ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳಲ್ಲಿ ಅರಳಿದ ಗ್ರಾಮದೇವತೆಗಳು

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಮನುಷ್ಯ ತನ್ನ ಆರಾಧ್ಯದೈವವನ್ನು ನಿತ್ಯವೂ ಪೂಜಿಸುತ್ತಾ, ಆರಾಧಿಸುತ್ತಾ ಬಂದಿದ್ದಾನೆ. ಗ್ರಾಮ-ನಗರಗಳಲ್ಲೂ ವಿವಿಧ ದೇವಸ್ಥಾನಗಳನ್ನು, ದೈವಗಳನ್ನು ನಾವು ಕಾಣುತ್ತೇವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಗ್ರಾಮದೇವತೆಗಳು ನಮ್ಮ ಗಮನ ಸೆಳೆಯುತ್ತವೆ. ನಾಡಿನ ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆ ನೆಲೆಸಿ ಆ ಗ್ರಾಮವನ್ನು ಕಾಪಾಡುವ ಮಹತ್ವದ ಕಾರ್ಯವನ್ನು ನಿಭಾಯಿಸುತ್ತಿವೆ ಎನ್ನುವ ನಂಬಿಕೆ ಜನಪದರದು.

ಆದರೆ, ಬದಲಾದ ಜೀವನಶೈಲಿಯಿಂದ ವಿಶೇಷವಾಗಿ ಆಧುನಿಕತೆಯಿಂದ ಗ್ರಾಮದೇವತೆಗಳ ಮಹತ್ವವನ್ನು ಮರೆಯಲಾಗುತ್ತಿದೆ. ಅನೇಕ ಕಡೆಗಳಲ್ಲಿ ಗ್ರಾಮದೇವತೆಗಳ ಗುಡಿಗಳು ಶಿಥಿಲಾವಸ್ಥೆಯಲ್ಲಿವೆ. ಈಗಿನ ಕಾಲದವರಿಗೆ ಪ್ರಮುಖವಾಗಿ ಯುವಜನತೆಗೆ ಗ್ರಾಮದೇವತೆಗಳ ಪರಿಕಲ್ಪನೆ ಇರುವುದಿಲ್ಲ. ಗ್ರಾಮದೇವತೆಗಳು ಸಂಸ್ಕೃತಿ, ಪರಂಪರೆಯನ್ನು ಪ್ರತಿನಿಧಿಸುತ್ತವೆ.

ಕಲ್ಯಾಣ ಕರ್ನಾಟಕದ ಕಲಬುರಗಿಯ ಹಿರಿಯ ಚಿತ್ರ ಕಲಾವಿದರಾದ ಮೋಹನ್ ಸಿತನೂರ ಅವರು ‘ಗ್ರಾಮದೇವತೆ’ಗಳು ವಿಷಯದ ಮೇಲೆ ತಮ್ಮ ಊರಿನ ಸುತ್ತಲೂ ಇರುವ ಗ್ರಾಮದೇವತೆಗಳನ್ನು ತಮ್ಮ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಆ ಮೂಲಕ ಗ್ರಾಮದೇವತೆಗಳ ಪ್ರಾಮುಖ್ಯತೆಯನ್ನು ಸಾರುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೋಹನ್ ಅವರು ಗ್ರಾಮದೇವತೆಗಳ ತಾಣಗಳನ್ನು ಅಂದರೆ ಗುಡಿಗಳಿಗೆ ಭೇಟಿ ನೀಡಿದಾಗ, ಜಾಜದ ಬದಲು ಈಗಿನ ಪೇಂಟ್‌ಗಳು ಆವರಿಸಿದ್ದು, ಎಣ್ಣೆದೀಪಗಳ ಬದಲು ಜಗಮಗಿಸುವ ಲೈಟ್‌ಗಳು ಆಕ್ರಮಿಸಿದ್ದು ಬೇರೆ ಬೇರೆ ಬದಲಾವಣೆಗಳು ಸಂಸ್ಕೃತಿ, ಪರಂಪರೆಯನ್ನು ಕರಗುಸುತ್ತಿರುವುದು, ಇನ್ನಿತರ  ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಗ್ರಾಮದೇವತೆಗಳ ಮೂಲ ಸ್ವರೂಪವನ್ನು ಬಣ್ಣಗಳಲ್ಲಿ ಚಿತ್ರಿಸಿದ್ದಾರೆ.

ಅಕ್ರಲಿಕ್ ಬಣ್ಣವನ್ನು ರೈಸ್ ಪೇಪರ್ ಮೇಲೆ ಮತ್ತು ಅಕ್ರಲಿಕ್ ಬಣ್ಣವನ್ನು ಕ್ಯಾನ್ವಾಸ್‌ ಮೇಲೆ ಈ ಎಲ್ಲಾ ಗ್ರಾಮದೇವತೆಗಳ ಪೇಂಟಿಂಗ್‌ಗಳನ್ನು ಮಾಡಿದ್ದಾರೆ. ವರ್ಣಚಿತ್ರ, ರೇಖಾಚಿತ್ರ ಮತ್ತು ಗ್ರಾಫಿಕ್ ಡಿಸೈನ್‌ನಲ್ಲಿ ಪರಿಣಿತರಾದ ಮೋಹನ್ ಅವರು ಕಲಬುರಗಿಯ ನಗರದ ತಮ್ಮ ಸ್ವಗೃಹದಲ್ಲಿ ತಮ್ಮದೇ ಆದ ಕಲಾ ಗ್ಯಾಲರಿಯನ್ನು ಹೊಂದಿದ್ದಾರೆ. ಇವರು ತಮ್ಮ ಕುಂಚ ಮೂಲಕ ಪ್ರಾದೇಶಿಕತೆಯನ್ನು, ದೇಸಿ ಸೌಂದರ್ಯವನ್ನು, ಜನಪದೀಯವನ್ನು ಅಭಿವ್ಯಕ್ತ ಹಾಗೂ  ಅನಾವರಣಗೊಳಿಸುತ್ತಿದ್ದಾರೆ.

ಕಲಾವಿದ ಮೋಹನ್‌ ರಚಿಸಿದ ಚಿತ್ರ

ಕಲಾವಿದ ಮೋಹನ್‌ ರಚಿಸಿದ ಚಿತ್ರ

ಮೋಹನ್ ಸಿತನೂರ

ಮೋಹನ್ ಸಿತನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT