ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಸ್ವರ ಪರಂಪರೆಯ ಪ್ರತಿನಿಧಿ ಕೇದಾರ್‌ ಬೋಡಸ್

Published 14 ಮೇ 2023, 1:03 IST
Last Updated 14 ಮೇ 2023, 1:03 IST
ಅಕ್ಷರ ಗಾತ್ರ

ಲೇಖನ– ಶ್ರೀಮತಿದೇವಿ, ಮೈಸೂರು

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ, ಬದುಕಿನ ಚೌಕಟ್ಟಿನಲ್ಲಿ ಒಂದಿಷ್ಟೂ ಹೊಂದದಂತೆ ಕಾಣುವ ವ್ಯಕ್ತಿತ್ವ ಕೇದಾರ್‌ ಬೋಡಸ್ ಅವರದ್ದಾಗಿತ್ತು. ಸಂಗೀತದ ಜಗತ್ತಿನಲ್ಲಿ ನಡೆಯುವ ಹಲವು ಬಗೆಯ ಚಟುವಟಿಕೆ-ವ್ಯವಹಾರಗಳ ಮಧ್ಯೆ ಅವರ ಇರವು ಮತ್ತು ಅವರ ಗಾಯನದ ಹರಿವು ‘ಅಸಂಗತ’ ನಾಟಕವೊಂದರ ಪಾತ್ರದಂತೆ ಕಾಣುತ್ತಿತ್ತು. ಹಾಗಿದ್ದರೂ ಅವರ ಘನತೆಯಿಂದ ಕೂಡಿದ ವ್ಯಕ್ತಿತ್ವ ಮತ್ತು ಸಂಗೀತ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ನೀಳವಾದ ಅರೆ ನೆರೆತ ಗಡ್ಡ-ಮೀಸೆ, ಸ್ವಲ್ಪವೂ ನೀಟ್‌ ಆಗಿರದ ಸಡಿಲವಾದ ಕುರ್ತಾ ಪೈಜಾಮ, ತಲೆಯ ಮೇಲೊಂದು ಟೋಪಿ ಇವುಗಳೊಂದಿಗೆ ಕನ್ನಡಕದೊಳಗಿಂದ ಹೊಳೆಯುವ ತೇಜಸ್ವಿ ದೃಷ್ಟಿ ಹಾಯಿಸುತ್ತಾ ಅವರು ಹಾಡುವ ಭಂಗಿ ಮನಸ್ಸಿನೊಳಗೆ ಪಡಿಮೂಡಿದೆ.

ಗ್ವಾಲಿಯರ್‌ ಘರಾಣೆಯ ಪರಿಪಕ್ವ ಪಾಕ ಅವರ ಗಾಯನದಲ್ಲಿತ್ತು. ಬೋಡಸ್‌ ಅವರ ಪರಿವಾರವೇ ಸಂಗೀತಮಯವಾದದ್ದು. ವಿ.ವೀಣಾ ಸಹಸ್ರಬುದ್ಧೆ ಅವರೂ ಇದೇ ಕುಟುಂಬದಿAದ ಬಂದವರು. ಕೇದಾರ್‌ ಅವರ ಅಜ್ಜ ಲಕ್ಷ್ಮಣರಾವ್ ಬೋಡಸ್‌ ಅವರು ಗಾಯನಾಚಾರ್ಯ ಪಂ.ವಿಷ್ಣು ದಿಗಂಬರ್ ಪಲುಸ್ಕರ್‌ ಅವರ ನೇರ ಶಿಷ್ಯರು. ತಮ್ಮ ಪ್ರತಿಭೆಯಿಂದ ಬಹು ಬೇಗ ಪಲುಸ್ಕರ್‌ ಅವರಿಂದ ಗುರುತಿಸಿಕೊಂಡ ಅವರು, ತಮ್ಮ ಮಗ ನಾರಾಯಣ ಬೋಡಸ್‌ ಅವರಿಗೂ ಸಂಗೀತಾಭ್ಯಾಸ ಮಾಡಿಸಿದರು. ಮುಂದೆ ಮೊಮ್ಮಗ ಕೇದಾರ್‌ ಅವರಿಗೂ ಬಾಲ್ಯದಿಂದಲೇ ಶಿಸ್ತುಬದ್ಧವಾದ ಅಡಿಪಾಯವನ್ನು ಹಾಕಿಕೊಟ್ಟರು. ಪಲುಸ್ಕರ್‌ ಅವರು ಕರಾಚಿಯಲ್ಲಿ ಸ್ಥಾಪಿಸಿದ ಗಂಧರ್ವ ಮಹಾವಿದ್ಯಾಲಯವನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತವರು ಲಕ್ಷ್ಮಣರಾವ್‌. ಸಂಗೀತದ ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಪಲುಸ್ಕರ್‌ ಪರಂಪರೆಯ ಕಲಾಕಾರರು ಬೋಡಸ್.

ಪುಣೆಯಲ್ಲಿ ನಡೆದ ಅವರ ಕೊನೆಯ ಕಾರ್ಯಕ್ರಮ ಮತ್ತು ಸಂದರ್ಶನದಲ್ಲಿ ಕೇದಾರ್‌ ತಮ್ಮ ಸಂಗೀತ ಶಿಕ್ಷಣ ಮತ್ತು ಗುರುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಬಾಲ್ಯದಲ್ಲಿ ಅಜ್ಜ ಅವರನ್ನು ಕಾಲಲ್ಲಿ ಕೂರಿಸಿಕೊಂಡು ‘ರಾಮರಾಮ’ ಎನ್ನುವುದನ್ನು ಸ್ವರಬದ್ಧವಾಗಿ ಕಿವಿಯಲ್ಲಿ ಉಸುರುತ್ತಾ, ಸ್ವರಗಳ ಪರಿಚಯ ಮಾಡಿಸುತ್ತಿದ್ದರಂತೆ. ಮುಂದೆ ವೃದ್ಧಾಪ್ಯದ ಕಾರಣದಿಂದ ಲಕ್ಷ್ಮಣರಾವ್‌ ಅವರಿಗೆ ಹೇಳಿಕೊಡುವುದು ಕಷ್ಟವಾದಾಗ ಬೋಡಸ್‌ ಅವರ ಸಂಬಂಧಿಯೇ ಆದ ಅಪರೂಪದ ಕಲಾಕಾರ, ಚಿಂತಕ, ಸಂಗೀತಜ್ಞ, ಸಂಶೋಧಕ ಪಂ.ಅಶೋಕ ರಾನಡೆ ಅವರ ಬಳಿ ಸುಮಾರು 30 ವರ್ಷಗಳ ಕಾಲ ಅಭ್ಯಾಸ ನಡೆಸಿದರು. ಕಟ್ಟುನಿಟ್ಟಿನ ಶಿಸ್ತಿಗೆ ತಮ್ಮನ್ನು ಒಳಪಡಿಸಿಕೊಂಡ ರಾನಡೆ ಗುರೂಜಿ ಬಳಿ ತಮ್ಮ ಅಭ್ಯಾಸ ಎಂಥ ಸವಾಲಿನದ್ದಾಗಿತ್ತು ಎಂಬುದನ್ನು ಕೇದಾರ್‌ ತಮ್ಮ ಆ ಸಂದರ್ಶನದಲ್ಲಿ ವಿವರವಾಗಿ ತಿಳಿಸಿದ್ದಾರೆ. ಆದರೆ, ಆ ಶಿಸ್ತಿನಿಂದ ತಮಗೆ ಜೀವನದಲ್ಲಿ ಮುಂದೆ ತುಂಬ ಅನುಕೂಲವಾದದ್ದನ್ನೂ ಸ್ಮರಿಸುತ್ತಾರೆ. ಅಶೋಕ ರಾನಡೆಯವರಿಂದ ಪಡೆದ ಚಿಕಿತ್ಸಕ ಬುದ್ಧಿಯೊಂದಿಗೆ ಗ್ವಾಲಿಯರ್‌ ಘರಾಣೆಯ ಗಾಯಕಿ-ರಚನೆಗಳ ಅಭ್ಯಾಸದಿಂದ ಕೇದಾರ್‌ ಅವರ ಸಾಂಗೀತಿಕ ಪ್ರಜ್ಞೆ ಸಮೃದ್ಧವಾಯಿತು.ಅಶೋಕ್‌ ರಾನಡೆಯವರ ಗುರುಗಳಾದ ಪಂ.ದೇವಧರ್ ಮತ್ತು ಪಂ.ಗಜಾನನ್ ಬುವಾ ಜೋಶಿ ಅವರಿಂದ ಪಡೆದ ವಿದ್ಯೆಯೊಂದಿಗೆ ಕೇದಾರ್‌ ಅವರು ರಾಮ ಮರಾಠೆ, ಮಾ.ಕೃಷ್ಣರಾವ್, ಡಿ.ವಿ.ಪಲುಸ್ಕರ್, ಮಿರಾಶಿ ಬುವಾ, ವಿಲಾಯತ್ ಹುಸೇನ್‌ಖಾನ್ ಮುಂತಾದವರ ಸಂಗೀತದಿಂದಲೂ ಪ್ರೇರಣೆ ಪಡೆದು ಮುಂದುವರಿದರು. ಅಶೋಕ ರಾನಡೆಯವರಿಂದ ಮಹಾರಾಷ್ಟ್ರ ನೆಲದ ಸಂಗೀತವಾದ ಲಾವಣಿ, ಗವಳಣ ಮುಂತಾದ ಪ್ರಕಾರಗಳಲ್ಲೂ ವಿಶೇಷ ಪರಿಣತಿ ಪಡೆದು, ಗುರುಗಳೊಂದಿಗೆ ಅನೇಕ ಥಿಮ್ಯಾಟಿಕ್ ಕಾರ್ಯಕ್ರಮಗಳ ನೀಡಿರುವುದನ್ನೂ ಕಾಣಬಹುದು. ಆನಂತರ ಪಂ. ಸಿ.ಪಿ.ರೇಳೆ ಅವರ ಸಂಗೀತದಿಂದ ಪ್ರಭಾವಿತರಾಗಿ ಕೆಲವು ವರ್ಷ ಅವರ ಬಳಿ ಹಲವಾರು ರಾಗಗಳ ಅಭ್ಯಾಸ ಮಾಡಿದ್ದಾರೆ.

