ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುದಾನಿಗೊಂದು ಕೃತಜ್ಞತೆ ಹೇಳಬೇಕು...

Last Updated 23 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಅನಾಟಮಿಯೇ ಅರ್ಥವಾಗದ ವಯಸ್ಸಿನಲ್ಲಿ ಬದುಕಿಗೇಕೆ ತನ್ನ ಥಿಯರಿ ಆ‌ಫ್ ಇವಲ್ಯೂಷನ್ ಕಲಿಸುವ ಹುಕಿ ಹುಟ್ಟಿತ್ತೋ ಗೊತ್ತಿಲ್ಲ. ಬಯಾಲಜಿ ರೆಕಾರ್ಡ್ ಬರೆಯುತ್ತಿರಬೇಕಾದರೆ ಸ್ನಾನ ಮುಗಿಸಿ ಬಂದ ಅಮ್ಮ ನನ್ನನ್ನು ರೂಮಿಗೆ ಕರೆದು ತನ್ನ ಎಡ ಸ್ತನ ತೋರಿಸಿ ‘ಇಲ್ನೋಡು ಒಂದು ಸಣ್ಣ ಗಂಟಿನ ಥರ ಕಾಣುತ್ತದಲ್ಲಾ’ ಅಂದಿದ್ದರು. ಅವತ್ತಷ್ಟೇ ರಕ್ತಕಣಗಳ ಮತ್ತು ಜೀವಕೋಶಗಳ ಬಗ್ಗೆ ಲೆಕ್ಚರ್ ಕೇಳಿ ಬಂದಿದ್ದ ನನಗೆ ಆಗಲೇ ಒಂದು ಸಣ್ಣ ಅನುಮಾನ ಮೂಡಿತು. ಆದರೆ ಅಮ್ಮಂತಹ ‘ಒಳ್ಳೆ’ಯವರಿಗೆ ಕ್ಯಾನ್ಸರ್ ಬಾರದು ಅನ್ನುವ ಲಾಜಿಕ್‌ಗೆ ಗಂಟು ಬಿದ್ದು, ‘ಇರಲಿಕ್ಕಿಲ್ಲ’ ಎಂದು ಸಮಾಧಾನ ಮಾಡಿಕೊಂಡೆ. ಆದರೆ ಅಮ್ಮ‌ ಮಾತ್ರ ಒಂದು ತೀರ್ಮಾನಕ್ಕೆ ಬಂದವರಂತೆ ಮರುದಿನವೇ ಫ್ಯಾಮಿಲಿ ಡಾಕ್ಟರ್‌ರನ್ನು ಭೇಟಿಯಾದರು.

ಅವರಿಗೂ ಅನುಮಾನ ಕಾಡಿತೇನೋ. ಬಯಾಪ್ಸಿ ಸಜೆಸ್ಟ್ ಮಾಡಿ ತಕ್ಷಣ ಲ್ಯಾಬಿಗೆ ಕಳುಹಿಸಿ ಮೂರು-ನಾಲ್ಕು ದಿನಗಳಲ್ಲಿ ರಿಪೋರ್ಟ್ ಬರುತ್ತದೆ ಅಂದರು.

ಅಮ್ಮ ಆ ಮೂರು ದಿನಗಳಲ್ಲಿ, ಅರ್ಧ ಮಾಡಿಟ್ಟ ಕೆಲಸಗಳನ್ನೆಲ್ಲಾ ಮುಗಿಸಲೇ ಬೇಕು ಎನ್ನುವ ಹಟಕ್ಕೆ ಬಿದ್ದವರಂತೆ ಕೆಲಸ ಮಾಡಿದರು.‌ ನಡುವೆ ನನ್ನನ್ನೂ ಅಣ್ಣನನ್ನೂ ಕರೆದು ಕೂರಿಸಿ, ‘ಯಾರ ಹಂಗಿಗೂ ಬೀಳದೆ ಬದುಕಬೇಕೆಂದರೆ ಚೆನ್ನಾಗಿ ಓದಲೇಬೇಕು, ಇನ್ನಾದರೂ ಹುಡುಗಾಟ ಬಿಟ್ಟು ಓದಿ‌ನ ಕಡೆ ಗಮನ ಕೊಡಿ. ನಮ್ಮದೇನಿದ್ದರೂ ಬಿದ್ದು ಹೋಗುವ ಜೀವ, ಬಾಳಿ ಬದುಕಬೇಕಾದವರು ನೀವು, ಕೊನೆಯವರೆಗೂ ಒಬ್ಬರಿಗೊಬ್ಬರು ಆಸರೆಯಾಗಿರಿ. ನಿಮ್ಮಿಂದ ಮತ್ತೊಬ್ಬರಿಗೆ ಉಪಕಾರವಾಗುತ್ತೋ ಬಿಡುತ್ತೋ ಆದರೆ ಅಪಕಾರ ಆಗದಿರುವಂತೆ ನೋಡಿಕೊಳ್ಳಿ’ ಎಂದೆಲ್ಲಾ ಬುದ್ಧಿ ಮಾತು ಹೇಳುತ್ತಿದ್ದರು.

ಡಾಕ್ಟರ್ ಬಯಾಪ್ಸಿ ಮಾಡಿಸಲು ಹೇಳಿದ್ದಕ್ಕೆ ಅಮ್ಮ ಇಷ್ಟು ಗಂಭೀರವಾಗಿಬಿಟ್ಟಿದ್ದಾರೆ, ‘ಅಂಥದ್ದೇನೂ’ ಆಗಿರಲಿಕ್ಕಿಲ್ಲ ಅಂತ ನನಗೆ ಆಗಲೂ ಅನ್ನಿಸುತ್ತಿತ್ತು.

ಆದರೆ ಯಾವಾಗ ಬಯಾಪ್ಸಿ ರಿಪೋರ್ಟು, ಅದು ಕ್ಯಾನ್ಸರ್ ಗಡ್ಡೆಯೇ ಅಂತ ಖಚಿತಪಡಿಸಿತೋ ಕಾಲಡಿಯ ನೆಲವೇ ಕುಸಿದು ಬಿದ್ದಂತಾಯಿತು. ಬದುಕು ನನ್ನನ್ನು ವಿವರಿಸಲಾಗದ ಸಂದಿಗ್ಧ ಸ್ಥಿತಿಗೆ ತಂದು ನಿಲ್ಲಿಸಿತ್ತು. ನನ್ನಿಡೀ ಬದುಕನ್ನು ಗಾಜಿನ ಶೀಶೆಯಲ್ಲಿ ಹಾಕಿ, ಭಯ, ಆತಂಕ, ಸಿಟ್ಟು, ಸಂಕಟ, ವಿಷಾದ, ಅಸಹಾಯಕತೆ... ಎಲ್ಲ ಭಾವಗಳನ್ನು ಒಂದು ಕುಲುಮೆಯಲ್ಲಿ ಕುದಿಸಿ ಬರುವ ಕುದಿಗೆ ಒಡ್ಡಿದಂತೆ ಅನ್ನಿಸುತ್ತಿತ್ತು. ಶೀಶೆ ಒಡೆದು ಚೂರಾಗಿ ದಿಕ್ಕಾಪಾಲಾಗಲು ಎಷ್ಟು ಹೊತ್ತು?

ಆದರೆ ಅಮ್ಮ ಮಾತ್ರ ಒಂದು ದಿವ್ಯ ನಿರ್ಲಿಪ್ತತೆಯನ್ನು ಧರಿಸಿಕೊಂಡು ಏನೂ ಆಗಿಲ್ಲವೆಂಬಂತೆ ಹೆಚ್ಚಿನ ಪರೀಕ್ಷೆ ಮಾಡಿಸಿಕೊಳ್ಳಲು ನಗರದ ಆಸ್ಪತ್ರೆಯಲ್ಲಿ ದಾಖಲಾದರು. ಬಯಾಪ್ಸಿ ರಿಪೋರ್ಟ್ ಪರಿಶೀಲಿಸಿದ ವೈದ್ಯರು ಒಂದು ಸ್ತನವನ್ನು ಕತ್ತರಿಸಿ ತೆಗೆಯುವ ತೀರ್ಮಾನಕ್ಕೆ ಬಂದರು. ಆ ತೀರ್ಮಾನವನ್ನು ತಡಬಡಾಯಿಸುತ್ತಲೇ ಅಮ್ಮನಿಗೂ ತಿಳಿಸಿದರು. ಏನೊಂದೂ ಯೋಚಿಸದ ಅಮ್ಮ ಯಾವ ತಕರಾರೂ ಮಾಡದೆ ಅವರ ತೀರ್ಮಾನಕ್ಕೆ ಒಪ್ಪಿಗೆ ಕೊಟ್ಟರು.

ಆ ಕ್ಷಣಕ್ಕೆ ಯಾವ ಭಾವಗಳು ಅವರ ಮನಸ್ಸಲ್ಲಿ ಓಡಾಡುತ್ತಿದ್ದವು? ಯಾವ ತುಮುಲಗಳು ತಣ್ಣನೆ ಹೊಯ್ದಾಡುತ್ತಿದ್ದವು? ಯಾವ ತಲ್ಲಣಗಳನ್ನು ಅದುಮಿಡಲು ಅವರು ಪ್ರಯತ್ನಿಸುತ್ತಿದ್ದರು? ಯಾವ ಯೋಚನೆಗಳು ಮೇಲುಗೈ ಸಾಧಿಸುತ್ತಿದ್ದವು? ತಾನು ಬದುಕಲೇಬೇಕು ಅನಿಸುತ್ತಿತ್ತಾ? ಸರ್ಜರಿ ಒಂದು ಮುಗಿದುಬಿಟ್ಟರೆ ಸಾವಿನಿಂದ ತಪ್ಪಿಸಿಕೊಳ್ಳುತ್ತೇನೆ ಅನಿಸಿತಾ? ಅಥವಾ ಮಕ್ಕಳಿಬ್ಬರು ಅನಾಥರಾಗದೇ ಇರಬೇಕೆಂದರೆ ಇಂಥದ್ದೊಂದು ಹೆಜ್ಜೆ ಇಡುವುದು ಅನಿವಾರ್ಯ ಅನಿಸಿತಾ? ಹುಟ್ಟಿನೊಂದಿಗೇ ತನ್ನೊಂದಿಗಿದ್ದ, ಹೆಣ್ತನದ ಅಸ್ತಿತ್ವ ಅನಿಸಿದ, ಮಕ್ಕಳೊಂದಿಗಿನ ಕರುಳು ಬಳ್ಳಿ ಸಂಬಂಧಕ್ಕೆ ಸಾಕ್ಷಿಯಾಗಿದ್ದ ತನ್ನ ದೇಹದ ಒಂದು ಅಂಗವನ್ನು ಅದರ ಸಣ್ಣದೊಂದು ಸಾಕ್ಷ್ಯವೂ ಉಳಿಯದಂತೆ ಕತ್ತರಿಸಿ ತೆಗೆಯಬೇಕಾಗುತ್ತದೆ ಅಂದಾಗಲೂ ಎದೆಗುಂದದ ಅಥವಾ ಎದೆಗುಂದದಂತೆ ನಟಿಸಿದ ಅಮ್ಮನ ಅಂತರಾಳದ ಉಬ್ಬರವಿಳಿತಗಳಿಗೆ ಯಾವ ಕಡಲಿನ ರಭಸ ಸಾಟಿಯಾದೀತು? ನನ್ನ ಕಲ್ಪನೆಗೂ ನಿಲುಕದು.

ಅಮ್ಮ ಒಂದು ಹನಿ ಕಣ್ಣೀರೂ ಹಾಕದೆ, ವಿದಾಯದ ಮಾತುಗಳನ್ನೊಂದೂ ಆಡದೆ, ಪುಟ್ಟ ಮಗುವೊಂದು ಮೊದಲ ದಿನ ಶಾಲೆಗೆ ಹೋದಂತೆ ಒ.ಟಿ. ಒಳಗೆ ನಡೆದುಕೊಂಡು ಹೋಗುತ್ತಿದ್ದರೆ ನನ್ನ ಮೈಯಲ್ಲಿಡೀ ಸಣ್ಣ ನಡುಕ. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ‌ ಶಸ್ತ್ರಚಿಕಿತ್ಸೆ ನಡೆದು ಪೋಸ್ಟ್ ಆಪರೇಶನ್ ವಾರ್ಡ್‌ಗೆ ಕರೆತರಲಾಯಿತು. ಅಮ್ಮನನ್ನು ನೋಡಲೆಂದು ಹೋದರೆ ಹಸಿರು ವಸ್ತ್ರ ಉಟ್ಟು ಮಲಗಿದ್ದ ಅಮ್ಮ ಅರೆಬರೆ ಎಚ್ಚರದ ಸ್ಥಿತಿಯಲ್ಲಿಯೇ ಸಣ್ಣಗೆ ನಗುತ್ತಿದ್ದರು. ನಿನ್ನೆ ಮೊನ್ನೆಯವರೆಗೂ ಚುರುಕಾಗಿ ಓಡಾಡಿಕೊಂಡಿದ್ದ, ಸಮಯಕ್ಕೆ ಸರಿಯಾಗಿ ಅಜ್ಜನಿಗೆ ಮೆಡಿಸಿನ್ ಕೊಡುತ್ತಿದ್ದ, ಒಂದು ದಿನವೂ ತಪ್ಪಿಸದೆ ಪಕ್ಕದ ಮನೆಯ ದನಕ್ಕೆ ಅಕ್ಕಚ್ಚಿ ಇಡುತ್ತಿದ್ದ ಅಮ್ಮ ಹಗಲು ಯಾವುದು ರಾತ್ರಿ ಯಾವುದು ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿದ್ದುದನ್ನು ನೋಡುವಾಗ ಕರುಳು ಕಿವುಚಿದಂತಾಗುತ್ತಿತ್ತು.

ಆದರೆ ಕ್ಯಾನ್ಸರ್ ಎಂಬ ದಿಗ್ಭ್ರಾಂತಿ ಎಂದರೆ ಏನೆಂದು ನಮಗೆ ಸರಿಯಾಗಿ ಅರ್ಥ ಆದದ್ದು ಕಿಮೋಥೆರಪಿ ಶುರು ಮಾಡಿದ ಮೇಲಷ್ಟೇ. ಆಪರೇಶನ್ ಆದ ಮೇಲೂ ಗೆಲುವಾಗಿಯೇ ಇದ್ದ, ಬದುಕನ್ನು ಬಂದಂತೆ ಸ್ವೀಕರಿಸುವ ಪಣ ತೊಟ್ಟ ಅಮ್ಮ ಸುಸ್ತಾದಂತೆ ಕಾಣುತ್ತಲೇ ಇರಲಿಲ್ಲ. ಆದರೆ ಒಮ್ಮೆ ಕಿಮೋಥೆರಪಿ ಶುರುವಾಯಿತು ನೋಡಿ, ಅಮ್ಮ ಪೂರ್ತಿ ಇಳಿದುಹೋದರು. ಕಿಮೋದ ಮೊದಲ ಡ್ರಾಪ್ ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ಮಹಾನ್ ಸಂಯಮಿ ಅಮ್ಮನ ಕಣ್ಣಲ್ಲೂ ತೆಳು ನೀರು. ಅಷ್ಟು ಹೊತ್ತು ಮಕ್ಕಳಿಗಾಗಿ ಜೀವ ಕೈಯಲ್ಲಿ ಹಿಡಿದುಕೊಂಡಾದರೂ ಬದುಕುತ್ತೇನೆ ಅನ್ನುತ್ತಿದ್ದ ಅವರು ಪೂರ್ತಿ ಕುಸಿದು ಹೋದರು. ಒಂದೊಂದು ಹನಿ ಕಿಮೋ ದೇಹ ಪ್ರವೇಶವಾಗುತ್ತಿದ್ದಂತೆ ಹೆಚ್ಚುತ್ತಿದ್ದ ಅಮ್ಮನ ಸಂಕಟ ನೋಡಲಾಗುತ್ತಿರಲಿಲ್ಲ. ಇಡೀ ದೇಹ ರಕ್ತವೇ ಇಲ್ಲದಂತೆ ಬಿಳಿಚಿಕೊಂಡಿತು, ಹಿಂದೆ ಮಾತಾಡುತ್ತಿದ್ದುದು ಮರೆತೇ ಹೋಗಿದೆಯೇನೋ ಎಂಬಂತೆ ಗಂಟಲಿನಿಂದ ಒಂದು ಶಬ್ಧವೂ ಹೊರಬರುತ್ತಿರಲಿಲ್ಲ, ನಿಸ್ತೇಜ ಕಣ್ಣುಗಳು, ಸ್ವಲ್ಪವೂ ಚಲಿಸದ ಕೈ ಬೆರಳುಗಳು... ಹತ್ತು ಬಾರಿ ಕರೆದರೆ ಒಮ್ಮೆ ಕ್ಷೀಣವಾಗಿ ‘ಹೂಂ’ ಅನ್ನುತ್ತಿದ್ದರು.

ಆಸ್ಪತ್ರೆಯ ಕಾರಿಡಾರುಗಳಲ್ಲಿನ ವಿಚಿತ್ರ ಮೌನ, ಒಂದು ಸಣ್ಣ ಸದ್ದಾದರೂ ಯಾರದೋ ಬದುಕು ಮುಗಿದೇ ಹೋಗುತ್ತದೆಯೇನೋ ಅನ್ನುವ ಭೀತಿ, ಗೋಡೆಗಳ ಬಿಕ್ಕಳಿಕೆ, ದಿಗಿಲು ಹುಟ್ಟಿಸುವ ಶವಾಗಾರ, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮವರಿಗೆ ಗೊತ್ತಾಗದ ಹಾಗೆ ತಣ್ಣಗೆ ನರಳುವ ರೋಗಿಗಳು. ಆಸ್ಪತ್ರೆಗಳ ಕಿಟಕಿ, ಬಾಗಿಲುಗಳಲ್ಲಿ ಜೀಕುವ ಬದುಕಿನ‌ ಪಾಠಗಳನ್ನು ಪ್ರಪಂಚದ ಯಾವ ಯುನಿವರ್ಸಿಟಿಗಳೂ ಕಲಿಸಲಾರವು‌. ಅಮ್ಮನ ಕಿಮೋಥೆರಪಿಯ ನಾಲ್ಕನೇ ಸೈಕಲ್ಲಿನಲ್ಲಿರುವಾಗ ಒಮ್ಮೆ ತೀರಾ ಬಾಯಾರಿತೆಂದು ಕುಡಿದ ಒಂದು ಚಮಚ ನೀರೂ ವಾಂತಿಯಾಗಿ ಹೋದಾಗ ನಾನು ಸಂಕಟ ತಡೆಯಲಾರದೆ ‘ನಿಮಗೇ ಯಾಕೆ ಹೀಗಾಯಿತು?’ ಎಂದು ಕೇಳಿದ್ದೆ.

ಆಗೊಂದು ಅಕ್ಷರವೂ ಮಾತಾಡದ ಅಮ್ಮ ಕಿಮೋಥೆರಪಿಯ ಕೊನೆಯ ಸೈಕಲ್ ಮುಗಿದ ಮೇಲೆ ನನ್ನ ಕೈ ಹಿಡಿದು ಇಡೀ ಕ್ಯಾನ್ಸರ್ ವಾರ್ಡಿಗೊಂದು ಸುತ್ತು ಹಾಕಿ, ಜೀವನ್ಮರಣದ ಹೋರಾಟದಲ್ಲಿ ಈಗಲೋ ಆಗಲೋ ಎಂಬಂತಿದ್ದವರು, ಕ್ಯಾನ್ಸರ್‌ನಿಂದಾಗಿ ಎರಡೂ ಕಣ್ಣುಗಳನ್ನು ಕಳೆದುಕೊಂಡವರು, ನಾಲಗೆಯ ಕ್ಯಾನ್ಸರ್ ಪೀಡಿತ ಇಪ್ಪತ್ತರ ಯುವಕ, ಕ್ಯಾನ್ಸರ್ ಜೊತೆ ಜೊತೆಗೆ ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿರುವ ರೋಗಿ... ಹೀಗೆ ಎಲ್ಲರನ್ನೂ ಮಾತಾಡಿಸಿದರು. ಅಲ್ಲಿಂದ ಹೊರಬರುವಾಗ ಉಸಿರುಗಟ್ಟಿ ನಾನು ಸತ್ತೇಹೋಗುವೆನೋ ಅನ್ನಿಸುತ್ತಿತ್ತು. ಅಮ್ಮ ನಿಧಾನವಾಗಿ ನನ್ನ ಹೆಗಲು ಬಳಸಿ ಅಲ್ಲೇ ಇದ್ದ ಬೆಂಚ್ ಮೇಲೆ ಕೂರಿಸಿ ‘ನನಗೇ ಯಾಕೆ ಹೀಗಾಯ್ತು ಅಂತ ಕೇಳಿದ್ಯಲ್ಲಾ, ಈಗ ಹೇಳು ನಿನ್ನಮ್ಮನಿಗೆ ಮಾತ್ರ ಯಾಕೆ ಕ್ಯಾನ್ಸರ್ ಮೊದಲನೇ ಹಂತದಲ್ಲೇ ಗೊತ್ತಾಯ್ತು? ರೇಡಿಯೋ ಥೆರಪಿ ಇಲ್ಲದೆ ಕಿಮೋಥೆರಪಿಯಲ್ಲೇ ಚಿಕಿತ್ಸೆ ಮುಗಿದು ಹೋಯಿತು? ಕೇವಲ 10 ಎಂ.ಜಿ.ಯ ಮಾತ್ರೆ ಮಾತ್ರ ತೆಗೆದುಕೊಳ್ಳುವಂತಾಯಿತು? ಹದಿನಾರು ವರ್ಷಕ್ಕೇ ಪೋಸ್ಟ್ ಆಪರೇಶನ್ ಥಿಯೇಟರ್‌ನಲ್ಲಿ ಕ್ಯಾನ್ಸರ್ ಬಾಧಿತ ಅಮ್ಮನನ್ನು ಸಂಭಾಳಿಸುವಷ್ಟು ಪ್ರಬುದ್ಧ ಮಗಳು ನನಗೇ ಯಾಕೆ ಹುಟ್ಟಿದ್ಳು? ಬದುಕೆಂದರೆ ಇಷ್ಟೇ ಮಗಳೇ, ‘ನನಗೇ ಯಾಕೆ’ ಅಂತ ಪ್ರಶ್ನೆ ಮಾಡುತ್ತಾ ಹೋದರೆ ಜೀವನ ಬರಿ ಪ್ರಶ್ನೆಗಳದೇ ಆಡುಂಬೊಲವಾಗುತ್ತದೆ, ಕಣ್ಣೆದುರೇ ಉತ್ತರ ಇದ್ದರೂ ಅದನ್ನು ದಕ್ಕಿಸಿಕೊಳ್ಳಲಾಗುವುದಿಲ್ಲ. ಪ್ರಶ್ನೆಗಳ ಗೋಜಲುಗಳಿಂದ ತಪ್ಪಿಸಿಕೊಂಡುಒಮ್ಮೆ ಹೊರಬಂದರೆ ಬದುಕು ಎಷ್ಟು ಸರಳ ಅಂತ ಅನ್ನಿಸುತ್ತದೆ. ಈಗ ನೀನೇ ಹೇಳು, ಈಗಲೂ ನಿನಗೆ ಅದೇ ಪ್ರಶ್ನೆ ಕೇಳಬೇಕೆನಿಸುತ್ತಿದೆಯಾ ಅಥವಾ ಇಷ್ಟಕ್ಕೇ ಮುಗಿದು ಹೋಯ್ತಲ್ಲಾ ಅಂತ ಖುದಾನಿಗೊಂದು ಕೃತಜ್ಞತೆ ಸಲ್ಲಿಸಬೇಕನ್ನಿಸುತ್ತದಾ?’ ಎಂದು ಕೇಳಿದರು‌. ನಾನು ಮೌನವಾಗಿ ತಲೆಯಾಡಿಸಿದೆ. ದೂರದಲ್ಲಿ ಮಸೀದಿ ಮಿನಾರದಿಂದ ಮಗ್ರಿಬ್ ಬಾಂಗ್ ಮೊಳಗುವ ಶಬ್ದ ಅಸ್ಪಷ್ಟವಾಗಿ ಕೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT