ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ
ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ‘ಜನಗಣಮನ’ವನ್ನು ರಾಷ್ಟ್ರೀಯ ಚಳವಳಿಯ ಗೀತೆಯನ್ನಾಗಿ ಅಂಗೀಕರಿಸಿದ್ದು ನದರಿನಲ್ಲಿತ್ತು. ಟಾಗೂರರ ‘ಜನಗಣಮನ’ವನ್ನು 50ನೇ ವಯಸ್ಸಿನಲ್ಲಿ ರಚಿಸಿದರು. ಕುವೆಂಪು ಅವರಿಗೆ ನಾಡಗೀತೆಯ ಕರಡು ರಚಿಸುವಾಗ 20; ಅಂತಿಮಗೊಳಿಸುವಾಗ 24 ವರ್ಷ!

ಕುವೆಂಪು ‘ನೆನಪಿನ ದೋಣಿಯಲ್ಲಿ’ ನಾಡಗೀತೆಗೆ ಸಂಬಂಧಿಸಿದ ಒಂದು ಸಂಗತಿ ಹಂಚಿಕೊಂಡಿದ್ದಾರೆ:

‘1924-25ರ ನನ್ನೊಂದು ಹಸ್ತಪ್ರತಿಯಲ್ಲಿ ‘ಕರ್ಣಾಟಕ ರಾಷ್ಟ್ರಗೀತೆ’ ಎಂಬ ಕವನವಿದೆ. ಅದು ನನ್ನ ‘ಜಯಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಹಮನೊ ಪ್ರಪ್ರಪಿತಾಹಮನೊ ಆಗಿರಬೇಕು. ಟ್ಯಾಗೋರರ ‘ಜನಗಣಮನ’ದಂತೆ ನಮ್ಮ ಕನ್ನಡನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿಯಂತಿದೆ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು’

ಈ ಭ್ರೂಣರೂಪವು ಪೂರ್ಣರೂಪ (1928) ಪಡೆಯಲು ನಾಲ್ಕು ವರ್ಷ ಹಿಡಿದಿವೆ. ಇವೆರಡಕ್ಕೂ ಇರುವ ಫರಕು ಕುತೂಹಲಕರವಾಗಿವೆ. ಮೊದಲಿನ ತಲೆಬರೆಹ ‘ಕರ್ಣಾಟಕ ರಾಷ್ಟ್ರಗೀತೆ’ಯು ಬಳಿಕ ‘ಜಯಯೇ ಕರ್ಣಾಟಕ ಮಾತೆ’ಯಾಗಿದೆ. ಕವಿ ಕರ್ನಾಟಕವನ್ನು ‘ರಾಷ್ಟ್ರ’ವೆನ್ನಲು ಹಿಂಜರಿದಂತಿದೆ. ಟ್ಯಾಗೋರರ ಗೀತೆಯ ಕೇಂದ್ರ ಅಧಿನಾಯಕನಾದರೆ, ಇಲ್ಲಿ ಕರ್ನಾಟಕ ಮಾತೆ. ನಾಡಿನ ಏಕೀಕರಣ ಮತ್ತು ಕರ್ನಾಟಕ ನಾಮಕರಣಕ್ಕೆ ಮುನ್ನವೇ ‘ಕರ್ಣಾಟಕ’ ದೇಶವಾಚಕವನ್ನು ಕವಿ ಬಳಸಿದ್ದಾರೆ. ಇದು ಏಕೀಕರಣಕ್ಕೆ ಬಿತ್ತಲಾದ ಬೀಜದಂತಿದೆ. ಇಷ್ಟಕ್ಕೂ ಕರ್ಣಾಟಕ-ಕರ್ನಾಟಕ ಮೊದಲಿಂದಲೂ ಬಳಕೆಯಾಗಿಕೊಂಡು ಬಂದಿದ್ದ ಪರಿಭಾಷೆಗಳೇ.

ಕರಡುಪದ್ಯ ‘ಭುವನವಿನುತ ವರ ಪಾವನತರ ಭಾರತ’ ಎಂದು ಶುರುವಾಗುತ್ತದೆ. ಇಲ್ಲಿ ಭಾರತವನ್ನು ಭುವನದ ಭಿತ್ತಿಯಲ್ಲೂ ಕರ್ನಾಟಕವನ್ನು ಭಾರತದ ಭಿತ್ತಿಯಲ್ಲೂ ಇಡಲಾಗಿದೆ. ಕನ್ನಡನಾಡನ್ನು ‘ಕವಿರಾಜಮಾರ್ಗ’ವೂ ‘ವಸುಧಾವಲಯ ವಿಲೀನ ವಿಷಯ ವಿಶದ ವಿಶೇಷಂ’ ಎಂಬ ಭಿತ್ತಿಯಲ್ಲಿಡುತ್ತದೆ. ಪರಿಷ್ಕೃತದಲ್ಲಿ ಭುವನದ ಭಿತ್ತಿಯಿಲ್ಲ. ಬದಲಿಗೆ ‘ಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೆ’ ಎಂದು ಆರಂಭವಾಗುತ್ತದೆ. ಇಲ್ಲಿ ದೇಶ-ನಾಡುಗಳನ್ನು ತಾಯಿ-ಮಗಳ ನಂಟಿನ ಚೌಕಟ್ಟಿನಲ್ಲಿ ಇಡಲಾಗಿದೆ. ತಾಯಿಗಿಂತ ಮಗಳ ಬಾಳು ವಿಶಿಷ್ಟವೂ ಸ್ವತಂತ್ರವೂ ಆಗಿರಬಹುದು ಎಂಬ ದನಿಯೂ ಇಲ್ಲಿದೆ. ಇದು ಒಕ್ಕೂಟದ ಚುಕ್ಕಾಣಿ ಹಿಡಿಯುವ ಸರ್ಕಾರಕ್ಕೂ ರಾಜ್ಯಗಳಿಗೂ ಇರಬೇಕಾದ ಫೆಡರಲ್ ಸಂಬಂಧದ ಮುನ್ನುಡಿಯಂತಿದೆ.

‘ಜನಗಣಮನ’ದ ಎರಡನೇ ಭಾಗದಲ್ಲಿ ‘ಹಿಂದೂ ಬೌದ್ಧ ಸಿಖ ಜೈನ ಪಾರಸಿಕ ಮುಸಲ್ಮಾನ ಕ್ರಿಸ್ತಾನಿ’ಯ ಉಲ್ಲೇಖವಿದೆ. ಅದುವೇ ಕುವೆಂಪು ಅವರಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಬೌದ್ಧರುದ್ಯಾನ’ವಾಯಿತು; ಪರಿಷ್ಕಾರದಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ವಾಯಿತು. ಈ ಬದಲಿನಲ್ಲಿ ಬೌದ್ಧರು ಕೈಬಿಟ್ಟುಹೋದರು. ಕುವೆಂಪು ಕರ್ನಾಟಕದಲ್ಲಿ ಸಮುದಾಯವಾಗಿ ಬೌದ್ಧರು ಇಲ್ಲವೆಂದು ಭಾವಿಸಿದರೇ? ಹಾಗೆ ಕಂಡರೆ ಅವರ ಗುರು ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯದ ಆದಿಮ ಲೇಖಕರೇ ಬೌದ್ಧರು ಎಂದು ವಾದ ಮಂಡಿಸಿದ್ದರು. ಕರಡಿನಲ್ಲಿ ‘ಶಂಕರ ರಾಮಾನುಜ ಮಾಧವ ಮಾ ತತ್ವಜ್ಞರ ವರಮಾತೆ, ಹೈದರ ಟೀಪು ಶಿವಾಜಿ ಸುಭಟರ ಪಡೆದ ರಣರಾಮನ ಸೀತೆ’ ಎಂಬ ಸಾಲಿದೆ. ಶಂಕರ ರಾಮಾನುಜರು ಉಳಿದುಕೊಂಡರು. ಮಾಧವ-ವಿದ್ಯಾರಣ್ಯವಾಗಿ ಬದಲಾಯಿತು. ಮೂಲದಲ್ಲಿ ‘ಕಪಿಲ ಪತಂಜಲ ಗೌತಮನುತ’ ಇದ್ದುದು, ‘ಕಪಿಲ ಪತಂಜಲ ಗೌತಮ ಜಿನನುತ’ ಆಯಿತು. ಮೊದಲಿಗಿಲ್ಲದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರು ಪರಿಷ್ಕೃತದಲ್ಲಿ ಸೇರ್ಪಡೆಗೊಂಡಿತು.
ಆರಂಭದಲ್ಲಿದ್ದ ‘ಸರ್ವಜನಾಂಗದ ಶಾಂತಿನಿಕೇತನ, ಸರ್ವ ಮತಗಳಾರಾಮ’ವು, ‘ಸರ್ವಜನಾಂಗದ ಶಾಂತಿಯ ತೋಟ’ವಾಗಿದೆ. ಕೂಡುಬಾಳಿನ ಈ ಆಶಯವು ಇಕ್ಬಾಲರ ‘ಸಾರೆ ಜಹಾಂಸೆ ಅಚ್ಛಾ’, ಟ್ಯಾಗೋರರ ‘ಜನಗಣಮನ’ದ ಎರಡನೇ ಭಾಗದಲ್ಲೂ ಕಾಣಿಸಿತ್ತು. ರಾಷ್ಟ್ರೀಯ ಚಳವಳಿ ಹುಟ್ಟಿಸಿದ್ದ ಸಾಂಸ್ಕೃತಿಕ ಏಕತೆಯ ಭಾವವಿದು. ಕುವೆಂಪು, ಟ್ಯಾಗೋರರಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ಮಹಾರಾಜ ಕಾಲೇಜಿನ ಗುರುಗಳು ಅವರನ್ನು ಜೂನಿಯರ್ ಟ್ಯಾಗೋರ್ ಎನ್ನುತ್ತಿದ್ದರು. ‘ಗೀತಾಂಜಲಿ’ಯ ನೆರಳುಗಳು ಅವರ ಮೊದಲ ಘಟ್ಟದ ಪದ್ಯಗಳಲ್ಲಿವೆ ಕೂಡ.

ಕಚ್ಚಾಪ್ರತಿಯಲ್ಲಿದ್ದ ಹೈದರ್ ಟೀಪು ಶಿವಾಜಿ, ಪರಿಷ್ಕರಣದಲ್ಲಿ ಯಾಕೊ ಕಾಣೆಯಾಗಿದ್ದಾರೆ. ಮೂಲದಲ್ಲಿದ್ದ ‘ಪುಲಕೇಶೀ ಯದು ಕಂಠೀರವ ಕೆಂಪೇನೃಪಶೇಖರ ಭೂಮಿ’ ಪರಿಷ್ಕೃತದಲ್ಲಿ ‘ತೈಲಪ ಹೊಯ್ಸಳರಾಳಿದ ನಾಡೇ’ ಆಗಿದೆ. ಕದಂಬ ಚಾಲುಕ್ಯ ರಾಷ್ಟ್ರಕೂಟ ವಿಜಯನಗರ ಆದಿಲಶಾಹಿ ಬಹಮನಿಗಳು ಹೊರಗುಳಿದಿವೆ. ಕುವೆಂಪುರವರ ಮತ್ತೊಬ್ಬ ಗುರು ಬಿಎಂಶ್ರೀ, ರಾಜಭಕ್ತಿಗೆ ಹೆಸರಾದವರು. ಆದರೂ ಕುವೆಂಪು ಒಡೆಯರನ್ನು ಸೂಚಿಸುವ ‘ಯದು’ವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಅವರಿಗೆ ನಾಲ್ವಡಿಯವರ ಮೇಲೆ ಗೌರವವಿತ್ತು. ಅವರ ಸಿಂಹಾಸನಾರೋಹಣದ ಬೆಳ್ಳಿಹಬ್ಬಕ್ಕೆ ಸ್ತುತಿಗೀತೆಯನ್ನೂ ರಚಿಸಿದ್ದರು.

ಯಾವುದೇ ಪದ್ಯ ರಾಷ್ಟ್ರಗೀತೆ-ನಾಡಗೀತೆ ಆದೊಡನೆ ಅಧಿಕೃತತೆ ಪಡೆಯುತ್ತದೆ. ಆಗ ಸಮುದಾಯಗಳು ತಮ್ಮ ಪ್ರಾತಿನಿಧ್ಯದ ಗುರುತುಗಳ ಹಾಜರಾತಿ –ಗೈರುಹಾಜರಾತಿಯನ್ನು ಪ್ರಜ್ಞಾಪೂರ್ವಕವಾಗಿ ಹುಡುಕತೊಡಗುತ್ತವೆ. ಈ ತರ್ಕದಲ್ಲೆ ಮುಂದೆ ಮಧ್ವರ ಹೆಸರು ಸೇರ್ಪಡೆಯಾಯಿತು. ಇಲ್ಲಿನ ವ್ಯಕ್ತಿ ಮತ್ತು ರಾಜವಂಶಗಳ ಬಿಡುವಿಕೆ-ಸೇರ್ಪಡೆಗಳ ಹಿಂದೆ, ಕವಿಯ ಸ್ಥೂಲವಾದ ಆಲೋಚನಕ್ರಮ ಇದ್ದೀತು. ಆದರೆ ಪ್ರಾತಿನಿಧಿಕತೆಯ ಬಗ್ಗೆ ಬಹಳ ಲೆಕ್ಕಾಚಾರವಿದ್ದಂತೆ ತೋರುವುದಿಲ್ಲ. ಕೆಲವು ಹೆಸರು ಗೀತೆಯ ಪ್ರಾಸ-ಲಯಗಳಿಗೆ ಬೇಕಾಗಿ ಲೋಪ-ಆಗಮ ಆಗಿರುವ ಸಾಧ್ಯತೆಯೇ ಹೆಚ್ಚು. ಮುಖ್ಯವಾಗಿ ಯುವಕವಿಗೆ ತನ್ನ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ‘ಜನಗಣಮನ’ವನ್ನು 1911ರಲ್ಲೇ ರಾಷ್ಟ್ರೀಯ ಚಳವಳಿಯ ಗೀತೆಯನ್ನಾಗಿ ಅಂಗೀಕರಿಸಿದ್ದು ನದರಿನಲ್ಲಿತ್ತು. ವಿಶೇಷವೆಂದರೆ, ಟ್ಯಾಗೋರರು ‘ಜನಗಣಮನ’ವನ್ನು 50ನೇ ವಯಸ್ಸಿನಲ್ಲಿ ರಚಿಸಿದರು. ಕುವೆಂಪು ಅವರಿಗೆ ನಾಡಗೀತೆಯ ಕರಡು ರಚಿಸುವಾಗ 20; ಅಂತಿಮಗೊಳಿಸುವಾಗ 24.

ರಾಷ್ಟ್ರ-ನಾಡಗೀತೆಗಳಲ್ಲಿರುವ ಚಾರಿತ್ರಿಕ ಮತ್ತು ಭೌಗೋಳಿಕ ವಿವರಗಳು ಕವಿಕಾಣ್ಕೆಯ ಭಾಗಗಳು. ಈ ಅರ್ಥದಲ್ಲಿ ‘ಜನಗಣಮನ’ದಲ್ಲಿ ರಾಜಮನೆತನಗಳ ಅರ್ಥಾತ್ ರಾಜಕೀಯ ಚರಿತ್ರೆಯ ಭಾರವಿಲ್ಲ. ಬದಲಿಗೆ ಭವಿಷ್ಯದ ಭಾರತದ ಮುಂಗಾಣ್ಕೆ ಹೆಚ್ಚು ಸ್ಪಷ್ಟವಾಗಿದೆ. ಪ್ರಕೃತಿಪ್ರಿಯರೂ ಮಲೆನಾಡಿಗರೂ ಆದ ಕುವೆಂಪುರವರ ಎರಡೂ ಪ್ರತಿಗಳಲ್ಲಿ ‘ಹಸಿರಿನ ವನಗಳ ಮಾಲೆ’ಯ ಉಲ್ಲೇಖವಿದೆ. ಕರ್ನಾಟಕದ ಕರಾವಳಿ ಬಯಲುಸೀಮೆಗಳ ಚಿತ್ರಗಳಿಲ್ಲ. ನಾಡನ್ನು ಅದರೆಲ್ಲ ಭೌಗೋಳಿಕ ವಿವರಗಳ, ಕಸುಬು, ಬೆಳೆ, ಆಹಾರಗಳ ಮೂಲಕ ನೋಡಿದರೆ ಬೇರೆಯೇ ಚಿತ್ರ ರೂಪುಗೊಂಡೀತು. ಆದರೆ ಎಲ್ಲ ನಾಡಗೀತೆಗಳಲ್ಲಿ ನಾಡವರಲ್ಲಿ ಅಭಿಮಾನ ಮೂಡಿಸಲು, ದೊರೆಗಳ ಸಂತರ ಕಲಾವಿದರ ಹಾಗೂ ಪ್ರಕೃತಿಯ ರಮ್ಯ ವಿವರಗಳ ವೈಭವೀಕರಣವೇ ಪ್ರಧಾನ. ನಿಸಾರರಲ್ಲಿ ದೇವಿಗೆ ‘ನಿತ್ಯೋತ್ಸವ’ವ ಜರುಗುವುದು ಸಹ್ಯಾದ್ರಿ ಶಿಖರದಲ್ಲಿ; ತುಂಗೆಯ ತೆನೆ ಬಳುಕಿನಲ್ಲಿ. ‘ವಂದೇಮಾತರಂ’ನಲ್ಲೂ ದೇವಿ ಸಸ್ಯಶ್ಯಾಮಲೆ.

ಆದರೆ ನಾಡಗೀತೆಗಳಲ್ಲಿ ತರಲಾಗದ ನಾಡಿನ ವಾಸ್ತವಿಕ ಚಿತ್ರಗಳನ್ನು ಇದೇ ಲೇಖಕರು, ತಮ್ಮ ಬೇರೆ ಬರೆಹಗಳಲ್ಲಿ ಕಟ್ಟಿಕೊಡಬಲ್ಲರು. ಕುವೆಂಪುರವರ ‘ವಿಚಾರಕ್ರಾಂತಿಗೆ ಆಹ್ವಾನ’ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಭಾಷಣಗಳು ಅಥವಾ ಕಾದಂಬರಿಗಳು, ಟ್ಯಾಗೋರರ ‘ಗೋರಾ’, ನಿಸಾರರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಇನ್ನೊಂದೇ ಸತ್ಯದ ನಿರೂಪಣೆಗಳು.

ನಾಡಗೀತೆಯ ಭ್ರೂಣರೂಪಕ್ಕೀಗ ಶತಮಾನ ತುಂಬಿದೆ. ಈ ಗೀತೆಯನ್ನು ಕನ್ನಡಿಗರು ಎಷ್ಟೊಂದು ಸಲ ಹಾಡಿದ್ದಾರೆ? ಕೆಲವು ಸಾಲುಗಳು ಎಷ್ಟೊಂದು ಸಲ ಉಲ್ಲೇಖಗೊಳ್ಳುತ್ತಿವೆ? ಈಚಿನ ವರ್ಷಗಲ್ಲಿ ಅತಿಹೆಚ್ಚು ಪ್ರಸ್ತಾಪಗೊಂಡಿದ್ದು: ‘ಸರ್ವಜನಾಂಗದ ಶಾಂತಿಯ ತೋಟ’. ಇದರಂತೆ ‘ಕವಿರಾಜಮಾರ್ಗ’ದ ‘ನೆರೆ ಸೈರಿಸಲಾರ್ಪೊಡೆ ಪರವಿಚಾರಮುಂ ಧರ್ಮಮುಂ’ ಕೂಡ. ವರ್ತಮಾನವು ಯಾವ ವಿಷಯದಲ್ಲಿ ಅರಕೆ ಅನುಭವಿಸುತ್ತದೆಯೊ, ಅದಕ್ಕೆ ತಕ್ಕದ್ದನ್ನು ಚರಿತ್ರೆಯಿಂದ ಆಯ್ದು ಪುನರುಕ್ತಿಸುತ್ತದೆ- ಗಾಯಕ್ಕೆ ಮದ್ದು ಹುಡುಕುವಂತೆ. ಇದು ಅದರ ಬಿಕ್ಕಟ್ಟನ್ನೂ ಕನಸಿನ ಸಮಾಜದ ಆಶಯವನ್ನೂ ಒಟ್ಟಿಗೆ ಪ್ರತಿಫಲಿಸುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT