ಸುರಿಯುವ ಮಳೆಗೆ ಮತ್ತೊಂದು ಹೆಸರೇ ಆಗುಂಬೆ. ‘ಮಿಸ್ಟಿಕಲ್ ಆಗುಂಬೆ’ ಎನ್ನುವ ಉಭಯವಾಸಿಗಳ ಶಿಬಿರ ಆಗುಂಬೆ ಕಾಡಿನಲ್ಲಿ ನಡೆದಿತ್ತು. ಆಗ ಮಳೆಯಲ್ಲಿ ನೆನೆಯುವುದಲ್ಲದೇ ಹಸಿರು ಹಾವು, ಕಟ್ಟು ಹಾವು, ಬಳೆವಡಕ, ಹಾರುವ ಓತಿ ಮುಂತಾದವುಗಳನ್ನು ನೋಡಿದ ನೆನಪುಗಳು ಮರುಕಳಿಸಿದವು. ಗೋವಾ ಮಾನ್ಸೂನ್ ಟ್ರೆಕಿಂಗ್ ವೇಳೆ ಮಳೆಯಲ್ಲಿ ತೊಯ್ದದ್ದು ನೆನಪಿಗೆ ಬಂದು ಯಾವಾಗ ಯೂಥ್ ಹಾಸ್ಟೆಲ್ನವರು ಮಾನ್ಸೂನ್ ಚಾರಣ ಏರ್ಪಡಿಸುತ್ತಾರೋ ಎಂದು ಕಾದು ಕುಳಿತಿದ್ದೆ. ಒಂದು ದಿನ ‘ಕಾನನ ಕಂಜರ್ವೇಶನ್’ ಸಂಸ್ಥೆಯಿಂದ ಕರೆ ಬಂದಿತು. ಆಗುಂಬೆಯಲ್ಲಿ ‘ಉಭಯವಾಸಿಗಳ’ ಎರಡು ದಿನ ಶಿಬಿರ ಏರ್ಪಡಿಸಿರುವ ವಿಷಯವನ್ನು ತಿಳಿಸಿದರು. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡೆ. ಶಿಬಿರ 15 ಜನ ಆಸಕ್ತರಿಗೆ ಮಾತ್ರ ಮೀಸಲಾಗಿತ್ತು.

ಕ್ಯಾಮೆರಾ ಬ್ಯಾಗ್, ಬಟ್ಟೆ ಬರೆಗಳನ್ನು ತುಂಬಿಕೊಂಡು ಆಗುಂಬೆಗೆ ಹೊರಟಾಗ ಮಳೆ ಬೀಳುತ್ತಲೇ ಇತ್ತು. ಆಗುಂಬೆ ತಲುಪಿದಾಗ ಮಳೆ ರಭಸವಾಗಿತ್ತು. ಬಿದರುಗೋಡು ಸಾವಿರ ಜನಸಂಖ್ಯೆ ಹೊಂದಿದ್ದು ಕಾಡಿನ ಗರ್ಭದಲ್ಲಿರುವ ಊರು. ವಿಶೇಷವೆಂದರೆ ಊರಿನ ಮುಕ್ಕಾಲು ಭಾಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ್ದರೆ, ಕಾಲು ಭಾಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿಗೆ ಸೇರಿದೆ. ಅಂಥ ಊರಿನಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹನ್ನೊಂದು ಮಂದಿ ಪ್ರಕೃತಿ ಪ್ರೇಮಿಗಳು ಸೇರಿದ್ದೆವು. ನಮ್ಮಲ್ಲಿ ಛಾಯಾಗ್ರಾಹಕರು, ಉಭಯವಾಸಿ ತಜ್ಞರು, ಪ್ರಕೃತಿ ತಜ್ಞರು, ಪ್ರಾಣಿಶಾಸ್ತ್ರದ ವಿದ್ಯಾರ್ಥಿಗಳು ಇದ್ದದ್ದು ವಿಶೇಷ. ಆಗುಂಬೆಯ ‘ಕಾನನ ಕಂಜರ್ವೇಶನ್’ ಸಂಘಟನೆಯು ಜೊಯೆಲ್ ನೇತೃತ್ವದಲ್ಲಿ ಸಂಶೋಧನೆ, ಉಭಯವಾಸಿಗಳ ಶಿಬಿರ, ಸೂಕ್ಷ್ಮಜೀವಿಗಳ ಅವಲೋಕನ, ಸಂರಕ್ಷಣೆಯನ್ನು ಸ್ವಯಂ ಸೇವಾ ನೆಲೆಯಲ್ಲಿ ನಡೆಸುತ್ತಿದೆ.

ಅವರು ವನ್ಯಜೀವಿ ಸಂರಕ್ಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರು, ಮುಂಬೈಯಲ್ಲಿ ಕೆಲಸ ಮಾಡಿದ್ದಾರೆ. ಮೊದಲಿಗೆ ಕಪ್ಪೆಗಳ ಜೀವನ ಚರಿತ್ರೆಯ ಬಗ್ಗೆ ಚರ್ಚೆ ಆರಂಭಿಸಿದೆವು. ಕಪ್ಪೆ ಪರಿಣಿತ ಕೇರಳದ ರಾಮ್ಪ್ರಸಾದ್ ಅತ್ಯುತ್ತಮವಾದ ಸ್ಲೈಡ್ ಶೋ ಮಾಡಿದರು. ಕಪ್ಪೆಗಳ ಕರೆಯುವಿಕೆ ನಮ್ಮಲ್ಲಿ ಹೊಸ ಜೀವ ಜಗತ್ತನ್ನು ಪರಿಚಯಿಸಿತ್ತು.

ಕಪ್ಪೆಗಳ ಕರೆಯುವಿಕೆ, ಸಂಗಮ, ಗರ್ಭಧಾರಣೆ, ಮೊಟ್ಟೆ ಇಡುವುದು...ಹೀಗೆ ಎಲ್ಲಾ ಹಂತಗಳು ನಮಗೆ ಹೊಸ ವಿಚಾರವಾಗಿದ್ದವು. ಅವುಗಳನ್ನು ನೋಡಲು ಬಿದಿರುಗೋಡು ಹೊರವಲಯದ ಕಾಡಿನ ಕಲ್ಲುಕ್ವಾರಿಗೆ ಹೋದೆವು. ಪ್ರಶಾಂತವಾದ ಸ್ಫಟಿಕದಂಥ ನೀರಿನ ಕೊಳ, ನೀರಿನ ಪುಟ್ಟ ಪುಟ್ಟ ಗುಂಡಿಗಳು, ಹಾವಸೆ ಬೆಳೆದ ನೆಲ, ಹೂ ಬಿಟ್ಟ ಸಸ್ಯ ಪುಟ್ಟ ಜೀವಲೋಕವನ್ನೇ ತೆರೆದಿಟ್ಟಿದ್ದವು. ವಿವಿಧ ಕಪ್ಪೆ, ಗೊಜಮಟ್ಟೆ, ಪತಂಗ, ಕೀಟ, ಟೈಗರ್ ಬೀಟ್ಲ್... ಹೀಗೆ ಕಣ್ಣಿಗೆ ಬೀಳದ ಜೀವಿಗಳನ್ನು ಹುಡುಕಿ ಹುಡುಕಿ ಜೊಯೆಲ್ ಮತ್ತು ರಾಮ್ಪ್ರಸಾದ್ ನಮಗೆ ಪರಿಚಯಿಸುತ್ತಿದ್ದರು. ನೀರಿನ ಕೊಳದ ಸುತ್ತ ಕಪ್ಪು ಬಂಡೆಗಳ ಮೇಲಿನಿಂದ ನೀರು ತಟ ತಟ ಹನಿಯುತ್ತಿತ್ತು. ಹಸಿ ಬಂಡೆಗಳ ಮೇಲೆಯೂ ಪುಟ್ಟ ಪುಟ್ಟ ಜೀವಿಗಳು ಹಾರಾಡುವುದನ್ನು ನೋಡಿದೆವು.

ಕಪ್ಪೆಗಳ ಮತ್ತೊಂದು ಅನುಭವ ಕತ್ತಲೆ ಕಾನನದ್ದು. ಸಂಜೆ ಏಳು ಗಂಟೆಗೆ ಮತ್ತೊಂದು ಜಾಗಕ್ಕೆ ಭೇಟಿ ನೀಡಿದೆವು. ಮಬ್ಬುಗತ್ತಲೆಯಲ್ಲಿ ಹುಲ್ಲು, ಪೊದೆ, ಗಿಡ, ಮರಗಳ ಸಾಲಿನಲ್ಲಿ ನಡೆದು ಹೋಗುವುದು ಸಾಮಾನ್ಯ ಮಾತಲ್ಲ. ಒಂದು ವೇಳೆ ಕಾಳಿಂಗ ಸರ್ಪ, ನಾಗರಹಾವುಗಳಿದ್ದರೆ ಏನು ಮಾಡುವುದು ಎಂಬ ಭಯ ಕಾಡುತ್ತಿತ್ತು. ಅದಕ್ಕೆ ನಾಯಕರಿಂದ ಸಮರ್ಪಕ ಉತ್ತರ ಸಿಕ್ಕು ಹುರುಪು ಮೂಡುತ್ತಿತ್ತು. ಹಗಲು ಮಾತ್ರವಲ್ಲ ರಾತ್ರಿಯಲ್ಲೂ ಮಳೆಯಲ್ಲಿ ನೆನೆಯುತ್ತಿದ್ದೆವು. ಪೊಂಚೋ ರೇನ್ಕೋಟ್, ಗಮ್ ಬೂಟ್, ಲೀಚ್ ಸಾಕ್ಸ್, ಹೆಡ್ ಲೈಟ್, ಜರ್ಕಿನ್, ಕೈಯಲ್ಲಿ ಮತ್ತೊಂದು ಟಾರ್ಚ್ ಇದ್ದುದರಿಂದ ಧೈರ್ಯವಾಗಿ ಮುನ್ನುಗ್ಗುತ್ತಿದ್ದೆವು. ಜೊಯೆಲ್ ನಮಗೆ ಮೊದಲು ಕಪ್ಪೆಗಳ ಕರೆಯುವಿಕೆಯನ್ನು ಗಮನಿಸಿ ಎಂದು ಸೂಚನೆ ನೀಡಿದರು. ದಟ್ಟ ಗಿಡ-ಮರಗಳ ಹೊದರುಗಳಿಂದ ಬರುತ್ತಿದ್ದ ಕಪ್ಪೆಗಳ ಕರೆಯುವಿಕೆಯನ್ನು ಕಿವಿ ನಿಮಿರಿಸಿ ಕೇಳುತ್ತಿದ್ದೆವು ಮತ್ತು ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದೆವು. ಟಾರ್ಚ್ ಬೆಳಕಲ್ಲಿ ಕಪ್ಪೆಗಳು ಎಲೆಗಳ ಮೇಲೆ ಕಾಣಿಸುತ್ತಿದ್ದವು. ಕೆಲವು ಹಳದಿ ಬಣ್ಣ, ಕೆಲವು ಕಂದುಗೆಂಪು ಬಣ್ಣ, ಹಸಿರು ಬಣ್ಣಗಳಲ್ಲಿ ಗೋಚರಿಸಿ ಅಚ್ಚರಿ ಮೂಡಿಸುತ್ತಿದ್ದವು. ಕರೆಯುವಿಕೆಯ ಸಂದರ್ಭದಲ್ಲಿ ಕಪ್ಪೆಗಳ ಕೊರಳು ತಿದಿಯಂತೆ, ಬಲೂನಿನಂತೆ ಉಬ್ಬಿ ಏರಿಳಿಯುತ್ತಿತ್ತು.
ಕೆಲವರು ಅವುಗಳ ಶಬ್ದವನ್ನು ದಾಖಲು ಮಾಡಿಕೊಳ್ಳುತ್ತಿದ್ದರು. ಹೆಣ್ಣು-ಗಂಡುಗಳ ಮಿಲನದ ಆಕರ್ಷಣೆ, ಪೈಪೋಟಿ, ಸಂತಾನಾಭಿವೃದ್ಧಿ ಎಷ್ಟು ಸಂಕೀರ್ಣ, ವಿಶಿಷ್ಟ ಎಂಬುದು ನಮಗೆ ರಾತ್ರಿಯ ಅಧ್ಯಯನದಲ್ಲಿ ಅನುಭವಕ್ಕೆ ಬಂದಿತ್ತು. ಕಪ್ಪೆಗಳ ಕೂಗು ಸಮೂಹ ಗಾನದಂತೆ ಕೇಳಿಸಿತ್ತು. ಕುದುರೆಮುಖ ಕ್ರಿಕೆಟ್ ಫ್ರಾಗ್, ಸಹ್ಯಾದ್ರಿ ಮಿನವರ್ಯ ಫ್ರಾಗ್, ಇಂಡಿಯನ್ ಬುಲ್ ಫ್ರಾಗ್, ಬ್ಲೂ ಐಯ್ಡ್ ಬುಷ್ ಫ್ರಾಗ್, ಮಲಬಾರ್ ಗ್ಲೈಡಿಂಗ್ ಫ್ರಾಗ್, ಸಿಕಾಡಾ ಮುಂತಾದ ಜೀವಿಗಳ ಚಿತ್ರಗಳನ್ನು ತೆಗೆದದ್ದು ಮರೆಯಲಾಗದ ರಾತ್ರಿಯ ಅನುಭವವಾಗಿತ್ತು. ಅಷ್ಟೆಲ್ಲಾ ಮುಗಿಸಿ ಅತಿಥಿ ಗೃಹಕ್ಕೆ ಹಿಂದಿರುಗಿದಾಗ ಮಧ್ಯರಾತ್ರಿ ಆಗಿತ್ತು.

ಎರಡನೇ ದಿನ ಬೆಳಿಗ್ಗೆ ಎದ್ದ ಕೂಡಲೇ ಉಪಹಾರ ಮುಗಿಸಿ ಹೊರಟಿದ್ದು ಅಬ್ಬೀ ಫಾಲ್ಸ್ ಹತ್ತಿರದ ಗುಹಾ ಪ್ರಪಂಚದ ಸೂಕ್ಷ್ಮಜೀವಿಗಳನ್ನು ನೋಡಲು. ಮಳೆಗಾಲವಾದ್ದರಿಂದ ರಸ್ತೆ ಕೆಸರುಮಯವಾಗಿತ್ತು. ಒಂದು ಕಿಲೋಮೀಟರ್ ನಡೆದು ಮುಂದೆ ಹೋದಾಗ ರಸ್ತೆ ಮುಕ್ತಾಯವಾಗಿ ಸಿಡಿಮನೆ ಎಂಬ ಹೆಸರಿನ ಒಂಟಿ ಮನೆ ಎದುರಾಯಿತು. ಮನೆಯ ಪಕ್ಕದಲ್ಲಿಯೇ ಕಾಡಿನೊಳಗೆ ಕಾಲುದಾರಿ ಚಾಚಿಕೊಂಡಿತ್ತು. ಒಬ್ಬರ ಹಿಂದೊಬ್ಬರು ರೈಲು ಡಬ್ಬಿಗಳಂತೆ ಹಿಂಬಾಲಿಸಿದ್ದೆವು. ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ಟಪ-ಟಪ ಮಳೆ ಬೀಳುತ್ತಲೇ ಇತ್ತು. ಅಡ್ಡ ಬಿದ್ದ ಮರ, ಹಳೇ ಮರಗಳ ಮೇಲೆ ಸಾಲು ಸಾಲು ಅಣಬೆಗಳು ಆಕರ್ಷಿಸುತ್ತಿದ್ದವು. ಕೆಸರು, ಗುಂಡಿ, ಕಾಲು ಜಾರುವ ಇಳಿಜಾರು ತೇವಭರಿತ ಎಲೆ ಸರಾಗವಾದ ನಡಿಗೆಗೆ ಅಡ್ಡಿಯಾಗಿದ್ದವು. ಒಂದು ಗಂಟೆ ನಡೆದಿರಬಹುದು. ದುಬುಗುಡುವ ಜಲಪಾತದ ಸದ್ದು ಕೇಳಿಸಿತು. ಸಣ್ಣ-ಸಣ್ಣ ಜಲಪಾತ, ನೀರು ಹರಿಯುವ ಹಳ್ಳ ಎದುರಾದವು. ಆದರೆ ಎತ್ತ ಕಡೆ ಹೋಗಬೇಕೋ ನಿರ್ದಿಷ್ಟ ದಾರಿಯೇ ಇರಲಿಲ್ಲ.

ಸ್ಥಳೀಯರು ನಮ್ಮ ಜೊತೆ ಇದ್ದುದರಿಂದ ದಾರಿ ತೋರಿಸುತ್ತಿದ್ದರು. ಹರಿವ ನೀರಿನ ದಡದಲ್ಲಿಯೇ ಜಾರುತ್ತ ಸಾಗಿದೆವು. ಇದ್ದಕ್ಕಿದ್ದಂತೆ ಭಾರಿ ಗಾತ್ರದ ಆನೆ ಹಿಂಡಿನಂತಹ ಕಪ್ಪು ಬಂಡೆಗಳು ಕಾಣಿಸಿದವು. ಭೋರ್ಗರೆತ ಜಲಪಾತದ ಕಿವಿಗಡಚಿಕ್ಕುವ ಸಪ್ಪಳ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ಜೊಯೆಲ್ ಹೇಳಿದಂತೆ ಅದು ಪುಟ್ಟ ಜಲಪಾತವಾಗಿರದೇ ಧುಮುಗುಡುವ 120 ಅಡಿ ಎತ್ತರದ ಜಲಪಾತವಾಗಿತ್ತು. ಕಪ್ಪು ಬಂಡೆಗಳ ಮೇಲೆ ಜಾರುವ ಎರಡು ಹಂತದಲ್ಲಿ ಜಲಪಾತ ರೋಮಾಂಚನ ಉಂಟು ಮಾಡಿತ್ತು. ಜಲಪಾತದ ವೈಭವ ಉತ್ತರ ಕನ್ನಡ ಜಿಲ್ಲೆಯ ಸಾತೊಡ್ಡಿ ಜಲಪಾತವನ್ನು ಕೊಡಗಿನ ಚೇಲಾವರ ಜಲಪಾತವನ್ನು ಮೀರಿಸುವ ಎತ್ತರದಲ್ಲಿತ್ತು. ಕೆಳಕ್ಕೆ ಬರುತ್ತಿದ್ದಂತೆ ಜಲಪಾತ ಹತ್ತಾರು ಶಾಖೆಗಳಾಗಿ ಸುರಿಯುತ್ತಿತ್ತು. ನಾವು ನೋಡಿದ ಅದ್ಭುತ ಜಲಪಾತಕ್ಕೆ ಅಬ್ಬೀ ಫಾಲ್ಸ್ ಎಂದರೆ ಅದು ಯಾವುದಾದರೂ ಜಲಪಾತವಾಗಿರಬಹುದೆಂದೆನಿಸಿತು. ಕೆಲವು ಗೆಳೆಯರು ಜಲಪಾತದ ಹಳ್ಳ ಮಾಲತಿ ನದಿಗೆ ಹೋಗಿ ಸೇರುವುದರಿಂದ ಇದನ್ನು ಮಾಲತಿ ಜಲಪಾತ ಎನ್ನಬಹುದು ಅಥವಾ ಒಂದು ಕಿಲೋಮೀಟರ್ ದೂರದಲ್ಲಿ ಸಿಡಿಮನೆ ಎಂಬ ಊರಿದೆ. ಹಾಗಾಗಿ ಸಿಡಿಮನೆ ಜಲಪಾತವೆಂದೂ ಕರೆಯಬಹುದೆಂದು ಸಲಹೆ ನೀಡಿದರು. ಮಾಲತಿ ನದಿ ಭೀಮನಕಟ್ಟೆ ಬಳಿ ತುಂಗಾ ನದಿಗೆ ಸೇರುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಯಿತು. ಆದರೆ ನನ್ನ ಮನಸ್ಸಿನಲ್ಲಿ ಅದು ಅನಾಮಿಕ ಜಲಪಾತವಾಗಿಯೇ ಉಳಿದಿತ್ತು. ಜಲಪಾತದಿಂದ ಹಿಂದಿರುಗುವ ಸಮಯದಲ್ಲಿ ಇಂಬಳಗಳು ರಕ್ತ ಹೀರಿದ್ದವು. ನೋವಿಗೆ ರಾತ್ರಿ ನಿದ್ದೆ ಮಾಡಲಿಲ್ಲ. ಈಗಲೂ ಇಂಬಳ ಕಚ್ಚಿದ ಜಾಗದಲ್ಲಿ ತುರಿಕೆ ಬರುತ್ತದೆ. ತುರಿಕೆ ಬಂದಾಗಲೆಲ್ಲಾ ಎರಡು ದಿನಗಳ ಅದ್ಭುತ ಅನುಭವಗಳು ನೆನಪಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.