ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫರ್ಡಿನಾಂಡ್‌ ಕಿಟೆಲ್ | ವಾಗರ್ಥದ ಹುಡುಕಾಟದಲ್ಲಿ...

Published 4 ಜೂನ್ 2023, 0:10 IST
Last Updated 4 ಜೂನ್ 2023, 0:10 IST
ಅಕ್ಷರ ಗಾತ್ರ

2021ರ ಮೇ ತಿಂಗಳ ಮೈಸೂರಿನ ಬಿಸಿಲಿಗೆ ಬೆವರುತ್ತ, ಅಲ್ಲಿಯವರೆಗೆ ಚಿತ್ರೀಕರಿಸಿ ತಂದ ಫೂಟೇಜನ್ನು ಪರಿಶೀಲಿಸುತ್ತ ಕುಳಿತಿರುವಾಗ ಬಂದ ಈಮೇಲ್‌ನಿಂದ ಏಕಾಗ್ರತೆಗೆ ಭಂಗವಾಯ್ತು. ಅದರ ಲಗತ್ತಿನಲ್ಲಿ ಇದ್ದದ್ದು ನೂರಾಮೂವತ್ತೈದು ವರ್ಷ ಹಳೆಯದಾದ ಪತ್ರವೊಂದರ ಉಲ್ಲೇಖ! ಪತ್ರದ ಒಂದೆರಡು ಸಾಲುಗಳು ಗಮನ ಸೆಳೆಯುವಂತಿತ್ತು. ‘ಭೂಮಿಯ ವಾತಾವರಣ ಬದಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ರೈಲ್ವೆ ಆಗಲಿ ಪ್ರಾಪಗಾಂಡ ಆಗಲಿ ಇದನ್ನು ಬದಲಿಸಲಾರದು. ಯಾಕೆಂದರೆ ರೈಲ್ವೆಯು ಕಾಡನ್ನು ನಾಶಮಾಡುತ್ತದೆ ಮತ್ತು ಎತ್ತಿನ ಬಂಡಿಯವನ ಆದಾಯಕ್ಕೆ ಕುತ್ತು ತರುತ್ತದೆ. ಅದು ಅವರದೇ ಭೂಮಿಯ ಸಂಪತ್ತನ್ನು ಕಸಿದು ಬ್ರಿಟಿಷರ ಬೊಕ್ಕಸ ತುಂಬಿಸುತ್ತದೆ’. ಹೀಗೆ ಸಾಗಿತ್ತು ಆ ಪತ್ರದ ಕಳಕಳಿಯ ಸಾಲುಗಳು.

ರೈಲು ಆಧುನಿಕ ಬದುಕಿಗೆ ಮುಖ್ಯವಾದರೂ ಕಾಡನ್ನೂ ಜನಸಾಮಾನ್ಯರ ಬದುಕನ್ನೂ ಅದು ಒಟ್ಟಿಗೇ ನಾಶ ಮಾಡುತ್ತಿರುವುದರ ಬಗ್ಗೆ ಕಳಕಳಿ ಹಾಗೂ ಆಳುವವರ ಪ್ರಾಪಗಾಂಡದ ಬಗೆಗಿನ ಕಟು ವಿಮರ್ಶೆ ನನ್ನ ಗಮನ ಸೆಳೆಯಿತು. ಅಂದ ಹಾಗೆ ನಮ್ಮ ಈ ಕಾಲಕ್ಕೆ ಕನ್ನಡಿ ಹಿಡಿದ ಹಾಗಿರುವ ಆ ಪತ್ರ ಬರೆದದ್ದು 1886ರಲ್ಲಿ! ಜರ್ಮನಿಯ ಅಜ್ಜಿಯ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ತಮ್ಮ ಮಕ್ಕಳಾದ ಗಾಟ್‌ಫ್ರೀಡ್ ಮತ್ತು ಕಾರ್ಲ್‌ಗೆ ಆ ಪತ್ರ ಬರೆದದ್ದು ಧಾರವಾಡದಲ್ಲಿ ನಿಘಂಟಿನ ಕೆಲಸದಲ್ಲಿ ತೊಡಗಿದ್ದ ಫರ್ಡಿನಾಂಡ್‌ ಕಿಟೆಲ್! ಬ್ರಿಟಿಷ್ ಸರ್ಕಾರದ ಕೆಳಗೆ ಕೆಲಸ ಮಾಡುತ್ತಿದ್ದರೂ ಅದರ ಕಾರ್ಯವೈಖರಿಯ ಬಗ್ಗೆ ಕಿಟೆಲ್ ತಮ್ಮ ನಿಷ್ಠುರ ಅಭಿಪ್ರಾಯ ದಾಖಲಿಸಿದ್ದಾರೆ. ಇಂದು ಅಂತಹ ವಿದ್ವಾಂಸರನ್ನು ಕಷ್ಟಪಟ್ಟು ಹುಡುಕಬೇಕಾಗಿದೆ.

2020ರ ಜೂನ್ ತಿಂಗಳಲ್ಲಿ ಕಿಟೆಲ್ ಕುರಿತು ಚಿತ್ರ ತಯಾರಿಸುವ ನಿಟ್ಟಿನಲ್ಲಿ ಕೈಗೊಂಡ ಸಂಶೋಧನೆ ಒಂದು ಹಂತ ತಲುಪಿ, ಚಿತ್ರಕತೆಯ ನೀಲನಕ್ಷೆಗೆ ತಯಾರಿ ನಡೆಸಿದ್ದಾಗ ಆಗ ತಾನೇ ತಲೆಯೆತ್ತಿದ್ದ ಕೋವಿಡ್ ಎಷ್ಟೆಲ್ಲಾ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಸಾಲದ್ದಕ್ಕೆ ಇಲ್ಲಿ, ಕರ್ನಾಟಕದಲ್ಲಿ ಕನ್ನಡ-ಇಂಗ್ಲೀಷ್ ನಿಘಂಟು ತಯಾರಿಸಿದ ವಿದ್ವಾಂಸ ಎಂದೇ ಖ್ಯಾತರಾದ ಕಿಟೆಲ್‌ರ ಬದುಕಿನ ಬಗ್ಗೆ, ನಿಘಂಟಿನ ಹೊರತಾಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ, ಉಳಿದ ಕೆಲಸಗಳ ಬಗ್ಗೆ ಅಷ್ಟಾಗಿ ವಿವರವಾದ ದಾಖಲೆಗಳು ಇಲ್ಲ. ಶ್ರೀನಿವಾಸ ಹಾವನೂರ ಅವರು ಬರೆದ ಪುಸ್ತಕಗಳಲ್ಲಿ ಕೆಲ ಬಿಡಿ ವಿವರಗಳಿವೆ ಅಷ್ಟೇ. ಉಳಿದಂತೆ ಬಾಸೆಲ್‌ನ (ಈಗಿನ ಸ್ವಿಟ್ಜರ್‌ಲೆಂಡ್‌) ಪತ್ರಾಗಾರದಲ್ಲಿ ಆ ಕಾಲದ ಅಮೂಲ್ಯ ದಾಖಲೆಗಳ ಭಂಡಾರ ಲಭ್ಯವಿವೆ ಎಂದು ತಿಳಿದು ಅವರನ್ನು ಸಂಪರ್ಕಿಸಿದಾಗ ‘ಆ ಕಾಲದ ಸಾವಿರಾರು ಪತ್ರಗಳು, ದಾಖಲೆಗಳು ಇವೆ. ತಾಸಿನ ಲೆಕ್ಕದಲ್ಲಿ ಹಣ ಪಾವತಿಸಿ ಪಡೆದುಕೊಳ್ಳಿ’ ಎಂಬ ಉತ್ತರ ಬಂತು.

ಇದು ಒಂದು ಸಂಶೋಧನಾ ಸಂಸ್ಥೆಯೋ, ವಿಶ್ವವಿದ್ಯಾಲಯವೋ ಮಾಡಬೇಕಾದ ಕೆಲಸ, ನಮಗಲ್ಲ ಅನ್ನಿಸಿದರೂ ಕಿಟೆಲ್‌ರಿಗೆ ಸಂಬಂಧಿಸಿದ ಕೆಲವು ಪತ್ರಗಳನ್ನಾದರೂ ಪಡೆದುಕೊಳ್ಳೋಣ ಎಂದು ಕೇಳಿದಾಗ ತಿಳಿದದ್ದು ಅವೆಲ್ಲ ಹಳೆಯ ಜರ್ನಮನ್‌ ನುಡಿಯಲ್ಲಿ (ನಮ್ಮ ಹಳೆಗನ್ನಡದ ಹಾಗೆ) ಇವೆ ಮತ್ತು ಅವನ್ನು ಪಡೆದರೂ ಮೊದಲು ಈಗ ಬಳಕೆಯಲ್ಲಿರುವ ಜರ್ಮನ್‌ ನುಡಿಗೆ ಅನುವಾದಿಸಿ ನಂತರ ಇಂಗ್ಲೀಷಿಗೆ ಅನುವಾದಿಸಿದರೆ ಮಾತ್ರ ಉಪಯೋಗವಾಗಬಹುದು ಎಂದು ತಿಳಿಯಿತು. ಇವೆಲ್ಲ ಯಾರ ನೆರವೂ ಇಲ್ಲದೆ ಚಿತ್ರ ತಯಾರಿಸ ಹೊರಟ ನಮಗಲ್ಲ ಎಂದು ಸುಮ್ಮನಾಗಬೇಕಾಯಿತು. ಒಂದೆರಡು ಕಡೆ ಹಣಕಾಸಿನ ನೆರವು ಕೋರಿದರೂ ಕೋವಿಡ್‌ನ ಅತಂತ್ರ ಸ್ಥಿತಿಯಿಂದಾಗಿ ಎಲ್ಲೂ ಏನೂ ಗಿಟ್ಟಲಿಲ್ಲ. ಕನ್ನಡದ ಕೆಲಸಕ್ಕಾಗಿ ಇರುವ ವಿಶ್ವವಿದ್ಯಾಲಯಗಳು ಈಗಲಾದರೂ ಇಂತಹ ಹೊಣೆಯನ್ನು ಕೈಗೆತ್ತಿಕೊಂಡರೆ ಹೊಸಗನ್ನಡ ಆರಂಭಕಾಲದ ಅಮೂಲ್ಯ ದಾಖಲೆಗಳು ನಮ್ಮದಾಗಲಿವೆ.

ಭಾರತದಲ್ಲಿ ಚಿತ್ರೀಕರಣ ಮುಗಿಸಿ 2021ರ ಅಕ್ಟೋಬರ್‌ನಲ್ಲಿ ಜರ್ಮನಿಗೆ ಹೋಗಿ ಅಲ್ಲಿ ಅವರ ಹುಟ್ಟೂರು ರೆಸ್ಟರ್‌ಹಾಫೆ, ಕನ್ನಡ ನಿಘಂಟಿನ ಕೆಲಸ ಮಾಡಿದ ಕಾಲ್ವ್ ಮತ್ತು ಟ್ಯುಬಿಂಗೆನ್‌ನಲ್ಲಿ ಚಿತ್ರೀಕರಣ ಮುಂದುವರಿಸಿದೆವು. ಕಾಸೆಲ್ ಬಳಿಯ ಸ್ಟುಡಿಯೋ ಒಂದರಲ್ಲಿ ಚಿತ್ರದ ಸಂಪೂರ್ಣ ಧ್ವನಿ ಮುದ್ರಣ ಮಾಡಿದ್ದು ಮರೆಯಲಾಗದ ಅನುಭವ. ಕಿಟೆಲ್ ತಮ್ಮ ಕೊನೆಗಾಲವನ್ನು ಕಳೆದ ಟ್ಯುಬಿಂಗೆನ್‌ಗೆ ಹೋಗಿ ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಅವರಿಗೆ 1896ರಲ್ಲಿ ಕೊಟ್ಟ ಡಾಕ್ಟರೇಟ್ ಪದವಿಯನ್ನು ನೋಡುವಾಗ ರೋಮಾಂಚನವಾಗಿತ್ತು. ಇದು ಕನ್ನಡದ ಕೆಲಸ ಮಾಡಿದ್ದಕ್ಕಾಗಿ ಕೊಡಲಾದ ಮೊಟ್ಟ ಮೊದಲ ಡಾಕ್ಚರೇಟ್‍! ಅಲ್ಲಿ ಮಲಯಾಳಂ-ಇಂಗ್ಲೀಷ್ ನಿಘಂಟು ತಯಾರಿಸಿದ ಹರ್ಮನ್‌ ಗುಂಡರ್ಟ್‌ ಕುರಿತಾಗಿ ಪ್ರತ್ಯೇಕ ವಿಭಾಗವೇ ಇದ್ದು ಕೇರಳದ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಾರೆ.

ಹಾಗೆಯೇ ಜರ್ಮನಿಯ ವಿದ್ಯಾರ್ಥಿಗಳು ಕೇರಳಕ್ಕೆ ಹೋಗಿ ಮಲಯಾಳಿ ನುಡಿ ಮತ್ತು ಕಲೆಗಳ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಯಿತು. ‘ಕನ್ನಡಕ್ಕಾಗಿ ಇಷ್ಟೆಲ್ಲಾ ಕೆಲಸ ಮಾಡಿದ ಕಿಟೆಲ್ ಬಗ್ಗೆ ಇಲ್ಲಿ ಯಾಕೆ ಯಾರಿಗೂ ಹೆಚ್ಚಿಗೆ ತಿಳಿದಿಲ್ಲ, ಇಲ್ಲೇಕೆ ವ್ಯವಸ್ಥಿತ ಅಧ್ಯಯನ ನಡೆದಿಲ್ಲ?’ ಎಂದು ಕೇಳಿದಾಗ ‘ನೀವೇ ಯಾಕೆ ಅದನ್ನು ಶುರುಮಾಡಬಾರದು?’ ಎಂಬ ಉತ್ತರ ಬಂತು! ನಮ್ಮ ವಿಶ್ವವಿದ್ಯಾಲಯಗಳಿಗೆ ಇಂತಹ ಅಧ್ಯಯನಗಳಲ್ಲಿ ಆಸಕ್ತಿ ಇದ್ದಿದ್ದರೆ ಕನ್ನಡದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಕಿಟೆಲ್ ಕುರಿತು ವಸ್ತುನಿಷ್ಠವಾದ, ವಿವರವಾದ ಅಧ್ಯಯನ ಮತ್ತು ಸಂಶೋಧನೆ ಏನಿದ್ದರೂ ಶ್ರೀನಿವಾಸ ಹಾವನೂರರೊಂದಿಗೇ ಕೊನೆಗೊಂಡಿದೆ.

ಉದಾಹರಣೆಗೆ ಕಿಟೆಲ್ ಕನ್ನಡ ನಾಡಿಗೆ ಮೊದಲು ಬಂದಿಳಿದದ್ದು ಧಾರವಾಡದಲ್ಲಿ ಎಂದು ಕೆಲವರು ದಾಖಲಿಸಿದ್ದರೆ, ಅವರು ಮೊದಲು ಮಂಗಳೂರಿಗೆ ಬಂದರು ಎಂದು ಇನ್ನು ಕೆಲವರು ದಾಖಲಿಸಿದ್ದಾರೆ. ಆದರೆ ಸ್ವಲ್ಪ ಆಳವಾಗಿ ಹುಡುಕಿದರೆ ತಿಳಿಯುವುದು ಕಿಟೆಲ್ ಮೊದಲು ಬಂದಿಳಿದದ್ದು ಹೊನ್ನಾವರದಲ್ಲಿ! ಜರ್ಮನಿಯಿಂದ ಹೊರಟ ಮಿಷನರಿಗಳ ತಂಡ ಕುದುರೆ, ಒಂಟೆ ಮತ್ತು ಹಡಗಿನಲ್ಲಿ ಪ್ರಯಾಣ ಮಾಡುತ್ತ ಯುರೋಪು, ಈಜಿಪ್ಟ್ ದಾಟಿ ಮೂರು ತಿಂಗಳ ಪ್ರಯಾಣದ ನಂತರ ಮುಂಬಯಿಗೆ ಬರುವಷ್ಟರಲ್ಲಿ 21ರ ಹರೆಯದ ಕಿಟೆಲ್ ಮಿದುಳು ಜ್ವರಕ್ಕೆ ತುತ್ತಾಗಿ ಬಳಲುತ್ತಾರೆ. ಒಂದೆರಡು ದಿನ ಮುಂಬಯಿಯ ರೇವಿನಲ್ಲೇ ಉಳಿದು, ಮುಂದೆ ಹೋಗಲೇಬೇಕಾದ ಅನಿವಾರ್ಯದಲ್ಲಿ ಅವರೆಲ್ಲ ಮಂಗಳೂರಿನ ಕಡೆಗೆ ಹೊರಡುತ್ತಾರೆ. ಆದರೆ ಹೊನ್ನಾವರಕ್ಕೆ ಬರುವಷ್ಟರಲ್ಲಿ ಕಿಟೆಲ್ ಆರೋಗ್ಯ ತೀರಾ ಹದಗೆಟ್ಟು ಅವರನ್ನು ಅಲ್ಲಿಯೇ ಆರೈಕೆ ಮಾಡಲು ಬಿಟ್ಟು ಉಳಿದವರು ಮಂಗಳೂರಿಗೆ ತೆರಳುತ್ತಾರೆ.

ಒಂದೂವರೆ ತಿಂಗಳ ನಂತರ ಆರೋಗ್ಯ ಸುಧಾರಿಸಿದ ಮೇಲೆ ಕಿಟೆಲ್ ಎತ್ತಿನಗಾಡಿಯ ಮೇಲೆ ಧಾರವಾಡಕ್ಕೆ ತೆರಳುತ್ತಾರೆ. ನೀಲಗಿರಿಗೆ ಹೋಗಲೆಂದು ನಿಯೋಜಿಸಲ್ಪಟ್ಟ ಕಿಟೆಲ್ ಕೊನೆಯ ಕ್ಷಣದ ಬದಲಾವಣೆಯಿಂದ ಧಾರವಾಡಕ್ಕೆ ಬರುವಂತಾಗುತ್ತದೆ. ಧಾರವಾಡದಲ್ಲಿ ವೈಗ್ಲೆಯವರ ಬಳಿ ಕನ್ನಡ ಮತ್ತು ಇಂಗ್ಲಿಷ್‌ ನುಡಿಯ ಕಲಿಕೆ ಶುರುಮಾಡುತ್ತಾರೆ. ಅಲ್ಲಿಯವರೆಗೆ ತಾಯ್ನುಡಿನ ಜರ್ಮನ್‌ ಬಿಟ್ಟರೆ ಬಾಸೆಲ್‌ನಲ್ಲಿ ಓದುವಾಗ ಲ್ಯಾಟಿನ್ ಮತ್ತು ಹೀಬ್ರೂ ಮಾತ್ರ ಕಲಿತಿದ್ದ ಕಿಟೆಲ್ ಕನ್ನಡ, ಇಂಗ್ಲಿಷ್‌, ಸಂಸ್ಕೃತ, ಸ್ವಲ್ಪ ಮಟ್ಟಿಗೆ ಬಡಗ ಮತ್ತು ತಮಿಳನ್ನು ಇಲ್ಲಿಯೇ ಕಲಿತರು.

ಎಲ್ಲ ಮಿಷನರಿಗಳೂ ತಮ್ಮ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ದೇವರ ಕೆಲಸ ಎಂಬಂತೆ (ಶ್ರೀನಿವಾಸ ಹಾವನೂರರು ಹೇಳುವ ಹಾಗೆ missionary zealನಿಂದ) ಮಾಡಿದರಲ್ಲದೆ ಕಿಟೆಲ್‌ಗೆ ಕನ್ನಡವೇ ಉಸಿರಾಗಿತ್ತು, ಜರ್ಮನಿಗೆ ಹಿಂತಿರುಗಿ ಹೋದ ಮೇಲೂ ಕನ್ನಡದಲ್ಲೇ ವ್ಯವಹರಿಸುತ್ತಿದ್ದರು ಎಂಬಂಥ ಕತೆಗಳಿಗೆ ಯಾವ ಆಧಾರವೂ ಇಲ್ಲ. ಅವರು ನೀಲಗಿರಿಗೇ ಹೋಗಿ ಅಲ್ಲಿಯೇ ನೆಲೆಸಿದ್ದರೆ ತಮಿಳು, ಬಡಗ ನುಡಿಗಳಿಗೆ ನಿಘಂಟು ತಯಾರಿಸುತ್ತಿದ್ದರೋ ಏನೋ! ಅವರ ಒಡಹುಟ್ಟಿದ ತಮ್ಮ ಕೂಡ ಮಿಷನರಿಯಾಗಿದ್ದು ಭಾರತದಲ್ಲಿ ಇರುವಷ್ಟು ಕಾಲವೂ ///ತಲ್ಲಿಚೇರಿಯಲ್ಲಿ ಇದ್ದರು. ಕನ್ನಡದ ಮೊದಲ ಪತ್ರಿಕೆ ಶುರುಮಾಡಿದ ಮೋಗ್ಲಿಂಗ್, ಮಲಯಾಳಂ ನಿಘಂಟು ತಯಾರಿಸಿದ ಗುಂಡರ್ಟ್‌ ಮುಂತಾದವರ ಜೊತೆಗೆ ಕಿಟೆಲ್ ನಿಕಟ ಸಂಪರ್ಕದಲ್ಲಿದ್ದು ಅವರೊಂದಿಗೆ ಚರ್ಚಿಸುತ್ತಿದ್ದರು. ಕಿಟೆಲ್‌ಗೂ ಮೊದಲು ತ್ಸೀಗ್ಲರ್ ಕನ್ನಡಕ್ಕೊಂದು ಪುಟ್ಟ ನಿಘಂಟು ತಯಾರಿಸಿದ್ದರು. ಇಂಡಿಯನ್ ಆಂಟಿಕ್ವೆರಿ ಎಂಬ ವಿದ್ವತ್ ಪತ್ರಿಕೆಗೆ ಕಿಟೆಲ್ ಆಗಾಗ ಬರೆಯುತ್ತಿದ್ದುದಲ್ಲದೆ ಆ ಕಾಲದ ಹಲವಾರು ವಿದ್ವಾಂಸರೊಂದಿಗೆ ಚರ್ಚಿಸುತ್ತಿದ್ದರು. ಸಣ್ಣ ಶಾಲೆಯ ಮೇಷ್ಟ್ರಾಗಿದ್ದುಕೊಂಡೇ ಪಠ್ಯ ಪುಸ್ತಕಗಳ ರಚನೆ, ಪದ್ಯಗಳ ಅನುವಾದ, ಹಳೆಗನ್ನಡದ ಅಮೂಲ್ಯ ಕೃತಿಗಳ ಸಂಪಾದನೆ ಮುಂತಾದ ಇಂದಿನ ಯುನಿವರ್ಸಿಟಿಗಳ ಪ್ರೊಫೆಸರುಗಳೂ ಮಾಡಲಾಗದಂತಹ ಕೆಲಸಗಳನ್ನು ಅವರು ಮಾಡಿರುವುದು ಗಮನಾರ್ಹ.

ಇಲ್ಲಿಗೆ ಬಂದ ಮೊದಲ ಕೆಲ ವರ್ಷಗಳು ಮತಪ್ರಚಾರಕರಾಗಿ ಕೆಲಸ ಮಾಡಿದ ಕಿಟೆಲ್‌ರ ವಿದ್ವತ್ತು ಮತ್ತು ಶ್ರದ್ಧೆಯನ್ನು ಗಮನಿಸಿದ ಬಾಸೆಲ್ ಸಂಸ್ಥೆ ಅವರನ್ನು ಮತಪ್ರಚಾರದ ಕೆಲಸದಿಂದ ಬಿಡುಗಡೆಗೊಳಿಸಿತು. ಮಂಗಳೂರಿನ ಪ್ರೆಸ್‌ನ ತಮ್ಮ ಕೆಲಸದ ವ್ಯಾಪ್ತಿಯಲ್ಲಿ ಕನ್ನಡವನ್ನು ಆಳವಾಗಿ ಅಭ್ಯಸಿಸಿ ಪುಸ್ತಕಗಳ ಪ್ರಕಟಣೆ ಮತ್ತು ನಿಘಂಟು ರಚನೆ ಮಾಡಿದರಲ್ಲದೆ ಉಳಿದಂತೆ ಜರ್ಮನ್‌ ಮತ್ತು ಇಂಗ್ಲಿಷ್ ಅವರ ನಿತ್ಯದ ವ್ಯವಹಾರದ ನುಡಿಯಾಗಿತ್ತು. ಇವರಂತೆ ಕನ್ನಡನಾಡಿಗೆ ತಮ್ಮ ಅನುಪಮ ಕೊಡುಗೆಯನ್ನು ಕೊಟ್ಟ ಮೋಗ್ಲಿಂಗ್, ವೈಗ್ಲೆ, ಪ್ಲೆಬ್ಸ್, ರಿಕ್ಟರ್ ಮುಂತಾದ ಮಿಷನರಿಗಳ ಬಗ್ಗೆ ಇಲ್ಲಿ ತಿಳಿದಿರುವುದು ಕಡಿಮೆ. ನಾವಿಂದು ಮಂಗಳೂರು ಹೆಂಚು ಎಂದು ಕರೆಯುವ ಟೆರಾಕೋಟಾ ಟೈಲ್ ತಂತ್ರಜ್ಞಾನವನ್ನು ಯುರೋಪಿನಿಂದ ತಂದು ಇಲ್ಲಿ ಪ್ರಚಲಿತಗೊಳಿಸಿದ್ದು ಬಾಸೆಲ್ ಮಿಷನ್. ಹಾಗೆಯೇ ಗುಣಮಟ್ಟದ ಪುಸ್ತಕ ಪ್ರಕಟಣೆಗೆ ಹೆಸರಾಗಿದ್ದ ಪ್ರೆಸ್, ಖಾಕಿ ಬಟ್ಟೆಯ ತಯಾರಿಕೆ, ಎಲ್ಲ ಧರ್ಮ, ಜಾತಿಯ ಹಿನ್ನೆಲೆಯವರಿಗೆ ಕನ್ನಡದಲ್ಲಿ ಸಮಾನ ಶಿಕ್ಷಣ ಕೊಡುವ ಶಾಲೆಗಳು ಮತ್ತು ಎಲ್ಲರಿಗೂ ಮುಕ್ತ ಪ್ರವೇಶವಿದ್ದ ಆಸ್ಪತ್ರೆಗಳ ಮೂಲಕ ನಿಜವಾಗಿ ಕನ್ನಡ ಜನರ, ನಾಡಿನ ಸೇವೆಮಾಡಿದ ಬಾಸೆಲ್ ಸಂಸ್ಥೆಯ ಕೆಲಸಗಳು ವಿವರವಾಗಿ ದಾಖಲಾಗಬೇಕಾಗಿದೆ. ಕಿಟೆಲ್ ಬರೆದ, ಅಂದಿನ ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸುತ್ತಿದ್ದ ಕನ್ನಡದ ಪಠ್ಯ ಪುಸ್ತಕಗಳನ್ನು ಇಂದಿಗೂ ಹೆಚ್ಚಿನ ಬದಲಾವಣೆಯಿಲ್ಲದೆ ಉಪಯೋಗಿಸಬಹುದಾಗಿದೆ!

ಈ ಚಿತ್ರ ತಯಾರಿಕೆಯ ಮೂರು ವರ್ಷಗಳ ಪ್ರಯಾಣದಲ್ಲಿ ಕಿಟೆಲ್‌ರಂತಹ ವಿದ್ವಾಂಸರ ಕುರಿತಾಗಿ ನಮ್ಮಲ್ಲಿ ಅತಿಭಾವುಕತೆಯ ಕತೆಗಳೇ ಹೆಚ್ಚು ಪ್ರಚಲಿತದಲ್ಲಿರುವುದು ತಿಳಿದು ಬೇಸರವಾಯಿತು. ಇಂದಿನ ಸತ್ಯೋತ್ತರ ಕಾಲದಲ್ಲಿ ಇತಿಹಾಸ ಯಾವುದು, ಕಲ್ಪನೆ ಯಾವುದು ಎಂದೇ ತಿಳಿಯದ ಹಾಗೆ ಎಲ್ಲವನ್ನೂ ತಮ್ಮ ಮೂಗಿನ ನೇರದ ಸಿದ್ಧಾಂತಕ್ಕೆ ತಕ್ಕಂತೆ ತಿರುಚಲಾಗುತ್ತಿರುವಾಗ ಇಲ್ಲದ ಅಂತೆ-ಕಂತೆಗಳನ್ನು ಆಧರಿಸಿ ಕಾಲ್ಪನಿಕ ಚಿತ್ರ ಮಾಡುವುದು ಅಂತಹ ಘನ ವಿದ್ವಾಂಸರಿಗೆ ಮತ್ತು ಅವರ ಜೀವಮಾನದ ಸಾಧನೆಗೆ ಮಾಡುವ ಅಪಚಾರ ಎಂದೇ ನಂಬಿ, ದಾಖಲೆಗಳಲ್ಲಿ ದೊರೆತ ವಿವರಗಳನ್ನಷ್ಟೇ ಇಟ್ಟುಕೊಂಡು ಪ್ರಾಮಾಣಿಕವಾದ ಚಿತ್ರ ಮಾಡಿದ್ದೇವೆ. ಭೌಗೋಳಿಕ, ಧಾರ್ಮಿಕ ಮತ್ತು ಭಾಷಿಕ ಗಡಿಗಳನ್ನು ದಾಟಿ ಹೊಸ ಅರಿವಿನ ಹುಟ್ಟಿಗೆ ಕಾರಣರಾದ ಕಿಟೆಲ್‌ರ ಬದುಕು ಮತ್ತು ಕೆಲಸಗಳನ್ನು ಹಿಂತಿರುಗಿ ನೋಡಿ ನಾವಿಂದು ಇಂಥ ಗಡಿಗಳನ್ನು ಮೀರುವ, ದ್ವೇಷ ಅಳಿಸುವ ಅರಿವಿನ ಹಾದಿ ಕಂಡುಕೊಳ್ಳಬೇಕಿದೆ.

ಪೀರಿಯಡ್‌ ಸಿನಿಮಾ 

‘ಅರಿವು ಮತ್ತು ಗುರುವು’ ಜರ್ಮನಿಯಿಂದ ಕನ್ನಡನಾಡಿಗೆ ಬಂದು ಕನ್ನಡಕ್ಕೆ ಮಹತ್ವದ ಕೊಡುಗೆಗಳನ್ನು ಕೊಟ್ಟ ಫರ್ಡಿನಾಂಡ್‌ ಕಿಟೆಲ್‌ರ ಬದುಕು ಮತ್ತು ಕೆಲಸಗಳನ್ನು ಕುರಿತ 80 ನಿಮಿಷಗಳ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಕನ್ನಡನಾಡಿನ ಬೇರೆ ಬೇರೆ ಕಡೆಗಳಲ್ಲಿ ಸುಮಾರು ಮೂವತ್ತು ವರ್ಷಗಳನ್ನು ಕಳೆದು, ಜರ್ಮನಿಗೆ ಹಿಂದಿರುಗಿದ ಮೇಲೂ ಕನ್ನಡದ ಕೆಲಸವನ್ನು ಮುಂದುವರಿಸಿದ ಅವರ ಜೀವನಯಾನವನ್ನು ಅವರದೇ ಮಾತುಗಳಲ್ಲಿ, ಅವರ ಕಣ್ಣೋಟದಲ್ಲಿ ಪ್ರಜ್ಞಾಪ್ರವಾಹದ ಪ್ರಕಾರದಲ್ಲಿ ಕಟ್ಟಿಕೊಡುವ ಪ್ರಯೋಗವನ್ನು ಚಿತ್ರದಲ್ಲಿ ಮಾಡಲಾಗಿದೆ. ಹಾಗೆಯೇ ಇದೊಂದು ಪೀರಿಯಡ್ ಚಿತ್ರವಾಗಿದ್ದು, ಹತ್ತೊಂಬತ್ತನೆಯ ಶತಮಾನದ ಆ ಕಾಲ ಮತ್ತು ದೇಶವನ್ನು ಆಗ ಇದ್ದಿರಬಹುದಾದಂತೆ ಕಟ್ಟುವ ಪ್ರಯತ್ನ ಮಾಡಲಾಗಿದೆ. ಕನ್ನಡ, ಜರ್ಮನ್‌ ಮತ್ತು ಇಂಗ್ಲಿಷ್‌ ನುಡಿಗಳಲ್ಲಿರುವ ಈ ಚಿತ್ರ ಈವರೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ದೆಹಲಿಯ ಹ್ಯಾಬಿಟ್ಯಾಟ್ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಚಿತ್ರದ ಟ್ರೇಲರ್‌ ವೀಕ್ಷಿಸಲು :

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT