ಡಾ. ಯು.ಆರ್. ಅನಂತಮೂರ್ತಿಯವರು ತೀರಿಕೊಂಡು ಹತ್ತನೇ ವರುಷವಿದು (21-12-1932 ರಿಂದ 22-08-2014) ಎರಡು ವರುಷಗಳ ಕಾಲ ನಾನು ಅವರ ನೇರ ವಿದ್ಯಾರ್ಥಿ. ನಮಗೆಲ್ಲರಿಗೂ ಅವರು ಮೇಷ್ಟ್ರು. ಅದಕ್ಕೆ ಮೂರು ವರುಷ ಮುಂಚಿತವಾಗಿ 1975ರಲ್ಲಿ ಅವರೊಡನೆ ಮೊದಲ ಸಲ ಮಾತನಾಡಿದ್ದು. ಅಂದಿನಿಂದ 2014ರಲ್ಲಿ ಅವರು ತೀರಿಕೊಳ್ಳುವವರೆಗೆ ನನಗೆ ನಿರಂತರವಾಗಿ ಅವರ ಮನೆಯೊಳ ಹೊರಗೆ ಒಡನಾಟವಿತ್ತು. ಈ ವರುಷ ಅವರ ಹುಟ್ಟಿದ ದಿನ ಡಿಸೆಂಬರ್ 21ರಂದು ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಪ್ರಸಿದ್ಧ ವಿಮರ್ಶಕ ವಿದ್ವಾಂಸ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪ್ರೊ. ಹರೀಶ್ ತ್ರಿವೇದಿಯವರು “How (not) Write the History of Indian Literature” ಎಂಬ ವಿಷಯದ ಕುರಿತು ಡಾ.ಅನಂತಮೂರ್ತಿ ನೆನಪಿನ ಉಪನ್ಯಾಸ ನೀಡಿದರು. ಇದು ಹತ್ತನೇ ಅನಂತಮೂರ್ತಿ ಮೆಮೋರಿಯಲ್ ಲೆಕ್ಚರ್. ಈ ಮೊದಲು ಸಂಗೀತ ವಿದ್ವಾಂಸ ಟಿ.ಎಂ. ಕೃಷ್ಣ, ಸಫಾಯಿ ಕರ್ಮಚಾರಿಗಳ ಆಂದೋಲನದ ಬೆಝವಾಡ ವಿಲ್ಸನ್ ಮೊದಲಾದವರು ಅನಂತಮೂರ್ತಿ ನೆನಪಿನ ಉಪನ್ಯಾಸಗಳನ್ನು ನೀಡಿದ್ದರು.

ಈ ಹತ್ತನೇ ವಿಶೇಷ ಉಪನ್ಯಾಸದ ಪೀಠಿಕೆಯಲ್ಲಿ ಡಾ.ಹರೀಶ್ ತ್ರಿವೇದಿಯವರು 1980ರ ದಶಕದಿಂದ ಅನಂತಮೂರ್ತಿಯವರೊಡನಿದ್ದ ಸ್ನೇಹ ಸಂಬಂಧದ ಕೆಲವಾರು ನೆನಪುಗಳನ್ನು ಹಂಚಿಕೊಂಡರು. ಆಗ 1980ನೇ ಮೇ ತಿಂಗಳ 20 ರಂದು ಪ್ಯಾರಿಸ್ನಿಂದ ಮೇಷ್ಟ್ರು ನನ್ನ ಸಂಪಾಜೆಯ ಹಳ್ಳಿಮನೆಗೆ ಬರೆದೊಂದು ಪುಟ್ಟ ಪತ್ರದ ನೆನಪಾಯಿತು. ಅದು ಪ್ಯಾರಿಸ್ನ ಲ್ಯೂರೆ ಮ್ಯೂಸಿಯಮ್ನಲ್ಲಿರುವ ಲಿಯೊನಾರ್ಡ್ ಡ ವಿಂಚಿಯ ಮೊನಾಲಿಸಾ ಚಿತ್ರ ಅಚ್ಚಾಗಿರುವ ಪ್ರವಾಸಿ ಪೋಸ್ಟು ಕಾರ್ಡು ಒಂದರ ಹಿಂಭಾಗದಲ್ಲಿ ಬರೆದು ಫ್ರಾನ್ಸ್ನಲ್ಲಿ ಅಂಚೆಗೆ ಹಾಕಿದ್ದ ಪತ್ರ.

ಮೇಷ್ಟ್ರು ಆ ಪತ್ರದಲ್ಲಿ ಹೀಗೆ ಬರೆದಿದ್ದರು : “ಪ್ರಿಯ ವಿಜಯಶಂಕರ್, ಮೂರು ದೇಶಗಳ ನೀರು ಕುಡಿದು ಇಲ್ಲಿಗೆ ಬಂದಿರುವೆ. ಸುಸ್ತಾಗಿದೆ. ಕಣ್ಣು ಕಿವಿ ಮನಸ್ಸುಗಳು ಯಥೇಚ್ಛ ಈ ದೇಶಗಳಲ್ಲಿ ಮಿಂದಿವೆ. ನೋಡಿದ್ದು, ಪಡೆದದ್ದು ಮನಸ್ಸಲ್ಲಿ ಕಲಸಿ ಹೋಗಿವೆ. ಊರಿಗೆ ಬಂದು ಮೆಲುಕು ಹಾಕಿ ಸ್ಪಷ್ಟ ಪಡಿಸಿಕೊಳ್ಳಬೇಕು. ನೀನು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರಬೇಕು. ಈ ೨ ವರ್ಷಗಳ ಕಾಲ ನೀನು ಬೆಳೆದು ಪಕ್ವವಾದ ಕ್ರಮ ನನ್ನನ್ನು ತುಂಬ ಸುಖಿಯಾಗಿ ಮಾಡಿದೆ. ನಿನಗೆ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸುವೆ. ತಂದೆಗೆ, ತಾಯಿಗೆ, ಸೋದರರಿಗೆ, ಸೋದರಿಗೆ ನನ್ನ ಪ್ರೀತಿಯ ನೆನಪುಗಳು, ಅನಂತಮೂರ್ತಿ.”

ಅದು ನಾನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. (ಇಂಗ್ಲಿಷ್) ಮುಗಿಸಿದ ವರುಷ. ಆ ಮೊದಲೆ ಉಡುಪಿಯಿಂದ ಮೈಸೂರಿಗೆ ಹಿಂತಿರುಗುವಾಗ ಕುಟುಂಬ ಸಮೇತ ಅವರು ಸಂಪಾಜೆಯ ನಮ್ಮ ಹಳ್ಳಿಮನೆಗೆ ಬಂದಿದ್ದರು. ಅದಾಗಿ ವರುಷ ಎರಡು ಕಳೆದಿದ್ದರೂ ಅವರಿಗೆ ನಮ್ಮ ಮನೆಯವರೆಲ್ಲರ ನೆನಪಿತ್ತು. ಪ್ಯಾರಿಸ್ನಿಂದ ಬರೆಯುವ ಒಂದು ಪುಟ್ಟ ಪತ್ರದಲ್ಲೂ ಹೀಗೆ ಬೆಚ್ಚಗಿನ ಪ್ರೀತಿಯನ್ನು ಹಂಚಿಕೊಳ್ಳುವ ಅವರ ಮಾತಿನಲ್ಲಿ ಎಂತಹ ಕಕ್ಕುಲತೆ ಇರುತ್ತಿತ್ತೆಂಬುದನ್ನು ಊಹಿಸಬಹುದು.

ಇದಾಗಿ ಸುಮಾರು ಎರಡು ದಶಕಗಳೇ ಆಗಿರಬೇಕು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟರಾಜ ಹುಳಿಯಾರ್ ಅವರ ಶೇಕ್ಸ್ಪಿಯರ್ ಮನೆಗೆ ಬಂದ ನಾಟಕ ಪ್ರದರ್ಶನ. ನಮ್ಮ ಹಳ್ಳಿಯಿಂದ ಬಂದಿದ್ದ ತಂದೆ, ತಾಯಿಯರ ಜೊತೆ ಮನೆಯವರೆಲ್ಲಾ ನಾಟಕಕ್ಕೆ ಹೋಗಿದ್ದೆವು. ಆಕಸ್ಮಿಕವಾಗಿ ನಮಗೆ ಮೇಷ್ಟ್ರು ಮತ್ತು ಎಸ್ತರ್ ಮೇಡಂ ಕುಳಿತ ನೇರ ಹಿಂದಿನ ಸಾಲಿನಲ್ಲೆ ಸೀಟು ಸಿಕ್ಕಿತ್ತು. ನನ್ನ ತಂದೆಯವರ ಬಳಿ ಮೇಷ್ಟ್ರು ಆತ್ಮೀಯವಾಗಿ ಮಾತನಾಡಿದರು. ಆಗ ಪ್ರಕಟವಾಗಿದ್ದ ಸಂಕಲನದ ಕೊನೆಯ ಕತೆ 'ಜರತ್ಕಾರು' ಕಳೆದ ತಿಂಗಳು ಓದಿ ಮುಗಿಸಿದೆ ಎಂದು ತಂದೆಯವರು ಹೇಳಿದಾಗ ಮೇಷ್ಟ್ರು ತಂದೆಯವರು ಇನ್ನೂ ಓದುವ ಆಸಕ್ತಿ ಉಳಿಸಿಕೊಂಡ ಬಗ್ಗೆ ಸಂತೋಷ ಪಟ್ಟರು. ಡಿಸೆಂಬರ್ ತಿಂಗಳು 21 ರಂದು ನಿಮ್ಮ ಹುಟ್ಟಿದ ದಿನ. ಆ ದಿನ ನಿಮ್ಮನ್ನು ಕಾಣುವ ಅವಕಾಶವಿಲ್ಲ. ಹಾಗಾಗಿ ಎರಡು ವಾರ ಮುಂಚಿತವಾಗಿ ಶುಭಾಶಯಗಳು ಎಂದು ತಂದೆಯವರು ಹೇಳಿದಾಗ ಮೇಷ್ಟ್ರಿಗೆ ಆಶ್ಚರ್ಯ. ಕೆಲವು ದಿನಗಳ ಬಳಿಕ ಕಂಡಾಗ, 'ನಿನ್ನ ತಂದೆಯವರು ನನ್ನ ಕತೆ ಓದಿದ್ದು ಮಾತ್ರವಲ್ಲ, ಹುಟ್ಟಿನ ದಿನವನ್ನು ನೆನಪಿಟ್ಟುಕೊಂಡು ವಿಶ್ ಮಾಡಿದರು ಎಂದಿದ್ದರು. ಅಪ್ಪ, ಕುವೆಂಪು, ಅನಂತಮೂರ್ತಿ ಇಬ್ಬರೂ ಡಿಸೆಂಬರ್ ತಿಂಗಳಲ್ಲಿ ಜನಿಸಿದವರು ಎಂದು ಹೇಳುತ್ತಿರುತ್ತಾರೆ. ಅವರು ಕಾರಂತರ ಅನುಯಾಯಿ. ಕುವೆಂಪು ಅಭಿಮಾನಿ ಎಂದು ಮಾತ್ರ ಹೇಳಿದೆ. ಅವರಿಗೆ ಮೇಷ್ಟ್ರ ಹುಟ್ಟಿದ ದಿನ ಮರೆಯುವಂತಿರಲಿಲ್ಲ. ಅದಕ್ಕೊಂದು ಕಾರಣವೂ ಇತ್ತು.

ನನ್ನ ಹೆಂಡತಿ, ಮಕ್ಕಳಿಗೆಲ್ಲಾ ಅನಂತಮೂರ್ತಿಯವರನ್ನು ಕಂಡು ಮಾತನಾಡಿ ಪರಿಚಯ. ನನ್ನ ಮಗಳು ಶುಭ ಚಿಕ್ಕವಳಾಗಿದ್ದಾಗ ಒಂದು ಸಲ ಅನಂತಮೂರ್ತಿಯವರನ್ನು ಕೇಳಿದಳು : ನನ್ನ ಅಪ್ಪ ಪ್ರತಿ ಡಿಸೆಂಬರ್ 21 ರಂದು ಬೆಳಿಗ್ಗೆ ನಿಮಗೆ ಹ್ಯಾಪಿ ಬರ್ತ್ ಡೇ ಎಂದು ವಿಶ್ ಮಾಡುತ್ತಾರೆ. ನನ್ನ ಅಪ್ಪನ ಬರ್ತ ಡೇ ಕೂಡಾ ಡಿಸೆಂಬರ್ 21. ಆದರೆ ನೀವು ಯಾಕೆ ಅಪ್ಪನಿಗೆ ವಿಶ್ ಮಾಡಲ್ಲ. ಎಳೆ ಮನಸ್ಸಿಗೆ ಹುಟ್ಟಿದ ಹಬ್ಬ ದೊಡ್ಡ ವಿಷಯ. ನನಗೂ ಮೇಷ್ಟ್ರಿಗೂ - ಇಬ್ಬರಿಗೂ ಅವಳ ಪ್ರಶ್ನೆ ಅನಿರೀಕ್ಷಿತ. ತಕ್ಷಣ ಮೇಷ್ಟ್ರು ನೀನು ಹೇಳೋದು ಸರಿ ಶುಭ ಎಂದು ಹೇಳಿ ನನ್ನ ಬೆನ್ನ ಹಿಂದಿಂದ ಬಲತೋಳಿಗೆ ಕೈ ಹಾಕಿ ಹತ್ತಿರ ಎಳಕೊಂಡು, ಮಾತು ಮುಂದುವರೆಸಿ, 'ಮುಂದಿನ ಸಲದಿಂದ ನಿನ್ನ ಅಪ್ಪನಿಗೆ ವಿಶ್ ಮಾಡುತ್ತೇನೆ' ಎಂದರು. ನನ್ನ ಮಗಳು ಖುಶಿಯಾಗಿ ಥ್ಯಾಂಕ್ಯೂ ಎಂದು ನಕ್ಕಳು. ತಕ್ಷಣ ಮೇಷ್ಟ್ರು ಅವಳ ಗಲ್ಲವನ್ನು ಮೆಲ್ಲಗೆ ಮುದ್ದಿನಿಂದ ತಟ್ಟಿ , ಜಾಣೆ, ಅಪ್ಪ ವಿಶ್ ಮಾಡುವಾಗ ನಾನು ವಿಶ್ ಮಾಡದಿದ್ದರೆ ತಪ್ಪಲ್ವ ಎಂದರು. ಮಗಳು ಶುಭ ಹೌದೆಂದು ತಲೆ ಮೇಲೆ ಕೆಳಗೆ ಮಾಡಿದಾಗ ಅವರೂ ನಕ್ಕರು. ಅವರ ಗಂಭೀರ ವೈಚಾರಿಕ ಪ್ರಜ್ಞೆ ನಮಗೆಲ್ಲಾ ತಿಳಿದಿದೆ. ಭಿನ್ನ ಸಂದರ್ಭಗಳಲ್ಲಿ ಅವರು ಹೇಗೆ ಇರುತ್ತಾರೆಂಬುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ವಿಚಾರ ಹೇಳಿದೆ.

ಡಾ. ಕೆ.ವಿ. ತಿರುಮಲೇಶ್ ಅವರ 'ಅನಂತಮೂರ್ತಿಗೆ' ಎಂಬೊಂದು ಕವನವಿದೆ. (ನೋಡಿ : 'ಅಪ್ರಮೇಯ' ಸಂಕಲನ) ಅವರ ನಿರ್ವ್ಯಾಜ ಮನುಷ್ಯ ಪ್ರೀತಿಯನ್ನೂ, ಕಕ್ಕುಲತೆಯನ್ನು ಮತ್ತು ಅಸ್ತಿತ್ವವಾದದ ತಾತ್ವಿಕತೆ ಬಗ್ಗೆ ಅವರು ಹೇಳುತ್ತಾರೆ :

ಕಕ್ಕುಲತೆ ನಿಮಗೆ ಪ್ರಿಯವಾದ ಶಬ್ದ

ಅದು ನಿಸ್ವಾರ್ಥ ಪ್ರೇಮ

ನಿಸ್ವಾರ್ಥ ಅಂದೆನೇ, ನಿರ್ವ್ಯಾಜವೂ ಹೌದು. ನಿಷ್ಕಾರಣವೆಂಬ

ಜಗತ್ತೊಂದು ಇದೆಯೆಂದು ನಿಮ್ಮನ್ನು

ಓದಿ ತಿಳಿದವರೆ ಹೆಚ್ಚು.

15 ಭಾಗಗಳಲ್ಲಿರುವ ತಿರುಮಲೇಶರ ಈ ಕವನ, ಅನಂತಮೂರ್ತಿಯವರ ವ್ಯಕ್ತಿತ್ವ, ಚಿಂತನಾ ಕ್ರಮ ಹಾಗೂ ಅವರ ಸಾಹಿತ್ಯದ ಹಲವು ಮಗ್ಗುಲುಗಳನ್ನು ಕಾಣಿಸುತ್ತದೆ. ಅನಂತಮೂರ್ತಿ ಇಡಿಯಾಗಿ ಮಣ್ಣಿಂದ ಮಾಡಿದ ಮೃತ್ತಿಕಾ ಮೂರ್ತಿ. ನೀರಿಗಿಳಿಸಿದಾಗ ಇಡಿಯಾಗಿ ಕರಗಿ ಎದ್ದಾಗ ಮತ್ತೆ ಕೂಡಿಕೊಳ್ಳುವ ಶಕ್ತಿ. ಹೇಗೆಂದರೆ, ಕವನ ಹೇಳುತ್ತದೆ:

ಅನಂತಮೂರ್ತಿ ಕರಗುತ್ತಿದ್ದರು ಪ್ರತಿ ಕತೆಯಲ್ಲಿ ಕೃತಿಯಲ್ಲಿ

ಅನಂತರ ಮೂಡಿಬರುತ್ತಿದ್ದರು ಇಡೀ ಮೂರ್ತಿಯಾಗಿ ಪುನಃ

ಕರಗುವ ಕಾತರದಲ್ಲಿ. ಕರಗಬೇಕಯ್ಯ ಮನುಷ್ಯ ಎಂದು ನನ್ನ

ಕಿವಿಯಲ್ಲಿ ಅವರು ಯಾವತ್ತೂ ಮೊಳಗುತ್ತಿದ್ದಂತೆ ಅನಿಸುತ್ತಿತ್ತು.

ಅನಂತಮೂರ್ತಿಯವರ ಎಡಪಂಥೀಯ ನಿಲುವಿನ ಡಯಲೆಕ್ಟಿಕ್ಸ್ಗೆ ಎದುರಾಗಿ ಮಹಾ ಎಗ್ಸಿಸ್ಟನ್ಶಿಯಲಿಸ್ಟ್, ದೋಸ್ತೊವ್ಸ್ಕಿ ಡಯಲೆಕ್ಟಿಕ್ಸ್ ತ್ಯಜಿಸಿ ಟ್ರಯಲಿಕ್ಟಿಟ್ಸ್ ತಗೊಂಡ; ಡಿಮಿಟ್ರಿ, ಐವಾನ್ ಮತ್ತು ಅಲ್ಯೋಶ ಪಾತ್ರಗಳ ಹಿನ್ನೆಲೆಯಲ್ಲಿ; ಈ ಮಾತುಗಳನ್ನು ಕವನ ಹೇಳುತ್ತದೆ.

ಅವಸ್ಥೆ ಕಾದಂಬರಿಯಲ್ಲಿ ವ್ಯಕ್ತಿಯಾಗಿ ಮನುಷ್ಯನಿಗೆ ಕೊನೆಯುಂಟು, ಮನುಷ್ಯಾವಸ್ಥೆಗೆ ಇಲ್ಲ. ರ್ಯಾಶನಾಲಿಟಿ ಹಿಂದೆ, ಇರ್ಯಾಶನಾಲಿಟಿ ಯಾವಾಗಲೂ ಅದರ ನೆರಳಿನಂತಿರುತ್ತದೆ. ಭಾರತೀಪುರದಲ್ಲಿ ಗಣೇಶ, ಕರಮಝೋವ್ನಲ್ಲಿ ಸ್ಮೆರ್ಡಕೋವ್, ಪ್ರತಿಯೊಂದು ಊರಿಗೂ ಒಬ್ಬ ಖೂಳನೊ ಬೋಳನೊ ಆದ ಈಡಿಯಟ್ನಂತೆ, ಅವನು ಅತಿ ಫಿಲಾಸಫಿಕಲ್ ಇರಬಹುದು ಅಥವಾ ಏನೂ ತಿಳಿಯದ ಪೆದ್ದನಿರಬಹುದು. ಈ ರ್ಯಾಶನಾಲಿಟಿಗೆ ಇರ್ಯಾಶನಾಲಿಟಿ ಒಡ್ಡಿದ ಸವಾಲಿನಂತೆ ಯಾಕೆ ಒಬ್ಬನಿರುತ್ತಾನೆ ಎಂಬುದು ತಿರುಮಲೇಶರನ್ನು ಅನಂತಮೂರ್ತಿ ಸಾಹಿತ್ಯ ಸಂದರ್ಭದಲ್ಲಿ ಕಾಡಿದೆ.

ಅನಂತಮೂರ್ತಿಯವರ ಇಂತಹ ಸಂಕೀರ್ಣ ಚಿಂತನಾ ಕ್ರಮ ಕಾಲಕ್ರಮೇಣ ಅವರ ವಿಮರ್ಶೆಯಲ್ಲೂ ಹೆಚ್ಚು ರೂಪಕಗಳನ್ನು ಬಳಸತೊಡಗಿತು. ಅವರ ಒಂದು ಸಂದರ್ಶನದಲ್ಲಿ (ನೋಡಿ : 'ವಸುಧಾ ವಲಯ' - ವಿಮರ್ಶಾ ಸಂಕಲನ - ಲೇ. ಎಸ್.ಆರ್. ವಿಜಯಶಂಕರ) ನಿಮ್ಮ ಸೃಜನಶೀಲ ಬರವಣಿಗೆಯ ರೂಪಕ ಕ್ರಮವನ್ನು ಮುಂದುವರೆಸಿದಂತೆ ವಿಮರ್ಶೆ, ವಿಚಾರ ಸಾಹಿತ್ಯದಲ್ಲೂ ಯಾಕೆ ರೂಪಕನಿಷ್ಠ ಚಿಂತನೆಗೆ ಹೊರಟುಬಿಡ್ತೀರಿ? ಉದಾ : ಜಗಲಿ-ಹಿತ್ತಲು, ಬ್ರಾಹ್ಮಣ-ಶೂದ್ರ ಇತ್ಯಾದಿ ಎಂದು ಕೇಳಿದೆ.

ಅನಂತಮೂರ್ತಿಯವರು ಹೇಳಿದರು : ತತ್ವನಿಷ್ಠತೆಯಲ್ಲಿರುವ ಅಮೂರ್ತತೆ ಬರಹದಲ್ಲಿ ಕೇವಲ ಅಮೂರ್ತವಾಗಿ ಉಳಿಯಬಾರದು ಎಂಬುದು ಮುಖ್ಯ. ನಮಗೆ ವಿರೋಧವಾದ್ದನ್ನೂ ಒಳಗೊಳ್ಳುವ ಮನಸ್ಸಿರಬೇಕು. ನಮಗೆ ಹೊರತಾದ್ದನ್ನು ಎದುರಾಗುವ ಶಕ್ತಿ ರೂಪಕದಲ್ಲಿರುತ್ತೆ. ಆದ್ದರಿಂದ ಒಂದು ಜಿಜ್ಞಾಸೆಗೆ, ಇದು ಇಷ್ಟೇ ಅಂತ ಅಲ್ಲ ಇದಕ್ಕಿಂತಲೂ ಆಚೆಕಡೆ ಇನ್ನೇನೂ ಇರಬಹುದು ಅನ್ನುವ ಭಾವನೆಯನ್ನು ಕೊಡುವ ಹಾಗೆ ಹೇಳಲು ರೂಪಕದ ಅಗತ್ಯವನ್ನು ಹೆಚ್ಚು ಮಾಡಿತು. ಮತ್ತೆ ಅದು ಸಹಜವಾಗಿ ಬರುತ್ತಾ ಇತ್ತು.

ಅನಂತಮೂರ್ತಿಯವರ 'ಅಭಾವ' ಎಂಬ ಕವನ ಸಂಗ್ರಹದಲ್ಲಿ 'ಪ್ರಣಯ ಪಂಚಮಿ' ಎಂಬೊಂದು ಕವನವಿದೆ. ಅದರ ಕೊನೆಯ ಚರಣ “ಮುದ್ದಾಮಾಗಿ ಅವಳ ಬೇಟವೇ ತನ್ನದೇ ಪಾಡೂ ಆಗಿ/ಅಟ್ಟುವ, ಅಡಗುವ ಅನ್ಯೋನ್ಯ ಪರವಶನಾಗಿ ಸೊಕ್ಕುವ ರಮಣನಾಗಿ... . “ ಹೀಗೆ ಮುಂದುವರಿಯುತ್ತದೆ. ಆ ಕವನದ ಬಗ್ಗೆ ಮಾತನಾಡುತ್ತಾ 'ಮನುಷ್ಯನ ಮೂಲಭೂತ ಪರೀಕ್ಷೆಗೆ ನಿಮಗೆ ಯಾಕೆ ಯಾವಾಗಲೂ ಕಾಮವೆ ಒದಗಿಬರುತ್ತಿದೆ?' ಎಂದು ಕೇಳಿದ್ದೆ. (ಅನಂತಮೂರ್ತಿ 'ದಿವ್ಯ' ಕಾದಂಬರಿಯೊಂದರಲ್ಲಿ ಮನುಷ್ಯನ ಸಂಪೂರ್ಣ ಸತ್ವ ಪರೀಕ್ಷೆಗೆ ಕಾಮ ಒದಗಿ ಬರುವುದಿಲ್ಲ ನೋಡಿ ಎಂದ ಕೀರ್ತಿನಾಥ ಕುರ್ತಕೋಟಿಯವರ ಮಾತು ಇದನ್ನು ಬರೆಯುವಾಗ ನೆನಪಾಗುತ್ತಿದೆ)

ಕಾಮದ ಬಗ್ಗೆ ಮಡಿವಂತಿಕೆ ಬೇಕಾಗಿಲ್ಲ ಎಂಬುದು ಅನಂತಮೂರ್ತಿಯವರ ಸ್ಪಷ್ಟ ನಿಲುವು. ಇಂಗ್ಲಿಷ್ ವಿಕ್ಟೋರಿಯನ್ ಕಾಲದ ಮಡಿವಂತಿಕೆ ನಮ್ಮ ಸಮಸ್ಯೆ. ನಮ್ಮಲ್ಲಿ ಹಿಂದೆ ಕಾಳಿದಾಸನ ಕಾಲದಲ್ಲಿ ಹಾಗಿರಲಿಲ್ಲ. ಈಚೆಗೆ ಕಾರಂತರು ಹಾಗೂ ‘ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯಲ್ಲಿ ಕುವೆಂಪು ಕಾಮವೂ ಸೇರಿ ಬದುಕಿನ ಎಲ್ಲಾ ನೆಲೆಗಳನ್ನು ಬಿಚ್ಚಿ ಸತ್ಯವನ್ನು ಹುಡುಕಲು ತೊಡಗಿದರು. ನಿಜದಲ್ಲಿ ನಮ್ಮ ಜೀವಂತಿಕೆ ಹಿಂದೆ ಪ್ರೀತಿ ಅಂಬೊದು ಇದೆ ಎಂಬುದೇ ಮೇಷ್ಟ್ರ ನಿಲುವು. ಅದಕ್ಕೆ ವಿರುದ್ಧವಾಗಿ ದ್ವೇಷ ಅನ್ನೋದು ಇದೆ. ಅದರ ಎದುರಾಗಿ ವೈರಾಗ್ಯ ಅನ್ನೋದಿದೆ. ಇವನ್ನೆಲ್ಲಾ ತೀವ್ರವಾಗಿ ನೋಡಬೇಕಾದರೆ ಕಾಮ, ಪ್ರೀತಿಯ ಮೂಲಕವೇ ನೋಡಬೇಕಾಗಿರುತ್ತದೆ ಎಂಬುದು ಅನಂತಮೂರ್ತಿಯವರ ವಿಚಾರ. ಕಾಮದ ಮೂಲಕ ಹುಟ್ಟುವ ಜೀವನದ ಗೊಂದಲಗಳು ಎಷ್ಟು ಮುಖ್ಯವೊ, ಅದನ್ನು ಸಂಪೂರ್ಣ ಬಿಟ್ಟ ರಮಣರಂತಹ ಮನಸ್ಸು ಕೂಡಾ ಅಷ್ಟೇ ಮುಖ್ಯ ಎಂದೂ ಅವರು ಹೇಳಿದ್ದಾರೆ. ಸಾಹಿತ್ಯ ಓದುವಾಗ ಒಬ್ಬನೇ ಓದಿಕೊಳ್ತಾನೆ. ಆ ಪ್ರಪಂಚದೊಳಗೆ ಹೋಗ್ತಾನೆ. ಅಲ್ಲಿ ಸುಳ್ಳು ಹೇಳಿದರೆ ಕೆಲವೊಮ್ಮೆ ಸಂತೋಷವಾಗಲೂಬಹುದು. ಆದರೆ ಸತ್ಯದ ಅನಾವರಣ ಆಗುವುದಿಲ್ಲ. ಹಾಗಾಗಿ ಕಾಮ ಅಥವಾ ಯಾವುದೇ ಅನುಭವಕ್ಕೂ ಸತ್ಯನಿಷ್ಠನಾಗದಿದ್ದರೆ ಸಾಹಿತ್ಯದಲ್ಲಿ ಅನುಭವದ ಶೋಧನೆ ಅಪರಿಪೂರ್ಣ. ನವೋದಯದಲ್ಲಿ 'ವಿಕಾಸ' ತತ್ವ. ಆದರೆ ನವ್ಯ ಸಾಹಿತ್ಯದಲ್ಲಿ ಅನುಭವದ ಶೋಧನೆಯೇ ಮೂಲತತ್ವ ಎಂಬುದನ್ನು ನಾವು ಮರೆಯಬಾರದು.

'ಹತ್ತು ಸಮಸ್ತರ ಜೊತೆ' ಎಂಬ ಅನಂತಮೂರ್ತಿಯವರು ಮಾಡಿದ ಪ್ರಖ್ಯಾತರ ಸಂದರ್ಶನಗಳ ಒಂದು ಪುಸ್ತಕವಿದೆ. ಅದರಲ್ಲಿ ನೈಜೀರಿಯಾದ ಪ್ರಸಿದ್ಧ ಲೇಖಕ ಚಿನುವಾ ಅಚಿಬೆಯ ಸಂದರ್ಶನವಿದೆ. 1981ರಲ್ಲಿ ಈ ಸಂದರ್ಶನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರ ಭಾಷಾಂತರ ಎನ್.ಎಸ್.ಶಂಕರ್ ಅವರಿಂದ. ಅಚಿಬೆಯ ‘ಥಿಂಗ್ಸ್ ಫಾಲ್ ಎಪಾರ್ಟ್ ' ಕಾದಂಬರಿಯಲ್ಲಿ, ಇಕೆಮೆಹ್ಯೂನ್ನ ನಿರ್ದಯ ಬಲಿಯ ನಂತರ ಕಥಾನಾಯಕ ಓಕೊಂಕೊ ಕೂಡಾ ಕೆಲವು ದಿನ ಚಿತ್ತ ಕ್ಲೋಬೆಗೆ ಒಳಗಾಗುತ್ತಾನೆ. ಅವನ ಮಗ ನೋಯೆ ಕರುಣಾಮಯ ಕ್ರೈಸ್ತ ಕವಿತೆ ಹಾಡುಗಳಿಂದ ಕ್ರೈಸ್ತ ಧರ್ಮದತ್ತ ಆಕರ್ಷಿತನಾಗುತ್ತಾನೆ. ಇವುಗಳ ವಿಶ್ಲೇಷಣೆ ಹಿನ್ನೆಲೆಯಲ್ಲಿ ಆ ಜನಾಂಗದಲ್ಲಿ ಕ್ರೈಸ್ತರ ಆಗಮನಕ್ಕೆ ಮೊದಲೇ ತುಮುಲಗಳಿದ್ದವೆಂದು ತೋರಿಸುತ್ತೀರಿ ಎಂದು ಅನಂತಮೂರ್ತಿ ಸೂಚಿಸುತ್ತಾರೆ.

ಅದಕ್ಕೆ ಉತ್ತರವಾಗಿ ಅಚಿಬೆ ತಮ್ಮ ಸುಸಂಪೂರ್ಣವಾದ ನಾಗರಿಕತೆ ವಿದೇಶಿಯರಿಂದ ನಾಶವಾಯಿತೆಂದು ತಾನೇನೂ ಹೇಳುವುದಿಲ್ಲ. ಬದಲಿಗೆ ಅಲ್ಲಿನ ಸಾಂಪ್ರದಾಯಿಕ ಬದುಕಿನಲ್ಲಿ ಅದಾಗಲೇ ಬಿರುಕುಗಳಿದ್ದುದರಿಂದಲೇ ಕ್ರೈಸ್ತ ಧರ್ಮ ಅಷ್ಟ ಮಟ್ಟಿಗೆ ಪ್ರಭಾವ ಬೀರಿ ಅಂಥ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂಬುದೇ ತನ್ನ ವಾದ ಎಂದು ಅನಂತಮೂರ್ತಿಯವರ ವಿಶ್ಲೇಷಣೆಯನ್ನು ಒಪ್ಪಿಕೊಂಡು ಸಂದರ್ಶನ ಮುಂದುವರಿಯುತ್ತದೆ. ಆ ಬಳಿಕ ಅದು ಪರಸ್ಪರ ಎರಡು ದೇಶಗಳ, ಅಂದರೆ ನೈಜೀರಿಯಾ ಮತ್ತು ಭಾರತದ ವಸಾಹತುಶಾಹಿ ಅನುಭದ ಹಿನ್ನೆಲೆಯಲ್ಲಿ ವರ್ತಮಾನ ಸಮಾಜದ ಭ್ರಷ್ಟಾಚಾರ ಮುಂತಾದವುಗಳ ಹಿಂದೆ ಇರಬಹುದಾದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಶೋಧಗಳಾಗಿ ಮುಂದುವರಿಯುವ ಅಪರೂಪದ ಒಂದು ಸಂದರ್ಶನವದು.

ಚಿನುವಾ ಅಚಿಬೆ, ಆ ಸಂದರ್ಭದಲ್ಲಿ ಅನಂತಮೂರ್ತಿಯವರಿಗೆ ಹೇಳುವ ಈ ಕೆಳಗಿನ ಕೆಲವು ಉತ್ತರಗಳು ಮನನಯೋಗ್ಯ

(ಕ್ರಾಂತಿ ಅಂದರೆ ಬದಲಾವಣೆ ಮಾತ್ರ. ಬಳಿಕ) ನಮ್ಮಲ್ಲಿನ ಎರಡನೇ ಪೀಳಿಗೆಗೆ ಭ್ರಚ್ಟಾಚಾರದ ವಿರಾಟ ದರ್ಶನವಾಗಿದೆ. ನಿಜ ಹೇಳುವುದಾದರೆ, ನಮ್ಮ ಜನಾಂಗದ ಮೂಲಧಾರೆಯಲ್ಲಿ ಸೇರಿಹೋದ ಭ್ರಷ್ಟತೆಯ ಸೋಂಕಿನಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ. ನಡೆದದ್ದೇನೆಂದರೆ ಜನರನ್ನು ಅವರ ಇತಿಹಾಸದಿಂದ ಕಿತ್ತು ಬೇರೆಯೆ ಜನಾಂಗಗಳ ಇತಿಹಾಸಕ್ಕೆ ಜೋಡಿಸಿದರು. ಅಲ್ಲಿ ಅವರು ಅಡಿಟಿಪ್ಪಣಿ ಮಾತ್ರವಾದರು. ಆಗ ಸಕಲವನ್ನೂ ನಿರ್ಧರಿಸುವ ಸ್ವಾತಂತ್ರ್ಯದಿಂದ ಅವರು ವಂಚಿತರಾದರು. ಇಂಥದೊಂದು ಸನ್ನಿವೇಶ, ಭ್ರಷ್ಟತೆಗೆ, ಬೇಜವಾಬ್ದಾರಿತನಕ್ಕೆ ದಾರಿ ಮಾಡುತ್ತೆ. ನಮ್ಮ ನಾಗರೀಕತೆಗಳ ಮೇಲೆ ವಿದೇಶೀ ದಾಳಿಯ ಪರಿಣಾಮವನ್ನು ನಾನು ಅರ್ಥೈಸುವ ರೀತಿಯಿದು.

ಆತ್ಮದಂಡನೆ, ಅಸ್ಮಿತೆಗಿಗೆ ಹೀಗೆ ಕೇವಲ ಹೀಗಳಿಕೆಯೊಂದನ್ನು ಮಾತ್ರ ಮಾಡುವುದು ಸರಿಯಲ್ಲ ಎಂಬ ವಿಚಾರದಲ್ಲಿ; ಆಫ್ರಿಕಾದಲ್ಲಿ ಒಂದು ಗಾದೆ ಇದೆ. ನಿಮ್ಮ ಕೋಳಿಯನ್ನು ತೋಳ ಬೆನ್ನು ಹತ್ತಿದಾಗ ಮೊದಲು ತೋಳವನ್ನು ಓಡಿಸು; ಆಮೇಲೆ ಕೋಳಿಗೆ ಬುದ್ಧಿ ಹೇಳಬಹುದು. ಅದಕ್ಕಾಗಿಯೇ ಒಂದು ನಿರ್ದಿಷ್ಟ ನಿಲುವು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಸೂಕ್ತವಾದದ್ದು. ನಿಮ್ಮ ಸಂಸ್ಕೃತಿಯನ್ನು ಎಲ್ಲಿ ರಕ್ಷಿಸಬೇಕೋ ಅಲ್ಲಿ ರಕ್ಷಿಸಿ. ಆಮೇಲೆ ಬಂದು ಕಟುಟೀಕೆ ಬೇಕಾದರೂ ಮಾಡಿ. ನಮ್ಮ ನಿಲುವಿನ ಬಗ್ಗೆ ಖಾತ್ರಿ ಇರದಿದ್ದರೆ ಅದು ಅಪಾಯಕಾರಿ.

ಕಾದಂಬರಿ ನಾಯಕ ಓಕೊಂಕೋ ತನ್ನ ಜನಾಂಗಕ್ಕಾಗಿ ಬದುಕುವವನಾದರೂ ಅವನಲ್ಲಿ ಸ್ವಂತಿಕೆಯ ಪ್ರಜ್ಞೆಯೂ ಜಾಗೃತವಾಗಿರುತ್ತದೆ ಎಂಬುದನ್ನು ಸೂಚಿಸಿದಾಗ ಅಚಿಬೆಯ ಉತ್ತರ : ಹೌದು. ಕೆಲವರು ಒಂದನ್ನು ಎತ್ತಿ ಹಿಡಿದು ಇನ್ನೊಂದನ್ನು ಮರೆಯುತ್ತಾರೆ. ಹಾಗೆ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವುದನ್ನು ಬಿಟ್ಟು ಎರಡರ ಮಧ್ಯೆ ಸಮತೋಲ ಸಾಧಿಸುವುದೇ ಸರಿ ಎಂದು ನನ್ನ ಅನಿಸಿಕೆ. ಅಚಿಬೆ ಹೇಳುವಂತೆ: ನಮ್ಮ ಅಸ್ತಿತ್ವದ ಸಾರ್ಥಕ್ಯ ಈ ದ್ವಿಮುಖತೆಯಲ್ಲೆ ಅಡಗಿದೆ. ನಮ್ಮಲ್ಲನೇಕರು ಅವೆರಡೂ ಒಟ್ಟಿಗೇ ಇರಲು ಸಾಧ್ಯ ಎಂದು ನಂಬಲೇ ತಯಾರಿಲ್ಲ. ಯಾವುದಾದರೊಂದಕ್ಕೆ ಮಹತ್ವ ಕೊಡುವುದೇ ನಮಗೆ ಖುಷಿದಾಯಕ. ಎರಡರ ಸಮತೋಲ ರೋಮಾಂಚನಕಾರಿಯೂ ಅಲ್ಲ, ನಾಟಕೀಯವೂ ಅಲ್ಲ ನೋಡಿ.

ಜಗತ್ತಿನ ಶ್ರೇಷ್ಠ ಮನಸ್ಸುಗಳ ಜೊತೆ ಮಾತುಕತೆಯಲ್ಲಿ ಅನಂತಮೂರ್ತಿಯವರು ಅಂತಹವರಿಂದ ಅತ್ಯುತ್ತಮವಾದ್ದನ್ನು ಮಾತ್ರವಲ್ಲ ನಮ್ಮ ಸಮಾಜಕ್ಕೆ, ವರ್ತಮಾನಕ್ಕೆ ಹೊಂದಿಕೆಯಾಗುವಂತಹವನ್ನು ಹೊರತೆಗೆಯಬಲ್ಲವರಾಗಿದ್ದರು. ಒಂದನ್ನು ಇನ್ನೊಂದಕ್ಕೆ ಸೇರಿಸಿದಾಗ ಮಾತ್ರ ಹೊಸತು ಹುಟ್ಟುತ್ತದೆ. ಆಧುನಿಕ ಪಾಶ್ಚಿಮಾತ್ಯ ಚಿಂತನೆ ವ್ಯಕ್ತಿಯ ಪ್ರಾಮುಖ್ಯವನ್ನೂ ಸ್ವಾತಂತ್ರ್ಯವನ್ನೂ ವೈಭವೀಕರಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಸಮುದಾಯದ ಅಂಗವಾಗಿಯೇ ತನ್ನ ಸ್ವಂತಿಕೆಗೂ ನೀರೆಯಲು ಸಾಧ್ಯ ಎಂದು ಗಾಂಧಿ ನಂಬಿದ್ದರು ಎಂಬುದನ್ನು ಅತಿಬೆಗೆ ಅನಂತಮೂರ್ತಿ ವಿವರಿಸುತ್ತಿದ್ದರು.

ಅನಂತಮೂರ್ತಿಯವರೊಡನೆ ಇರುತ್ತಿದ್ದ ಅಷ್ಟೂ ಹೊತ್ತು ಯಾವುದೇ ಲಘು ಹರಟೆ ಇಲ್ಲದೆ ಗಂಭೀರ ವಿಷಯವೊಂದರ ಚಿಂತನೆ ನಡೆಯುತ್ತಿತ್ತು. ಅವರು ಸತತವಾಗಿ ಯೋಚಿಸುವುದು ಮತ್ತು ಮಾತಿನಲ್ಲೆ ಆ ಯೋಚನೆಯನ್ನು ಮುಂದುವರಿಸುವುದು. ಅವರ ಧ್ಯಾನವೆಂದರೆ ಮಾತು ಮತ್ತು ಚಿಂತನೆಗಳ ನಿರಂತರ ಆವರ್ತನ. ಬರವಣಿಗೆ ಅದರ ನಡುವೆ ಎಲ್ಲಿಯೋ ಹೇಗೋ ಸೇರಿಹೋಗುತ್ತವೆ. ಕೆಲವೊಮ್ಮೆ ಅವರ ಮಾತಿನ- ಭಾಷಣದ ಸಂಗ್ರಹವಾಗಿರಬಹುದು. ಒಮ್ಮೊಮ್ಮೆ ಅವರೊಂದು ಹೊಸ ಚಿಂತನೆಯಲ್ಲಿ ತೊಡಗಿದ್ದರೆ ಫೋನು ಮಾಡಿ ಸುದೀರ್ಘವಾಗಿ ಮಾತನಾಡುವುದೂ ಇತ್ತು. ಅವರ ಈ ಗಂಭೀರ ಚಿಂತನೆ ಬಗ್ಗೆ ತಿರುಮಲೇಶ್ ಮನುಷ್ಯ ಪ್ರತಿಯೊಂದರಲ್ಲೂ ತೀವ್ರವಾಗಿದ್ದರೆ ಲಘುವಾಗಿ ಹಾರಾಡುವುದು ಯಾವಾಗ ಆಕಾಶ ಮಾರ್ಗದಲ್ಲಿ ಎಂದು ಕೇಳಿದ್ದೂ ಇದೆ. ತಮ್ಮ 'ಬಹುಮಹಡಿ ಕಟ್ಟಡದಿಂದ' ಕವನದಲ್ಲಿ ತಿರುಮಲೇಶ್ ಹೀಗೆ ಹೇಳುತ್ತಾರೆ :

ಭ್ರಮೆಯೇ ಇಲ್ಲದ ಮೆಲೆ ಯಾಕಯ್ಯ

ಬದುಕುವುದು ಎಂಬ ಅನಂತಮೂರ್ತಿಯ ಮಾತು

ಮತ್ತೆ ಮತ್ತೆ ನೆನಪಾಗುತ್ತದೆ ಮರೆತ ಒಂದು ಪದ

ಹುಡುಕುವುದರಲ್ಲಿ ಕೂಡ ತೀವ್ರತೆಯಿರಬೇಕಯ್ಯ

ಸಮಸ್ತ ಜಗ ಅದರ ಮೇಲೆ ನಿಂತಿದೆ ಎಂಬಂತೆ ಒಬ್ಬಳು

ನೃತ್ಯಗಾತಿಯ ಹೆಜ್ಜೆ ಹಾಗಿರುತ್ತದೆ.

ಇಂಟೆನ್ಸ್ ಆಗಿ

ಅನಂತಮೂರ್ತಿಯವರು ಜೀವನವಿಡೀ ಹೀಗೆ ಇಂಟೆನ್ಸ್ ಆಗಿ ಸದಾ ಗಂಭೀರ ಯೋಚನೆಯಲ್ಲೆ ಬದುಕಿದವರು. ಒಂದು ಐಡಿಯಾ ಸರಿಯಾಗಿದ್ದರೆ ಅದು ಸಾಯಲ್ಲ ಎಂದು ಅವರು ನಂಬಿದ್ದರು. ಐಡಿಯಾ ಇಲ್ಲದಿದ್ದರೆ ಕೇವಲ ಸೀಮಿತ ಪ್ರಾಕ್ಟಿಕಲ್ ಬದುಕು. ಐಡಿಯಾ, ಆದರ್ಶ, ಕನಸುಗಳಿಲ್ಲದ ಜಗತ್ತು ಸುಂದರವಲ್ಲ. ಸಮಾಜ, ರಾಜಕೀಯ ಎಲ್ಲಾ ಕಡೆ ಕನಸುಗಾರರು ಇರಬೇಕೆಂದು ಅವರು ಆಶಿಸಿದರು. ಹಿಂದುತ್ವ ಮತ್ತು ಹಿಂದೂ ಸ್ವರಾಜ್ ಭಾರತದಲ್ಲಿ ಇಂದು ಮುಖಾಮುಖಿಯಾಗಿವೆ. ಕೊನೆಗೂ ಇಂದಲ್ಲ ನಾಳೆ ಹಿಂದೂ ಸ್ವರಾಜ್ ತತ್ವ ಗೆಲ್ಲುತ್ತದೆ. ಅದು ಸರ್ವ ಧರ್ಮ ಸಮಾನತೆಯ ತತ್ವ. ಅಸ್ಪೃಶ್ಯತೆ ದೇಹವನ್ನು ಮುಟ್ಟುವ ಮಟ್ಟದಲ್ಲಿ ಬಸ್, ರೈಲು ಇತ್ಯಾದಿ ಆಧುನಿಕ ಸಮೂಜದ ಅನಿವಾರ್ಯಗಳಲ್ಲಿ ಇರಬಹುದು. ದೇಹದ ಮಟ್ಟದಲ್ಲಿ ಮಾತ್ರವಲ್ಲ ಎಲ್ಲರ ಮನಸ್ಸಿನಿಂದಲೂ ಅಸ್ಪೃಶ್ಯತೆ ಹೋಗಬೇಕು ಮತ್ತು ಹೋಗುತ್ತದ. ಸರ್ವಧರ್ಮಗಳ ಶಾಂತಿಯುತ ಸಹಬಾಳ್ವೆಗೆ ಮುಂದೊಂದು ದಿನ ದೇಶ ಮರಳುತ್ತದೆ ಎಂಬ ಕನಸು ನನಸಾಗುತ್ತದೆಂದು ಅವರು ಕೊನೆವರೆಗೂ ನಂಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.