆ ತನ್ನಲ್ಲಿ ಇರುವ ವಸ್ತುಗಳನ್ನೇ ಹೇಗಾದರೂ ಮಾಡಿ ತಗಲಿಹಾಕುವಂತೆ ಮಾತನಾಡುವವ ಕಸುಬುದಾರ ಅಲ್ಲ ಎನ್ನುವುದು ಗೊತ್ತಿರಲಿ. ಒಂದು ವೇಳೆ ಸಗಟು ಮಾರಾಟ ಮಾಡುವ ಮಾರುಕಟ್ಟೆಗೆ ಖರೀದಿಸಲು ಹೋಗುವಿರಾದರೆ ಪಟ್ಟಿಯನ್ನು ಪಕ್ಕಾ ಮಾಡಿಕೊಂಡಿರಿ ಹಾಗೂ ಏಕಕಾಲದಲ್ಲಿ ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಂಡು ಹೊರಡಿ.


ಲೇಖಕಿ ಒಳಾಂಗಣ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT