ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಳಕಿನಲ್ಲಿ ‘ಅಭಿನೇತ್ರಿ’

ಶಶಿಧರ ಭಾರಿಘಾಟ್
Published 6 ಜನವರಿ 2024, 23:32 IST
Last Updated 6 ಜನವರಿ 2024, 23:32 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯ ಏಕವ್ಯಕ್ತಿ ರಂಗಪ್ರಯೋಗಗಳ ಕಾಲು ಶತಮಾನದ ಇತಿಹಾಸದಲ್ಲಿ ಲಕ್ಷ್ಮೀ ಚಂದ್ರಶೇಖರ್ ಬಹಳ ಮುಖ್ಯವಾದ ಕಲಾವಿದೆ. ಅವರ ಏಕವ್ಯಕ್ತಿ ಪ್ರದರ್ಶನದ ಸಾಹಸಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ.

ಕನ್ನಡ ರಂಗ ಪರಂಪರೆಯಲ್ಲಿ ಒಂದು ರೀತಿಯ ದೊಡ್ಡ ಪ್ರವೇಶವನ್ನು ಏಕವ್ಯಕ್ತಿ ರಂಗಪ್ರಸ್ತುತಿಗೆ ದೊರಕಿಸಿಕೊಟ್ಟಿದ್ದು ಮೇರು ಕಲಾವಿದ ಸಿ.ಆರ್.ಸಿಂಹ; ‘ಟಿಪಿಕಲ್ ಟಿ.ಪಿ. ಕೈಲಾಸಂ’ ಪ್ರಸ್ತುತಿಯ ಮೂಲಕ. ಇದರ ನಿರ್ದೇಶಕರು ಟಿ.ಎನ್.ನರಸಿಂಹನ್. ಹಾಗೆಯೇ ಲಕ್ಷ್ಮೀ ಚಂದ್ರಶೇಖರ್ ಒಂದು ವಿಶಿಷ್ಟ ಸಂದರ್ಭದಲ್ಲಿ ಏಕವ್ಯಕ್ತಿ ಪ್ರಸ್ತುತಿಯನ್ನು ಆರಂಭಿಸಿದರು. ಭಿನ್ನ ಭಿನ್ನ ಪ್ರಯೋಗ ವಸ್ತು ವೈವಿಧ್ಯಗಳಿಂದ ತಮ್ಮ ಏಕವ್ಯಕ್ತಿ ರಂಗ ಪ್ರಸ್ತುತಿಗಳನ್ನು ದೇಶವಿದೇಶಗಳಲ್ಲಿ ಮಾಡುತ್ತಾ, ಕನ್ನಡದ ಬಹುಮುಖ್ಯ ಕೃತಿಗಳನ್ನು ರಂಗಕ್ಕೆ ತಂದರು. ಹಾಗೆಯೇ ಕನ್ನಡಕ್ಕೆ ವಿವಿಧ ಭಾಷೆಗಳಿಂದ ಮುಖ್ಯವಾಗಿ ಇಂಗ್ಲಿಷಿನ ಹಲವಾರು ನಾಟಕಗಳನ್ನು ಪರಿಚಯಿಸಿದರು.

ಏಕವ್ಯಕ್ತಿ ರಂಗಪ್ರಸ್ತುತಿಗೆ ತೆರೆದುಕೊಳ್ಳುವ ಮುನ್ನ ಬೆಂಗಳೂರು ಸಮುದಾಯ, ಮೈಸೂರಿನ ಸಮತೆಂತೋ ರಂಗ ತಂಡಗಳ ನಾಟಕಗಳಲ್ಲಿ ಅಭಿನಯಿಸಿದ್ದರು. ಮೈಸೂರಿಗೆ ಕಾಲೇಜು ಅಭ್ಯಾಸಕ್ಕೆ ಬಂದವರು ಅಲ್ಲಿಯ ಹವ್ಯಾಸಿ ರಂಗಚಳವಳಿಯ ಭಾಗವಾದರು. ಸಮತೆಂತೋ ತಂಡದ ಹಲವಾರು ನಾಟಕಗಳು, ರಂಗ ಕಾರ್ಯಾಗಾರಗಳಲ್ಲಿ ಪಾಲ್ಗೊಂಡರು. ವಿದೇಶದಲ್ಲಿ ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಬಂದವರು ಪ್ರತಿಷ್ಠಿತ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಅಧ್ಯಾಪಕರಾದರು. ಬೆಂಗಳೂರು ಸಮುದಾಯದ ಒಡನಾಟವೂ ಆರಂಭವಾಯಿತು. ಖ್ಯಾತ ರಂಗ ನಿರ್ದೇಶಕ ಪ್ರಸನ್ನ ಅವರ ‘ಗೆಲಿಲಿಯೋ’, ನಂತರ ಟಿ.ಎಸ್.ನರಸಿಂಹನ್ ಅವರ ‘ಕತ್ತಲೆ ದಾರಿ ದೂರ’, ಎಂ.ಎಸ್.ಸತ್ಯು ಅವರ ‘ಕುರಿ’ ಸುರೇಶ ಆನಗಳ್ಳಿ ಅವರ ‘ಮದುರೆಕಾಂಡ’, ಸಿ.ಬಸವಲಿಂಗಯ್ಯ ಅವರ ‘ಮಾದಾರಿ ಮಾದಯ್ಯ’, ಎನ್.ಎ.ಸೂರಿ ಅವರ ‘ಈ ಕೆಳಗಿನವರು’, ಇಕ್ಬಾಲ್ ಅಹಮದ್ ಅವರ ‘ಮಹಾಚೈತ್ರ’, ಮುಂತಾದ ನಾಟಕಗಳಲ್ಲಿ ಅಭಿನಯಿಸಿ, ಬೆಂಗಳೂರು ಸಮುದಾಯದ ಅಧ್ಯಕ್ಷರೂ ಆಗಿದ್ದರು. ತಾವು ಕಲಿಸುತ್ತಿದ್ದ ವಿದ್ಯಾರ್ಥಿನಿಯರೂ ರಂಗ ಮಾಧ್ಯಮದ ರುಚಿ ಹತ್ತಿಸಿ, ಕಾಲೇಜು ರಂಗಭೂಮಿಗೆ ಅಪಾರ ಕೊಡುಗೆ ನೀಡಿದರು.

ಅವರಿಗಿದ್ದ ಮತ್ತೊಂದು ಆಸಕ್ತಿಯ ವಿಷಯ ರಂಗವಿಮರ್ಶೆ. ಸಾಹಿತ್ಯದ ಒಲವು, ವಿಸ್ತಾರವಾದ ಓದು, ಕನ್ನಡ, ಆಂಗ್ಲ ಸಾಹಿತ್ಯ ಸೇರಿದಂತೆ ವಿವಿಧ ಭಾಷಾ ಸಾಹಿತ್ಯವನ್ನು ಅಭ್ಯಾಸ ಮಾಡಿರುವ ಲಕ್ಷ್ಮೀ ಸಹಜವಾಗಿ ತಮ್ಮ ಅಭಿವ್ಯಕ್ತಿಗಾಗಿ ಏಕವ್ಯಕ್ತಿ ಪ್ರಸ್ತುತಿ ರಂಗಮಾಧ್ಯಮವನ್ನು ಆರಿಸಿಕೊಂಡರು.

ಏಕವ್ಯಕ್ತಿ ಪ್ರಯೋಗ ಯಾಕಾಗಿ?

ಸಾಮೂಹಿಕವಾದ ರಂಗಕಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣೆಯಾಗುತ್ತಿರುವ ತಾಲೀಮಿನ ಶಿಸ್ತು, ಸಮಯಪ್ರಜ್ಞೆಯ ಬಗ್ಗೆ ಒಂದು ರೀತಿಯ ಬೇಸರವೂ ಉಂಟಾದ ಸಂದರ್ಭ ಒಂದೆಡೆಯಾದರೆ, ಬಹುತೇಕ ನಾಟಕಗಳಲ್ಲಿ ಪುರುಷಕೇಂದ್ರಿತ ಪಾತ್ರಗಳೇ ವಿಜೃಂಭಿಸುವ ವಾಸ್ತವತೆಯೂ ಅವರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಇಂತಹ ಪ್ರಶ್ನೆಗಳಿಗೆ ಉತ್ತರವಾಗಿ ಅವರು ಏಕವ್ಯಕ್ತಿ ಪ್ರಸ್ತುತಿ ರಂಗಪ್ರಯೋಗಕ್ಕೆ ಮುಂದಾದರು. ಅದರ ಮೂಲಕ ಗೌಣವಾಗಿದ್ದ ಮಹಿಳಾ ಪಾತ್ರಗಳಿಗೆ, ಮಹಿಳಾ ಕೇಂದ್ರಿತ ವಸ್ತುಗಳಿಗೆ ಒಂದು ಖಚಿತರೂಪ ಹಾಗೂ ಅಭಿವ್ಯಕ್ತಿಯ ಅವಕಾಶವನ್ನು ಕಲ್ಪಿಸಿದರು. ಹಾಗಾಗಿ ಅವರು ಮೊದಲು ಪ್ರಾಯೋಗಿಕವಾಗಿ ‘ಹೆಣ್ಣಲ್ಲವೆ...!’ ರಂಗಪ್ರಸ್ತುತಿಯನ್ನು ಮಾಡಲು ಅಣಿಯಾಗಿದ್ದು. ಸಾಂಪ್ರದಾಯಿಕ ರಂಗಪ್ರಯೋಗಕ್ಕೆ ಭಿನ್ನವಾದ, ಆದರೆ ಏಕಪಾತ್ರಾಭಿನಯಕ್ಕಿಂತ ಬೇರೆಯದೇ ಆದ ಪಾತ್ರಪೋಷಣೆ, ಪರಿಕರ ಬಳಕೆ, ಸಂಗೀತ ಅಳವಡಿಕೆಯಿಂದ ಒಂದು ಪೂರ್ಣ ಪ್ರಮಾಣದ ನಾಟಕದ ಅನುಭವ ನೀಡುವ ರಂಗಪ್ರಸ್ತುತಿಗೆ ತೊಡಗಿಸಿಕೊಂಡರು.

ಅಮೆರಿಕದ ಷಿಕಾಗೋ ನಗರದಲ್ಲಿ 1998ರ ಫೆಬ್ರುವರಿಯಲ್ಲಿ ನಡೆದ ಅಂತರರಾಷ್ಟ್ರೀಯ ಶೇಕ್ಸ್‌ಪಿಯರ್ ಸಮಾವೇಶದಲ್ಲಿ ಭಾಗಿಯಾಗಲು ಹೋಗಿದ್ದಾಗ, ಅಲ್ಲಿದ್ದ ತಮ್ಮ ಸ್ನೇಹಿತರು, ವಿದ್ಯಾರ್ಥಿಗಳು, ಕನ್ನಡ ಸಂಘಟನೆಗಳ ಸಹಕಾರದಿಂದ ಅವರ ಮೊದಲ ಏಕವ್ಯಕ್ತಿ ರಂಗಪ್ರಸ್ತುತಿ ‘ಹೆಣ್ಣಲ್ಲವೆ...!’ ಪ್ರದರ್ಶಿಸಿದರು. 1998ರ ಮಾರ್ಚ್ 16ರಂದು ಉತ್ತರ ಅಮೆರಿಕ ವೀರಶೈವ ಸಮಾಜದ ಆಶ್ರಯದಲ್ಲಿ ಕ್ಯಾಲಿಫೋರ್ನಿಯಾದ ಕ್ಯೂರ್ಪಟಿನೋ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಮೊದಲ ಪ್ರದರ್ಶನಕ್ಕೆ 2024ಕ್ಕೆ 25 ವರ್ಷಗಳು ತುಂಬುತ್ತಿದೆ.

ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ, ಕನಾಟಕದ ಹಲವು ಕಲಾಕೇಂದ್ರಗಳಲ್ಲಿ ವಿದೇಶಗಳಲ್ಲಿ ನೂರಾರು ಪ್ರದರ್ಶನಗಳನ್ನು ಕಂಡ ಈ ರಂಗಪ್ರಯೋಗ, ಅವರ ಮುಂದಿನ ರಂಗಯಾತ್ರೆಗೆ ಮುನ್ನುಡಿ ಬರೆಯಿತು. ಆಗಲೇ ಹುಟ್ಟಿಕೊಂಡಿದ್ದು ಕ್ರಿಯೇಟಿವ್ ಥಿಯೇಟರ್-ರಂಗಸಮೂಹ. ರಂಗಸಜ್ಜಿಕೆ, ಪರಿಕರ, ರಂಗವಿನ್ಯಾಸ, ಸಂಗೀತ, ಬೆಳಕು ಮುಂತಾದ ವಿಭಾಗಗಳಲ್ಲೂ ಸಮರ್ಥ ತಜ್ಞರನ್ನೊಳಗೊಂಡ ತಂಡವನ್ನು ಸಂಘಟಿಸಿ, ಒಂದು ಪ್ರದರ್ಶನಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿ, ರಂಗತಂಡವನ್ನು ಶ್ರಮಪಟ್ಟು ಕಟ್ಟಿದರು.

ಸಾಲುಸಾಲು ಪ್ರಯೋಗಗಳು

‘ಹೆಣ್ಣಲ್ಲವೆ...!’ ಒಂದು ಪ್ರಾಯೋಗಿಕ ರಂಗಪ್ರಸ್ತುತಿ ಎನ್ನುತ್ತಲೇ ಅದು ವೃತ್ತಿಪರ ಪ್ರಯೋಗವಾಗಿ ಮಾರ್ಪಾಡುಗೊಂಡಿತು. ಮುಂದೆ ಚಂದ್ರಶೇಖರ ಕಂಬಾರರ ‘ಸಿಂಗಾರವ್ವ ಮತ್ತು ಅರಮನೆ’ ಕಾದಂಬರಿಯ ಏಕವ್ಯಕ್ತಿ ಪ್ರಸ್ತುತಿಯ ಸವಾಲನ್ನು ಸಮರ್ಥವಾಗಿ ಎದುರಿಸಿದರು.
ಕಂಬಾರರ ಬೃಹತ್ ಕಾದಂಬರಿಯನ್ನು ಲಕ್ಷ್ಮೀ ಚಂದ್ರಶೇಖರ್ ಅವರು ಆಂಗ್ಲಭಾಷೆಗೆ ಅನುವಾದ ಮಾಡುತ್ತಿದ್ದಾಗಲೇ, ಏಕವ್ಯಕ್ತಿ ಪ್ರಸ್ತುತಿಯ ಆಶಯ ಮೊಳಕೆಯೊಡೆಯುತ್ತಿತ್ತು. ಅವರ ಸಾಹಸಕ್ಕೆ ಜೊತೆಯಾದವರು ಅವರ ವಿದ್ಯಾರ್ಥಿನಿ, ರಂಗನಿರ್ದೇಶಕಿ ಸೌಮ್ಯ ವರ್ಮಾ. ಮೈಸೂರು ರಂಗಾಯಣದ ಅಕ್ಕ-ರಾಷ್ಟ್ರೀಯ ರಂಗೋತ್ಸವದ ಭಾಗವಾಗಿ ಅದು ಪ್ರದರ್ಶಿತವಾದಾಗ ಅದಕ್ಕೆ ಬಂದ ಪ್ರೇಕ್ಷಕರ ಪ್ರತಿಕ್ರಿಯೆ, ಮರುಪ್ರದರ್ಶನಗಳಿಗೆ ಬಂದ ಬೇಡಿಕೆ, ಅವರ ಕ್ರಿಯಾಶೀಲತೆಗೆ ದೊರಕಿದ ಪ್ರತಿಫಲವಾಗಿತ್ತು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಓದು ಹಾಗೂ ಅವುಗಳ ಮೇಲಿದ್ದ ಹಿಡಿತದ ಪರಿಣಾಮ ‘ಹೆಣ್ಣಲ್ಲವೆ...!’ ಹಾಗೂ ‘ಸಿಂಗಾರವ್ವ’ ಎರಡೂ ಭಾಷೆಗಳಲ್ಲಿ ಪ್ರಸ್ತುತಗೊಂಡು ಹೊಸ ಇತಿಹಾಸ ನಿರ್ಮಿಸಿತು.

ಬಹುಶಃ ಭಾರತೀಯ ಭಾಷಾ ರಂಗಭೂಮಿಯಲ್ಲಿ ತಮ್ಮ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಾಟಕವನ್ನು ಪ್ರದರ್ಶಿಸುವ ಕಲಾವಿದರಲ್ಲಿ ಇವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ‘ಎದ್ದೇಳು’, ‘ಮೀಡಿಯಾ’, ‘ಕಿತ್ತಲೆಮನೆ ಕಾವೇರಿ’, ‘ಶೇಕ್ಸ್‌ಪಿಯರ್‌ನ ಶ್ರೀಮತಿ’ ಮುಂತಾದ ಏಕವ್ಯಕ್ತಿರಂಗ ಪ್ರಸ್ತುತಿಗಳನ್ನು ನೀಡಿದ್ದಾರೆ. ಈ ಎಲ್ಲಾ ಪ್ರಯೋಗಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಡಿರುವುದು ಇವರ ಹೆಗ್ಗಳಿಕೆ.

ಲಕ್ಷ್ಮೀ ಚಂದ್ರಶೇಖರ್ ಪಾತ್ರದ ಪರಕಾಯ ಪ್ರವೇಶಕ್ಕೆ ಕನ್ನಡಿ ಹಿಡಿಯುವ ಭಾವ
ಲಕ್ಷ್ಮೀ ಚಂದ್ರಶೇಖರ್ ಪಾತ್ರದ ಪರಕಾಯ ಪ್ರವೇಶಕ್ಕೆ ಕನ್ನಡಿ ಹಿಡಿಯುವ ಭಾವ

ಜ. 12ರಿಂದ ‘ಅಭಿನೇತ್ರಿ–25’

ಏಕವ್ಯಕ್ತಿ ರಂಗ ಪ್ರದರ್ಶನಗಳಿಗಷ್ಟೇ ಸೀಮಿತಗೊಳ್ಳದ ಕ್ರಿಯೇಟರ್ ಥಿಯೇಟರ್ ‘ಹೀಗಾದ್ರೆ ಹೇಗೆ?’ ‘ಆದದ್ದೆಲ್ಲಾ ಒಳಿತೇ’ ‘ರತ್ನನ್‌ ಪರ್ಪಂಚ’ ‘ಸಾಹೇಬರ ಸರ್ಕೀಟು’ ‘ಕಾಯ’ ಮುಂತಾದ ಬಹು ಕಲಾವಿದರ ಒಳಗೊಂಡ ನಾಟಕಗಳನ್ನು ಪ್ರಸ್ತುತಪಡಿಸಿದೆ. ಪ್ರಸ್ತುತ ಲಕ್ಷ್ಮೀ ಚಂದ್ರಶೇಖರ್ ಏಕವ್ಯಕ್ತಿ ಪ್ರಸ್ತುತಿಗೆ ತಾವು ಪದಾರ್ಪಣೆ ಮಾಡಿದ 25ನೇ ವರ್ಷವನ್ನು ‘ಅಭಿನೇತ್ರಿ’ ತಂಡದವರು ರಂಗೋತ್ಸವದ ಮೂಲಕ ಸಂಭ್ರಮಿಸುತ್ತಿದ್ದಾರೆ. ಜನವರಿ 12 13 14ರಂದು ಮೂರು ದಿನ ಏಕವ್ಯಕ್ತಿ ರಂಗಪ್ರಯೋಗಗಳ ಉತ್ಸವವು ಬೆಂಗಳೂರಿನ ಬಸವನಗುಡಿ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚಲ್‌ನಲ್ಲಿ ನಡೆಯಲಿದೆ. ಪ್ರತಿದಿನ ಒಂದು ನಾಟಕ ಎರಡು ಭಾಷೆಗಳಲ್ಲಿ. ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ಜನವರಿ 12 ಸೌಮ್ಯ ವರ್ಮಾ ನಿರ್ದೇಶನದ ‘ಸಿಂಗಾರೆವ್ವ ಮತ್ತು ಅರಮನೆ’ 13ರಂದು ವಿಶ್ವರಾಜ ಪಾಟೀಲ ನಿರ್ದೇಶನದ ‘ಶೇಕ್ಸ್‌ಪಿಯರ್‌ನ ಶ್ರೀಮತಿ’ ಮತ್ತು 14ರಂದು ಸೌಮ್ಯ ವರ್ಮಾ ನಿರ್ದೇಶನದ ‘ಕಿತ್ತಲೆಮನೆ ಕಾವೇರಿ’– ಪ್ರತಿದಿನ 3.30ಕ್ಕೆ ಕನ್ನಡ ಭಾಷೆಯಲ್ಲಿ ಸಂಜೆ 7.30ಕ್ಕೆ ಇಂಗ್ಲಿಷ್ ಭಾಷೆಯಲ್ಲಿ– ಈ ನಾಟಕಗಳು ಪ್ರದರ್ಶಿತವಾಗುತ್ತಿವೆ. ಮೂರು ರಂಗಪ್ರಸ್ತುತಿಗಳನ್ನು ಎರಡೂ ಭಾಷೆಗಳಲ್ಲಿ ಸವಿಯುವ ಅವಕಾಶ ‘ಅಭಿನೇತ್ರಿ-25’ರ ಮೂಲಕ ಲಕ್ಷ್ಮೀ ಚಂದ್ರಶೇಖರ್ ರಂಗ ರಸಿಕರಿಗೆ ದೊರಕಿಸಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT