ಬುಧವಾರ, ಮಾರ್ಚ್ 3, 2021
18 °C

ಮಹಿಳೆಯರ ಒಂಟಿಯಾನಕ್ಕೆ ಆ್ಯಪ್‌ ಸಂಗಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಒಂಟಿಯಾಗಿ ದೂರದ ಸ್ಥಳಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಬಹುತೇಕ ಮಹಿಳೆಯರಿಗೆ ಗುಂಪಿನಲ್ಲಿ ಪ್ರವಾಸ ಮಾಡುವುದಕ್ಕಿಂತ ಈ ರೀತಿ ಒಂಟಿಯಾನ ನೆಚ್ಚಿನ ಆಯ್ಕೆಯಾಗಿದೆ.

ಆದರೆ ಪ್ರವಾಸಕ್ಕೆ ಯಾವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ. ಪ್ರಯಾಣಕ್ಕೆ ಏನೆಲ್ಲಾ ಕೊಂಡೊಯ್ಯಬೇಕು ಎಂದು ನಿರ್ಧರಿಸುವ ತನಕ ಸಾಕಷ್ಟು ತಯಾರಿಗಳು ಇರುತ್ತವೆ. ಇದರ ನಡುವೆ ದೂರದ ಸ್ಥಳಗಳಲ್ಲಿನ ಸುರಕ್ಷತೆ ಕುರಿತು ಆತಂಕವೂ ಮೂಡುತ್ತದೆ. ಇಂಥ ಗೊಂದಲಗಳ ನಿರ್ವಹಣೆ ಮಾಡುವುದಕ್ಕಾಗಿ ಕೆಲವೊಂದು ಮೊಬೈಲ್ ಅಪ್ಲಿಕೇಷನ್‌ಗಳು ಸಿದ್ಧವಾಗಿವೆ. ಇಂಥ ಆ್ಯಪ್‌ಗಳು ಒಂಟಿ ಮಹಿಳೆಯರ ಯಾನಕ್ಕೆ ಸಾಥ್ ನೀಡುತ್ತವೆ. ಅಂಥ ಆ್ಯಪ್‌ಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಆಂಡ್ರಾಯ್ಡ್‌ ಫೋನ್‌ಗಳಲ್ಲಿರುವ ಪ್ಲೇಸ್ಟೋರ್‌ಗೆ ಹೋಗಿ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.‌

ಟ್ರಿಪ್‌ ಅಡ್ವೈಸರ್ (TripAdvisor)
ಸ್ಥಳೀಯವಾಗಿ ಪ್ರಸಿದ್ಧವಾಗಿರುವ ತಾಣಗಳು, ಹೋಟೆಲ್‌ ಮತ್ತು ಅವುಗಳ ವಿವರ ಪಡೆಯಲು ಈ ಆ್ಯಪ್ ಉತ್ತಮ. ಯಾವ ವಿಮಾನಯಾನ ಸಂಸ್ಥೆಗಳು ಕಡಿಮೆ ಪ್ರಯಾಣದರ ನೀಡುತ್ತವೆ ಎನ್ನುವುದನ್ನೂ ಇಲ್ಲಿ ಹುಡುಕಬಹುದು. ಇದರಿಂದಾಗಿ ಅಲ್ಪಾವಧಿಯಲ್ಲಿಯೇ ಪ್ರವಾಸ ನಿಗದಿಪಡಿಸಲು ಸಹ ಸುಲಭವಾಗುತ್ತದೆ.

ಗೂಗಲ್ ಟ್ರಿಪ್ಸ್(Google Trips)
ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ಒಂದೇ ಕಡೆಯಿಂದ ಪಡೆಯಲು ಇದು ಸೂಕ್ತ ಆ್ಯಪ್. ಅಲ್ಲದೆ ಆಫ್‌ಲೈನ್‌ನಲ್ಲಿಯೂ ಇದನ್ನು ಬಳಸಬಹುದು. ತಾವಿರುವ ಸ್ಥಳಗಳ ಆಧಾರದ ಮೇಲೆ ಅಲ್ಲಿ ಏನೆಲ್ಲಾ ಚಟುವಟಿಕೆ ಸಾಧ್ಯ ಎಂದು ಸಲಹೆ ಪಡೆಯಬಹುದು. ಜಿಮೇಲ್ ಖಾತೆಯಿಂದ ಪ್ರಯಾಣಕ್ಕೆ ಟಿಕೆಟ್ ಕಾದಿರಿಸಬಹುದು. 

ಟ್ರಿಪ್ಇಟ್ (TripIt)
ಸರ್ವರ್‌ನಿಂದ ಮಾಹಿತಿ ಸಂಗ್ರಹಿಸಿ, ಕ್ಯಾಲೆಂಡರ್ ಹಾಗೂ ಇತರೆ ಆ್ಯಪ್‌ಗಳೊಂದಿಗೆ ಅವುಗಳನ್ನು  ವೈಯಕ್ತಿಕ ಪ್ರವಾಸಿ ಮಾರ್ಗದರ್ಶಿ ರೀತಿ ಇದು ನೆರವಾಗುತ್ತದೆ. ಇದರ ಮೂಲಕ ನಾವು ನಮ್ಮ ಪ್ರವಾಸದ ಮಾಹಿತಿಯನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವ ಆಯ್ಕೆಯೂ ಇದೆ. 

ಥ್ರಿಲ್ಲೊಫಿಲ (Thrillophila)
25ಕ್ಕೂ ಹೆಚ್ಚು ದೇಶಗಳ ವಿಶಿಷ್ಟವಾದ ತಾಣಗಳನ್ನು ‍ಪರಿಚಯಿಸುತ್ತದೆ ಮತ್ತು ರಜೆ ಕಳೆಯಲು ವಿಭಿನ್ನವಾದ ಚಟುವಟಿಕೆಗಳನ್ನು ಸಲಹೆ ನೀಡುತ್ತದೆ. ಚಾರಣ, ಫಿಟ್‌ನೆಸ್ ಹಾಗೂ ಸಾಹಸಿ ಚಟುವಟಿಕೆಗಳನ್ನ ಇಷ್ಟಪಡುವವರಿಗೆ ಈ ಆ್ಯಪ್ ಅತ್ಯಗತ್ಯ ಎನಿಸುತ್ತದೆ.  

Sheroes (ಶೆರೊಸ್): Shero (ಶೆರೊ) ಎಂದರೆ ಸ್ಥೈರ್ಯವಂತ ಮಹಿಳೆ ಎಂದು ಅರ್ಥ. ಈ ಆ್ಯಪ್ ಪ್ರವಾಸ ಪ್ರೀತಿಸುವ ಮಹಿಳೆಯರ ವೇದಿಕೆ. ವಿಶ್ವದೆಲ್ಲೆಡೆಯ ಸಮಾನ ಮನಸ್ಕ ಮಹಿಳಾ ಪ್ರವಾಸಿಗಳ ಜತೆ ಸಂಪರ್ಕ ಹೊಂದಲು, ಸಂವಹನ ಸಾಧಿಸಲು ಇಲ್ಲಿ ಅವಕಾಶವಿದೆ. ಇದರಿಂದ ಮುಂದಿನ ಪ್ರವಾಸಕ್ಕೆ ಹಲವು ಹೊಳಹುಗಳು, ನೆರವು ದೊರಕುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು