ಕರ್ನಾಟಕ - ಕನ್ನಡಕ್ಕೆ ಸಂಬಂಧಿಸಿದಂತೆ 2012ನೇ ಇಸವಿಯಲ್ಲಿ ನಿಮಗೆ ಮುಖ್ಯವೆನ್ನಿಸಿದ ಸಂಗತಿ ಯಾವುದು? ಸಾಪ್ತಾಹಿಕ ಪುರವಣಿಯ ಈ ಪ್ರಶ್ನೆಗೆ ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಪ್ರತಿಕ್ರಿಯೆಗಳು ಇಲ್ಲಿವೆ. ಆತ್ಮ ನಿರೀಕ್ಷಣೆ ರೂಪದ ಈ ಟಿಪ್ಪಣಿಗಳು ನಡೆದು
ಬಂದ ದಾರಿಯ ಚಿತ್ರಣದ ಜೊತೆಗೆ ನಡೆಯಬೇಕಾದ ದಾರಿಯನ್ನೂ ಸೂಚ್ಯವಾಗಿ ತೋರಿಸುವಂತಿವೆ.

ನಗೆಪಾಟಲಿನ ರಾಜಕಾರಣ
ಈ ವರ್ಷದಲ್ಲಿ ಕರ್ನಾಟಕ ಎಂದೊಡನೆ ಏನು ನೆನಪಾಗುತ್ತದೆ ಎಂದು ಯಾರು ಕೇಳಿದರೂ ನಿಸ್ಸಂಶಯವಾಗಿ ನನ್ನ ನಾಲಗೆ ಮೇಲೆ ಬರುವುದು `ರಾಜಕೀಯ' ಎಂಬ ಪದ. ನಾನು ಈ ವರ್ಷ ದೇಶ ವಿದೇಶಗಳಲ್ಲಿ ನಡೆಯುವ ಚಿತ್ರೋತ್ಸವಗಳಿಗೆ ಹೋಗಿ ಬಂದಿದ್ದೇನೆ.

ನಮ್ಮ ರಾಜ್ಯದ ಕುರಿತು ಹೊರಗಿನವರು ಏನನ್ನು ಮಾತನಾಡಿಕೊಳ್ಳುತ್ತಾರೆ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ನನಗೆ ಎಲ್ಲಿ ಹೋದರೂ ಕರ್ನಾಟಕ ರಾಜಕೀಯದ ಬಗೆಗೆ ವ್ಯಂಗ್ಯದ ಮಾತುಗಳು ಕಿವಿಮೇಲೆ ಬೀಳುತ್ತವೆ.

ಸದನದಲ್ಲಿ ನೀಲಿ ಚಿತ್ರದ ನೋಡಿದ ಘಟನೆಯಿಂದ ಹಿಡಿದು ಪದೇಪದೇ ಮುಖ್ಯಮಂತ್ರಿ ಬದಲಾಗುವ ವಿದ್ಯಮಾನದವರೆಗೆ ಎಲ್ಲವೂ ಆಡುವವರ ಬಾಯಿಗೆ ಸರಕಾಗಿದೆ. ಅಷ್ಟೇ ಅಲ್ಲ, ಹೊರಗಿನವರಿಗೆ ನಮ್ಮ ರಾಜಕೀಯ ನಗೆಪಾಟಲಿನ ವಿಷಯವಾಗಿಬಿಟ್ಟಿದೆ. ಜನ ಹೀಗೆ ನನ್ನ ರಾಜ್ಯದ ರಾಜಕೀಯವನ್ನು ಗೇಲಿ ಮಾಡಿದಾಗಲೆಲ್ಲಾ ಮನಸ್ಸಿನಲ್ಲಿ ಒಂದು ರೀತಿ ಸಂಕೋಚ ಮೂಡುತ್ತದೆ.

ಸ್ವಾತಂತ್ರ್ಯ ಬಂದ ನಂತರ ನಮ್ಮದು ಮಾದರಿ ರಾಜ್ಯವಾಗಿತ್ತು. ಅಲ್ಲಿಂದಾಚೆಗೆ ಮೂರು ದಶಕದ ರಾಜಕೀಯ ಕ್ಷೇತ್ರವನ್ನು ಹೊರಗಿನವರು ಹೊಗಳುತ್ತಿದ್ದರು. ದೂರದೃಷ್ಟಿ, ಜನಪರ ಕಾಳಜಿಯ ಬಗೆಗೆ ಮಾತನಾಡುತ್ತಿದ್ದರು. ಆದರೀಗ ಅಂಥ ಒಂದು ಮಾತೂ ಕಿವಿಮೇಲೆ ಬೀಳುವುದಿಲ್ಲ.

ಬದಲಿಗೆ ಇಲ್ಲಿನ ಜಾತಿ ರಾಜಕಾರಣ, ಭ್ರಷ್ಟಾಚಾರ, ನಿರ್ಲಜ್ಜ ರಾಜಕಾರಣಿಗಳು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಯಾರಾದರೂ ಈ ವರ್ಷ ಎಂದೊಡನೆ ಯಾವ ಕ್ಷೇತ್ರ ನೆನಪಿಗೆ ಬರುತ್ತದೆಂದು ಕೇಳಿದರೆ, `ರಾಜಕೀಯ' ಎಂದೇ ಬೇಸರದಿಂದಲೂ ವಿಷಾದದಿಂದಲೂ ಹೇಳುತ್ತೇನೆ. ನಮ್ಮ ಈ ಪರಿಸ್ಥಿತಿಯನ್ನು ಇಟ್ಟುಕೊಂಡೇ ಒಂದು ಸಿನಿಮಾ ಮಾಡುವುದು ಸಾಧ್ಯವಿದೆಯೇನೋ.
ಗಿರೀಶ ಕಾಸರವಳ್ಳಿ, ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕರು

ಆತ್ಮಹತ್ಯೆಗೆ ಮುನ್ನ ಆತ ಬರೆದ ಪತ್ರ
ಇವತ್ತಿಗೂ ಮೈಲು ದೂರ ನಡೆದು ಶಾಲೆಗೆ ಬರುವ ಬಡ ಹುಡುಗರಿದ್ದಾರೆ. ಆದರೆ, ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ, ಅಧಿಕಾರಶಾಹಿಯ ಕ್ರೌರ‌್ಯ ಒಂದೆಡೆಯಿದೆ. ಮತ್ತೊಂದೆಡೆ ಸರ್ಕಾರಿ ಶಾಲೆಗಳನ್ನು ಬಲಗೊಳಿಸಲು ಕನ್ನಡ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಅಡ್ಡಿಯಾಗಿರುವ ಕೆಲವು ಕನ್ನಡ ಸಾಹಿತಿಗಳು ನನ್ನಲ್ಲಿ ಅಪಾರ ಆತಂಕ ಹುಟ್ಟಿಸುತ್ತಾರೆ.

ಈ ವರ್ಷದ ಕೊನೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಕಾರಣ- `ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಲು ಕೋಟಿಗಟ್ಟಲೆ ಹಣ ಕೊಡಬೇಕಾದ ವಾತಾವರಣವಿರುವ ಕರ್ನಾಟಕದಲ್ಲಿ ನಾನು ಮಕ್ಕಳಿಗೆ ಯಾವ ಸಮಾಜಶಾಸ್ತ್ರ ಬೋಧಿಸಲಿ?'.

ದುರಂತವೆಂದರೆ, ಅವರು ಸಾವಿಗೆ ಕೊಟ್ಟ ಕಾರಣವಾಗಲೀ, ಅವರ ಸಾವಾಗಲೀ ಒಂದು ವಿಶ್ವವಿದ್ಯಾಲಯವನ್ನು ಬೆಚ್ಚಿಸಲಿಲ್ಲ; ಜೊತೆಗೆ, ಭ್ರಷ್ಟಾಚಾರ ಕಾಮನ್ ಎಂಬಂತೆ ವಿಶ್ವವಿದ್ಯಾಲಯದ ಅಧ್ಯಾಪಕರೂ ಮಾತಾನಾಡಿದೆ.

ಕಾವೇರಿ ನೀರಿಗೆ ರೈತರು ಹೋರಾಟ ಮಾಡುತ್ತಿದ್ದರೂ ರಾಜಕಾರಣಿಗಳು ಆ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಲೆಗೆ ಬಂದದ್ದನ್ನು ಹೇಳುತ್ತಾ ರೈತರ ಅಹವಾಲಿಗೆ ಬೆಲೆಯೇ ಇಲ್ಲವೆಂಬಂತೆ ನಡೆದುಕೊಂಡದ್ದು ಕೂಡ ನಿರ್ದಯ ರಾಜಕಾರಣದ ವರಸೆಯನ್ನೇ ಸೂಚಿಸುತ್ತದೆ.

ಕರ್ನಾಟಕದ ರಾಜಕಾರಣಿಗಳು, ಅವರ ಥಿಂಕ್ ಟ್ಯಾಂಕ್‌ಗಳು ದಿನನಿತ್ಯ ಸುಳ್ಳು ಹೇಳುವ ಹೊಸ ವಿಧಾನಗಳನ್ನು ಕಂಡು ಹಿಡಿಯುತ್ತಿರುವುದು ಹಾಗೂ ಜನ ಅದನ್ನು ಸಹಿಸುವಂತೆ ಕಾಣುತ್ತಿರುವುದು ಕೂಡ ಭಯಾನಕವಾಗಿದೆ. ಅದನ್ನು ಟೀಕಿಸುವವರಂತೆ ಕಾಣುತ್ತಲೇ ಕೆಲವು ಮಾಧ್ಯಮಗಳು ವೈಭವೀಕರಿಸುತ್ತಿರುವುದು, ಪ್ರಳಯದ ಸುಳ್ಳನ್ನು ಬಿತ್ತುವ ವಾಚಾಳಿಗಳು, ಮತೀಯವಾದಿಗಳ ಸುಳ್ಳುಗಳು- ಇವೆಲ್ಲ ಕರ್ನಾಟಕದ ಆರೋಗ್ಯವನ್ನು ಕೆಡಿಸುತ್ತಿವೆ.

ಇಷ್ಟೆಲ್ಲದರ ನಡುವೆ ಬೆಂಗಳೂರು ವಿಶ್ವವಿದ್ಯಾಲಯದ ನನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಳಯದ ಬೊಗಳೆಯನ್ನು ಧಿಕ್ಕರಿಸುವ ಛಾತಿ ತೋರಿದ್ದು ಹೊಸ ತಲೆಮಾರಿನ ಆರೋಗ್ಯದ ಬಗ್ಗೆ ಭರವಸೆ ಹುಟ್ಟಿಸುತ್ತದೆ.
ಡಾ. ನಟರಾಜ್ ಹುಳಿಯಾರ್, ಲೇಖಕ

ಪರಪ್ಪನ ಅಗ್ರಹಾರವೆಂಬ ರೂಪಕ
ಪರಪ್ಪನ ಅಗ್ರಹಾರ ನನಗೀಗ ಒಂದು ರೂಪಕದ ತರಹ ಕಾಣುತ್ತಿದೆ. ರಾಜಕೀಯ ಅಧಃಪತನದ ರೂಪಕ ಅದು. ನಮ್ಮ ರಾಜಕಾರಣಿಗಳು ಅನೇಕ ಪುಣ್ಯಕ್ಷೇತ್ರಗಳನ್ನು ಸುತ್ತುತ್ತಾರೆ. ಈಗ ಪರಪ್ಪನ ಅಗ್ರಹಾರವೆಂಬ ಹೊಸ ಪುಣ್ಯಕ್ಷೇತ್ರಕ್ಕೂ ಹೋಗಿಬಂದರಲ್ಲ. ಅವರೆಲ್ಲಾ ಪಾಪ ಮಾಡಿ ಅಷ್ಟೊಂದು ಪುಣ್ಯಕ್ಷೇತ್ರಗಳನ್ನು ಸುತ್ತಿಬಂದವರು.

ಭಕ್ತಿ ಮಾನಸಿಕವಾದದ್ದು. ಹೋಮ, ಹವನ, ಪುಣ್ಯಕ್ಷೇತ್ರಗಳ ದರ್ಶನ ಮಾಡುವ ರಾಜಕಾರಣಿಗಳ ಸಂಖ್ಯೆ ಇಷ್ಟೊಂದು ಹೆಚ್ಚಿರುವುದನ್ನು ಕಂಡರೆ ಅವರೆಲ್ಲಾ ಎಷ್ಟು ಪಾಪಿಷ್ಟರಾಗುತ್ತಿದ್ದಾರೆ ಎನಿಸುತ್ತದೆ. ಹಾಗಾಗಿಯೇ ನನಗೆ ಪರಪ್ಪನ ಅಗ್ರಹಾರ ಈ ಸಂದರ್ಭದ ರೂಪಕವಾಗಿ ಕಾಡಿಸುತ್ತಿದೆ. ನಕಾರಾತ್ಮಕವಾದ ರೂಪಕ ಅದು.

ಯಾರಾದರೂ ಆರೋಪಿಯನ್ನು ನೋಡಲು ಜನ ಜೈಲಿಗೆ ಹೋದರೆ ಮೊದಲು ಅಳುಕು ಇರುತ್ತಿತ್ತು. ಅಲ್ಲಿರುವ ರಾಜಕಾರಣಿಗಳನ್ನು ನೋಡಲು ಕಾರುಗಳಲ್ಲಿ ದಂಡು ದಂಡಾಗಿ ಹೋಗುತ್ತಾರೆ. ಅಂಥದೊಂದು ಸಾಮಾಜಿಕ ಸಂಕೋಚ ಕೂಡ ಈಗ ಇಲ್ಲವಾಗಿದೆ.

ರಾಜಕಾರಣ, ಸಾಮಾಜಿಕ ಬದುಕಿನಲ್ಲಿ ಇಷ್ಟೊಂದು ಅಧಃಪತನ ಆಗಿರುವುದನ್ನು ಕಂಡೇ ನಾನು ಪರಪ್ಪನ ಅಗ್ರಹಾರವೆಂಬ ಪುಣ್ಯಕ್ಷೇತ್ರಕ್ಕೆ ಇನ್ನಷ್ಟು ಜನ ಹೋಗಿ ಬರಲಿ ಎಂದು ಹಾರೈಸುತ್ತೇನೆ.
ಬರಗೂರು ರಾಮಚಂದ್ರಪ್ಪ, ಸಾಹಿತಿ ಹಾಗೂ ಚಿತ್ರ ನಿರ್ದೇಶಕ

ಕೆಡುಕು ಮತ್ತು ಬೆಳಕು
ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಹಾಗೂ ವಕೀಲರ ಪಾತ್ರ ಅತಿಮುಖ್ಯ. ಅವರಿಂದಲೇ ಸಾಮಾನ್ಯರ ರಕ್ಷಣೆ. ಆದರೆ ಈ ವರ್ಷ ಬೆಂಗಳೂರಿನಲ್ಲಿ ನಡೆಯಬಾರದ್ದು ನಡೆದುಹೋಯಿತು. ಹಿಂಸೆ ವಿಜೃಂಭಿಸಿತು.

ಕಾನೂನು ಪಾಲನೆ ಮಾಡಬೇಕಿದ್ದ ವ್ಯವಸ್ಥೆಯ ಅಂಗಗಳೇ ತಪ್ಪು ದಾರಿ ಹಿಡಿದವು. ಪ್ರತಿಯೊಬ್ಬರನ್ನೂ ಆತ್ಮವಿಮರ್ಶೆಗೆ ಹಚ್ಚುವ ಘಟನೆ ಇದು. ನೀವು ಸರಿ ಇರಿ ಎಂದು ಪ್ರತಿಯೊಬ್ಬರೂ ಬೋಧಿಸುವುದಕ್ಕಿಂತ ತಾವೇ ಸರಿ ಇದ್ದರೆ ಅಶಾಂತಿ ತಪ್ಪುತ್ತದೆ.

ರಾಯಚೂರು ಜಿಲ್ಲೆಯ ಬೇಡದ ಗಲ್ಲೇಕಲ್ ಗ್ರಾಮದ ಹಂಪಣ್ಣ ಎಂಬ ಕೂಲಿಕಾರ ಪತ್ನಿಯೊಡನೆ ಸೇರಿ ಒಂದು ಶಾಲೆ ಕಟ್ಟಿದ್ದಾರೆ. ಯಾರ‌್ಯಾರದೋ ಕೈಕಾಲು ಹಿಡಿದು, ಸ್ವತಃ ಇಟ್ಟಿಗೆ ಜೋಡಿಸಿ ಕಟ್ಟಿದ ಜ್ಞಾನ ದೇಗುಲ ಅದು. ಸರ್ಕಾರದ ಸಹಾಯ ಬಯಸದೇ ತಮ್ಮ ಸ್ವಂತದ ಆಸೆ ಆಕಾಂಕ್ಷೆಗಳನ್ನು ಒತ್ತೆ ಇಟ್ಟು ಶಾಲೆಗೆ ಸಕಲ ಸೌಲಭ್ಯ ಕಲ್ಪಿಸಿದರು. ಇಂದಿಗೂ ಅವರದು ಕಷ್ಟದ ಜೀವನವೇ.

ಕೂಲಿನಾಲಿ ಮಾಡಿದ ದುಡ್ಡನ್ನು ಶಾಲೆಗೆ ಸುರಿಯುತ್ತಿದ್ದಾರೆ. ಆ ಮೂಲಕ ಅನಕ್ಷರತೆಯನ್ನು ಹೋಗಲಾಡಿಸುತ್ತಿದ್ದಾರೆ ಎಂಬ ಸಂಗತಿ ದೊಡ್ಡ ಬೆಳಕಿನಂತೆ ತೋರುತ್ತಿದೆ. (25 ಡಿಸೆಂಬರ್ 2012ರ `ಪ್ರಜಾವಾಣಿ'ಯಲ್ಲಿ ಪ್ರಕಟವಾದ ಡಾ. ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ ಅಂಕಣದಲ್ಲಿ ಈ ಸಾಧಕನ ಬಗ್ಗೆ ಪ್ರಸ್ತಾಪ ಇದೆ). ನಗರದ ಬೀದಿಗಳಲ್ಲಿ ಕ್ಯಾಂಡಲ್ ಬೆಳಗಿ, ಕಂಠಪೂರ್ತಿ ಕಿರುಚಿ ನಡೆಸುವ ಹೋರಾಟಕ್ಕಿಂತ ಇದು ದೊಡ್ಡದು.
ಎ.ಜೆ. ಸದಾಶಿವ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಮಾನವೀಯತೆ ಎಲ್ಲಿದೆ?
ಈ ವರ್ಷದ ಆರಂಭದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಭೆಯೊಂದಕ್ಕೆ ತೆರಳಿದ್ದೆ. ಸುಮಾರು 150 ಹೆಣ್ಣುಮಕ್ಕಳು ಅಲ್ಲಿದ್ದರು. ಎ್ಲ್ಲಲರೂ ಶೋಷಿತ ವರ್ಗಗಳಿಂದ ಬಂದವರು. ಕೆಲವರ ಗಂಡಂದಿರೇ ಅವರನ್ನು ಈ ವೃತ್ತಿಗೆ ತಳ್ಳಿದ್ದರು. ಇನ್ನೂ ಕೆಲವು ಮಹಿಳೆಯರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಹಿನ್ನೆಲೆ ಇಲ್ಲದ, ಹಣವೂ ಇಲ್ಲದ ಯಾವುದೇ ಮಹಿಳೆ ಆ ಸ್ಥಿತಿಗಿಳಿಯಬಹುದು ಅನ್ನಿಸಿದಾಗ ನನ್ನ ಕಣ್ಣಲ್ಲಿ ನೀರು ಬಂತು.ಈ ವೃತ್ತಿಯಿಂದ ಅವರು ಹೊರಬರಬೇಕು ಎಂಬ ಆಶಯದೊಂದಿಗೆ ಮಾತಿಗಿಳಿದೆ. ಅವರ ಪುನರ್ವಸತಿ, ಆರ್ಥಿಕ ಸ್ವಾವಲಂಬನೆ ಇತ್ಯಾದಿ ವಿಷಯಗಳನ್ನು ಹೇಳತೊಡಗಿದೆ. ವೇಶ್ಯಾವಾಟಿಕೆ ತಪ್ಪು ಎಂದೆ.

ಆದರೆ ಸಂಘಟಕರು ತಕ್ಷಣ ತಡೆದರು. ಅವರ ಉದ್ದೇಶ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು, ಇನ್ನಷ್ಟು ಹೈಜೆನಿಕ್ ಆಗಿರುವುದು, ಇಂಗ್ಲಿಷ್ ಕಲಿಯುವುದು ಹೇಗೆ ಎಂಬುದನ್ನು ತಿಳಿಸುವುದಾಗಿತ್ತು. ನನ್ನ ಮಾತು ನಿಲ್ಲುತ್ತಿದ್ದಂತೆ ಒಬ್ಬ ಮಹಿಳೆ ಎದ್ದು ನಿಂತು, `ಸಾಮಾಜಿಕ ಜಾಗೃತಿ ಮೂಡಿಸುವ ಇಂಥ ಮಾತುಗಳನ್ನೇ ಕೇಳಿರಲಿಲ್ಲ. ಮುಂದುವರಿಸಿ' ಎಂದಳು...

ವೇಶ್ಯೆಯರನ್ನು ಮತ್ತಷ್ಟು ಉತ್ತಮ ವೇಶ್ಯೆಯರನ್ನಾಗಿ ಸಂಘಟನೆಗಳು ರೂಪಿಸುತ್ತಿವೆಯೇ ಅನ್ನಿಸತೊಡಗಿತು. ಪುನರ್ವಸತಿ ಸಾಧ್ಯವಾಗದೇ ಹೋದಾಗ ಅದನ್ನೊಂದು ವೃತ್ತಿ ಎಂದ ಹೇಗೆ ಪರಿಗಣಿಸುವುದು? ಅದರಲ್ಲಿ ಉತ್ತಮವಾಗಿ ತೊಡಗಿಕೊಳ್ಳಿ ಎಂದು ಯಾವ ಬಾಯಿಯಿಂದ ಹೇಳುವುದು?
ಡಾ. ವಸು, ಇತಿಹಾಸ ತಜ್ಞೆ

ಕೊಂಬೆ ಚಿವುಟುವ ಮಂದಿ
ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೊಡ್ಡ ಸುದ್ದಿ ಮಾಡುತ್ತಿದ್ದ ಹೊತ್ತಿನಲ್ಲಿಯೇ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂತು. ಒಂದು ದಶಕದ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾದ 4479 ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಜಾರಿ ಆಗಿರುವುದು ಕೇವಲ 315 ಪ್ರಕರಣಗಳಲ್ಲಿ ಮಾತ್ರ.

ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಒಂದೆಡೆ ದನಿ ಮೊಳಗುತ್ತಿದೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದನ್ನೆಲ್ಲಾ ನೋಡಿದರೆ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುವ ಬದಲು ಕೊಂಬೆಯನ್ನು ಮಾತ್ರ ಚಿವುಟುತ್ತಿರುವಂತೆ ತೋರುತ್ತಿದೆ.

ದೇಶದ 30ಕ್ಕೂ ಹೆಚ್ಚು ಶಾಸಕರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಾನಭಂಗ ಇತ್ಯಾದಿ ಪ್ರಕರಣಗಳು ದಾಖಲಾಗಿವೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ರಕ್ಷಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಬಿ.ಟಿ. ಲಲಿತಾನಾಯಕ್, ಕವಯತ್ರಿ, ಮಾಜಿ ಸಚಿವೆ

ಹೈ.ಕ.ಕ್ಕೆ ನ್ಯಾಯ
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 118ನೇ ತಿದ್ದುಪಡಿ ಮಸೂದೆ 371 (ಜೆ)ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಈ ಬಾರಿಯ ಉತ್ತಮ ಅಂಶಗಳಲ್ಲಿ ಒಂದು. ಈ ಮೂಲಕ ನಂಜುಂಡಪ್ಪ ವರದಿ ಜಾರಿಗೆ ಬಂದು ಆ ಭಾಗದ ಜನರ ನೋವುಗಳಿಗೆ ಸ್ಪಂದಿಸಿದಂತಾಗುತ್ತದೆ.

ಜಾತೀಯತೆ ನಮ್ಮನ್ನು ಬಹಳವಾಗಿ ಕಿತ್ತು ತಿನ್ನುತ್ತಿದೆ. ಇದರಿಂದ ಮಡೆಸ್ನಾನದಂತಹ ಅನಿಷ್ಟ ಪದ್ಧತಿ ಈ ವರ್ಷವೂ ಮುಂದುವರಿಯಿತು. ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲೂ ಇದು ಜಾರಿಯಲ್ಲಿರುವುದು ಆತಂಕಕಾರಿ ವಿಚಾರ. ಶಿಶುಹತ್ಯೆ, ಪ್ರಾಣಿಹತ್ಯೆ, ಸತಿ ಸಹಗಮನ ಇತ್ಯಾದಿ ಮೌಢ್ಯಗಳನ್ನು ನಿಷೇಧಿಸಿರುವ ಸರ್ಕಾರ ಇನ್ನು ಮುಂದಾದರೂ ಮಡೆಸ್ನಾನಕ್ಕೆ ಇತಿಶ್ರೀ ಹಾಡಬೇಕು.

ಮಠಗಳು ಗಾಳಿ ನೀರು ಬೆಳಕಿನಂತೆ ಎಲ್ಲರಿಗೂ ಸಮಾನತೆ ಕಲ್ಪಿಸಿದಾಗ ಜಾತೀಯತೆಯನ್ನು ಮೀರುವುದು ಸಾಧ್ಯ. ಕಾವಿ ತ್ಯಾಗದ ಸಂಕೇತ. ಜಾತಿ ಪ್ರೀತಿಗಿಂತಲೂ ಮನುಷ್ಯ ಪ್ರೀತಿ ಮುಖ್ಯ. ಬುದ್ಧ, ಬಸವಣ್ಣ, ಏಸುವಿನಂಥ ಮಹಾಮಹಿಮರು ಬಂದು ಹೋದರೂ ಜಾತಿಯ ಬೇರುಗಳು ಆಳಕ್ಕೆ ಬೆಳೆದಿರುವುದು ನೋವಿನ ಸಂಗತಿ.

ಇನ್ನು ಈ ವರ್ಷ ತೀರಾ ನಗು ತರಿಸಿದ್ದು ಪ್ರಳಯದ ವಿದ್ಯಮಾನ. ಜನರಿಗೆ ಅರಿವು ಮೂಡಿಸಬೇಕಿದ್ದ ಮಾಧ್ಯಮಗಳೇ ಪೈಪೋಟಿಗಿಳಿದು ಪ್ರಳಯದ ವಿಚಾರದಲ್ಲಿ ಮೌಢ್ಯವನ್ನು ಬಿತ್ತಿದವು. ನಿರುದ್ಯೋಗ, ಬಡತನ, ಅನಕ್ಷರತೆ ಮುಂತಾದ ನ್ಯೂನತೆಗಳು ಪ್ರಳಯಕ್ಕಿಂತಲೂ ಭೀಕರ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ.
ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ, ಗದಗ

ಎಲ್ಲೆಲ್ಲೂ ವಿಕೃತಿ...
ಉದಾರೀಕರಣ ಮತ್ತು ಜಾಗತೀಕರಣದ ನಂತರ ಹಣಕ್ಕೆ ಪ್ರಾಧಾನ್ಯ ದೊರೆತಿದೆ. ಹಣವಿಲ್ಲದಿದ್ದರೆ ಬದುಕೇ ಇಲ್ಲ ಎಂಬಂತಾಗಿದೆ. ಹಣ ಗೌಣವಾಗಿರುವ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ. ಅದು ಹಾಗಿರಬೇಕು ಎನ್ನುವುದು ನನ್ನಾಸೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದಲ್ಲಿ ಅದಕ್ಕೆ ತದ್ವಿರುದ್ಧವಾದ ಸ್ಥಿತಿ.

ನಾನು ತೀರಾ ಹತ್ತಿರದಿಂದ ಬಲ್ಲ ನಾಲ್ಕಾರು ಕ್ಷೇತ್ರಗಳನ್ನಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ರಾಜಕಾರಣಕ್ಕೆ ಯಾವ ದಿಕ್ಕು ದಿಸೆಯೂ ಉಳಿದಿಲ್ಲ. ಜಾಗತೀಕರಣದ ದಾಳಿಗೆ ಎಲ್ಲ ತತ್ವ ಸಿದ್ಧಾಂತಗಳು ನಾಶವಾಗಿವೆ. ಎಲ್ಲವನ್ನೂ ಮ್ಯಾನೇಜ್‌ಮೆಂಟ್ ನೆಲೆಯಲ್ಲೇ ನೋಡಲಾಗುತ್ತಿದೆ. ಹೀಗಾಗಿ ಚುನಾವಣೆ, ಅಧಿಕಾರಗ್ರಹಣ ಕೂಡ ವ್ಯಾಪಾರ ಎಂಬಂತಾಗಿದೆ.

ಸೇವೆಗೆ ಮೀಸಲಿರಬೇಕಿದ್ದ ಶಿಕ್ಷಣ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಾಮಾಣಿಕರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅವರನ್ನು ಹಾಸ್ಯಾಸ್ಪದವಾಗಿ ನೋಡಲಾಗುತ್ತಿದೆ. ಸಾಹಿತ್ಯದಲ್ಲಿ ಗುಂಪುಗಾರಿಕೆ ತಾಂಡವವಾಡುತ್ತಿದೆ. ದೊಡ್ಡ ಲೇಖಕರ ಪ್ರಭಾವಳಿಯಲ್ಲಿ ಕೆಲವು ಮಂದಿ ಬೇಳೆ ಬೇಯಿಸಿಕೊಳ್ಳುತ್ತಾರೆ.

ಸಾಹಿತ್ಯದ ಮತ್ತೊಂದು ಭಾಗವಾದ ಪ್ರಕಾಶಕರು ಕೂಡ ಲೇಖಕರ ಪ್ರಶಸ್ತಿ, ಪ್ರಭಾವ ಜಾತಿ ಇತ್ಯಾದಿ ಸಲ್ಲದ ಅಂಶಗಳಿಗೆ ಮಣೆ ಹಾಕುತ್ತಿದ್ದಾರೆ. ಒಳ್ಳೆಯ ಪದ್ಯ ಬರೆದ ಸಾಮಾನ್ಯ ಕವಿಗಿಂತ ಕೆಟ್ಟ ಪದ್ಯ ಬರೆದ ಪ್ರಭಾವಿ ಕವಿ ಸೈ ಎನಿಸಿಕೊಳ್ಳುತ್ತಿದ್ದಾನೆ. ಸಂಗೀತ ಕ್ಷೇತ್ರದಲ್ಲಿಯೂ ಇದೇ ಸ್ಥಿತಿ. ಯಾವ ಕೇತ್ರಗಳು ನಿಸ್ವಾರ್ಥವಾಗಿರಬೇಕಿತ್ತೋ ಅಲ್ಲೆಲ್ಲಾ ಇಂತಹ ವಿಕೃತಿಗಳೇ ಹೆಚ್ಚಿರುವುದು ನನ್ನ ಆತಂಕಕ್ಕೆ ಕಾರಣ.
ಕೆ.ಎಚ್. ಶ್ರೀನಿವಾಸ್, ಕವಿ, ರಾಜಕಾರಣಿ

ತಿಮ್ಮಣ್ಣನ ಸುಗ್ಗಿ
ಕುಷ್ಟಗಿ ತಾಲ್ಲೂಕಿನ ಹಂಚಿನಾಳದ ತಿಮ್ಮಣ್ಣನ ಎರಡು ಎಕರೆ ಹೊಲದಲ್ಲಿ ಸುಗ್ಗಿ...
ಎಂದಿನಂತೆ ಮಳೆ ಕೈಕೊಟ್ಟಿರುವುದರಿಂದ ಅಲ್ಲಿ ಹೆಚ್ಚೇನು ಫಸಲಿಲ್ಲ. ಕಡೆ ಗಳಿಗೆಯಲ್ಲಿ ಬಿದ್ದ ಹನಿ ಮಳೆಗೆ ಒಂದಿಷ್ಟು ಸಜ್ಜೆ ಕಚ್ಚಿದೆ.

ಹೊಲದಿಂದ ಹೊಲಕ್ಕೆ ಪುಟ್ಟ ಯಂತ್ರ ಚಲಿಸುತ್ತಿದೆ, ಎತ್ತಿನಬಂಡಿಯಲ್ಲಿ. ಹೊಟ್ಟು, ಕಾಳು, ದೂಳನ್ನು ಬೇರ್ಪಡಿಸುವ ಕೆಲಸ. ಹೊಲಕ್ಕೆ ಯಂತ್ರ ಆಗಮಿಸಿದೆ.ತಿಮ್ಮಣ್ಣನೊಂದಿಗೆ ಒಂದಿಬ್ಬರು. ಇಪ್ಪತ್ತು ನಿಮಿಷಗಳಲ್ಲಿ ಕೆಲಸ ಮುಗಿಸಿದ ಯಂತ್ರ ಅಲ್ಲಿಂದ ಸರಿದಿದೆ. ಬಂದಿದ್ದ ಇಬ್ಬರಿಗೆ ಐದು ಸೇರು ಸಜ್ಜೆ.
`ಅವರ‌್ಯಾರು ತಿಮ್ಮಣ್ಣ?'

`ನಮ್ಮ ಊರಿನವರೇ ಸಾ... ಬಡವರು... ಅವರಿಗೆ ಭೂಮಿಗೀಮಿ ಇಲ್ಲ... ಅದಕ್ಕೆ ಒಂದೈದ್ ಸೇರು ಕೊಟ್ಟೆ'.

ಬರ, ಬಡತನಗಳ ನಡುವೆ ಎಷ್ಟು ಸುಂದರ ಹೊಂದಾಣಿಕೆ ಎಂದುಕೊಳ್ಳುವಾಗ...
ಮತ್ತೊಬ್ಬ ಸಜ್ಜೆಯ ರಾಶಿಯ ಮಗ್ಗುಲಿಗೆ ಬುಟ್ಟಿ ಇಟ್ಟು ತೆರಳಿದ.

`ಅದೇನು ತಿಮ್ಮಣ್ಣ?'
`ತಂಬೂರಿಯವರು ಸಾ... ಬಹಳ ಬಡವರು ಸಾ... ಪದನು ಹೇಳ್ತಾರೆ ಸಾ... ಅವರಿಗೂ ಭೂಮಿ ಇಲ್ಲ.. ಈಗ ಊರಲ್ಲಿ ಜನ ಪದನೂ ಕೇಳಲ್ಲ ಸಾ... ಪಾಪ, ಇವರು ಭಿಕ್ಷೆಗೆ ಹೋದ್ರೆ...ಮುಂದೋಗಪ್ಪ ಅನ್ನುತ್ತಾರೆ... ಅವರು ಬದುಕ್‌ಬೇಕಲ್ಲ ಸಾ.. ಅದಿರಲಿ ಸಾ.. ಅವರಿಲ್ದಿದ್ರೇ ನಮ್ಮೂರಲ್ಲಿ ತಂಬೂರಿ ಬಾರ್‌ಸೋರ್, ಪದ ಹೇಳೋರೇ ಇಲ್ಲ ಸಾ...'

ಸಜ್ಜೆಯ ಪುಟ್ಟ ರಾಶಿ ಹಾಗೇ ನಿಂತಿತ್ತು.
ಹಿಮಾಲಯದ ಚಳಿ ತಪ್ಪಿಸಿಕೊಳ್ಳಲು ಹಾರಿ ಬಂದ ಸಾವಿರಾರು ಪುಟ್ಟ ಪುಟ್ಟ ಹಕ್ಕಿಗಳು ತಿಮ್ಮಣ್ಣನ ಸಜ್ಜೆ ಕದ್ದವು. ತಿಮ್ಮಣ್ಣ ಹಕ್ಕಿಗಳಿಗೆ ಕೂಗು ಹಾಕಲಿಲ್ಲ. ತನ್ನ ಹೆಗಲಿನ ಮೇಲಿನ ಟವಲ್ ಬೀಸಿ ಗದರಿಸಲೂ ಇಲ್ಲ.

ತಿಮ್ಮಣ್ಣನ ಸುಗ್ಗಿ, ಎಲ್ಲರಿಗೂ ಸುಗ್ಗಿ.
ಕೃಪಾಕರ ಸೇನಾನಿ
ವನ್ಯಜೀವಿ ಚಲನಚಿತ್ರ ನಿರ್ಮಾಪಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.