ಕೇದಾರ್ ಬೋಡಸ್‌ ಅವರ ಬಳಿ ಗ್ವಾಲಿಯರ್‌ ಘರಾಣೆಯ ಹಲವು ಧಾರೆಗಳ ಎಲ್ಲಾ ಖಾಸ್ ರಾಗಗಳು, ಅಪರೂಪದ ಬಂದಿಶ್‌ಗಳು, ಜೋಡ್ ರಾಗಗಳು, ಖ್ಯಾಲ್‌ನುಮಾ, ತರಾನಾಗಳು, ತಾಲದ ವಿವಿಧ ಮುಖಗಳನ್ನು ತೋರಿಸುವ ರಚನೆಗಳು ಹೀಗೆ ಬಹುದೊಡ್ಡ ಖಜಾನೆಯಿತ್ತು. ಅವರ ಗಾಯನ ನಿರ್ಮಲವಾದ ಜಲಧಾರೆಯಂಥದ್ದು. ಅದರಲ್ಲಿ ಸ್ವರ-ಲಯ-ರಾಗಗಳ ಅತ್ಯಂತ ಸೂಕ್ಷ್ಮ ಅಭ್ಯಾಸವಿತ್ತು. ತಾವು ರಾಗದೊಳಗೆ ಮುಳುಗಿ ಒಂದಾಗಿ, ಕೇಳುಗರನ್ನೂ ಆವರಿಸುವ ಭಾವತೀವ್ರತೆ ಇತ್ತು. ಕೇದಾರ್‌ ಅವರ ಗಾಯನದಲ್ಲಿ ನನ್ನ ಗುರುಗಳಾದ ನಾರಾಯಣ ಪಂಡಿತರು ಹೇಳುವ ಮಾನವೀಯಗೊಳಿಸುವ ಮತ್ತು ನಾಟಕೀಯಗೊಳಿಸುವ ಅಂಶಗಳಿದ್ದವು. ಅಲ್ಲಿ ಭರಪೂರವಾದ ತುಂಬುಕಂಠದ ಆಕಾರಯುಕ್ತ ಆಲಾಪ-ಸುಸ್ಪಷ್ಟ ಬೋಲ್ ಬನಾವ್‌ಗಳ-ಅರ್ಥಬದ್ಧವಾದ ಸ್ವರಾವಳಿಗಳ-ರಾಗದ ಸಾರವನ್ನೇ ತುಂಬಿಕೊಡಬಹುದಾದ ವೇಗದ ತಾನ್‌ಗಳಿಂದ ಕೂಡಿದ ಶಿಸ್ತುಬದ್ಧ ಆವರ್ತನವಿರುತ್ತಿತ್ತು. ಪ್ರತಿ ಕಾರ್ಯಕ್ರಮದಲ್ಲಿಯೂ ಅವರು ಹೊರತೆಗೆಯುತ್ತಿದ್ದ ರಾಗಗಳ ಮತ್ತು ಬಂದಿಶ್‌ಗಳ ಸರಕು, ಅವರ ಅಭ್ಯಾಸದ ಆಳ ಮತ್ತು ಪ್ರೀತಿಯನ್ನು ಹೇಳುತ್ತಿದ್ದವು. ಗಡ್ಡ ನೀವಿಕೊಳ್ಳುತ್ತಾ, ಕೈಯ ಬೆರಳುಗಳನ್ನು ಆಡಿಸುತ್ತಾ ಹಾಡುತ್ತಿದ್ದರೆ, ಹೊಳೆಯುವ ಕಂಗಳ ಮುಂದೆ ಇವರಿಗೆ ಆ ರಾಗದದರ್ಶನವೇ ಆಗುತ್ತಿದೆಯೋ ಎಂಬಂತೆ ಭಾಸವಾಗುತ್ತಿತ್ತು. ಕಾರ್ಯಕ್ರಮವನ್ನುಆರಂಭಿಸುವ ಮೊದಲು ತಬಲಾ, ಹಾರ್ಮೋನಿಯಂ ವಾದಕರು ಮಾತ್ರವಲ್ಲದೆ ತಂಬೂರ ನುಡಿಸುವ ತಮ್ಮ ಶಿಷ್ಯರಿಗೂ ನಮಸ್ಕರಿಸುವ ವಾಡಿಕೆಯನ್ನು ಅವರು ಇಟ್ಟುಕೊಂಡಿದ್ದರು.

ತಮ್ಮ ಗುರುಗಳಾದ ಅಶೋಕ ರಾನಡೆಯವರ ಆಣತಿಯಂತೆ ಯಾವುದಾದರೊಂದು ವಿಷಯದಲ್ಲಿ ಪದವಿ ಇರುವುದು ಅವಶ್ಯಕ ಎಂಬುದನ್ನು ಒಪ್ಪಿದ ಕೇದಾರ್‌ ಅವರನ್ನು ಸೆಳೆದದ್ದು ರಷ್ಯನ್ ಭಾಷೆ ಮತ್ತು ರಷ್ಯನ್ ಸಂಗೀತ. ಈ ವಿಷಯದಲ್ಲಿ ನಾಲ್ಕು ವರ್ಷಗಳ ಕೋರ್ಸ್ ಮಾಡುತ್ತಾ, ರಷ್ಯನ್ ಸಂಗೀತದ ಒಳ ಹೊರಗನ್ನು ಚೆನ್ನಾಗಿ ಅರಿತರು. ತಮ್ಮ ಸಂದರ್ಶನದಲ್ಲಿ ರಷ್ಯನ್ ಹಾಡನ್ನು ಅದಕ್ಕೆ ಬೇಕಾದ ಏರಿಳಿತಗಳೊಂದಿಗೆ ಸಮರ್ಥವಾಗಿ ಹಾಡಿತೋರಿಸುವುದು ಮಾತ್ರವಲ್ಲದೆ, ಅಲ್ಲಿನ ಸಂಚಾರಗಳನ್ನು ನಮ್ಮ ರಾಗಗಳಿಗೆ ಅನ್ವಯಿಸಿದಲ್ಲಿ, ಯಾವ ರೀತಿಯ ಹೊಸ ಎಫೆಕ್ಟನ್ನು ಪಡೆಯಬಹುದು ಎಂದೂ ವಿವರಿಸಿದ್ದಾರೆ.

ಅಶೋಕ ರಾನಡೆಯವರ ಶಿಷ್ಯೆ, ಕೇದಾರ್‌ ಅವರೊಂದಿಗೆ ಸಂಗೀತಾಭ್ಯಾಸ ಮಾಡಿದ ಗಾಯಕಿ ಕಲ್ಯಾಣಿ ಸಾಳುಂಕೆ ಅವರು ಕೇದಾರ್‌ ತೀರಿಕೊಂಡ ಮೇಲೆ ಸಂತಾಪ ವ್ಯಕ್ತಪಡಿಸುತ್ತಾ, ಕೇದಾರ್‌ ಅವರ ಇನ್ನೊಂದು ಸ್ನೇಹಮಯಿ-ಪ್ರೇಮಮಯಿ ಮುಖವನ್ನು ಪರಿಚಯಿಸಿದರು. ಗುರುಗಳ ಮುಂದೆ ಬರೆದುಕೊಳ್ಳಲು ಅನುಮತಿ ಇಲ್ಲದ ಕಾರಣ ಪಾಠದ ನಂತರ ಹಿರಿಯ ಸಹಪಾಠಿಯಾಗಿದ್ದ ಕೇದಾರ್‌ ಅವರು ಹೇಗೆ ನೆರವಾಗುತ್ತಿದ್ದರು, ಅಗತ್ಯದ ದಿನಗಳಲ್ಲಿ ತಮ್ಮನ್ನು ಮನೆಯವರೆಗೆ ಬಿಡಲು ಪ್ರತಿನಿತ್ಯ ಕೇದಾರ್ ಬಹುದೂರ ಪ್ರಯಾಣ ಮಾಡುತ್ತಿದ್ದುದರ ಬಗ್ಗೆ ಅವರು ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ. ಅಶೋಕ ರಾನಡೆಯವರ ಇನ್ನೋರ್ವ ಶಿಷ್ಯ, ಹೆಸರಾಂತ ಹಾರ್ಮೋನಿಯಂ ವಾದಕ, ಸಂಗೀತಜ್ಞ ಡಾ.ಚೈತನ್ಯ ಕುಂಟೆಯವರು ಬರೆದುಕೊಂಡಂತೆ, ‘ಕೇದಾರ್‌ ಅವರನ್ನು ಕಳೆದುಕೊಳ್ಳುವುದರೊಂದಿಗೆ ಒಬ್ಬ ನಿರ್ಮಲ ಮನಸ್ಸಿನ ಸಂತನಂಥ ವ್ಯಕ್ತಿ, ಹಾಡುತ್ತಾ ಮೆಹಫಿಲ್‌ನ ರಂಗೇರಿಸುವ ಹಿರಿಯ ಗುರುಬಂಧುವನ್ನು ಕಳೆದುಕೊಂಡೆ’.

ಗ್ವಾಲಿಯರ್‌ ಘರಾಣೆಯ ಮತ್ತೋರ್ವ ಪ್ರಸಿದ್ಧ ಗಾಯಕಿ ವಿ.ಅಪೂರ್ವಾ ಗೋಖಲೆ ‘ಕೇದಾರ್‌ ಅವರಂತೆ ಪ್ರೀತಿಯಿಂದ ವಿದ್ಯೆ ಪಡೆದವರನ್ನು, ಪಡೆದ ವಿದ್ಯೆಯನ್ನು ಜತನದಿಂದ ಕಾಪಾಡುತ್ತಲೇ ಅದರ ಬಗ್ಗೆ ಸತತವಾದ ಮನನ-ಚಿಂತನಗಳನ್ನು ನಡೆಸಿ ವಿದ್ಯೆಯನ್ನು ಬೆಳೆಸಿಕೊಂಡ ಇನ್ನೊಬ್ಬರನ್ನು ನಾನು ಕಂಡಿಲ್ಲ. ಹಾಗೆಯೇ ಅವರಂತೆ ವಿದ್ಯೆಯನ್ನು ಧಾರೆಯೆರೆಯುವವರನ್ನೂ ಕಂಡಿಲ್ಲ’ ಎಂದಿದ್ದಾರೆ.

ಅವಿವಾಹಿತರಾಗಿ ಉಳಿದು ತಮ್ಮ 60  ವರ್ಷಗಳ ಜೀವನದಲ್ಲಿ ಕೇವಲ ಸಂಗೀತೋಪಾಸನೆ ಮಾಡಿದವರು ಕೇದಾರ್‌. ಅವರ ಶಿಷ್ಯರಲ್ಲಿ ಭಾಗ್ಗೇಶ್ ಮರಾಠೆ, ಪ್ರಾಜಕ್ತಾ ಮರಾಠೆ, ಶ್ರುತಿ ವಿಶ್ವಕರ್ಮಾ, ವಿಶ್ವೇಶ್ ಸರ್‌ದೇಶಪಾಂಡೆ ಮುಂತಾದವರು ಭರವಸೆ ಮೂಡಿಸಿದ್ದಾರೆ.

ಹುಬ್ಬಳ್ಳಿಯ ಗಂಗೂಬಾಯಿ ಗುರುಕುಲದಲ್ಲಿ ಗುರುಗಳಾಗಿ ಕೆಲವು ವರ್ಷ ಸೇವೆ ಸಲ್ಲಿಸಿದರೂ ಕೊನೆಯಲ್ಲಿ ಅಲ್ಲಿಂದ ಹೊರಬರಬೇಕಾಯಿತು. ನಮ್ಮ ಕರ್ನಾಟಕದಲ್ಲೇ ಹಲವು ಕಾಲ ಇದ್ದರೂ ಕೇದಾರ್‌ ಅವರ ಸಂಗೀತ ಸುಧೆಯನ್ನು ಸವಿಯುವ ಅವಕಾಶವನ್ನು ನಾವು ಪಡೆದದ್ದು ತುಂಬಾ ಕಡಿಮೆ.

ಕೇದಾರ್ ಬೋಡಸ್
ಕೇದಾರ್ ಬೋಡಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT